ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತೆಯರು ತಮಗೆ ದೆಹಲಿ ಪೊಲೀಸರಿಂದ ಲೈಂಗಿಕ ಕಿರುಕುಳ ಮತ್ತು ಅಭದ್ರತೆ ಎದುರಾಗಿದೆ ಎಂದು ಆರೋಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ
“ಮಹಿಳೆಯರಿಗೆ ಸುರಕ್ಷತೆ ನೀಡಬೇಕಾದ ಪೊಲೀಸರೇ ಈ ರೀತಿ ಬೆದರಿಕೆ ಹಾಗೂ ಅಭದ್ರತೆ ಮೂಡಿಸುತ್ತಿರುವುದು ತೀವ್ರ ಆತಂಕಕಾರಿ. ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಪತ್ರಕರ್ತೆಯರವರೆಗೆ ಮಹಿಳೆಯರು ಎಲ್ಲೆಡೆ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹಾಗೂ ಗೃಹಸಚಿವ ಅಮಿತ್ ಶಾ ಅವರೇ, ಮಹಿಳೆಯರನ್ನು ನಡೆಸಿಕೊಳ್ಳುವ ಸರಿಯಾದ ರೀತಿ ಇದೇನಾ? ಒಂದು ವೇಳೆ ಇದಲ್ಲ ಎಂದಾದರೆ, ನೀವು ಏಕೆ ಈ ಬಗ್ಗೆ ಗಮನಹರಿಸುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಹಲವು ಪತ್ರಕರ್ತರು ಪ್ರತಿಭಟನೆ ನಡೆಸಿದ್ದರೂ ಹಾಗೂ ದೂರು ನೀಡಿದ್ದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ತಕ್ಷಣದ ಕ್ರಮ ಕೈಗೊಂಡಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಈ ಮಧ್ಯೆ, ಹೊಸ ದೆಹಲಿ ಜಿಲ್ಲಾ ಪೊಲೀಸರಿಗೆ ಮೂವರು ಮಹಿಳಾ ಪತ್ರಕರ್ತೆಯರಿಂದ ಲೈಂಗಿಕ ಕಿರುಕುಳದ ದೂರುಗಳು ಲಭ್ಯವಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಕಮಲಾ ಮಾರ್ಕೆಟ್‌ನ ದೆಹಲಿ ಪೊಲೀಸ್ ಕ್ರೈಮ್ ಬ್ರಾಂಚ್‌ಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಪ್ರೆಸ್ ಕ್ಲಬ್ ಕೂಡ ಘಟನೆಯನ್ನು ಖಂಡಿಸಿದ್ದು, ತಕ್ಷಣದ ಕ್ರಮಕ್ಕೆ ಆಗ್ರಹಿಸಿವೆ.




