ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ವಿರುದ್ಧ ‘ಲುಕ್ ಔಟ್ ಸರ್ಕ್ಯುಲರ್’ (LOC) ಹೊರಡಿಸಲಾಗಿದೆ. ಪಾಸ್‌ಪೋರ್ಟ್‌ನಲ್ಲಿನ ದೋಷಗಳು ಸೌರವ್ ದಾಸ್ ಪೌರತ್ವದ ಮೇಲೂ ಪರಿಣಾಮ ಬೀರಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ವಿದೇಶ ಪ್ರವಾಸಕ್ಕೆ ತಮಗೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸೌರವ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ನ್ಯಾಯಾಲಯದ ಮುಂದಿಟ್ಟಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ನಿತಿನ್ ವಾಸುದೇವ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಚೇತನ್ ಶರ್ಮಾ, ಮುಂಬೈ ಪೊಲೀಸರ ಮನವಿಯ ಮೇರೆಗೆ ಈ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸೌರವ್ ದಾಸ್ ಅವರ ಪಾಸ್‌ಪೋರ್ಟ್‌ನಲ್ಲಿ ಹಲವು ದೋಷಗಳು ಕಂಡುಬಂದಿದೆ. ಅವು ಅವರ ಭಾರತೀಯ ಪೌರತ್ವದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಜನ್ಮಸ್ಥಳದ ವಿವರ ಸ್ಪಷ್ಟಪಡಿಸುವವರೆಗೆ ಪಾಸ್‌ಪೋರ್ಟ್ ಬಳಸದಂತೆ ಸೌರವ್ ದಾಸ್‌ಗೆ ಸರ್ಕಾರ ಸೂಚನೆ
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸೌರವ್ ದಾಸ್ ಪರ ಹಿರಿಯ ವಕೀಲ ಅಖಿಲ್ ಸಿಬಲ್, ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಲುಕ್ ಔಟ್ ಸರ್ಕ್ಯುಲರ್ ಇರುವ ಬಗ್ಗೆ ಈವರೆಗೆ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ವಾದಿಸಿದರು. ವಿಮಾನ ನಿಲ್ದಾಣದಲ್ಲಿ ತಡೆದಾಗಲೂ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಅಥವಾ ಎಲ್‌ಒಸಿ ಪ್ರತಿಯನ್ನು ತೋರಿಸಿರಲಿಲ್ಲ ಎಂದು ಹೈಕೋರ್ಟ್ ಗಮನಕ್ಕೆ ತಂದರು.
ಇನ್ನು ವಿದೇಶ ಪ್ರವಾಸಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸೌರವ್ ದಾಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ‘ಕಾಕ್ರೋಚ್ ಚಳವಳಿ’ ಕುರಿತು ಉಪನ್ಯಾಸ ನೀಡಲು ಸೌರವ್ ದಾಸ್ ಲಂಡನ್‌ಗೆ ತೆರಳಲು ಸಿದ್ಧರಾಗಿದ್ದರು. ಆದರೆ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಅವರನ್ನು ತಡೆದು ಪ್ರಯಾಣಕ್ಕೆ ನಿರಾಕರಿಸಿದ್ದರು. ಜನ್ಮಸ್ಥಳದ ವಿವರಗಳಲ್ಲಿ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಸ್ಪಷ್ಟಪಡಿಸಿತ್ತು.
“ಕೇಂದ್ರ ಸರ್ಕಾರದ ರಾಜಕೀಯ ಪಿತೂರಿ”
ಸೌರವ್ ದಾಸ್ ಅವರ ವಿದೇಶ ಪ್ರವಾಸಕ್ಕೆ ತಡೆ ಒಡ್ಡಿರುವುದು ಮತ್ತು ಪಾಸ್‌ಪೋರ್ಟ್ ವಿವಾದವು ಕೇವಲ ತಾಂತ್ರಿಕ ಅಥವಾ ಕಾನೂನುಬದ್ಧ ಪ್ರಕ್ರಿಯೆಯಲ್ಲ, ಇದು ಕೇಂದ್ರ ಸರ್ಕಾರದ ರಾಜಕೀಯ ಪಿತೂರಿ, ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಸೌರವ್ ದಾಸ್ ಮತ್ತು ಸಿಜೆಪಿ ನಾಯಕರು ಆರೋಪಿಸಿದ್ದಾರೆ.
ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೇಂಬ್ರಿಡ್ಜ್ ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ‘ಕಾಕ್ರೋಚ್ ಚಳವಳಿ’ ಹಾಗೂ ಭಾರತದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿತ್ತು. ಆದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸರ್ಕಾರದ ನೀತಿಗಳ ವಿರುದ್ಧ ಮಾತನಾಡುವುದನ್ನು ತಡೆಯಲು ‘ಹೇಡಿ ಸರ್ಕಾರ’ ಈ ಕೃತ್ಯ ಎಸಗಿದೆ ಎಂದು ದಾಸ್ ಆರೋಪಿಸಿದ್ದಾರೆ.
“2019ರಲ್ಲಿಯೇ ಎಲ್ಲಾ ಪೊಲೀಸ್ ಪರಿಶೀಲನೆ ಮುಗಿದು ಪಾಸ್‌ಪೋರ್ಟ್ ನೀಡಲಾಗಿತ್ತು. ಆದರೆ, ಲಂಡನ್ ವಿಮಾನ ಏರುವ ಕೇವಲ 5 ಗಂಟೆಗಳ ಮೊದಲು ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಶೋಕಾಸ್ ನೋಟಿಸ್ ಕಳುಹಿಸಿರುವುದು ರಾಜಕೀಯ ಪ್ರೇರಿತ ಎಂಬುದಕ್ಕೆ ಸಾಕ್ಷಿ” ಎಂದು ದಾಸ್ ದೂರಿದ್ದಾರೆ.
ಇನ್ನು ಎರಡು ತಿಂಗಳ ಅವಧಿಯಲ್ಲಿ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಅಕ್ಟೋಬರ್ 10ರಂದು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂಬೈನಿಂದ ದೆಹಲಿಗೆ ಬಂದಿದ್ದ ಸೌರವ್ ದಾಸ್ ಮತ್ತು ಸಿಜೆಪಿ ನಾಯಕರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಇವೆಲ್ಲವೂ ತಮ್ಮ ರಾಜಕೀಯ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಿಜೆಪಿ ಆರೋಪಿಸಿದೆ.



