ಜಾಗತಿಕವಾಗಿ ಭಾರೀ ಕುತೂಹಲ ಮೂಡಿಸಿದ್ದ ಜನಪ್ರಿಯ ವಿಡಿಯೋ ಗೇಮ್ ‘ಗ್ರ್ಯಾಂಡ್ ಥೆಫ್ಟ್ ಆಟೋ 6’ (GTA 6) ಗುರುವಾರ ಬಿಡುಗಡೆಯಾಗಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12-13 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಯುವ ಸಮೂಹವನ್ನು ತಲುಪುವ ಪ್ರಯತ್ನವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, 2013ರ ಯುಪಿಎ ಆಡಳಿತಾವಧಿಯಲ್ಲಿ ಬಿಡುಗಡೆಯಾಗಿದ್ದ ‘ಜಿಟಿಎ 5’ ಮತ್ತು ಇಂದಿನ ‘ಜಿಟಿಎ 6’ ನಡುವಿನ ಅವಧಿಯಲ್ಲಿನ ಬದಲಾವಣೆಗಳನ್ನು ತುಲನೆ ಮಾಡಿದ್ದಾರೆ.
“ಭಾರತವು ಸಂಪೂರ್ಣ ಹೊಸ ಆಟವನ್ನು ಆಡುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ 10 ಸ್ಲೈಡ್‌ಗಳ ಚಿತ್ರಗಳನ್ನು ಹಂಚಿಕೊಂಡಿರುವ ಮೋದಿ, ಜಿಟಿಎ ಗೇಮ್‌ನ ವಿಶಿಷ್ಟ ‘ಪ್ರೈಸ್‌ಡೌನ್’ ಫಾಂಟ್ ಬಳಸಿ ಅಭಿವೃದ್ಧಿಯ ಅಂಕಿಅಂಶಗಳನ್ನು ನೀಡಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಒಂದು ಕಾಲದಲ್ಲಿ ‘ದುರ್ಬಲ ಐದು’ ಆರ್ಥಿಕತೆಗಳ ಪಟ್ಟಿಯಲ್ಲಿದ್ದ ಭಾರತ, ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಅಲ್ಲದೆ, ಶೇ. 27ರಷ್ಟಿದ್ದ ಬಡತನ ಪ್ರಮಾಣ ಕುಸಿದಿದ್ದು, ತೀವ್ರ ಬಡತನವು ಶೇ. 2.6ಕ್ಕೆ ಇಳಿದಿದೆ ಎಂದು ಉಲ್ಲೇಖಿಸಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯ ನಿರ್ಮಾಣದಿಂದಾಗಿ ನೈರ್ಮಲ್ಯ ವ್ಯಾಪ್ತಿಯು ಶೇ. 39ರಿಂದ ಶೇ. 100ಕ್ಕೆ ತಲುಪಿದೆ. ಇನ್ನು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸೌರಶಕ್ತಿ ಸಾಮರ್ಥ್ಯವು 2.82 ಗಿಗಾವ್ಯಾಟ್‌ನಿಂದ 175 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದೆ ಯಾವುದೇ ಸ್ಟಾರ್ಟ್‌ಅಪ್‌ಗಳು ಇರಲಿಲ್ಲ, ಆದರೆ ಇಂದು 440 ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮೋದಿ ಹೇಳಿದ್ದಾರೆ. ಗೇಮಿಂಗ್ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು, 1 ಜಿಬಿ ಇಂಟರ್ನೆಟ್ ದರವು 308 ರೂ.ಗಳಿಂದ 7.51 ರೂ.ಗೆ ಇಳಿಕೆಯಾಗಿರುವುದನ್ನು ಒತ್ತಿ ಹೇಳಿದ್ದಾರೆ.
ರೈಲ್ವೆ ವಿದ್ಯುದ್ದೀಕರಣವು ಶೇ. 20ರಿಂದ ಶೇ. 99.6ಕ್ಕೆ ತಲುಪಿದೆ. ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿದ್ದ ಭಾರತ, ಇಂದು 80ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಇದೇ ವೇಳೆ, ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 182ರಿಂದ ಶೂನ್ಯಕ್ಕೆ ಇಳಿದಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.
ಪ್ರಧಾನಿ ಮೋದಿ ಅವರ ಈ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಯುವಜನರನ್ನು ತಲುಪುವ ಹತಾಶ ಪ್ರಯತ್ನದಲ್ಲಿ ಪ್ರಧಾನಿಯವರು ಜಿಟಿಎ 5 ಮತ್ತು ಜಿಟಿಎ 6 ಚಿತ್ರಗಳನ್ನು ಬಳಸಿಕೊಂಡಿದ್ದಾರೆ. ಈ ವಿಡಿಯೋ ಗೇಮ್‌ನ ಕಥಾಹಂದರವು ‘ಅಪರಾಧಿ ಜೋಡಿ’ಯ ಸುತ್ತ ಸುತ್ತುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ. ಇದು ಎಷ್ಟು ಸೂಕ್ತವಾಗಿದೆ ಅಲ್ಲವೇ?” ಎಂದು ಟೀಕಿಸಿದ್ದಾರೆ.



