ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಿಂದ ಬಾಂಗ್ಲಾದೇಶಕ್ಕೆ ಮರಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ನಿಷೇಧಿತ ‘ಅವಾಮಿ ಲೀಗ್’ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ತೀವ್ರ ಶಕ್ತಿ ಪ್ರದರ್ಶನ ನಡೆಸುತ್ತಿದ್ದು, ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ (ನ. 18) ರಾತ್ರಿ 11.30ರ ಸುಮಾರಿಗೆ ಚಟ್ಟೋಗ್ರಾಮ್‌ನ ಪಂಚ್‌ಲೈಶ್ ಪ್ರದೇಶದಲ್ಲಿರುವ ಮಧ್ಯಂತರ ಸರ್ಕಾರದ ಮಾಜಿ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರ ಪೂರ್ವಿಕರ ಮನೆಯ ನೆಲಮಹಡಿಯ ಪಾಳುಬಿದ್ದ ಕೋಣೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಗಸ್ತು ಪೊಲೀಸರು ತಕ್ಷಣ ಬೆಂಕಿ ನಂದಿಸಿದ್ದು, ಮೇಲಿನ ಮಹಡಿಗಳಲ್ಲಿ ವಾಸವಿದ್ದ ಯೂನಸ್ ಅವರ ಇಬ್ಬರು ಸಹೋದರರ ಕುಟುಂಬಗಳು ಸುರಕ್ಷಿತವಾಗಿವೆ.
2024ರ ಆಗಸ್ಟ್‌ನ ವಿದ್ಯಾರ್ಥಿ ದಂಗೆಯ ಬಳಿಕ ಪದಚ್ಯುತಗೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ, ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರೂ ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದಾರೆ. ಹೊಸ ಪಾಸ್‌ಪೋರ್ಟ್‌ಗಾಗಿ ಅವರ ವಕೀಲರು ಢಾಕಾದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ನಿಷೇಧವನ್ನು ಲೆಕ್ಕಿಸದೆ ಅವಾಮಿ ಲೀಗ್ ಭಾನುವಾರದಿಂದ (ನ. 15) ಐದು ದಿನಗಳ ಪ್ರತಿಭಟನೆ ಹಮ್ಮಿಕೊಂಡಿದ್ದು, ಗುರುವಾರ (ನ. 19) ದೇಶವ್ಯಾಪಿ ಬಂದ್ ಕರೆ ನೀಡಿದೆ.
ಹಸೀನಾ ಅವರ ತವರು ಜಿಲ್ಲೆ ಗೋಪಾಲಗಂಜ್‌ನಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಮಚ್ಚು, ಕೊಡಲಿ ಹಿಡಿದ ಕಾರ್ಯಕರ್ತರು ಮಂಗಳವಾರ (ನ. 17) ರಾತ್ರಿ ತುಂಗಿಪಾರಾ ಪೊಲೀಸ್ ಠಾಣೆಗೆ ನುಗ್ಗಿ ಬಂಧಿತರನ್ನು ಬಿಡಿಸಿಕೊಂಡಿದ್ದಲ್ಲದೆ, ಠಾಣೆ, ಪೊಲೀಸ್ ವಾಹನಗಳು ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸಂಸದ ಎಸ್.ಎಂ. ಜಿಲಾನಿ ಅವರ ನಿವಾಸ ಸೇರಿದಂತೆ ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬುಧವಾರ ರಾತ್ರಿ ಬಿಎನ್‌ಪಿ ಸಂಸದ ಕೆ.ಎಂ. ಬಾಬರ್ ಅವರ ಆಸ್ಪತ್ರೆಗೂ ಬೆಂಕಿ ಹಚ್ಚಲಾಗಿದೆ.
ನರೈಲ್ ಜಿಲ್ಲೆಯಲ್ಲಿ ಬುಧವಾರ ಸಂಜೆ ಅವಾಮಿ ಲೀಗ್ ಹಿಂಸಾಚಾರ ವಿರೋಧಿಸಿ ನಡೆದ ಬೈಕ್ ರ್‍ಯಾಲಿಯ ಮೇಲೆ ನಡೆದ ದಾಳಿಯಲ್ಲಿ ಬಿಎನ್‌ಪಿ ಬೆಂಬಲಿತ ನಾಯಕರಾದ ಶಾಹಿನೂರ್ ಶೇಖ್ ಮತ್ತು ಸೊಹೆಲ್ ಮೊಲ್ಲಾ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಯೂನಸ್ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಗುರಿಯಾಗಿಸಿ ಸರಣಿ ದಾಳಿ ನಡೆಯುತ್ತಿದ್ದು, ನವೆಂಬರ್ 10ರಿಂದ ಈವರೆಗೆ ದೇಶಾದ್ಯಂತ ಕನಿಷ್ಠ 37 ಶಾಖೆಗಳು ಮತ್ತು ಕಚೇರಿಗಳಿಗೆ ಬೆಂಕಿ ಹಚ್ಚುವ ಯತ್ನ ನಡೆದಿದೆ.
ರಾಜಧಾನಿ ಢಾಕಾದ ಹಲವೆಡೆ ನಾಡಬಾಂಬ್‌ಗಳು ಸ್ಫೋಟಗೊಂಡಿದ್ದು, ಐದು ಜಿಲ್ಲೆಗಳಲ್ಲಿ ಬಸ್ ಹಾಗೂ ರೈಲು ಹಳಿಗಳಿಗೆ ಬೆಂಕಿ ಹಚ್ಚಿದ್ದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಕಳೆದ 10 ದಿನಗಳಲ್ಲಿ 28 ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು 96 ತುಕಡಿಗಳ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಪಡೆ ನಿಯೋಜಿಸಲಾಗಿದ್ದು, ಢಾಕಾದಲ್ಲಿ 71 ಮಂದಿಯನ್ನು ಬಂಧಿಸಿ, ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಾಹಿದ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ವಿದೇಶದಲ್ಲಿದ್ದುಕೊಂಡು ಹಸೀನಾ ಅವರು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಹಾಗೂ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಆರೋಪಿಸಿದ್ದಾರೆ. 2024ರ ದಂಗೆಯ ಮಾದರಿಯಲ್ಲಿ ಎಲ್ಲರೂ ಒಗ್ಗೂಡಿ ಅವಾಮಿ ಲೀಗ್ ಮರುಪ್ರವೇಶವನ್ನು ತಡೆಯಬೇಕು ಮತ್ತು ಕೇವಲ ಆಡಳಿತ ಯಂತ್ರವನ್ನು ಅವಲಂಬಿಸದೆ ಕ್ಷೇತ್ರಗಳಿಗೆ ತೆರಳಿ ರಾಜಕೀಯವಾಗಿ ಎದುರಿಸಬೇಕು ಎಂದು ಬಿಎನ್‌ಪಿ ಸಂಸದರಿಗೆ ಅವರು ಕರೆ ನೀಡಿದ್ದಾರೆ.



