ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಲ್ಲಿ ಜಾಹೀರಾತು ನೀಡಲೆಂದೇ ಪ್ರತಿ ದಿನ ಮೋದಿ ಸರ್ಕಾರ ₹1.5 ಕೋಟಿ ವೆಚ್ಚ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಸಂದರ್ಭದಲ್ಲೇ ಜಾಹೀರಾತು ನೀಡುವುದರ ಬಗ್ಗೆ ಪ್ರಧಾನಿ ಮೋದಿ 2022ರಲ್ಲಿ ನೀಡಿದ ಹೇಳಿಕೆಯು ಮುನ್ನೆಲೆಗೆ ಬಂದಿದೆ.
ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಮತ್ತು ಇತರರು ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಜಾಹೀರಾತು ವೆಚ್ಚದ ವಿವರವನ್ನು ಇತ್ತೀಚೆಗೆ ನೀಡಿದ್ದಾರೆ. 2014-15 ಮತ್ತು 2024-25ರ ನಡುವೆ ನರೇಂದ್ರ ಮೋದಿ ಸರ್ಕಾರ ಜಾಹೀರಾತುಗಳಿಗಾಗಿ ಒಟ್ಟು 5,987.46 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ಅಂದರೆ ಸರಾಸರಿ ಪ್ರತಿದಿನ ಸುಮಾರು 1.5 ಕೋಟಿ ರೂ.ಗಳು ವೆಚ್ಚ ಮಾಡಿದಂತಾಗುತ್ತದೆ.
ಇದನ್ನು ಓದಿದ್ದೀರಾ? ‘ಅಬ್ ಕಿ ಬಾರ್, ಮೋದಿ ಸರ್ಕಾರ್’ ಘೋಷಣೆಯ ಜಾಹೀರಾತುದಾರ ಪಿಯೂಷ್ ಪಾಂಡೆ ನಿಧನ
ಸರ್ಕಾರ ನೀಡಿದ ದತ್ತಾಂಶಗಳ ಪ್ರಕಾರ ಜಾಹೀರಾತು ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. 2014-15ರಲ್ಲಿ 765.83 ಕೋಟಿ ರೂ.ಗಳಿಂದ ಪ್ರಾರಂಭವಾದ ಖರ್ಚು, ಮುಂದಿನ ವರ್ಷ 879.80 ಕೋಟಿ ರೂ.ಗಳಿಗೆ ಏರಿದೆ. ಅಂತಿಮವಾಗಿ 2017-18ರಲ್ಲಿ 889.34 ಕೋಟಿ ರೂ.ಗಳಿಗೆ ತಲುಪಿದೆ. ಅದಾದ ಬಳಿಕ ಜಾಹೀರಾತು ವೆಚ್ಚ 2020-21ರಲ್ಲಿ 281.71 ಕೋಟಿ ರೂ.ಗಳಿಗೆ, 2021-22ರಲ್ಲಿ 214.94 ಕೋಟಿ ರೂ.ಗಳಿಗೆ ಇಳಿದಿದೆ. ಆದರೆ 2023-24ರಲ್ಲಿ ಮತ್ತೆ ಜಾಹೀರಾತು ವೆಚ್ಚ 353.98 ಕೋಟಿ ರೂ.ಗಳಿಗೆ ಏರಿದೆ.
ಸರ್ಕಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡುವ ಜಾಹೀರಾತು ಖರ್ಚು ಹೆಚ್ಚಾಗುತ್ತಿದೆ. 2023-24 ಮತ್ತು 2025-26ರ ನಡುವೆ, ಸರ್ಕಾರವು ಗೂಗಲ್ ಇಂಡಿಯಾ ಮತ್ತು ಯೂಟ್ಯೂಬ್‌ಗೆ 120.13 ಕೋಟಿ ರೂ.ಗಳನ್ನು ಜಾಹೀರಾತು ವೆಚ್ಚವಾಗಿ ನೀಡಿದೆ. ಅದೇ ಅವಧಿಯಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾ ಸುಮಾರು 24.45 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಜಾಹೀರಾತು ಪ್ರಚಾರಕ್ಕಾಗಿ ಪಡೆದುಕೊಂಡಿದೆ.
ಈ ಅಂಕಿಅಂಶಗಳು 2022ರಲ್ಲಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. 2022ರಲ್ಲಿ ಮೋದಿ ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತೀವ್ರವಾಗಿ ಟೀಕಿಸುತ್ತಾ, “ನನ್ನ ಇಮೇಜ್ ಹೆಚ್ಚಿಸಲು ಜಾಹೀರಾತಿಗೆ ಹೆಚ್ಚು ಖರ್ಚು ಮಾಡಬಹುದಿತ್ತು. ಆದರೆ ನಾನು ಸಾರ್ವಜನಿಕರಿಗಾಗಿ ಕೆಲಸ ಮಾಡುವ ಮಾರ್ಗವನ್ನು ಆರಿಸಿಕೊಂಡೆ” ಎಂದು ಹೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಯೂಟರ್ನ್: ಲ್ಯಾಟರಲ್ ಎಂಟ್ರಿ ನೇಮಕಾತಿಯ ಜಾಹೀರಾತು ಹಿಂಪಡೆಯಲು ಸೂಚನೆ
ಹಾಗೆಯೇ ಹಲವು ಬಾರಿ ಪ್ರಧಾನಿ ಮೋದಿ “ಸರ್ಕಾರವು ಕೇವಲ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ತನ್ನ ಇಮೇಜ್ ಬೆಳೆಸಿಕೊಳ್ಳುವ ಬದಲು, ಆ ಹಣ ಮತ್ತು ಸಮಯವನ್ನು ಜನರ ಮನೆಗೆ ನೀರು (ಜಲ್ ಜೀವನ್ ಮಿಷನ್), ಶೌಚಾಲಯ ಅಥವಾ ಗ್ಯಾಸ್ ಸಂಪರ್ಕ ತಲುಪಿಸಲು ಬಳಸಿದೆ” ಎಂದೂ ಹೇಳಿದ್ದರು. ಆದರೆ ಜಾಹೀರಾತಿಗಾಗಿ ಕೇಂದ್ರ ಅಧಿಕ ವೆಚ್ಚ ಮಾಡಿದೆ ಮತ್ತು ಅದನ್ನು ಸಮರ್ಥಿಸಿಕೊಂಡಿದೆ.
‘ಆಯುಷ್ಮಾನ್ ಭಾರತ್’, ‘ಉಜ್ವಲ ಯೋಜನೆ’ ಅಥವಾ ‘ಕಿಸಾನ್ ಸಮ್ಮಾನ್ ನಿಧಿ’ಯಂತಹ ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಅಗತ್ಯ. ಇಲ್ಲವಾದರೆ ಜನರು ಪ್ರಯೋಜನದಿಂದ ವಂಚಿತರಾಗುತ್ತಾರೆ ಎಂಬುದು ಸರ್ಕಾರದ ಸಮರ್ಥನೆ. ಆದರೆ ಅಭಿವೃದ್ಧಿ ಯೋಜನೆಗಳಿಗಿಂತ ಹೆಚ್ಚಾಗಿ ಸರ್ಕಾರದ ಅಥವಾ ಪ್ರಧಾನಿ ಮೋದಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಹಣ ಬಳಕೆಯಾಗುತ್ತಿದೆ ಎಂಬ ಆರೋಪ ವಿಪಕ್ಷಗಳದ್ದಾಗಿದೆ. ಜಾಹೀರಾತು ನೀಡಲು ದಿನಕ್ಕೆ ₹1.5 ಕೋಟಿ ವೆಚ್ಚ ಮಾಡುವುದರ ಬದಲಾಗಿ ಶಿಕ್ಷಣ, ಆರೋಗ್ಯ ಅಥವಾ ಉದ್ಯೋಗ ಸೃಷ್ಟಿಯಂತಹ ಮೂಲಭೂತ ಸೌಕರ್ಯಗಳಿಗೆ ಬಳಸಬಹುದಿತ್ತು ಎಂಬ ವಾದವಿದೆ.
ಇನ್ನು ಮುಖ್ಯವಾಗಿ ಜಾಹೀರಾತು ವೆಚ್ಚವು ಚುನಾವಣಾ ವರ್ಷಗಳಲ್ಲಿ ಹೆಚ್ಚಾಗಿರುವುದು ಕಂಡುಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಜನರ ಹಣವನ್ನು ಎಷ್ಟು ಪಾರದರ್ಶಕವಾಗಿ ಬಳಸುತ್ತಿದೆ ಎಂಬ ಪ್ರಶ್ನೆಯನ್ನು ಎತ್ತುವ ಹಕ್ಕು ಪ್ರಜೆಗಳಾದ ನಮಗಿದೆ. “ನಾನು ಪ್ರಚಾರಕ್ಕೆ ಹಪಹಪಿಸುವವನಲ್ಲ, ನಿಮ್ಮ ಕೆಲಸಗಾರ” ಎಂದು ಹೇಳುವ ಪ್ರಧಾನಿ ಮೋದಿ ಯೋಜನೆಗಳ ಹೆಸರಲ್ಲಿ ತನ್ನ ಪ್ರಚಾರ ಮಾಡಲು ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಹಣವನ್ನು ವಿನಿಯೋಗಿಸುತ್ತಿರುವುದು ಕೂಡ ಅಷ್ಟೇ ಸತ್ಯ.




