ನಾಲ್ಕನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಮಧ್ಯಾಹ್ನ 3 ಗಂಟೆಯವರೆಗೆ 9 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 96 ಕ್ಷೇತ್ರಗಳಲ್ಲಿ ಶೇ. 52.60 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು 66.87 ರಷ್ಟು ಮತದಾನವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀ ಕಡಿಮೆ ಶೇ. 29.93 ಮತದಾನವಾಗಿದೆ. ಇನ್ನುಳಿದಂತೆ ಮಧ್ಯ ಪ್ರದೇಶ ಶೇ. 59.63, ಜಾರ್ಖಂಡ್ ಶೇ. 56.42 ಉತ್ತರ ಪ್ರದೇಶ ಶೇ. 48.41 ಹಾಗೂ ಬಿಹಾರದಲ್ಲಿ ಶೇ. 45.23 ರಷ್ಟು ಮತದಾನವಾಗಿದೆ.
ಇದೇ ದಿನದಂದು ಆಂಧ್ರ ಪ್ರದೇಶದ 175 ಕ್ಷೇತ್ರಗಳ ಹಾಗೂ ಒಡಿಶಾದ 147 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನನ್ನು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಬೋಲ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮೃತನನ್ನು ಮಿಂಟು ಶೇಖ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ
ಆಂಧ್ರ ಪ್ರದೇಶದ ಕೆಲವು ಕಡೆ ಹಿಂಸಾಚಾರ ನಡೆದಿದೆ. ಚಿತ್ತೂರು ಜಿಲ್ಲೆಯಲ್ಲಿ ಮೂವರು ಟಿಡಿಪಿ ಚುನಾವಣಾ ಏಜೆಂಟರನ್ನು ಅಪಹರಿಸಲಾಗಿದ್ದು, ಪೊಲೀಸರು ಮೂವರನ್ನೂ ರಕ್ಷಿಸಿದ್ದಾರೆ. ಘಟನೆಗೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಕಾರಣ ಎಂದು ಟಿಡಿಪಿ ನಾಯಕರು ಆರೋಪಿಸಿದ್ದಾರೆ.
ಇಂದಿನ ಲೋಕಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶ 25, ತೆಲಂಗಾಣ 17, ಉತ್ತರ ಪ್ರದೇಶ 13, ಮಹಾರಾಷ್ಟ್ರ 11, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ತಲಾ 8, ಬಿಹಾರ 5, ಒಡಿಶಾ, ಜಾರ್ಖಂಡ್ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.
ತೆಲಂಗಾಣದ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮತಗಟ್ಟೆಯೊಂದರಲ್ಲಿ ಮಹಿಳಾ ಮತದಾರರ ಬುರ್ಕಾವನ್ನು ತೆಗೆದು ಪರಿಶೀಲನೆ ನಡೆಸಿದ್ದಕ್ಕಾಗಿ ಚುನಾವಣಾ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
