ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ ಶಾಪವೇ?‌ – ಭಾಗ 2

Date:

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು ‘ಪ್ರಜೆಗಳ ರಕ್ಷಕ’ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು ಅಂದಿನ ವಸಾಹತುಶಾಹಿ ಮನಸ್ಥಿತಿಯೇ ಕಾರಣವೇ? ನೂರಾರು ಪುಟಗಳ ವರದಿಗಳು ಕಡತಗಳ ಗೋದಾಮಿನಲ್ಲಿ ಧೂಳು ಹಿಡಿಯಲು ಅಸಲಿ ಕಾರಣವೇನು?

- Advertisement -

ಕರ್ನಾಟಕ ಪೊಲೀಸ್ ಇಲಾಖೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿಗಳನ್ನು ರಚಿಸಿರುವುದು ಮತ್ತು ಸುಧಾರಣೆಗೆ ಮುಂದಾಗಿರುವುದು ಸಮಾಧಾನಕರವೇ. ಆದರೆ, ಈ ಸಮಿತಿಗಳು ಕೇವಲ ತಾಂತ್ರಿಕ ಸುಧಾರಣೆಗಳ ಬಗ್ಗೆ ಮಾತ್ರ ಯೋಚಿಸಿದರೆ ಸಾಲದು. ಇಡೀ ವ್ಯವಸ್ಥೆಯ ಮೂಲ ಬೇರು ಎಲ್ಲಿದೆ ಮತ್ತು ಆ ರೋಗದ ಮೂಲ ಎಲ್ಲಿದೆ ಎಂಬುದನ್ನು ಮೊದಲು ಅರಿಯಬೇಕಿದೆ. ನಮ್ಮ ದೇಶದಲ್ಲಿ ಇಂದಿಗೂ ಚಾಲನೆಯಲ್ಲಿರುವ ಪೊಲೀಸ್ ವ್ಯವಸ್ಥೆಯ ಅಡಿಪಾಯವಿರುವುದು ಬ್ರಿಟಿಷರ ಕಾಲದ ಕಾಯಿದೆಗಳ ಮೇಲೆ. ಹಾಗಾದರೆ, ಬ್ರಿಟಿಷರು ಭಾರತದಲ್ಲಿ ಪೊಲೀಸ್ ಇಲಾಖೆಯನ್ನು ಯಾವ ಉದ್ದೇಶಕ್ಕೆ ಶುರು ಮಾಡಿದ್ದರು? ಇತಿಹಾಸದ ಈ ಕಹಿ ಸತ್ಯವನ್ನು ಅವಲೋಕಿಸದೆ ಯಾವ ಸುಧಾರಣೆಯೂ ಯಶಸ್ವಿಯಾಗಲು ಸಾಧ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ, ಬ್ರಿಟಿಷ್ ಸರ್ಕಾರಕ್ಕೆ ಭಾರತೀಯರ ಸ್ವಾತಂತ್ರ್ಯದ ಆಕಾಂಕ್ಷೆಗಳನ್ನು ಅಡಗಿಸಲು ಮತ್ತು ತಮ್ಮ ವಸಾಹತುಶಾಹಿ ಆಡಳಿತವನ್ನು ಗಟ್ಟಿಯಾಗಿ ಕಾಯ್ದುಕೊಳ್ಳಲು ಸ್ಥಳೀಯರ ಮೇಲೆ ಹದ್ದುಬಸ್ತು ಸಾಧಿಸುವ ಒಂದು ಬಲವಾದ ‘ಪಡೆ’ಯ ಅಗತ್ಯವಿತ್ತು. ಇದರ ಫಲವಾಗಿ 1860ರಲ್ಲಿ ಪೊಲೀಸ್ ಆಯೋಗ ರಚನೆಯಾಗಿ, 1861ರ ಪೊಲೀಸ್ ಕಾಯಿದೆ (Police Act of 1861) ಜಾರಿಗೆ ಬಂತು. ಬ್ರಿಟಿಷರು ಈ ಇಲಾಖೆಯನ್ನು ಸಾರ್ವಜನಿಕರ ಸೇವೆಗಾಗಿ ಅಥವಾ ರಕ್ಷಣೆಗಾಗಿ ಸೃಷ್ಟಿಸಿರಲಿಲ್ಲ. ಬದಲಿಗೆ, ದೇಶದ ಜನರನ್ನು ಹದ್ದುಬಸ್ತಿನಲ್ಲಿಡಲು, ಸರ್ಕಾರದ ವಿರುದ್ಧ ದನಿ ಎತ್ತುವವರನ್ನು ದಮನ ಮಾಡಲು ಮತ್ತು ಕಂದಾಯ ವಸೂಲಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ‘ದಬ್ಬಾಳಿಕೆಯ ಅಸ್ತ್ರ’ವಾಗಿ ಇದನ್ನು ಬಳಸಿಕೊಳ್ಳಲಾರಂಭಿಸಿದರು. ಇಲ್ಲಿ ಪೊಲೀಸರು ಪ್ರಜೆಗಳ ರಕ್ಷಕರಲ್ಲ, ಆಳುವವರ ಗುಲಾಮರು ಅಥವಾ ಕಾವಲುಗಾರರಾಗಿದ್ದರು.

ವಿಪರ್ಯಾಸವೆಂದರೆ, ಸ್ವಾತಂತ್ರ್ಯ ಬಂದು ಏಳೂವರೆ ಕಳೆದಿದ್ದರೂ, ನಾವಿನ್ನೂ ಅದೇ 1861ರ ಮನಸ್ಥಿತಿಯ ಕಾನೂನುಗಳು ಮತ್ತು ಆಡಳಿತಾತ್ಮಕ ಚೌಕಟ್ಟಿನಲ್ಲೇ ಪೊಲೀಸ್ ಇಲಾಖೆಯನ್ನು ಮುನ್ನಡೆಸುತ್ತಿದ್ದೇವೆ. ಇಂದಿಗೂ ಠಾಣೆಗೆ ಬರುವ ಸಾಮಾನ್ಯ ನಾಗರಿಕನನ್ನು ಪ್ರಜೆಯಂತೆ ನೋಡುವ ಬದಲು, ಬ್ರಿಟಿಷರ ಕಾಲದಂತೆ ‘ಸಂದೇಹಾಸ್ಪದ ವ್ಯಕ್ತಿ’ ಅಥವಾ ಹದ್ದುಬಸ್ತಿನಲ್ಲಿಡಬೇಕಾದ ವ್ಯಕ್ತಿಯಂತೆಯೇ ಕಾಣುವ ವಸಾಹತುಶಾಹಿ ಧೋರಣೆ ಪೊಲೀಸ್ ವ್ಯವಸ್ಥೆಯ ರಕ್ತದಲ್ಲೇ ಹರಿದುಕೊಂಡು ಬಂದಿದೆ. ಬ್ರಿಟಿಷರ ಕಾಲದಲ್ಲಿ ವೈಸ್‌ರಾಯ್‌ಗಳು ಅಥವಾ ಬ್ರಿಟಿಷ್ ಅಧಿಕಾರಿಗಳು ಹೇರುತ್ತಿದ್ದ ಆಜ್ಞೆಗಳ ಜಾಗದಲ್ಲಿ, ಇಂದು ರಾಜಕೀಯ ನಾಯಕರು ಮತ್ತು ಶಾಸಕರು ಕುಳಿತುಕೊಂಡಿದ್ದಾರೆ ಅಷ್ಟೇ. ಪೊಲೀಸರನ್ನು ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿಗೆ ಬಳಸಿಕೊಳ್ಳುವ, ತಮಗೆ ಬೇಕಾದ ಕಡೆಗೆ ತಕ್ಷಣವೇ ವರ್ಗಾಯಿಸುವ ಹಳೇ ವಸಾಹತುಶಾಹಿ ಚಾಳಿ ಎಗ್ಗಿಲ್ಲದೆ ಇಂದಿಗೂ ಮುಂದುವರೆದಿದೆ.

ಬ್ರಿಟಿಷರು ಸೃಷ್ಟಿಸಿದ ಆ ಅಂದಿನ ‘ದಬ್ಬಾಳಿಕೆಯ ಅಸ್ತ್ರ’ ಇಂದಿಗೂ ಹೇಗೆ ಜೀವಂತವಾಗಿದೆ ಎಂಬುದನ್ನು ತಿಳಿಯಲು ಕಡತಗಳನ್ನು ತಿರುವಿಹಾಕಬೇಕಿಲ್ಲ. ರಾಜ್ಯದ ಯಾವುದಾದರೂ ಒಂದು ಪೊಲೀಸ್ ಠಾಣೆಯ ಒಳಗೆ ಕಾಲಿಟ್ಟರೆ ಸಾಕು, ಆ ವಸಾಹತುಶಾಹಿ ವ್ಯವಸ್ಥೆಯ ಕ್ರೂರ ಮುಖ ಕಣ್ಣಿಗೆ ಕಾಣುತ್ತದೆ. ಮೇಲಿನವರ ಆಜ್ಞೆಗಳಿಗೆ ತಲೆಬಾಗಿ, ರಾಜಕಾರಣಿಗಳ ಕೃಪಾಪೋಷಿತರಾಗಿ, ದಿನದ 24 ಗಂಟೆಯೂ ಕೆಲಸ ಮಾಡುವ ತಳಮಟ್ಟದ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಈ ಮನದಾಳದ ಮಾತು ಇಂದಿನ ವ್ಯವಸ್ಥೆಯ ನೈಜ ಸ್ಥಿತಿಯನ್ನು ಬಿಚ್ಚಿಡುತ್ತದೆ. (ಕಾನ್‌ಸ್ಟೆಬಲ್‌ ಹೆಸರು ಹೇಳು ಇಚ್ಛಿಸಿರುವುದಿಲ್ಲ)

“ಹೊರಗಿನವರಿಗೆ ಖಾಕಿ ಧರಿಸಿದವನೊಬ್ಬ ದೊಡ್ಡ ಪವರ್‌ಫುಲ್ ಆಫೀಸರ್ ಥರ ಕಾಣ್ಬೋದು. ಆದ್ರೆ, ಈ ಠಾಣೆಯ ಒಳಗಡೆ ಬಂದು ನೋಡಿದ್ರೆ ಗೊತ್ತಾಗುತ್ತೆ ನಮ್ಮ ಬದುಕು ಯಾವ ಮಟ್ಟಕ್ಕೆ ನರಕವಾಗಿದೆ ಅಂತ. ಬೆಳಿಗ್ಗೆ ಎದ್ದರೆ ಡ್ಯೂಟಿಗೆ ಅಂತ್ಯವೇ ಇರಲ್ಲ. 8 ಗಂಟೆ ಕೆಲಸ ಅನ್ನೋದು ಬರೀ ರೆಕಾರ್ಡ್ಸ್‌ನಲ್ಲಿ ಅಷ್ಟೆ. ದಿನಕ್ಕೆ 14 ರಿಂದ 16 ಗಂಟೆ ಕೆಲಸ ಮಾಡ್ಲೇಬೇಕು. ವಾರದ ರಜೆ ಅನ್ನೋದು ಹಬ್ಬದ ದಿನದಂತೆ. ತಿಂಗಳುಗಟ್ಟಲೆ ರಜೆ ಸಿಗಲ್ಲ. ರಾಜಕೀಯದೋರ ಒತ್ತಡದ ಮಾತಂತೂ ಕೇಳೋದೇ ಬೇಡ, ಯಾವ್ನೋ ದೊಡ್ಡ ಮನುಷ್ಯ ಫೋನ್ ಮಾಡಿಬಿಟ್ರೆ ಸಾಕು, ತಪ್ಪು ಯಾರೇ ಮಾಡಿರಲಿ ಬಿಟ್ಟುಬಿಡ್ಬೇಕು. ಕಾನೂನು ಎಲ್ಲರಿಗೂ ಒಂದೇ ಅಂತ ಓದಿಕೊಂಡ ನಮಗೆ, ಶಾಸಕರು ಅಥವಾ ಪ್ರಭಾವಿಗಳ ಮುಖ ನೋಡಿ ಅದೇ ಕಾನೂನನ್ನು ಬಗ್ಗಿಸಬೇಕಾದಾಗ ನಮ್ಮ ಆತ್ಮಸಾಕ್ಷಿಯೇ ನಮ್ಮನ್ನು ತಿನ್ನುತ್ತದೆ!”

“ಇನ್ನು ಇಲಾಖೆಯ ಒಳಗಿನ ಭ್ರಷ್ಟಾಚಾರದ ಕಥೆ ಕೇಳಿದ್ರೆ ತಲೆತಿರುಗಿ ಬೀಳಬೇಕು. ಠಾಣೆಗೆ ಬರುವ ಬಡವನೊಬ್ಬನಿಗೆ ನ್ಯಾಯ ಕೊಡಿಸಬೇಕು ಅಂದ್ರೆ ಮೊದಲು ನಮ್ಮ ಹತ್ರ ದುಡ್ಡಿರಬೇಕು! ಪೆಟ್ರೋಲ್ ಖರ್ಚಿಗೆ ಸರ್ಕಾರದಿಂದ ಬರುವ ಅನುದಾನ ಎಲ್ಲಿಗೆ ಹೋಗುತ್ತೋ ದೇವರಿಗೆ ಗೊತ್ತು. ಸ್ಟೇಷನ್ ಬಸ್‌‌ಗೆ ಡೀಸೆಲ್ ಹಾಕಿಸೋದ್ರಿಂದ ಹಿಡಿದು, ಸಣ್ಣಪುಟ್ಟ ಸ್ಟೇಷನರಿ ವಸ್ತುಗಳವರೆಗೂ ನಮ್ಮ ಸ್ವಂತ ಜೇಬಿನಿಂದಲೇ ಖರ್ಚು ಮಾಡ್ಬೇಕು. ಕೇಸ್ ತನಿಖೆಗೆ ಅಂತ ಬೇರೆ ಊರಿಗೆ ಹೋದರೆ ಆ ಟಿಎ, ಡಿಎ ಬರೋಕೆ ತಿಂಗಳುಗಟ್ಟಲೆ ಅಲೆಯಬೇಕು. ನಮ್ಮ ಜೇಬಿನಲ್ಲಿ ಕಾಸಿಲ್ಲ ಅಂದ್ರೆ ಸಾಲ ಮಾಡಿ ಕೇಸ್ ಮಾಡ್ಬೇಕು. ದೊಡ್ಡ ದೊಡ್ಡ ಅಧಿಕಾರಿಗಳು ಹೈಟೆಕ್ ರೂಮ್‌ಗಳಲ್ಲಿ ಕೂತು ಮೀಟಿಂಗ್ ಮಾಡ್ತಾರೆ, ಆದ್ರೆ ರಾತ್ರಿ ಇಡೀ ಚಳಿ-ಮಳೆಯಲ್ಲಿ ರಸ್ತೆಯಲ್ಲಿ ನಿಂತು ಗಸ್ತು ತಿರುಗುವವನಿಗೆ ಒಂದು ಕಪ್ ಚಹಾ ಕೊಡೋರಿಲ್ಲ! ದೊಡ್ಡ ಅಧಿಕಾರಿಗಳಿಗೆ ಅವರದ್ದೇ ಆದ ಪ್ರೆಶರ್ ಇರುತ್ತೆ, ಜನರಿಗೆ ನಮ್ಮ ಮೇಲೆ ಕೋಪ ಇರುತ್ತೆ. ಒಂದು ದಿನ ಸರಿಯಾಗಿ ನಿದ್ದೆ ಮಾಡಿ ತಿಂಗಳುಗಳೇ ಆಯ್ತು. ಮನೆಯಲ್ಲಿ ಹೆಂಡತಿ-ಮಕ್ಕಳ ಜತೆ ಹಬ್ಬ-ಹರಿದಿನ ಕೂತು ಊಟ ಮಾಡೋದೇ ಅಪರೂಪ. ರಾತ್ರಿ ಮಲಗಿದ್ಮೇಲೆ ಯಾವಾಗ ಎಮರ್ಜೆನ್ಸಿ ಕಾಲ್ ಬರುತ್ತೋ, ಯಾವಾಗ ಡ್ಯೂಟಿಗೆ ಓಡಬೇಕೋ ಅಂದುಕೊಂಡೇ ಮಲಗಬೇಕು. ನಮ್ಮ ಮಕ್ಕಳ ಸ್ಕೂಲ್ ರಿಸಲ್ಟ್ ಏನ್ ಬಂತು, ವೃದ್ಧ ತಾಯಿ-ತಂದೆಗೆ ಏನಾಯ್ತು ಅಂತ ನೋಡಿಕೊಳ್ಳೋಕೆ ನಮಗೆ ಪುರುಸೊತ್ತಿಲ್ಲ. ಇನ್ನು ರಜೆ ಕೇಳೋಕೆ ಹೋದ್ರೆ ಮೇಲಾಧಿಕಾರಿಗಳ ಹತ್ತಿರ ಅತ್ತು ಕಣ್ಣೀರು ಹಾಕಬೇಕು, ‘ಡ್ಯೂಟಿ ಜಾಸ್ತಿ ಇದೆ, ಜನ ಕಡಿಮೆ ಇದ್ದಾರೆ’ ಅಂತ ಗದರಿ ಕಳುಸ್ತಾರೆ. ನಮಗೂ ಸಂಕಟ ಆಗುತ್ತೆ ಅನ್ನೋದನ್ನ ಈ ಖಾಕಿ ಯೂನಿಫಾರ್ಮ್ ಮುಚ್ಚಿಹಾಕಿಬಿಟ್ಟಿದೆ ಮೇಡಂ” ಎನ್ನುತ್ತಾರವರು.

ಇತಿಹಾಸದ ಪುಟಗಳಲ್ಲಿ ಧೂಳು ಹಿಡಿದ ಸುಧಾರಣಾ ವರದಿಗಳು

ಪೊಲೀಸ್ ಇಲಾಖೆಯನ್ನು ಬದಲಿಸಲು ಪ್ರಯತ್ನಗಳು ನಡೆದೇ ಇಲ್ಲ ಎಂದೇನಲ್ಲ. ಸ್ವಾತಂತ್ರ್ಯದ ನಂತರವೂ ಅನೇಕ ಮಹತ್ವದ ಆಯೋಗಗಳು ಹಾಗೂ ಸಮಿತಿಗಳು ರಚನೆಯಾಗಿವೆ.

  • 1977ರಲ್ಲಿ ಧರ್ಮಾ ವೀರ್ ನೇತೃತ್ವದಲ್ಲಿ ರಚನೆಯಾದ ರಾಷ್ಟ್ರೀಯ ಪೊಲೀಸ್ ಆಯೋಗ (National Police Commission) ಇಲಾಖೆಯ ಸುಧಾರಣೆಗಾಗಿ ಬರೋಬ್ಬರಿ 8 ಸಮಗ್ರ ವರದಿಗಳನ್ನು ಸಲ್ಲಿಸಿತ್ತು. ಹೊಸ ಮಾದರಿ ಪೊಲೀಸ್ ಕಾಯಿದೆಯ ರೂಪರೇಷೆಯನ್ನೂ ನೀಡಿತ್ತು.
  • ಇದರ ಬೆನ್ನಲ್ಲೇ ಜೆ.ಎಫ್. ರಿಬೇರೋ ಸಮಿತಿ (1998), ಕೆ. ಪದ್ಮಭಯ್ಯ ಸಮಿತಿ (2000 – ಇದು ಬರೋಬ್ಬರಿ 240 ಶಿಫಾರಸುಗಳನ್ನು ನೀಡಿತ್ತು), ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸೋಲಿ ಸೊರಾಬ್ಜಿ ಸಮಿತಿ (2005) ಹೊಸ ಮಾದರಿ ಪೊಲೀಸ್ ಕಾಯಿದೆಯ ಕರಡನ್ನು ಸಿದ್ಧಪಡಿಸಿತ್ತು.
  • ಸ್ವತಃ ಸುಪ್ರೀಂ ಕೋರ್ಟ್ ಕೂಡ 2006ರ ಐತಿಹಾಸಿಕ ‘ಪ್ರಕಾಶ್ ಸಿಂಗ್ Vs ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಪೊಲೀಸ್ ಇಲಾಖೆಗೆ ಸ್ವಾಯತ್ತತೆ ನೀಡಲು 7 ನಿರ್ಣಾಯಕ ನಿರ್ದೇಶನಗಳನ್ನು ನೀಡಿತ್ತು.

ಇದನ್ನೂ ಓದಿ: ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ? – ಭಾಗ 1

ಆದರೆ ಈ ಎಲ್ಲಾ ಆಯೋಗಗಳ ನೂರಾರು ಪುಟಗಳ ವರದಿಗಳು ಮತ್ತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶಗಳು ಸರ್ಕಾರದ ಕಚೇರಿಗಳ ಧೂಳು ಹಿಡಿದ ಕಡತಗಳ ಗೋದಾಮಿನಲ್ಲಿ ಮೂಲೆಗುಂಪಾಗಿವೆಯೇ ಹೊರತು, ನೆಲಮಟ್ಟದಲ್ಲಿ ಜಾರಿಗೆ ಬಂದಿಲ್ಲದಿರುವುದು ದುರಂತ. ಸಮಿತಿಗಳು ವರದಿ ನೀಡುವುದು ಎಷ್ಟು ಸುಲಭವೋ, ಅದನ್ನು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಜಾರಿಗೊಳಿಸುವುದು ಅಷ್ಟೇ ಕಠಿಣವಾದ ಸವಾಲು. ರಾಜಕೀಯ ನಾಯಕರಿಗೆ ಪೊಲೀಸರ ಮೇಲಿನ ನಿಯಂತ್ರಣ ಬಿಟ್ಟುಕೊಡಲು ಎಂದಿಗೂ ಮನಸ್ಸಿಲ್ಲದಿರುವುದೇ ಈ ಸುಧಾರಣೆಗಳ ವೈಫಲ್ಯಕ್ಕೆ ಅತಿ ದೊಡ್ಡ ಕಾರಣವಾಗಿರಬಹುದು. ಪೊಲೀಸರ ವರ್ಗಾವಣೆ ಮತ್ತು ಬಡ್ತಿಗಳು ಕಾನೂನುಬದ್ಧವಾಗಿ ನಡೆಯುವುದಕ್ಕಿಂತ, ರಾಜಕೀಯ ಲಾಬಿಯ ಮೂಲಕವೇ ನಿರ್ಧಾರವಾಗುವ ಸಂಸ್ಕೃತಿ ಇಲಾಖೆಯ ಬೆನ್ನುಮೂಳೆಯನ್ನು ಮುರಿದಿದೆ.

ಹೀಗಾಗಿ ಬ್ರಿಟಿಷರ ಕಾಲದ ‘ಗುಲಾಮಗಿರಿ’ ಸಂಸ್ಕೃತಿಯಿಂದ ಹೊರಬಂದು, ನಿಜವಾದ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ಖಾಕಿ ಪಡೆಯನ್ನು ಮರುರೂಪಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಸರ್ಕಾರ ತೋರಿರುವುದು ಅಭಿನಂದನೀಯ. ಆದರೆ ಅದು ಅಷ್ಟೇ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಈ ವ್ಯವಸ್ಥೆಯ ಬುಡದಲ್ಲಿರುವ ರೋಗ ವಾಸಿಯಾಗಲು ಸಾಧ್ಯ. ಕೇವಲ ವರದಿಗಳು ಬದಲಾದರೆ, ನಿಯಮಗಳು ಬದಲಾದರೆ ಸಾಲದು, ಆಡಳಿತ ನಡೆಸುವವರ ಮನಸ್ಥಿತಿಯೂ ಬದಲಾಗಬೇಕು.

ಕಾಗದದ ಮೇಲಿನ ಈ ನೀತಿಗಳಾಚೆ, ತಳಮಟ್ಟದ ಸಿಪಾಯಿಗಳು, ಅಧಿಕಾರಿಗಳು ದಿನನಿತ್ಯ ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಬದುಕಿನ ನೈಜ ಯಾತನೆಗಳು ಮತ್ತಷ್ಟು ಭೀಕರವಾಗಿವೆ… ಈ ಕುರಿತ ಒಳನೋಟ ಮುಂದಿನ ಭಾಗದಲ್ಲಿ…

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...