ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

Date:

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ ಬದಲಾಗಿ ಕೀಳು ರಾಜಕೀಯ ಮುನ್ನೆಲೆಗೆ ಬಂದಿರುವ ಆತಂಕದಲ್ಲಿ ಅವರ ಅಂತ್ಯವನ್ನು ಕಂಡು ಅಳಲಾಗದ ಸಂಕಟದಲ್ಲಿ ಕಟ್ಟೆ ಪುರಾಣದ ಜೀವಿಗಳು ಮುಳುಗಿದ್ದಾರೆ.... 'ಕಾಳ ಮಾವನ ಕಡೇ ದಿನಗಳು' ಕೃತಿ ಕುರಿತು ಲೇಖಕ ದಾದಾಪೀರ್ ನವಿಲೇಹಾಳ್ ಬರೆದಿರುವ ಪರಿಯಾತ್ಮಕ ಬರೆಹ

‘ಹುಟ್ಟಿದ ಮನ್ನ ಒಂದಿನ ಸಾಯಲೇಬೇಕಲವೆ?’ ಎಂದು ಇಪ್ಪತ್ತೈದು ವರ್ಷಗಳ ಹಿಂದೆ ಹೇಳಿದ್ದ ಕಾಳಮಾವ ಕಣ್ಣು ಮುಚ್ಚುವ ಹಿಂದಿನ ದಿನಗಳಲ್ಲಿ ನಡೆದ ಸಾಂಸ್ಕೃತಿಕ ಸಂವಾದವನ್ನು ಸಂಕಥನದ ರೀತಿಯಲ್ಲಿ ಚಂದ್ರೇಗೌಡರು ಹೊರತಂದಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿ ‘ಹುಬ್ಬಳ್ಳಿಯಾಂವ’ ಕಾಲಂ ಬರೆಯುತ್ತಿದ್ದ ಪುಂಡಲೀಕ ಶೇಟ್ ಅವರು ಅಕಾಲ ಮರಣಕ್ಕೆ ತುತ್ತಾದ ನಂತರ ಲಂಕೇಶರ ಪ್ರೇರಣೆಯಿಂದ ದೊರೆತ ಅವಕಾಶವನ್ನು ಚಂದ್ರೇಗೌಡರು ಸಾರ್ಥಕವಾಗಿ ಬಳಸಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ‘ಕಟ್ಟೆಪುರಾಣ’ ಲಂಕೇಶ್ ನಂತರ ಗೌರಿ ಲಂಕೇಶ್ ಪತ್ರಿಕೆಯಲ್ಲೂ ಮುಂದುವರಿದು ಸತತವಾಗಿ 20 ವರ್ಷಗಳ ಕಾಲ ಕನ್ನಡ ಜಾಣಜಾಣೆಯರನ್ನು ರಂಜಿಸಿದೆ. ಲಂಕೇಶ್ ಪತ್ರಿಕೆಯ ಬರಹಗಳು ಸುದ್ದಿ ಮತ್ತು ಮನರಂಜನೆಯ ಸ್ವರೂಪವನ್ನು ಮೀರಿ ಸಾಂಸ್ಕೃತಿಕ ಚಿಂತನೆಗೆ ಹಚ್ಚುತ್ತಿದ್ದ ಪರಿ ಹೊಸ ಬಗೆಯದು. ಒಂದಿಡೀ ಪೀಳಿಗೆಯನ್ನು ಜಾತ್ಯತೀತ ಸಂವೇದನೆಗಳ ಪ್ರತಿನಿಧಿಗಳನ್ನಾಗಿ ರೂಪಿಸಿದ ಲಂಕೇಶ್ ಕನ್ನಡ ಪತ್ರಿಕೋದ್ಯಮಕ್ಕೆ ಸಮಾಜಮುಖಿ ಆಲೋಚನಾ ಮಾದರಿಯನ್ನು ಕಲಿಸಿಕೊಟ್ಟವರು. ಚಂದ್ರೇಗೌಡರು ಈ ಮಾದರಿಯ ಹತ್ತಾರು ಪ್ರಮುಖರಲ್ಲಿ ಒಬ್ಬರು.

- Advertisement -

ಪ್ರತಿವಾರದ ‘ಕಟ್ಟೆಪುರಾಣ’ದಲ್ಲಿ ಚರ್ಚೆಯಾಗುತ್ತಿದ್ದ ಸಂಗತಿಗಳು ಸಮಕಾಲೀನ ರಾಜಕೀಯ ಸಂಸ್ಕೃತಿಯ ವಿಡಂಬನೆಗಳೇ ಆಗಿರುತ್ತಿದ್ದವು. ವಿನೋದವನ್ನು ವ್ಯಂಗ್ಯ ಮತ್ತು ವಿವೇಕದ ಹಂತಕ್ಕೆ ಎತ್ತರಿಸಿದ ಈ ಬರಹಗಳಿಂದಾಗಿ ಚಂದ್ರೇಗೌಡರಿಗೆ ಅಪಾರ ಜನಪ್ರಿಯತೆ ದೊರೆತದ್ದು ಮಾತ್ರವಲ್ಲ, ಅವರಿಗಿರುವ ರಾಜಕೀಯ ಚಿಂತನೆಗಳ ಅನಾವರಣವೂ ಆಯಿತು. ಕಳೆದ ನಲವತ್ತು ವರ್ಷಗಳ ಭಾರತದ ರಾಜಕೀಯ ಬೆಳವಣಿಗೆ ಮತ್ತು ಪಲ್ಲಟಗಳ ಜೀವಂತ ಸಂವಾದವನ್ನು ದಾಖಲಿಸಿದ ಕಟ್ಟೆ ಪುರಾಣದ ಅನನ್ಯತೆ ಇರುವುದೇ ಅದರ ಲೋಕ ನಿಷ್ಠುರವೂ ಮುಕ್ತವೂ ಆದ ಶೈಲಿಯಲ್ಲಿ. ಇಲ್ಲಿ ಎಲ್ಲವೂ ಬಯಲಾಗುತ್ತದೆ. ಯಾರು ಎಷ್ಟೇ ದೊಡ್ಡವರಿರಲಿ, ಯಾವುದು ಎಷ್ಟೇ ಪವಿತ್ರವಾಗಿರಲಿ ಮುಚ್ಚುಮರೆಯಿಲ್ಲದೆ ಇಲ್ಲಿನ ಪಾತ್ರಗಳ ಬಾಯಲ್ಲಿ ನಿರ್ಭೀತವಾಗಿ ಹರಿದಾಡುತ್ತವೆ. ನಮ್ಮ ಸಮಾಜವನ್ನು ಜೀವಂತವಾಗಿಡುವ ಈ ಚರ್ಚೆಯಲ್ಲಿ ಒಳಗಾಗದ ವಿಷಯಗಳಿಲ್ಲ. ಬಯಲುಸೀಮೆ ಸೊಗಡಿನ ಈ ಭಾಷೆಯಲ್ಲಿ ಮೈಲಿಗೆಯಿಲ್ಲ. ಯಾರನ್ನಾದರೂ ಓಲೈಸಬೇಕೆಂದಿಲ್ಲ. ಸಾರ್ವಜನಿಕವಾದ ರಾಜಕೀಯ ವಿದ್ಯಮಾನಗಳನ್ನು ಮಾತಾಡಲೂ ಹಿಂದೆ ಮುಂದೆ ನೋಡುವ ಸ್ಮಾರ್ಟ್ ಕಾಲದಲ್ಲಿ ನಾವಿದ್ದೇವೆ. ಸುಮ್ಮನೆ ಯಾಕೆ ನಿಷ್ಠುರವಾಗಬೇಕು? ಯಾರು ಯಾವ ಪಕ್ಷದವರೋ ಏನೋ, ಏನು ಮಾತಾಡಿದರೆ ಹೇಗೋ ಏನೋ ಎಂದು ಯೋಚಿಸುತ್ತಾ ಆತಂಕಪಡುವ ‘ಆಮೆ’ಗಳಂತಾಗಿರುವ ಡಿಜಿಟಲ್ ಮನುಷ್ಯರ ನಡುವೆ ಸಂವಾದ ಸತ್ತು ಹೋಗಿದೆ. ಇಂತಹ ಸಂದರ್ಭದಲ್ಲಿ ಚಂದ್ರೇಗೌಡರು ಗಾಢವಾದ ವಿಷಾದವನ್ನೂ ಅನಿಶ್ಚಿತತೆಯನ್ನೂ ಹುಟ್ಟಿಸುವ ಕಟ್ಟೆ ಪುರಾಣವನ್ನು ಬರೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಓದಿದ್ದೀರಾ?: ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

Advertisements

ಕಾಳಮಾವನಿಗೆ ವಯಸ್ಸಾಗಿದೆ. ಎದ್ದು ಓಡಾಡಲೂ ಆಗದೆ ಪರಾವಲಂಬಿಯಾಗಿದ್ದಾನೆ. ಇಂತಹ ಸ್ಥಿತಿಯಲ್ಲಿ ಕಟ್ಟೆ ಪುರಾಣದ ಜುಮ್ಮಿ ಕಾಳಮಾವನ ಯೋಗಕ್ಷೇಮ ವಿಚಾರಿಸಲು ಬರುತ್ತಾಳೆ. ಕಟ್ಟೆಪುರಾಣದ ಪರಿವಾರದ ಒಂದೇ ಒಂದು ಸ್ತ್ರೀ ಪಾತ್ರವಾಗಿರುವ ಜುಮ್ಮಿ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸುವ ಜ್ಞಾನ ಮತ್ತು ಜಾಣ್ಮೆ ಹೊಂದಿದವಳು. ಕಾಳಮಾವನ ಆರೋಗ್ಯ ವಿಚಾರಿಸುವ ನೆಪದಲ್ಲಿ ಶುರುವಾಗುವ ಈ ಸಾಂಸ್ಕೃತಿಕ ಸಂವಾದದಲ್ಲಿ ಉಗ್ರಿ, ಸೀರ, ವಾಟಿಸ್ಸೆ, ಚಿಕ್ಕಣ್ಣ ಒಬ್ಬೊಬ್ಬರಾಗಿ ಸೇರಿಕೊಳ್ಳುತ್ತಾ ಚರ್ಚೆಯನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಇವರೆಲ್ಲರ ಹಾಜರಿಯಿಂದ ಹುರುಪುಗೊಂಡ ಕಾಳಮಾವ ಒಂದೊಂದು ವಿಷಯದ ಬಗೆಗೂ ಕುತೂಹಲದಿಂದ ಪ್ರಶ್ನಿಸುತ್ತಾ ವಿವರಗಳನ್ನು ಕೆದಕುತ್ತಾನೆ. ಅವನಿಗೆ ದೊರೆತ ಉತ್ತರಗಳು ಅವನಲ್ಲಿ ಯಾವ ಭರವಸೆಯನ್ನೂ ಹುಟ್ಟಿಸುವುದಿಲ್ಲ. ದೇಶದ ಒಟ್ಟಾರೆ ರಾಜಕೀಯ ಸಂಸ್ಕೃತಿ ವಿಚಿತ್ರ ವಿಕೃತ ರೂಪ ಪಡೆಯುತ್ತಿರುವುದರಿಂದ ಕಾಳಮಾವನ ದೀರ್ಘವಾದ ನಿಟ್ಟುಸಿರು ನಿಧಾನವಾಗಿ ಜೀವ ಕಳೆಗುಂದುತ್ತಾ ಹೋಗುತ್ತದೆ. ಇಷ್ಟೆಲ್ಲಾ ಕಂಡ ಮೇಲೆ ಬದುಕಿ ಏನು ಪ್ರಯೋಜನ? ಎಂಬ ವಿಷಾದ ಆವರಿಸಿಕೊಂಡು ಕಾಳಮಾವನ ಅಂತ್ಯವಾಗುತ್ತದೆ. ಕಾಳಮಾವನ ಕಡೆಯ ದಿನಗಳು ತನ್ನ ಹಳ್ಳಿ, ಕುಟುಂಬ, ಹೀಗೆ ಯಾವುದರಲ್ಲೂ ಜಾತಿ, ಧರ್ಮ, ರಾಜಕೀಯ, ಸಿನಿಮಾ, ದೇವರು ನೆಮ್ಮದಿ ಕಾಣದೆ, ಭರವಸೆ ಹುಟ್ಟಿಸದೇ ಇಡೀ ಸಮಾಜದ ಅಂತಃಶಕ್ತಿಯೇ ಕುಸಿದುಹೋದಂತಹ ನಿರಾಶೆಯಿಂದ ಕೂಡಿವೆ. ಅವನ ನಿರೀಕ್ಷೆಯ ರಾಜಕೀಯ ನೈತಿಕವಾಗಿ ನಾಶವಾಗಿ ದೇಶದ ಆತ್ಮವೇ ಸೊರಗಿದ ವಿಷಾದದ ಛಾಯೆ ಅವನ ಸಾವಿನಲ್ಲಿ ಗೋಚರಿಸುತ್ತದೆ.

ಕಾಳಮಾವನ ಹಿರಿಯ ಜೀವಕ್ಕೆ ತನ್ನ ಹಳ್ಳಿಯ ಕೃಷಿ ಬದುಕು ನಾಶವಾಗಿ ನಗರಾಕರ್ಷಣೆಯ ಹೊಸಬಗೆಯ ಜೀತಗಾರಿಕೆಯಲ್ಲಿ ನರಳುತ್ತಿರುವುದು ಆತ್ಮಘಾತುಕವೆನಿಸುತ್ತದೆ. ಕೃಷಿಗೆ ಮೂಲವಾದ ಹಳ್ಳಿ ತನ್ನ ಚಹರೆಗಳನ್ನು ಬದಲಿಸಿಕೊಳ್ಳುತ್ತಾ ದನಕರು ಕಣಬಣವೆಗಳಿಂದ ದೂರವಾಗುತ್ತದೆ. ಹುಡುಗ ಹುಡುಗಿಯರು ವ್ಯವಸಾಯದ ಚಟುವಟಿಕೆಗಳಲ್ಲಿ ಆಸಕ್ತಿ ತೋರುವುದಿಲ್ಲ. ರೈತರು ತಮ್ಮ ಹೊಲಗದ್ದೆಗಳನ್ನು ಮಾರಿಕೊಂಡು ಕಾರ್ಪೋರೇಟ್ ಕುಳಗಳ ಕಾಸಿನಲ್ಲಿ ಕಾರುಬಾರು ನಡೆಸುತ್ತಾ ನಾಶವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ರೈತಾಪಿ ಕೆಲಸ ಮಾಡುವ ಹುಡುಗರನ್ನು ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ. ಕುಟುಂಬ ಸಾಮರಸ್ಯವೂ ಹಾಳಾಗುತ್ತಿದೆ. ದಾಂಪತ್ಯದಲ್ಲಿ ಸೊಗಸು ಕಾಣುತ್ತಿಲ್ಲ. ಮಲ್ಲವ್ವನ ಜೊತೆ ಸಂಸಾರ ನಿಭಾಯಿಸಿದ ಕಾಳಮಾವನ ಸುದೀರ್ಘ ದಾಂಪತ್ಯ ಇಂದಿನ ಯುವಕಯುವತಿಯರಿಗೆ ಆದರ್ಶವೆನಿಸುತ್ತಿಲ್ಲ. ಹೊಲಗದ್ದೆಯ ಕೆಲಸ ಗೌರವ ತರುವುದಿಲ್ಲ ಎಂದು ಭಾವಿಸಲಾಗುತ್ತಿದೆ. ಕಾಳಮಾವ ಮಲಗಿದಲ್ಲೇ ಕಾಣುತ್ತಿರುವ ಈ ಸಂಗತಿಗಳು ಅವನನ್ನು ವಿಚಲಿತಗೊಳಿಸಿವೆ.

ಇದನ್ನೂ ಓದಿರಿ: ಅಂಬೇಡ್ಕರ್ ನಿಂದನೆಯೇ ಹಿಂದುತ್ವ ಗುಂಪಿನ ಅಜೆಂಡಾ; ನವ ಮಾದರಿ ಅಸ್ಪೃಶ್ಯತೆ ಹೆಚ್ಚಳ

ರಾಜಕೀಯ ಕಾಳಮಾವನಿಗೆ ಪ್ರಿಯವಾದ ವಸ್ತು. ಇಂದಿರಾಗಾಂಧಿಯನ್ನು ವಿರೋಧಿಸುವ ಅವನಿಗೆ ರಾಮಕೃಷ್ಣ ಹೆಗಡೆ ಕಾಲದ ಸರ್ಕಾರ, ಆಡಳಿತ, ಮಂತ್ರಿಗಳು ಎಂದರೆ ಇಷ್ಟ. ನಮ್ಮ ದೇಶದ ರಾಜಕಾರಣವೇ ಜಾತಿಮೂಲದ್ದಾಗಿರುವುದರಿಂದ ತನ್ನ ಜಾತಿಯ ದೇವೇಗೌಡರು ಆತನ ಆದರ್ಶ. ಅವರ ಒಟ್ಟು ರಾಜಕೀಯ ಜೀವನದ ಸೋಲು-ಗೆಲುವು, ತಂತ್ರ-ಕುತಂತ್ರ, ಮಕ್ಕಳನ್ನು ರಾಜಕೀಯದಲ್ಲಿ ಮುಂದೆ ತರಲು ಸುರಿಸಿದ ಕಣ್ಣೀರು, ಮುಗಿಸಿದ ಸ್ವಜಾತಿ ನಾಯಕರು, ಮಕ್ಕಳು ಮೊಮ್ಮಕ್ಕಳ ಬೇಜವಾಬ್ದಾರಿಯುತ ನಡವಳಿಕೆಗಳಿಂದಾಗಿ ಅನುಭವಿಸುತ್ತಿರುವ ರಾಜಕೀಯ ಅವನತಿ, ಕೋಮುವಾದಿ ರಾಜಕಾರಣದ ಕೈ ಹಿಡಿದು ಮೇಲೇಳಲು ಪ್ರಯತ್ನಿಸುತ್ತಿರುವ ದೈನೇಸಿ ಸ್ಥಿತಿ… ಎಲ್ಲವನ್ನೂ ಕೇಳುತ್ತಾ ಸಂಕಟಪಡುವ ಕಾಳಮಾವನಿಗೆ ತನ್ನ ಕಡೆಯ ದಿನಗಳು ಹತ್ತಿರವಾದಂತೆ ಭಾಸವಾಗುತ್ತದೆ.

ರಾಮಕೃಷ್ಣ ಹೆಗಡೆ ಕಾಲದ ಪಟೇಲರು, ನಜೀರ್ ಸಾಬ್, ಎಂ.ಪಿ. ಪ್ರಕಾಶರ ಬಗೆಗಿನ ಅಭಿಮಾನವೂ ಸೇರಿದಂತೆ ಕಾಳಮಾವನ ಪರಿವಾರದಲ್ಲಿ ದೇಶದ ಚರಿತ್ರೆ, ಸಂಸ್ಕೃತಿ ರಾಜಕಾರಣದ ಉತ್ತಮ ಸಂಗತಿಗಳ ಬಗ್ಗೆ ಮೆಚ್ಚುಗೆಯಿದೆ. ರಾಜಕೀಯ ಚರಿತ್ರೆಯ ಕೆಲವು ವಿಕೃತಿಗಳನ್ನು ವೈಭವೀಕರಿಸಿ ವರ್ತಮಾನದ ನೆಮ್ಮದಿ ಕೆಡಿಸುವ ಕೋಮುವಾದಿಗಳ ಬಗ್ಗೆ ಸಿಟ್ಟಿದೆ. ಅವರ ರಾಜಕೀಯ ಪ್ರವೇಶದ ಪ್ರಹಸನ ಆರಂಭವಾದದ್ದೇ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯಿಂದ. ಬಿಜೆಪಿಗಳು ದೇಶದ ತುಂಬೆಲ್ಲ ದ್ವೇಷ ಮತ್ತು ಸುಳ್ಳುಗಳನ್ನು ಹರಡುತ್ತಾ ರಾಜಕೀಯ ಅಧಿಕಾರದ ಉತ್ತುಂಗಕ್ಕೆ ಬಂದಿರುವ ಬಗ್ಗೆ ತಾತ್ವಿಕವಾದ ಭಿನ್ನಾಭಿಪ್ರಾಯಗಳಿವೆ. ಕೋಮುವಾದಿಗಳ ಆಲೋಚನೆಯ ಹಿಂದಿರುವ ಪುರೋಹಿತಶಾಹಿ ಕುತಂತ್ರಗಳಿಗೆ ಪರ್ಯಾಯ ರೂಪಿಸಲಾಗದ ಅಸಹಾಯಕತೆಯ ಪರಿಣಾಮದ ಅರಿವೂ ಇದೆ. ಕಳೆದ ನಲವತ್ತು ವರ್ಷಗಳ ರಾಜಕೀಯ ವಿದ್ಯಮಾನಗಳು ಪ್ರಜಾಸತ್ತೆಯ ಅಣಕದಂತಿದ್ದು ಸಾಂವಿಧಾನಿಕ ಆಶಯಗಳಿಗೆ ಧಕ್ಕೆ ತರುತ್ತಿರುವುದರಿಂದ ಸ್ವಾತಂತ್ರ್ಯ ಸಮಾನತೆಯ ಮೌಲ್ಯಗಳು ಕೂಡ ಕಡೆಯ ದಿನಗಳನ್ನು ಎದುರು ನೋಡುವಂತಾಗಿದೆ. ಕಾಳಮಾವನ ಬದುಕಿನ ಅತ್ಯಂತ ನೋವಿನ ಕ್ಷಣಗಳ ಮೂಲ ಈ ಬಗೆಯ ಕ್ಷುದ್ರ ರಾಜಕಾರಣದಲ್ಲಿದೆ. ಇನ್ನೂ ಏನೇನು ಕಾಣಬೇಕೋ? ಅನ್ನುವ ಹತಾಶೆಯಲ್ಲಿ ಕಾಳಮಾವನ ಎದೆ ಮೇಲೆ-ಕೆಳಗೆ ಆಡುತ್ತಿದೆ.

ಸದ್ಯದ ಸಮಕಾಲೀನ ಬದುಕನ್ನು ವಿಚಿತ್ರವಾದ ಮಾತುಕತೆಗಳಿಂದ ಪ್ರಭಾವಿಸಿರುವ ಸಿನಿಮಾ ನಟ ದರ್ಶನ್ ಪ್ರಕರಣ, ಧರ್ಮಸ್ಥಳದ ಅತ್ಯಾಚಾರ ಕೊಲೆ ವಿಚಾರಣೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನ ಅವಾಂತರ, ಜನಪರ ಅಧಿಕಾರಿಯೊಬ್ಬರ ಸನ್ಯಾಸ ಸ್ವೀಕಾರ… ಹೀಗೆ ಹತ್ತು ಹಲವು ಸಂಗತಿಗಳ ಕಡೆ ಕಟ್ಟೆ ಪುರಾಣ ಹೊರಳುತ್ತದೆ. ರಾಜಕುಮಾರ್ ಅಭಿನಯದ ಕೆಲವು ಸಿನಿಮಾಗಳನ್ನು ನೋಡಿದ್ದ ಕಾಳಮಾವನಿಗೆ ಹೀರೋಗಳಾದವರು ಸಿನಿಮಾದಲ್ಲಿ ನಟಿಸಿದಂತೆಯೇ ನಿಜಜೀವನದಲ್ಲಿಯೂ ಬದುಕಬೇಕೆಂಬ ಮುಗ್ಧ ತಿಳಿವಳಿಕೆಯಿದೆ. ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ರಾಜಕುಮಾರ, ಅಭಿಮಾನಿಗಳ ಅವಿವೇಕದಿಂದ ಜೈಲುಪಾಲಾದ ದರ್ಶನ್ ವಿರುದ್ಧ ದಿಕ್ಕುಗಳಂತಿದ್ದಾರೆ. ದರ್ಶನ್ ಮಗುವಾಗಿದ್ದಾಗ ಅವರಪ್ಪ ತೂಗುದೀಪ ಶ್ರೀನಿವಾಸ ಬರೀ ಕೊಲೆ ಅತ್ಯಾಚಾರಗಳ ಪಾತ್ರದಲ್ಲಿ ನಟಿಸುತ್ತಿದ್ದ. ಅದನ್ನೆಲ್ಲಾ ನೋಡಿದ ಮಗ ಇನ್ನೇನು ತಾನೇ ಮಾಡ್ತನೆ? ಎನ್ನುವ ಕಾಳಮಾವನ ವಿನೋದವೂ ನೈತಿಕ ನಡವಳಿಕೆಗಳ ಅಗತ್ಯವನ್ನು ಹೇಳುತ್ತದೆ.

ಇದನ್ನೂ ಓದಿರಿ: ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಲಕ್ಷಾಂತರ ಭಕ್ತರ ಶ್ರದ್ದಾ ಕೇಂದ್ರವಾಗಿರುವ ಧರ್ಮಸ್ಥಳ ಈ ಹೊತ್ತು ಸುದ್ದಿ ಮಾಧ್ಯಮಗಳು ಮತ್ತು ಹುಸಿ ಧಾರ್ಮಿಕ ನಿರೂಪಣೆಗಳ ಬಾಯಿತುತ್ತಾಗಿರುವ ಸಾಮಾಜಿಕ ಅವನತಿಯನ್ನು ಕಟ್ಟೆ ಪುರಾಣದ ಸದಸ್ಯರು ಚರ್ಚಿಸುತ್ತಾರೆ. ಅವರ ನಿರ್ಭಿಡೆಯ ಸಂವಾದ ಕಾಳಮಾವನ ದೈವನಂಬಿಕೆಯ ಬುಡವನ್ನೇ ಅಲ್ಲಾಡಿಸುತ್ತದೆ. ಭೂಗಳ್ಳತನವು ಧರ್ಮರಾಜಕಾರಣದ ನಿಜವಾದ ಮುಖವಾಗಿರುವುದು ಅವನಲ್ಲಿ ದೈವಶ್ರದ್ಧೆಗಿಂತ ಅಸಹ್ಯ ಹುಟ್ಟಿಸುತ್ತದೆ. ಧಾರ್ಮಿಕ ದ್ವೇಷವನ್ನು ರಾಜಕೀಯ ಹೂಡಿಕೆಯನ್ನಾಗಿ ಪರಿವರ್ತಿಸಿ ಚುನಾವಣೆಗಳನ್ನು ಗೆಲ್ಲುತ್ತಿರುವ ಕೋಮುವಾದಿಗಳು ಮುಸ್ಲಿಮರನ್ನು ಪರಕೀಯತೆಯ ನೆಲೆಯಲ್ಲಿಯೇ ನೋಡುವಂತೆ ಮಾಡಲು ಹಗಲಿರುಳು ಪ್ರಯತ್ನಿಸುತ್ತಾರೆ. ಇಸ್ಲಾಂನಲ್ಲಿನ ತಲಾಕ್, ಬಹುಪತ್ನಿತ್ವ ಭಾರತದ ನೆಲದಲ್ಲಿ ಹುಸಿ ನಿರೂಪಣೆಯಾಗಿದೆ ಎಂದು ಚರ್ಚಿಸುವ ಕಟ್ಟೆ ಪುರಾಣದ ಸದಸ್ಯರು ಅನ್ಯರಿಗೆ ಅಸಹ್ಯ ಪಡಬೇಡ ಎಂದ ಬಸವಣ್ಣನವರ ಅನುಭವ ಮಂಟಪದ ಪ್ರತಿಪಾದಕರಂತೆ ಕಾಣುತ್ತಾರೆ.

ಕಟ್ಟೆ ಪುರಾಣಕ್ಕಿರುವ ಸಾಂಸ್ಕೃತಿಕ ಕಾಳಜಿ ಅನನ್ಯವಾದುದು. ಅದರ ಸಂವಾದ ಸಾಧ್ಯತೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತೂ ಬಂದು ಹೋಗುತ್ತದೆ. ಹಂಪನಾ ಅವರಿಂದ ಹಿಡಿದು ತನ್ನನ್ನು ತಾನು ನಾಡೋಜನೆಂದು ಪರಿಚಯಿಸಿಕೊಳ್ಳುವ ಇಂದಿನ ಅಧ್ಯಕ್ಷನ ಎಡಬಿಡಂಗಿತನಗಳವರೆಗೆ, ಪರಿಷತ್ತಿನ ಘನತೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳಿಂದ ಹಿಡಿದು ರಾಜಕೀಯ ಪಕ್ಷವೊಂದರ ಕಾರ್ಯಕರ್ತನಂತೆ ವರ್ತಿಸುವ ಚೇಲಾಗಿರಿಯನ್ನು ಪ್ರತಿನಿಧಿಸುವುದರವರೆಗೆ ಪುರಾಣದ ಸದಸ್ಯರು ಮಾತನಾಡುತ್ತಾರೆ.

ಚಂದ್ರೇಗೌಡರ ಕಟ್ಟೆ ಪುರಾಣದ ಪಾತ್ರಗಳು ಈಗಲೂ ಮತ್ತು ಮುಂದೆಯೂ ಪ್ರಜಾಪ್ರಭುತ್ವದ ಆತ್ಮವೇ ಆಗಿರುವ ಸಂವಾದದ ಜೀವಂತಿಕೆಯ ವಕ್ತಾರರಾಗಿ ಉಳಿಯುತ್ತಾರೆ. ಕಾಳಮಾವನ ಸುದೀರ್ಘ ಬದುಕು ನೈತಿಕ ರಾಜಕಾರಣದ ಪ್ರತಿಮೆಯಂತಿದ್ದರೆ ಉಳಿದವರ ಮಾತು, ಒಳನೋಟ ಸತ್ಯರಾಜಕಾರಣದ ಸಾಂಸ್ಕೃತಿಕ ಮುಖದಂತೆ ಕಾಣುತ್ತದೆ. ಭಾರತದ ಪ್ರಜಾಸತ್ತಾತ್ಮಕ ರಾಜಕಾರಣದ ಬೌದ್ಧಿಕ ಸಾಮರ್ಥ್ಯದ ಊರುಗೋಲಿನಂತಿರುವ ‘ಸಂವಾದ’ ನಡುಸಡಿಲಗೊಂಡ ಮುದುಕನಂತಾಗಿರುವ ದುರಂತದಲ್ಲಿ ಕಾಳಮಾವನ ಜೀವ ವಿಲಗುಟ್ಟುತ್ತದೆ.

ಇದನ್ನೂ ಓದಿರಿ: ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಕಾಳಮಾವನ ಪಾರ್ಥಿವ ಶರೀರದ ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ ಬದಲಾಗಿ ಕೀಳು ರಾಜಕೀಯ ಮುನ್ನೆಲೆಗೆ ಬಂದಿರುವ ಆತಂಕದಲ್ಲಿ ಕಾಳಮಾವನ ಅಂತ್ಯವನ್ನು ಕಂಡು ಅಳಲಾಗದ ಸಂಕಟದಲ್ಲಿ ಕಟ್ಟೆ ಪುರಾಣದ ಜೀವಿಗಳು ಮುಳುಗಿದ್ದಾರೆ. ಓದುಗರು ಕೂಡ ಅದೇ ಸಂಕಟವನ್ನು ಅನುಭವಿಸುವಂತೆ ಮಾಡಿರುವ ಚಂದ್ರೇಗೌಡರು ಸೃಷ್ಟಿಸಿರುವ ಕಾಳಮಾವನ ಕಡೆಯ ದಿನಗಳ ಕಥನ ಸಂವೇದನಾಶೀಲರನ್ನು ಖಂಡಿತಾ ಕಾಲಕಾಲಕ್ಕೂ ಕಾಡುತ್ತದೆ. ರಾಜಕೀಯ ಚರ್ಚೆ ಮಾಡುವವರ ನೈತಿಕ ಸಂಕಟ ಚಂದ್ರೇಗೌಡರ ಕಟ್ಟೆ ಪುರಾಣದ ವಾಸ್ತವಿಕ ಸಂಕಥನದ ಮೂಲಕ ಮತ್ತೆ ಮತ್ತೆ ಅನುರಣನಗೊಳ್ಳುತ್ತಲೇ ಇರುತ್ತದೆ.

(ಕೃತಿ: ಕಾಳಮಾವನ ಕಡೇ ದಿನಗಳು, ಲೇ: ಬಿ. ಚಂದ್ರೇಗೌಡ, ಪ್ರ: ಪ್ರಜ್ಞಾ ಬುಕ್ ಗ್ಯಾಲರಿ, ಬೆಲೆ: ರೂ. 120, ಸಂಪರ್ಕ: 63639 90245)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಬೀದರ್‌ | ಪಿಸ್ತೂಲ್‌ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು: ಮುಖ್ಯ ಆರೋಪಿ ಸೇರಿ ನಾಲ್ವರ ಬಂಧನ

ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಕೋರರನ್ನು...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ ಶಾಪವೇ?‌ – ಭಾಗ 2

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು...