ಮನರಂಜನೆ, ಮಿಮಿಕ್ರಿ ಮುಂತಾದವುಗಳಿಗೆ ಸೀಮಿತವಾಗಿದ್ದ ಡೀಪ್‌ಫೇಕ್ ತಂತ್ರಜ್ಞಾನ ದಿನದಿಂದ ದಿನಕ್ಕೆ ವಂಚನೆ ಜಾಲಕ್ಕೂ ವಿಸ್ತರಿಸಿಕೊಳ್ಳುತ್ತಿದೆ. ಇತ್ತೀಚಿಗೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಐಪಿಎಸ್ ಅಧಿಕಾರಿಯ ರೂಪದಲ್ಲಿ ವೃದ್ಧರೊಬ್ಬರಿಗೆ ವಂಚನೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಗೋವಿಂದಪುರಂನ 76 ವರ್ಷದ ನಿವಾಸಿ ಅರವಿಂದ್ ಶರ್ಮಾ ಅವರು ಕೆಲದಿನಗಳ ಹಿಂದೆ ತಾವು ಖರೀದಿಸಿದ್ದ ಹೊಸ ಸ್ಮಾರ್ಟ್ ಫೋನ್‌ನಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದರು. ನವೆಂಬರ್ 4 ರಂದು ಫೇಸ್‌ಬುಕ್ ಮೂಲಕ ಕರೆ ಮಾಡಿದ್ದ ಸೈಬರ್ ವಂಚಕರು ಆರಂಭದಲ್ಲಿ ಸಮಾಧಾನವಾಗಿ ಮಾತನಾಡಿ ನಂತರ ಮಹಿಳೆಯ ನಗ್ನ ದೃಶ್ಯವನ್ನು ತೋರಿಸಿದರು. ಚಿತ್ರ ನೋಡಿದ ಅರವಿಂದ್ ಶರ್ಮಾ ತಕ್ಷಣ ಕರೆ ಸ್ಥಗಿತಗೊಳಿಸಿದರು. ವೃದ್ಧರ ಜೊತೆ ಮಾತನಾಡುವಾಗ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ತಿಳಿದುಕೊಂಡಿದ್ದರು.
ಇದಾದ ಸ್ವಲ್ಪ ಸಮಯದ ನಂತರ ಅಪರಿಚಿತ ಸಂಖ್ಯೆಯಿಂದ ಅರವಿಂದ್ ಶರ್ಮಾ ಅವರು ವಾಟ್ಸಾಪ್ ಮೂಲಕ ವಿಡಿಯೋ ಕರೆಯನ್ನು ಸ್ವೀಕರಿಸಿದರು. ವಿಡಿಯೋದಲ್ಲಿದ್ದ ವ್ಯಕ್ತಿಯು ಐಪಿಎಸ್ ಅಧಿಕಾರಿಯ ವಸ್ತ್ರ ಧರಿಸಿದ್ದ. ಅರವಿಂದ್ ಅವರ ಜೊತೆ ಮಾತನಾಡಿದ ಆ ವ್ಯಕ್ತಿ “ಮಹಿಳೆಗೆ ನೀವು ಕಿರುಕುಳ ನೀಡಿದ್ದು ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತಿದೆ” ಎಂದು ಬೆದರಿಸಿದ್ದಾನೆ. ಇದರ ಜೊತೆಗೆ ವೃದ್ಧರಿಗೆ ವಂಚಕರಿಂದ ಮತ್ತೊಂದು ಕರೆ ಬಂದಿದ್ದು, ಬೆತ್ತಲೆ ಯುವತಿಯ ಜೊತೆ ಮಾತನಾಡಿದ ದೃಶ್ಯಗಳನ್ನು ತೋರಿಸಿ ಹಣ ನೀಡದಿದ್ದರೆ ದೃಶ್ಯಗಳನ್ನು ನಿಮ್ಮ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಪಂಚ ರಾಜ್ಯಗಳ ಎಕ್ಸಿಟ್ ಪೋಲ್: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ
5 ಸಾವಿರದಿಂದ ಆರಂಭಗೊಂಡ ಬೆದರಿಕೆ ವಸೂಲಿಯು 20 ದಿನಗಳ ಅಂತರದಲ್ಲಿ ಹಲವು ಕಂತುಗಳಲ್ಲಿ 74 ಸಾವಿರದವರೆಗೂ ವಸೂಲಿ ಮಾಡಲಾಗಿತ್ತು. ನಿರಂತರ ಬೆದರಿಕೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅರವಿಂದ್ ಶರ್ಮಾ ಅವರು ಆತ್ಮಹತ್ಯೆಗೂ ಮುಂದಾಗಿದ್ದರು. ಆಕೆಯ ಪುತ್ರಿಯ ನೆರವಿನಿಂದ ಗಾಜಿಯಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅನಂತರ ಡೀಪ್‌ಫೇಕ್ ಮೂಲಕ ಸೈಬರ್ ವಂಚಕರು ವಂಚನೆ ಎಸಗಿರುವುದು ಬಯಲಾಗಿದೆ. ಕವಿ ನಗರದ ಎಸಿಪಿ ಅಭಿಷೇಕ್ ಶ್ರೀವಾಸ್ತವ ಅವರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ವಂಚಕರನ್ನು ಪತ್ತೆ ಹಚ್ಚಲು ಸೈಬರ್ ಘಟಕಕ್ಕೆ ಮಾಹತಿ ರವಾನಿಸಿದ್ದಾರೆ. ಅಪರಾಧಿಗಳ ಖಾತೆಗಳ ವಿವರಗಳನ್ನು ಪಡೆಯಲು ಮೆಟಾ, ವಾಟ್ಸಾಪ್, ಫೇಸ್‌ಬುಕ್ ಸಂಸ್ಥೆಗಳಿಗೆ ಪತ್ರ ಬರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.