ವರ್ತೂರು ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ವೇ ನಂ.26, 27ರಲ್ಲಿನ ಬಡವರ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ಹೇಳಿ ವಂಚಿಸಲಾಗಿದೆ. ಬಡವರ ಭೂಮಿಯನ್ನು ಮಾತಾ ಅಮೃತಾನಂದಮಯಿ ಮಠದವರು ಖಾಸಗಿ ಕಾಲೇಜು ನಡೆಸಲು ಬಳಸುತ್ತಿದ್ದಾರೆ ಎಂದು ಆರೋಪಿಸಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ನೇತೃತ್ವದಲ್ಲಿ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಗ್ರಾಮಸ್ಥರು, “ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಶ್ರಮ, ಬ್ರಹ್ಮಸ್ಥಾನ, ದೇವಸ್ಥಾನ, ಶಾಲೆ, ಅನಾಥಾಶ್ರಮ, ಉಚಿತ ವೈದ್ಯಕೀಯ ಕೇಂದ್ರ ಮತ್ತು ಬಡ ವಿಧವೆಯರಿಗೆ 2000 ಉಚಿತ ಮನೆಗಳನ್ನು ಕಟ್ಟಲಾಗುವುದು ಎಂಬ ಸುಳ್ಳು ಭರವಸೆಗಳನ್ನು ನೀಡಿ, ಬಡವರ ಜಮೀನನ್ನು ಮಂಜೂರು ಮಾಡಿಸಿಕೊಂಡು ಮೋಸ ಮಾಡಲಾಗಿದೆ. ಅಲ್ಲಿ ಅಕ್ರಮವಾಗಿ ಖಾಸಗಿ ಕಾಲೇಜು ನಡೆಸುತ್ತಿದ್ದಾರೆ. ಕಸವನಹಳ್ಳಿ ಬಡಬಗ್ಗರಿಗೆ ಅನ್ಯಾಯವಾಗಿದೆ. ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಜೆ.ಧರಣಿ ಮಾತನಾಡಿ, “ಸರ್ಕಾರಕ್ಕೆ ಅಮೃತಾನಂದಮಯಿ ಮಠದವರು ಸುಳ್ಳು ಭರವಸೆಗಳನ್ನು ನೀಡಿದ್ದರು. ರೈತರು ಬೇಸಾಯ ಮಾಡುತ್ತಿದ್ದ ಜಮೀನನ್ನು ಕಬಳಿಸಿದ್ದಾರೆ. ಸುಮಾರು 22 ಎಕರೆ 23 ಕುಂಟೆ ಜಮೀನು ಅವರ ಪಾಲಾಗಿದೆ. ಅವರು ಕೊಟ್ಟಿರುವ ಭರವಸೆಗಳು ಈಡೇರಿಲ್ಲ. ಬಡ ವಿಧವೆಯರನ್ನು ಬೀದಿಗೆ ಹಾಕಿದ್ದಾರೆ. ಅಮೃತಾನಂದಮಯಿ ಮಠದವರು ಮಾಡಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ” ಎಂದು ತಿಳಿಸಿದರು.
“ಬಡ ದಲಿತರು ನೀಡಿರುವ ಜಮೀನನ್ನು ಹಿಂತಿರುಗಿಸಬೇಕು. ಕುಟುಂಬವನ್ನು ಸಬಲ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಮಗೆ ಭೂಮಿ ವಾಪಸ್ ನೀಡುವವರೆಗೂ ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.
“2021ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ. ಸರ್ಕಾರವನ್ನು ಪಾರ್ಟಿ ಮಾಡಿದ್ದೇವೆ. ಪ್ರಕರಣದ ಸಂಖ್ಯೆಯನ್ನು ಮನೆಗಳ ಮೇಲೆ ಬರೆಯಲು ಹೋದಾಗ ನಮ್ಮ ಮೇಲೆ ನಕಲಿ ದೂರು ನೀಡಿ ಕಿರುಕುಳ ಕೊಡಲಾಗಿತ್ತು. ಇದನ್ನು ಸರ್ಕಾರ ಗಮನಿಸಬೇಕು” ಎಂದು ಮನವಿ ಮಾಡಿದರು.
ಸಂಘದ ಮತ್ತೊಬ್ಬ ಗೌರವಾಧ್ಯಕ್ಷರಾದ ಇ. ಸೀನಪ್ಪ, ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಎನ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಿ.ಆನಂದ್ ಹಾಗೂ ಸಂತ್ರಸ್ತ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.