ಅಧಿಕಾರಿಗಳಿಂದ ಶೂ ಪಾಲಿಶ್ ಮಾಡಿಸುವುದಾಗಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಮತ್ತು ಯುಪಿ ಮಾಜಿ ಸಚಿವ ಅಜಂ ಖಾನ್‌ಗೆ ಶನಿವಾರ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಶೇಷ ಮ್ಯಾಜಿಸ್ಟ್ರೇಟ್ ಸಂಸದ/ಶಾಸಕ ನ್ಯಾಯಾಲಯದ ನ್ಯಾಯಾಧೀಶರು ಶೋಭಿತ್ ಬನ್ಸಾಲ್ ಅವರು, ಅಜಂ ಖಾನ್‌ಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅಜಂ ಖಾನ್ ನೀಡಿದ ಹೇಳಿಕೆಗೆ ಈಗ ಶಿಕ್ಷೆ ಘೋಷಣೆಯಾಗಿದೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಅಜಂ ಖಾನ್ ಅವರು ರಾಂಪುರದ ಭೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸುತ್ತಿದ್ದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಅಂದಿನ ರಾಂಪುರ ಜಿಲ್ಲಾಧಿಕಾರಿ (DM) ಆಂಜನೇಯ ಕುಮಾರ್ ಸಿಂಗ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಇದನ್ನು ಓದಿದ್ದೀರಾ? ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಎಸ್ಪಿ ನಾಯಕ ಆಜಂ ಖಾನ್, ಪತ್ನಿ, ಪುತ್ರಗೆ 7 ವರ್ಷ ಜೈಲು
“ಈ ಕಲೆಕ್ಟರ್‌ಗಳ ಬಗ್ಗೆ ಭಯಬೇಡ. ಅವರು ಬರೀ ಸಂಬಳ ಪಡೆಯುವ ನೌಕರರು. ಚುನಾವಣೆ ಮುಗಿದ ನಂತರ ಇವರಿಂದ ಶೂ ಪಾಲಿಶ್ ಮಾಡಿಸುತ್ತೇನೆ” ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆದ ಬಳಿಕ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.
ಇನ್ನು ನಕಲಿ ದಾಖಲೆಗಳ ಸಹಾಯದಿಂದ ಪ್ಯಾನ್ ಕಾರ್ಡ್‌ಗಳನ್ನು ಪಡೆದ ಪ್ರಕರಣದಲ್ಲಿ ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಅಜಮ್ ಈಗಾಗಲೇ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.




