ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ತೀವ್ರತೆಯ ನಡುವೆಯೇ ಶ್ವಾಸಕೋಶದ ಕ್ಯಾನ್ಸರ್ (Lung Cancer) ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ 6,500ಕ್ಕೂ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, ಸರಾಸರಿ ಪ್ರತಿ ಮೂರು ದಿನಕ್ಕೊಬ್ಬರು ಬಲಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಕ್ಯಾನ್ಸರ್ ರಿಜಿಸ್ಟ್ರಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ (ಎನ್‌ಸಿಆರ್‌ಪಿ) ದತ್ತಾಂಶಗಳ ಪ್ರಕಾರ 2016 ರಿಂದ 2021ರವರೆಗಿನ ಆರು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ ಒಟ್ಟು 6,547 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಈ ಕಾಯಿಲೆಯಿಂದಾಗಿ 738 ಮಂದಿ ಸಾವನ್ನಪ್ಪಿದ್ದಾರೆ. ಅಂದರೆ, ಸರಾಸರಿ ಪ್ರತಿ ಮೂರು ದಿನಕ್ಕೊಂದು ಸಾವು ಸಂಭವಿಸಿದಂತಾಗಿದೆ.
ಇದನ್ನೂ ಓದಿ: 137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು ಇಳಿಕೆ: ಯಾವೆಲ್ಲ ಔಷಧಿ ಅಗ್ಗ? ಪಡೆಯುವ ವಿಧಾನ ಹೇಗೆ?
ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೇ ಪ್ರಮುಖ ಕಾರಣ ಎಂದು ಭಾವಿಸಲಾಗಿತ್ತು. ಆದರೆ, ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಧೂಮಪಾನದ ಅಭ್ಯಾಸವೇ ಇಲ್ಲದವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಏಮ್ಸ್ ಮತ್ತು ರಾಜೀವ್ ಗಾಂಧಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯ ವಿಷಕಾರಿ ಗಾಳಿ ಮತ್ತು PM 2.5 ಮಾಲಿನ್ಯ ಕಣಗಳು ಇದಕ್ಕೆ ಪ್ರಮುಖ ಕಾರಣವಾಗಿವೆ ಎಂದು ವೈದ್ಯರು ವಿಶ್ಲೇಷಿಸಿದ್ದಾರೆ.
ಹಿಂದೆ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶ್ವಾಸಕೋಶದ ಕ್ಯಾನ್ಸರ್, ಈಗ 30 ರಿಂದ 40 ವರ್ಷದೊಳಗಿನ ಯುವಜನರು ಮತ್ತು ಮಹಿಳೆಯರಲ್ಲೂ ಹೆಚ್ಚಾಗಿ ಪತ್ತೆಯಾಗುತ್ತಿದೆ. ಬಹುತೇಕ ಪ್ರಕರಣಗಳು ಕಾಯಿಲೆ ಉಲ್ಬಣಗೊಂಡ ನಂತರವಷ್ಟೇ (3ನೇ ಅಥವಾ 4ನೇ ಹಂತದಲ್ಲಿ) ಪತ್ತೆಯಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.



