ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟದ ಬಗ್ಗೆ ಪ್ರಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ ಖಾದರ್, “ಆಶಾ ಕಾರ್ಯಕರ್ತೆಯರು ಇದ್ದರೂ ವ್ಯವಸ್ಥೆ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ” ಎಂದು ಹೇಳಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ತುತ್ತಾಗಿದ್ದು, ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, “ಹತ್ತು ದಿನಗಳ ಪ್ರತಿಭಟನೆಯಿಂದ ಆರೋಗ್ಯ ಇಲಾಖೆಗೆ ಅಥವಾ ಗ್ರಾಮೀಣ ಭಾಗದ ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಹೆರಿಗೆ ಸೇರಿದಂತೆ ಇತರ ಸೇವೆಗಳು ಸುಗಮವಾಗಿ ಸಾಗುತ್ತಿವೆ” ಎಂದು ಹೇಳಿದ್ದಾರೆ.
“ನಮ್ಮ ಮೇಲೆಯೇ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಡದಿರುವಾಗ ನಾವು ಯಾಕೆ ಅವರ ಮೇಲೆ ನಂಬಿಕೆ ಇಡಬೇಕು. ಆಶಾ ಕಾರ್ಯಕರ್ತೆಯರು ಕೇಂದ್ರದಿಂದ ನೇಮಕವಾದವರೇ ಹೊರತು ರಾಜ್ಯದಿಂದ ಅಲ್ಲ; ಕೇಂದ್ರ ಸರ್ಕಾರ ಅನುದಾನ ನೀಡುವುದಾಗಿ ಹೇಳಿತ್ತಾದರೂ, ಅನುದಾನ ಬಿಡುಗಡೆ ಮಾಡಿಲ್ಲ” ಎಂದಿದ್ದಾರೆ.
“ಅವರೆಲ್ಲರೂ ಕೇಂದ್ರದಿಂದ ನೇಮಕವಾಗಿದ್ದರೂ ಅವರು ತಮ್ಮ ಜನರೇ ಆಗಿದ್ದು, ಜೊತೆಯಲ್ಲಿ ಕೆಲಸ ಮಾಡುವವರು. ಅಕ್ಷರ ದಾಸೋಹ ನೌಕರರು 4,500 ರೂಪಾಯಿಗೆ, ಶಿಕ್ಷಕರು 12 ಸಾವಿರ ರೂಪಾಯಿಗೆ ಹಾಗೂ ದಾದಿಯರು 10 ಸಾವಿರ ರೂಪಾಯಿಗೆ ದುಡಿಯುತ್ತಿರುವಾಗ, ತಕ್ಷಣವೇ ಬೇಡಿಕೆ ಈಡೇರಿಸಬೇಕು, ಬರೆದುಕೊಡಬೇಕು ಎಂದರೆ ಹೇಗೆ ಸಾಧ್ಯ. ಈ ವಿಚಾರವನ್ನು ಇಲಾಖೆಗಳೊಂದಿಗೆ ಚರ್ಚಿಸಬೇಕಾಗಿದೆ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೆ ವೈದ್ಯರು ಮತ್ತು ದಾದಿಯರು ಇಲ್ಲವೇ. ಎಲ್ಲವೂ ಸುಗಮವಾಗಿಯೇ ನಡೆಯುತ್ತಿದೆ” ಎಂದು ಖಾದರ್ ಹೇಳಿದ್ದಾರೆ.
ಖಾದರ್ ಅವರ ಹೇಳಿಕೆಗೆ ಆಶಾ ಕಾರ್ಯಕರ್ತೆಯರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಸಚಿವರು ಮೊದಲು ಕೆಳಹಂತದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಸರಿಯಾದ ಮಾಹಿತಿ ಪಡೆಯಬೇಕು. ಆಶಾ ಕಾರ್ಯಕರ್ತೆಯರು ಲಭ್ಯವಿಲ್ಲದ ಕಾರಣ ಕೆಲವೆಡೆ ಮನೆಗಳಲ್ಲೇ ಹೆರಿಗೆಗಳಾಗಿವೆ. ಆದರೆ ಇಂತಹ ಗಂಭೀರ ಸಂಗತಿಗಳನ್ನು ಸಚಿವರು ಮರೆಮಾಚುತ್ತಿದ್ದಾರೆ. ಗರ್ಭಿಣಿಯರು ಮತ್ತು ಶಿಶುಗಳಿಗೆ ಸಕಾಲಕ್ಕೆ ಲಸಿಕೆ ಹಾಕಿಸಲು ಸಾಧ್ಯವಾಗದೆ ಕುಟುಂಬಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಸಂವಿಧಾನಕ್ಕೆ 77 – ಈಡೇರದ ಕನಸು…..
“ಸಚಿವರು ನಿರ್ಲಕ್ಷ್ಯದಿಂದ ಈ ಮಾತುಗಳನ್ನಾಡಿದ್ದಾರೆ. ವೈದ್ಯರು ಮತ್ತು ನರ್ಸ್‌ಗಳು ತಮ್ಮ ತಮ್ಮ ಕೆಲಸ ಮಾಡುತ್ತಿದ್ದರೆ ಆಶಾ ಕೆಲಸವನ್ನು ಯಾರು ಮಾಡುತ್ತಿದ್ದಾರೆ. ಕಳೆದ ಹತ್ತು ದಿನಗಳ ಬೆಳವಣಿಗೆಗಳ ಬಗ್ಗೆ ಸಚಿವರ ಸಿಬ್ಬಂದಿ ನಿಖರ ಮಾಹಿತಿ ಸಂಗ್ರಹಿಸಬೇಕು. ಸಚಿವರದ್ದು ಬೆದರಿಸುವ ಹೇಳಿಕೆಯಾಗಿದ್ದು, ಅದನ್ನು ವಾಪಸ್ ಪಡೆಯಬೇಕು” ಎಂದು ಆಶಾ ಹೋರಾಟದ ನಾಯಕಿ ನಾಗಲಕ್ಷ್ಮಿ ಹೇಳಿದ್ದಾರೆ.
ಇನ್ನು, ಇದೆಲ್ಲದರ ನಡುವೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಆಶಾ ಕಾರ್ಯಕರ್ತರೊಂದಿಗೆ ನಾಳೆ ಮಾತುಕತೆ ನಡೆಸುತ್ತೇವೆ. ನಾವು ಅವರ ಪರವಾಗಿದ್ದು, ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು. ಕೇಂದ್ರ ಸರ್ಕಾರಕ್ಕೆ ಏಕೆ ಹಣ ಕೇಳುತ್ತಿಲ್ಲ, ಯುಪಿಎ ಅವಧಿಯಲ್ಲಿ ಹಣ ನೀಡಿದ್ದೇ ಕೊನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ಅನುದಾನ ಬಂದಿಲ್ಲ. ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧವಷ್ಟೇ ಪ್ರಶ್ನೆ ಮಾಡುತ್ತಾರೆ. ಅವರೇಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವುದಿಲ್ಲ” ಎಂದಿದ್ದಾರೆ.



