ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಭಾರತದಲ್ಲಿ ನ್ಯಾಯದ ಮುಂದೆ ಎಲ್ಲರೂ ಸಮಾನರು ಎನ್ನುತ್ತದೆ ಸಂವಿಧಾನ. ವ್ಯಕ್ತಿಯ ಧರ್ಮ, ಜಾತಿ, ಲಿಂಗ ಅಥವಾ ಸಾಮಾಜಿಕ ಹಿನ್ನೆಲೆ ಯಾವುದೇ ಇರಲಿ, ನ್ಯಾಯದ ತಕ್ಕಡಿಯಲ್ಲಿ ಅವೆಲ್ಲವೂ ಅಪ್ರಸ್ತುತವಾಗಬೇಕು. ಆದರೆ, ಬಿಲ್ಕಿಸ್ ಬಾನೋ ಪ್ರಕರಣದ 24 ವರ್ಷಗಳ ಇತಿಹಾಸವು ಸಂವಿಧಾನದ ಭರವಸೆಯನ್ನು ಈಡೇರಿಸಿದೆಯೇ? ಬಿಲ್ಕಿಸ್ ಬಾನೋ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೇ ಆಕೆಯ ನ್ಯಾಯದ ಹೋರಾಟ ಇಷ್ಟೊಂದು ಕಠಿಣವಾಗಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
2002ರ ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಹಿಂದುತ್ವ ಕೋಮುವಾದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಕೊಂದರು. ಈ ಭೀಕರ ಅಪರಾಧದಿಂದ ಬದುಕುಳಿದ ಬಿಲ್ಕಿಸ್, ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಬೇಕಾಯಿತು. ನ್ಯಾಯಾಲಯಗಳು ಹನ್ನೊಂದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದವು. ಆದರೆ, ಆ ತೀರ್ಪಿನ ನಂತರವೂ ಬಿಲ್ಕಿಸ್ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿಲ್ಲ.
2022ರ ಆಗಸ್ಟ್ 15ರಂದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದ ದಿನವೇ, ಗುಜರಾತ್ನ ಬಿಜೆಪಿ ಸರ್ಕಾರ ಈ 11 ಅಪರಾಧಿಗಳಿಗೆ ಶಿಕ್ಷಾವಧಿ ವಿನಾಯಿತಿ ನೀಡಿ ಬಿಡುಗಡೆ ಮಾಡಿತು. ಆ ಬಿಡುಗಡೆಗೆ ಕೆಲವು ಕಡೆ ಸಿಹಿ ಹಂಚಿ, ಅಪರಾಧಿಗಳನ್ನು ಹಾರ ಹಾಕಿ ಸ್ವಾಗತಿಸಿ ವಿಕೃತಿಯನ್ನೂ ಮರೆಯಲಾಯಿತು. ಇದು ಕೇವಲ ಅಪರಾಧಿಗಳ ಬಿಡುಗಡೆ ಮಾತ್ರವಲ್ಲದೆ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಂತಹ ಅಪರಾಧಗಳನ್ನು ಸಮಾಜದ ಒಂದು ವರ್ಗ ಹೇಗೆ ನೋಡುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನೂ ಹುಟ್ಟುಹಾಕಿತ್ತು.
ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಬಿಲ್ಕಿಸ್ ಸುಪ್ರೀಂ ಕೋರ್ಟ್ ಮೊರೆಹೋದರು. 2024ರ ಜನವರಿ 8ರಂದು ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆ ಶಿಕ್ಷಾವಧಿ ವಿನಾಯಿತಿ ನೀಡಲು ಗುಜರಾತ್ ಸರ್ಕಾರಕ್ಕೆ ಅಧಿಕಾರವೇ ಇರಲಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಿತು. ಇದು ಬಿಲ್ಕಿಸ್ ಬಾನೋ ಅವರ ಸುದೀರ್ಘ ಹೋರಾಟಕ್ಕೆ ದೊರೆತ ಮಹತ್ವದ ನ್ಯಾಯಾಂಗ ಜಯವಾಗಿತ್ತು.
ಆದರೆ, ಈಗ ಮತ್ತೊಮ್ಮೆ ಆಕೆಯ ನ್ಯಾಯದ ಭರವಸೆಗೆ ಆಘಾತದ ಹೊಡೆತ ಬಿದ್ದಿದೆ. 2026ರ ಅಕ್ಟೋಬರ್ 28ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರ ಪೀಠವು, ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೊರ್ಧಿಯಾ ಎಂಬಿಬ್ಬರು ಅಪರಾಧಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಜಾಮೀನು ಮಂಜೂರು ಮಾಡಿದೆ. ಅವರು ಹದಿನೇಳು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದದ್ದು ಮತ್ತು ಒಬ್ಬರಿಗೆ ಗಂಭೀರ ದೈಹಿಕ ಅಂಗವೈಕಲ್ಯವಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.
ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ಈ ಆದೇಶಕ್ಕೂ ಮೊದಲು ಬಿಲ್ಕಿಸ್ ಬಾನೋ ಅವರ ಪ್ರತಿಕ್ರಿಯೆಯನ್ನು ನ್ಯಾಯಾಲಯ ಪಡೆದಿಲ್ಲ ಎಂಬುದು. ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ಪ್ರತಿಕ್ರಿಯಿಸಿರುವ ಬಾನೋ, “ನ್ಯಾಯಾಲಯ ಆದೇಶ ಹೊರಡಿಸಿರುವ ವಿಷಯವನ್ನು ಪತ್ರಿಕಾ ವರದಿಗಳ ಮೂಲಕ ತಿಳಿದುಕೊಂಡೆ. ಕೋರ್ಟ್ ಆದೇಶವು ತೀವ್ರು ನೋವು, ಆಘಾತ ಮತ್ತು ಅಪನಂಬಿಕೆ ಉಂಟುಮಾಡಿದೆ. ಮತ್ತೊಮ್ಮೆ ಭಯದ ವಾತಾವರಣ ಎದುರಾಗಿದೆ” ಎಂದಿದ್ದಾರೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಭಾರತದ ನ್ಯಾಯವ್ಯವಸ್ಥೆಯಲ್ಲಿ ಅಪರಾಧಿಗಳಿಗೆ ತಮ್ಮ ಪರವಾಗಿ ವಾದಿಸಲು ಮತ್ತೆ ಮತ್ತೆ ಅವಕಾಶ ದೊರೆಯುವಾಗ, ಸಂತ್ರಸ್ತೆಗೆ ತನ್ನ ಭಯ ಮತ್ತು ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗದೇ ಇರುವುದು ಕಳವಳ ಹುಟ್ಟುಹಾಕಿದೆ.
ಬಿಲ್ಕಿಸ್ ಹಿಂದೂ ಮಹಿಳೆಯಾಗಿದ್ದರೆ ಇದೇ ಧೋರಣೆ ಇರುತ್ತಿತ್ತೇ?
ನ್ಯಾಯಾಂಗ ಪ್ರಕ್ರಿಯೆಯಲ್ಲಿ ಧರ್ಮ ಮುಖ್ಯವಲ್ಲ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಧರ್ಮದ ಪ್ರಶ್ನೆ ತರಬಾರದು ಎಂಬುದು ಕೆಲವರ ವಾದ. ಆದರೆ, ಬಾನೋ ಮೇಲೆ ಕ್ರೌರ್ಯ ನಡೆದದ್ದೇ ಆಕೆಯ ಧರ್ಮದ ಕಾರಣಕ್ಕಾಗಿ. ಅವರು ಮುಸ್ಲಿಂ ಮಹಿಳೆ ಎಂಬ ಕಾರಣಕ್ಕಾಗಿಯೇ, ಆಕೆಯ ಮೇಲೆ ಅತ್ಯಾಚಾರ ನಡೆಯಿತು. ಆಕೆಯ ಕುಟುಂಬವನ್ನು ಬರ್ಬರವಾಗಿ ಕೊಲ್ಲಲಾಯಿತು.
ಒಂದು ವೇಳೆ, ಬಿಲ್ಕಿಸ್ ಬಾನೋ ಬದಲಿಗೆ ಬಹುಸಂಖ್ಯಾತ ಸಮುದಾಯದ ಮಹಿಳೆಯೊಬ್ಬರು ಇಂತಹ ಕೋಮುದ್ವೇಷದ ದಾಳಿಗೆ ಒಳಗಾಗಿದ್ದರೆ, ಅಪರಾಧಿಗಳ ಬಿಡುಗಡೆಗೆ ಇಂತಹ ಸಾರ್ವಜನಿಕ ಸ್ವಾಗತ ದೊರೆಯುತ್ತಿತ್ತೇ? ಸರ್ಕಾರದ ನಿರ್ಧಾರಕ್ಕೆ ಇಷ್ಟೊಂದು ಸಮರ್ಥನೆ ಸಿಗುತ್ತಿತ್ತೇ? ಸಂತ್ರಸ್ತೆಯ ಭಯಕ್ಕಿಂತ ಅಪರಾಧಿಗಳ ಬಿಡುಗಡೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿತ್ತೇ? ಉತ್ತರ ಸರಳ – ‘ಇಲ್ಲ’.
ಅಪರಾಧಿಯ ಧರ್ಮ ಯಾವುದಿದ್ದರೂ ಅಪರಾಧ ಅಪರಾಧವೇ. ಸಂತ್ರಸ್ತೆಯ ಧರ್ಮ ಯಾವುದಿದ್ದರೂ ಆಕೆಯ ಘನತೆ, ಸುರಕ್ಷತೆ ಮತ್ತು ನ್ಯಾಯದ ಹಕ್ಕು ಒಂದೇ ಆಗಿರಬೇಕು. ಆದರೆ, ಇಂದಿನ ದಿನಗಳಲ್ಲಿ ಮಹಿಳೆ ಅತ್ಯಾಚಾರಕ್ಕೆ ಒಳಗಾದಾಗ ಸಮಾಜವು ಆಕೆಯ ಧರ್ಮವನ್ನು ನೋಡಿ ಸಹಾನುಭೂತಿಯ ಪ್ರಮಾಣವನ್ನು ನಿರ್ಧರಿಸುತ್ತಿದೆ. ಆದ್ದರಿಂದಲೇ,ಬಿಲ್ಕಿಸ್ ಬಾನೋ ಪ್ರಕರಣವನ್ನು ಭಾರತೀಯ ಸಮಾಜ ಹೇಗೆ ನೋಡುತ್ತಿದೆ ಎಂಬುದು ಮುಖ್ಯವಾಗುತ್ತದೆ.
ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೂ ಕಾನೂನಿನ ಪ್ರಕಾರ ಮೇಲ್ಮನವಿ ಸಲ್ಲಿಸುವ, ಜಾಮೀನು ಕೋರುವ ಮತ್ತು ಶಿಕ್ಷೆಯ ಅಮಾನತಿಗೆ ಮನವಿ ಮಾಡುವ ಹಕ್ಕಿದೆ. ಆದರೆ, ಅಪರಾಧಿಗಳ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಸಂತ್ರಸ್ತೆಯ ಹಕ್ಕುಗಳನ್ನು ನಿರ್ಲಕ್ಷಿಸಬಾರದು. ನ್ಯಾಯಾಲಯವು ಅಪರಾಧಿಗಳ ಶಿಕ್ಷೆಯ ಅಪರಾಧವನ್ನು ಅಮಾನತು ಮಾಡುವಾಗ, ಅಪರಾಧದ ಗಂಭೀರತೆ, ಸಂತ್ರಸ್ತೆಯ ಸುರಕ್ಷತೆ, ಆಕೆಯ ಮೇಲಿನ ಮಾನಸಿಕ ಪರಿಣಾಮ ಹಾಗೂ ಆಕೆಯ ಅಭಿಪ್ರಾಯವೇನು ಎಂಬುದನ್ನು ಗಮನಿಸಿ, ಆಲಿಸಬೇಕಿತ್ತು. ಆದರೆ, ಅದಾಗಲಿಲ್ಲ.
ಗುಜರಾತ್ ಸರ್ಕಾರದ ಪಾತ್ರವನ್ನು ಮರೆತುಬಿಡಲು ಸಾಧ್ಯವೇ?
ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದನ್ನು ಗಮನಿಸುವ ಸಮಯದಲ್ಲಿ, ರಾಜಕೀಯ ಮತ್ತು ಆಡಳಿತಾತ್ಮಕ ಆಯಾಮವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. 2022ರಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು ಗುಜರಾತ್ ಸರ್ಕಾರ.
ಅಂದಹಾಗೆ, ಬಿಲ್ಕಿಸ್ ಬಾನೋ ಮೇಲೆ ಕ್ರೌರ್ಯ ನಡೆದಾಗ ಗುಜರಾತ್ನ ಮುಖ್ಯಮಂತ್ರಿಯಾಗಿದ್ದವರು ಇಂದಿನ ಪ್ರಧಾನಿ ನರೇಂದ್ರ ಮೋದಿ. ಇದೇ ಮೋದಿ ಅವರು2014ರಲ್ಲಿ ಪ್ರಧಾನಿಯಾದಾಗ, ‘ಬೇಟಿ ಬಚಾವೋ – ಬೇಟಿ ಪಡಾವೋ’ ಎಂಬ ಘೋಷಣೆಯೊಂದಿಗೆ ಮಹಿಳಾ ಸುರಕ್ಷಣೆ/ರಕ್ಷಣೆಯೇ ತಮ್ಮ ಆದ್ಯತೆ ಎಂದಿದ್ದರು. ಆದರೆ, ಅವರದ್ದೇ ಬಿಜೆಪಿ ಸರ್ಕಾರ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷಾವಧಿ ವಿನಾಯಿತಿ ನೀಡಿತು. ಅದನ್ನು ಬಿಜೆಪಿ ಸಂಭ್ರಮಿಸಿತು.
ಒಂದು ಕೋಮುಗಲಭೆಯಲ್ಲಿ ಮುಸ್ಲಿಂ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಆಕೆಯ ಕುಟುಂಬದವರನ್ನು ಹತ್ಯೆ ಮಾಡಲಾಗುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ನಂತರ ಸರ್ಕಾರವೇ ಅವರಿಗೆ ಬಿಡುಗಡೆಗೆ ದಾರಿ ಮಾಡಿಕೊಡುತ್ತದೆ. ಆ ಬಿಡುಗಡೆಯನ್ನು ನ್ಯಾಯಾಲಯ ರದ್ದುಗೊಳಿಸುತ್ತದೆ. ಈಗ ಇಬ್ಬರು ಅಪರಾಧಿಗಳಿಗೆ ಮತ್ತೊಮ್ಮೆ ಜಾಮೀನು ದೊರೆಯುತ್ತದೆ. ಇವೆಲ್ಲವೂ ಒಂದರ ನಂತರ ಮತ್ತೊಂದು ನಡಯುವಾಗ ಇಲ್ಲಿಯೇ ಬಿಲ್ಕಿಸ್ ಬಾನೋ ಅವರ ಧಾರ್ಮಿಕ ಗುರುತಿನ ಪ್ರಶ್ನೆ ಹೆಚ್ಚು ಮಹತ್ವ ಪಡೆಯುತ್ತದೆ.
ಭಾರತೀಯ ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಸಮಾನರು, ಕಾನೂನಿನ ಸಮಾನ ರಕ್ಷಣೆ ಎಲ್ಲರಿಗೂ ಇದೆ ಎನ್ನುತ್ತದೆ. 15ನೇ ವಿಧಿಯು ಧರ್ಮ ಸೇರಿದಂತೆ ಯಾವುದೇ ಆಧಾರಗಳ ಮೇಲೆ ಭೇದ ಮಾಡುವುದನ್ನು ನಿಷೇಧಿಸುತ್ತದೆ. 21ನೇ ವಿಧಿಯು ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುತ್ತದೆ.
ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?
ಈ ಹಕ್ಕುಗಳು ಬಿಲ್ಕಿಸ್ ಬಾನೋ ಅವರಿಗೂ ಅನ್ವಯಿಸುತ್ತವೆ. ಆದರೆ, ಇಂದು ಬಿಲ್ಕಿಸ್ ಬಾನೋ ನ್ಯಾಯದ ಬಗ್ಗೆ ವ್ಯಕ್ತಪಡಿಸಿರುವ ಅಪನಂಬಿಕೆಯು ನ್ಯಾಯಾಂಗ ಪ್ರಕ್ರಿಯೆಯಲ್ಲಿ, ‘ಅಪರಾಧದಿಂದ ಬದುಕುಳಿದವರಿಗೆ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ವಿಶ್ವಾಸ ಉಳಿಯುವಂತೆ ಮಾಡುವ’ ನ್ಯಾಯವ್ಯವಸ್ಥೆಯ ಜವಾಬ್ದಾರಿ ಕುರಿತು ಎಚ್ಚರಿಸುತ್ತದೆ.
ಬಿಲ್ಕಿಸ್ ಬಾನೋ ನ್ಯಾಯಕ್ಕಾಗಿ ಹೋರಾಟ ಆರಂಭಿಸಿ ಎರಡು ದಶಕಗಳಿಗಿಂತ ಹೆಚ್ಚು ಕಾಲ ಕಳೆದಿದೆ. ಈ ಅವಧಿಯಲ್ಲಿ ಅವರು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಿದ್ದಾರೆ, ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿದ್ದಾರೆ, ನ್ಯಾಯಾಂಗದ ಮೂಲಕ ಮಹತ್ವದ ಜಯವನ್ನೂ ಗಳಿಸಿದ್ದಾರೆ. ಆದರೂ ಮತ್ತೆ ಅದೇ ಅಪರಾಧಿಗಳ ಬಿಡುಗಡೆಯ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಬಿಲ್ಕಿಸ್ ಬಾನೋ ಮತ್ತೆ ನ್ಯಾಯಕ್ಕಾಗಿ ಹೋರಾಡುವುದಾಗಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅವರ ಹೋರಾಟವು ವೈಯಕ್ತಿಕ ಹೋರಾಟ ಮಾತ್ರವಲ್ಲ. ಧರ್ಮದ ಗುರುತನ್ನು ಮೀರಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಭಾರತದ ಸಾಂಸ್ಥಿಕ ಸಾಮರ್ಥ್ಯದ ಪರೀಕ್ಷೆಯೂ ಆಗಿದೆ. ಈಪರೀಕ್ಷೆಯಲ್ಲಿ ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆ ಉಳಿಯಬೇಕಾದರೆ, ಬಿಲ್ಕಿಸ್ ಬಾನೋ ಅವರ ಧ್ವನಿ ಕೇಳಿಸಬೇಕು. ಅವರ ಸುರಕ್ಷತೆ ಖಾತರಿಯಾಗಬೇಕು.
ಇದೆಲ್ಲದರ ನಡುವೆ, ಈಗಿರುವ ಪ್ರಶ್ನೆ ಒಂದೇ: ಆಕೆ, ಇನ್ನೆಷ್ಟು ದಿನ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು?


