ಉತ್ತರಾಖಂಡದಲ್ಲಿ ಬಿಜೆಪಿ ಈವರೆಗೆ ಗೆಲ್ಲದಿರುವ ಆ 5 ಸೀಟುಗಳು ಯಾವುವು? ಕಾಂಗ್ರೆಸ್, ಬಿಎಸ್ಪಿ, ಪಕ್ಷೇತರರೇ ಇಲ್ಲಿ ಪ್ರಾಬಲ್ಯ

Date:

2027ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜನಾದೇಶ ಪಡೆಯುವ ಗುರಿಯೊಂದಿಗೆ ಬಿಜೆಪಿ ನವೆಂಬರ್ 26ರಿಂದ ತನ್ನ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ. ಡೆಹ್ರಾಡೂನ್‌ನಲ್ಲಿರುವ ಪಕ್ಷದ ರಾಜ್ಯ ಕಚೇರಿಯನ್ನು ಸಂಪೂರ್ಣವಾಗಿ ಚುನಾವಣಾ ವಾರ್‌ರೂಮ್ ಆಗಿ ಪರಿವರ್ತಿಸಲಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರದ ಐದು ವರ್ಷಗಳ ಸಾಧನೆಯ ವರದಿಯನ್ನು ಜನರ ಮುಂದಿಡಲು ಸಕಲ ಸಿದ್ಧತೆ ನಡೆಸಲಾಗಿದೆ.

- Advertisement -

ಒಟ್ಟು 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ 2022ರ ಚುನಾವಣೆಯಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ ಆ ಚುನಾವಣೆಯಲ್ಲಿ ಕೈತಪ್ಪಿದ 23 ಕ್ಷೇತ್ರಗಳನ್ನು ಈ ಬಾರಿ ವಶಪಡಿಸಿಕೊಳ್ಳಲು ಪಕ್ಷದ ವರಿಷ್ಠರು ವಿಶೇಷ ಯೋಜನೆ ರೂಪಿಸಿದ್ದಾರೆ. ಈ 23 ಕ್ಷೇತ್ರಗಳ ಪೈಕಿ, ಉತ್ತರಾಖಂಡ ರಾಜ್ಯ ರಚನೆಯಾದಾಗಿನಿಂದ ಬಿಜೆಪಿ ಒಮ್ಮೆಯೂ ಗೆಲುವು ಕಾಣದ ಧಾರಚೂಲಾ, ಪಿರಾನ್ ಕಲಿಯಾರ್, ಮಂಗ್ಲೌರ್, ಚಕ್ರಾತಾ ಮತ್ತು ಜಸ್‌ಪುರ—ಈ ಐದು ಕ್ಷೇತ್ರಗಳ ಮೇಲೆ ಅತ್ಯಂತ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಹಲವು ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದ್ದರೂ, ಈ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ಪಕ್ಷೇತರ ಅಭ್ಯರ್ಥಿಗಳೇ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಡೆಹ್ರಾಡೂನ್ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದ ಚಕ್ರಾತಾ ಕ್ಷೇತ್ರವು ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಉಳಿದಿದೆ. 2002ರಿಂದ 2022ರವರೆಗೆ ನಡೆದ ಐದೂ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರೀತಮ್ ಸಿಂಗ್ ಇಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು, ಸ್ಥಳೀಯ ಮಟ್ಟದಲ್ಲಿ ಅವರ ಪ್ರಭಾವವನ್ನು ಮುರಿಯುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಇತ್ತ ಪಿಥೋರಗಢ ಜಿಲ್ಲೆಯ ಗಡಿ ಭಾಗದ ಧಾರಚೂಲಾ ಕ್ಷೇತ್ರದಲ್ಲಿ 2002 ಮತ್ತು 2007ರ ಆರಂಭಿಕ ಎರಡು ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿ ಗಗನ್ ಸಿಂಗ್ ರಜ್ವಾರ್ ಗೆಲುವು ಸಾಧಿಸಿದ್ದರು. ನಂತರ 2012, 2017 ಮತ್ತು 2022ರಲ್ಲಿ ಕಾಂಗ್ರೆಸ್‌ನ ಹರೀಶ್ ಧಾಮಿ ವಿಜಯಶಾಲಿಯಾಗಿದ್ದು, 2014ರ ಉಪಚುನಾವಣೆಯಲ್ಲೂ ಕಾಂಗ್ರೆಸ್‌ನ ಹರೀಶ್ ರಾವತ್ ಗೆದ್ದಿದ್ದರು. ಹೀಗಾಗಿ ಈ ಗಡಿ ಕ್ಷೇತ್ರದಲ್ಲಿ ಬಿಜೆಪಿಗೆ ಇನ್ನೂ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಉಧಮ್ ಸಿಂಗ್ ನಗರ ಜಿಲ್ಲೆಯ ಜಸ್‌ಪುರ ಕ್ಷೇತ್ರದಲ್ಲೂ ಬಿಜೆಪಿಗೆ ಈವರೆಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. 2002ರಲ್ಲಿ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಶೈಲೇಂದ್ರ ಮೋಹನ್ ಸಿಂಘಾಲ್, ನಂತರ 2007 ಮತ್ತು 2012ರ ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಜಯಗಳಿಸಿದರು. ಬಳಿಕ 2017 ಮತ್ತು 2022ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಆದೇಶ್ ಸಿಂಗ್ ಚೌಹಾಣ್ ಸತತವಾಗಿ ಗೆಲುವು ದಾಖಲಿಸಿದ್ದಾರೆ. ಹಿಂದಿನ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸಿದರೂ ಜಸ್‌ಪುರದಲ್ಲಿ ಗೆಲುವು ದಕ್ಕದಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಹರಿದ್ವಾರ ಜಿಲ್ಲೆಯ ವ್ಯಾಪ್ತಿಗೆ ಬರುವ ಮಂಗ್ಲೌರ್ ಮತ್ತು ಪಿರಾನ್ ಕಲಿಯಾರ್ ಕ್ಷೇತ್ರಗಳು ಬಿಜೆಪಿಗೆ ಅತ್ಯಂತ ಕಠಿಣ ಸವಾಲಾಗಿ ಪರಿಣಮಿಸಿವೆ. ಮಂಗ್ಲೌರ್ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಎಸ್ಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆಯುತ್ತಾ ಬಂದಿದೆ. 2002, 2007, 2012 ಮತ್ತು 2022ರಲ್ಲಿ ಇಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 2017ರಲ್ಲಿ ಹಾಗೂ 2024ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಖಾಜಿ ನಿಜಾಮುದ್ದೀನ್ ವಿಜಯಶಾಲಿಯಾಗಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡಿದರೂ ಗೆಲುವು ಕೈತಪ್ಪಿತ್ತು. ಇನ್ನು ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ 2012ರಲ್ಲಿ ಅಸ್ತಿತ್ವಕ್ಕೆ ಬಂದ ಪಿರಾನ್ ಕಲಿಯಾರ್ ಕ್ಷೇತ್ರದಲ್ಲಿ 2012, 2017 ಮತ್ತು 2022ರ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಫುರ್ಕಾನ್ ಅಹ್ಮದ್ ಗೆದ್ದಿದ್ದು, ಇಲ್ಲಿನ ಮತ ಸಮೀಕರಣವನ್ನು ಭೇದಿಸುವುದು ಬಿಜೆಪಿಗೆ ಸುಲಭವಾಗಿಲ್ಲ.

ಉತ್ತರಾಖಂಡದ ಅಧಿಕಾರದ ಬಾಗಿಲು ತೆರೆಯುವಲ್ಲಿ ಹರಿದ್ವಾರ ಜಿಲ್ಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಕಳೆದ ಐದು ಚುನಾವಣೆಗಳ ಪಕ್ಷವಾರು ಸಾಧನೆಯನ್ನು ವಿಶ್ಲೇಷಿಸಿದರೆ ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯ ಜೊತೆಗೆ ಬಿಎಸ್ಪಿಯ ಪ್ರಭಾವವೂ ನಿರ್ಣಾಯಕವಾಗಿರುವುದು ಸ್ಪಷ್ಟವಾಗುತ್ತದೆ. ಮುಂಬರುವ 2027ರ ಚುನಾವಣೆಯ ಹೊತ್ತಿಗೆ ಹರಿದ್ವಾರ ಜಿಲ್ಲೆಯಲ್ಲಿ ಹೊಸ ರಾಜಕೀಯ ಪಕ್ಷಗಳ ಪ್ರವೇಶವು ಬಿಜೆಪಿ ಮತ್ತು ಕಾಂಗ್ರೆಸ್—ಎರಡೂ ರಾಷ್ಟ್ರೀಯ ಪಕ್ಷಗಳ ಎದುರು ಹೊಸ ಸವಾಲುಗಳನ್ನು ತಂದೊಡ್ಡಿದೆ.

2027ರ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ, ಈವರೆಗೆ ಒಮ್ಮೆಯೂ ಗೆಲ್ಲದಿರುವ ಧಾರಚೂಲಾ, ಪಿರಾನ್ ಕಲಿಯಾರ್, ಮಂಗ್ಲೌರ್, ಚಕ್ರಾತಾ ಮತ್ತು ಜಸ್‌ಪುರ ಕ್ಷೇತ್ರಗಳಲ್ಲಿ ಖಾತೆ ತೆರೆಯುವುದು ಪ್ರತಿಷ್ಠೆಯ ಸಂಗತಿಯಾಗಿದೆ. ವಾರ್‌ರೂಮ್ ಕಾರ್ಯತಂತ್ರ, ಹಿರಿಯ ನಾಯಕರ ನೇರ ಮೇಲ್ವಿಚಾರಣೆ, ಹೊಸ ಅಭ್ಯರ್ಥಿಗಳ ಆಯ್ಕೆ ಹಾಗೂ ಧಾಮಿ ಸರ್ಕಾರದ ಸಾಧನೆಯ ವರದಿಯ ಬಲದಿಂದ ಈ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಎಸ್ಪಿ ಮತ್ತು ಪಕ್ಷೇತರರ ಪ್ರಾಬಲ್ಯವನ್ನು ಮುರಿಯಲು ಬಿಜೆಪಿಗೆ ಸಾಧ್ಯವಾಗಲಿದೆಯೇ ಎಂಬುದು ಉತ್ತರಾಖಂಡ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ: ರಾಜ್ಯದ 15 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು...

ಬೆಳಗಾವಿ |ಪ್ರತ್ಯೇಕ ರಾಜ್ಯಕ್ಕೆ ವಿರೋಧ, ಜಿಲ್ಲೆ ವಿಭಜನೆಗೆ ಸಹಮತ: ಸತೀಶ ಜಾರಕಿಹೊಳಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಧನರಾಜ್ ಹತ್ಯೆ ಪ್ರಕರಣ: ಮೂವರು RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ; 16 ಮಂದಿ ಖುಲಾಸೆ!

2016ರಲ್ಲಿ ಪಯ್ಯನ್ನೂರಿನಲ್ಲಿ ನಡೆದ ಸಿಪಿಐ(ಎಂ) ಸ್ಥಳೀಯ ಮುಖಂಡ ಹಾಗೂ ಡಿವೈಎಫ್‌ಐ ನಾಯಕ...

ಸಂವಿಧಾನ ದಿನ | ಸಂವಿಧಾನದ ರಕ್ಷಣೆಗೆ ಗಾಂಧಿ, ಖರ್ಗೆ ಕರೆ; ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ

ದೇಶಾದ್ಯಂತ ಸಂವಿಧಾನ ದಿನ ಅಚರಣೆ ನಡೆಯುತ್ತಿದೆ. ಮೋದಿ ಸರ್ಕಾರವು ಸಂವಿಧಾನವನ್ನು ತಿರುಚುವ...