ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಚಿಂಚೋಳಿ ತಾಲೂಕಿನ ಸುಲೇಪೇಟ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಅನಿಲಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.
ಚಿಂಚೋಳಿ ತಾಲೂಕಿನ ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಕೇಶ್ವರ ಗ್ರಾಮದ ಚಂದ್ರಕಾಂತ ರಂಗನೂರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ದೂರುದಾರ ಚಂದ್ರಕಾಂತ ರಂಗನೂರು ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಪ್ರತಿ ತಿಂಗಳು ಸುಲೇಪೇಟ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು ಎನ್ನಲಾಗಿದೆ. ಆದರೆ, ಠಾಣೆಯ ರೈಟರ್ ಆಗಿದ್ದ ಕಾನ್ಸ್ಟೆಬಲ್ ಅನಿಲ್ ಕುಮಾರ್ ಅವರು ಪ್ರತಿ ಭಾನುವಾರ ಠಾಣೆಗೆ ಬಂದು ಹಾಜರಾತಿ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ, ಠಾಣೆಗೆ ಹಾಜರಾಗದಿದ್ದರೆ ಜಾಮೀನು ರದ್ದುಪಡಿಸಿ ಮತ್ತೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ಕಲಬುರಗಿ | SIR ಎಡವಟ್ಟು: ಬದುಕಿರುವವರಿಗೂ ಮತದಾರರ ಪಟ್ಟಿಯಲ್ಲಿ ‘Death’ ಮುದ್ರೆ?
ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ದೂರುದಾರರಿಂದ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಕಾನ್ಸ್ಟೆಬಲ್ ಅನಿಲ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.





