ಹೊಸ ʼಸ್ಮಾರ್ಟ್ ಸಿಟಿʼ ದಾವಣಗೆರೆಯ ಭರಾಟೆಯಲಿ ಹಳೆಯ ಡಾವಣಗೇರಿ ಕಳೆಯದಿರಲಿ

Date:

Advertisements
ನಗರಸಭೆಯಿಂದ ಮಹಾನಗರಪಾಲಿಕೆ ಕಡೆಗೆ ಸ್ಮಾರ್ಟ್ ಸಿಟಿಗೆ ಪ್ರಮೊಷನ್ ಪಡೆದು ಭೌತಿಕವಾಗಿ ಬಹಳೇ ಬದಲಾಯಿಸಿ ಬಿಟ್ಟಿದೆ. ನೀವೇನೇ ಹೇಳಿ ಹಳೆಯ ಡಾವಣಗೇರಿಯ ಸೋಪಜ್ಞಶೀಲ ಸ್ಮಾರ್ಟ್ನೆಸ್ ಸ್ಮಾರ್ಟ್ ಸಿಟಿ ದಾವಣಗೆರೆಗೆ ದಕ್ಕಲು ಸಾಧ್ಯವಿಲ್ಲ. ಅದು ಜವಾರಿ ಮತ್ತು ಹೈಬ್ರಿಡ್ ಸಂಸ್ಕೃತಿಯ ನಡುವಣದ ಫರಕು

ನನ್ನ ಮತ್ತು ಡಾವಣಗೇರಿಯ ನಂಟು ನಲವತ್ತೈದು ವರುಷಗಳಷ್ಟು ಹಳತು ಮತ್ತು ಹಿರಿಮೆಯದು. ಅದೇಕೋ ನನಗೆ ಇವತ್ತಿನ ಸ್ಮಾರ್ಟ್ ಸಿಟಿ ದಾವಣಗೆರೆಗಿಂತ ಅವತ್ತಿನ ಹಳೆಯ ಡಾವಣಗೇರಿಯೇ ಪರಮಾಪ್ತವಾಗಿ ಕಾಡುತ್ತಲಿದೆ. ಅಂತೆಯೇ ಅದನ್ನು ಡಾವಣಗೇರಿ ಎಂದು ಕರೆಯುವಲ್ಲೇ ನನಗೆ ಹಂಡೆಹಾಲು ಕುಡಿದ ಖಂಡುಗ ಖುಷಿ. ಅಷ್ಟಕ್ಕೂ ಉತ್ತರ ಕರ್ನಾಟಕದ ನಮಗೆ ‘ಡಾವಣಗೇರಿ’ ಅಂತ ಬಾಯ್ತುಂಬಿ ಕರೆದಾಗಲೇ ದಾವಣಗೆರೆಯ ಪಸಂದಾದ ಪರಿಚಯ. ಈ ಊರಿನ‌ ವಿಶೇಷ ತಿಂಡಿ ಗುಳ್ಳಡಕಿ ಉಂಡಿ, ಮಂಡಕ್ಕಿ ಮೆಣಸಿನಕಾಯಿ, ಬೆಣ್ಣೆದೋಸೆ ತಿಂದಷ್ಟೇ ಸಂತೃಪ್ತಿ. ಸರ್ನೇಮ್ ಇರುವ ಸಹಸ್ರಾರು ಮಂದಿ ದಾವಣಗೆರೆಯಲ್ಲಿದ್ದಾರೆ. ಅವರ ಮನೆತನದ ಹೆಸರುಗಳು ಕೂಡಾ ಅಡ್ಡ ಹೆಸರುಗಳೇ ಆಗಿವೆ. ಈ ರಸ್ತೆಯಿಂದ ಆ ರಸ್ತೆವರೆಗೂ ಒಂದರೊಳಗೊಂದು ರೈಲು ಬೋಗಿಯಂತೆ ಹಳೆ ಊರಿನ ಉದ್ದುದ್ದನೆ ಮನೆಗಳು.

ದಾವಣಗೆರೆ, ಅದಿನ್ನೂ ತಾರುಣ್ಯ ತುಂಬಿ ತುಳುಕುವ ತಾಲೂಕ ಅವಸ್ಥೆಯಲ್ಲಿದ್ದಾಗಲೇ ಈ ಊರಿಗೆ ಬಂದವನು ನಾನು. ಹಾಗೆ ಬಂದ ನನ್ನದು ಅಜಮಾಸು ಇಪ್ಪತ್ತು ವರುಷಗಳ ಕಾಲ ಅದರ ದಿವಿನಾದ ಸಖ್ಯ. ಮತ್ತದು ಜಿಲ್ಲೆಯಾದ ಮೇಲೆ ಅದರೊಂದಿಗೆ ಇಪ್ಪತ್ತೈದು ವರ್ಷಗಳ ನಲುಮೆಯ ನಂಟು‌. ಅದೊಂದು ಬಗೆಯ ಭವಾನುಭವದ ಸೋಬತಿ ಸಂಬಂಧ. ಅಷ್ಟು ಮಜಬೂತಾದ ವರುಷಗಳ ಒಡನಾಟದ ಗಾಢ ನೆನಪುಗಳು ಇನ್ನೂ ನಿನ್ನೆಯಷ್ಟೇ ಎಂಬ ತಾಜಾತನದಿಂದ ಝಳಪಿಸುತ್ತವೆ. ರಾಜಧಾನಿಯೇ ಆಗಬೇಕಿದ್ದ ಈ ಊರು ಜಿಲ್ಲೆಗೆ ಸಮಾಧಾನ ಪಟ್ಟುಕೊಂಡಿದೆ. ದಾವಣಗೆರೆ ಕರ್ನಾಟಕದ ಕೇಂದ್ರಬಿಂದು. ಕಲ್ಯಾಣ, ಕಿತ್ತೂರು, ಕರಾವಳಿ, ಹಳೆಯ ಮೈಸೂರು ಹೀಗೆ ಸಮಗ್ರ ಕರ್ನಾಟಕದ ಜನವಸತಿ ಇರುವ ಊರು. ದಾವಣಗೆರೆ ನೋಡಿದರೆ ಸಾಕು ನಿಮಗೆ ಪ್ರಾತಿನಿಧಿಕ ಕರ್ನಾಟಕದ ದರ್ಶನ.

ನಾನು ಹುಟ್ಟಿ ಬೆಳೆದ ಇಪ್ಪತ್ತು ವರುಷಗಳ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಗಿಂತ ಎರಡು ಪಟ್ಟು ಮಿಗಿಲಾದ ಪ್ರೀತಿಯ ಕಾಲ ಕಳೆದುದೇ ದಾವಣಗೆರೆಯಲ್ಲಿ. ಅಂತೆಯೇ ನಿಮ್ಮೂರು ಯಾವುದೆಂದು ಕೇಳದಿರಯ್ಯ, “ನಾನಿರುವ ಊರೇ ನನ್ನೂರಯ್ಯ” ಎನ್ನುವಂತಾಗಿದೆ. ಒಂದು ಖೇದದ ಸಂಗತಿಯೆಂದರೆ ನನಗೆ ಸಾಂಸ್ಕೃತಿಕವಾಗಿ ದಕ್ಕಬೇಕಾದ ಸೌಲಭ್ಯಗಳ ಸಂದರ್ಭದಲ್ಲಿ ಎಲ್ಲೂ ಸಲ್ಲದಂತಹ ದುಃಸ್ಥಿತಿ. ಕಲಬುರ್ಗಿಯು ನನ್ನನ್ನು ದಾವಣಗೆರೆಯವರೆಂತಲೂ, ದಾವಣಗೆರೆಯು ನನ್ನನ್ನು ಕಲಬುರ್ಗಿಯವರೆಂತಲೂ ಅಲ್ಲಿ ಇಲ್ಲಿ ಎಲ್ಲೂ ಸಲ್ಲದಂತಾಗಿದೆ.

ಮಹಾಲಿಂಗ ರಂಗರ ‘ಸುಲಿದ ಬಾಳೆಹಣ್ಣಿನಂದದಿ… ಸುಲಲಿತ ಕನ್ನಡದ’ ಊರಿಗೆ ಬಂದ ಸಂಭ್ರಮ ನನ್ನದು. ಆದರೆ ದಾವಣಗೆರೆಗೆ ಬಂದ ಹೊಸದರಲ್ಲಿ ಅದರ ‘ಸಭ್ಯ’ಭಾಷೆ ಕೇಳಿ ಬೆಕ್ಕಸ ಬೆರಗಿನ ಮುಜುಗರ ಪಟ್ಟಿದ್ದೆ. ಮುಖ್ಯವಾಗಿ ಮಿಂಡ್ರಿ… ಮತ್ತು ಏಳು ಮಿಂಡ್ರಿ. ಅದನ್ನೇ ನಾನು “ಸೆವೆನ್ ಎಂ. ಜಿ.” ಎಂದು ನನ್ನದೇ ಅರ್ಥಕೋಶಕ್ಕೆ ಗರ್ಭೀಕರಿಸಿಕೊಂಡಿದ್ದೆ. ಪ್ರಾದೇಶಿಕ ನಿಘಂಟೇ ನಿರ್ಮಿಸುವಷ್ಟು ಭಾಷಾ ಭಾವಕೋಶ ದಾವಣಗೆರೆಯದು. ಇಬ್ಬರು ಎನ್ನುವುದನ್ನು ಇವರು ಇವತ್ತಿಗೂ ‘ಇಬ್ಳಾರು’ ಅಂತಲೇ ಅನ್ನೋದು. ಇಂತಹ ನೂರಾರು ದೇಸಿ ಸಂವೇದನೆಯ ಪದಪುಂಜಗಳು ಅದರ ಒಡಲೊಳಗಿವೆ. ‘ಏನಲೇ ಮಿಂಡ್ರಿಗು…’ ಅಂತ ಅಗದೀ ಸೋಜಾಗಿ ಕರೆಯುವಲ್ಲಿ ಇವರ ಮನದಲ್ಲಿ ಕಿಂಚಿತ್ತೂ ನಂಜು ಇರುವುದಿಲ್ಲ. ಹಾಗೆ ಕರೆಯುವಾಗ ಇವರ ಧ್ವನಿಯಲ್ಲಿ ದಾವಣಗೆರೆಯೆಂಬ ಹೃತ್ಪೂರ್ವಕ ಸ್ವರ, ಅನನ್ಯತೆಯ ಬಲುಮೆ ತುಂಬಿ ತುಳುಕುತ್ತದೆ. ಇದರಲ್ಲೇ ರಸಗವಳದ ಪ್ರೀತಿ ಪಾರಮ್ಯ. ಇಷ್ಟಕ್ಕೂ ಇದು ಈ ಊರಲ್ಲೇ ಹುಟ್ಟಿ ಬೆಳೆದವರಿಗೊಲಿದ ಭಾಷಾ ಪೇಟೆಂಟ್. ಬೇರೆಯವರಿಂದ ಇದು ಸಾಧ್ಯವಿಲ್ಲ.

Advertisements

ಆರಂಭಕ್ಕೆ ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿ ಒಂದುವಾರ ವಾಸವಿದ್ದೆ. ಅದು ನಮ್ಮ ಕಡೆಯ ಶಖಾಪುರ ಶ್ಯಾಣಪ್ಪನ ಮನೆ. ಅವನ ಪುಟ್ಟ ಮನೆಯಲ್ಲೇ ಉಳಕೊಂಡಿದ್ದೆ. ಬರಗಾಲ ಬಿದ್ದಾಗ ಹೊಟ್ಟೆ ತಿಪ್ಪಲಿಗಾಗಿ ನಮ್ಮೂರಿಂದ ಅವನ ಕುಟುಂಬದ ಎಲ್ಲರೂ ಡಾವಣಗೇರಿಗೆ ಅಕ್ಷರಶಃ ವಾರಗಟ್ಟಲೇ ನಡಕೊಂಡೇ ಬಂದವರು. ಅವರೀಗ ಬೂದಾಳು ರಸ್ತೆಕಡೆಯ ಚೌಡೇಶ್ವರಿ ನಗರದ ಬೃಹತ್ ಚರಂಡಿ ಪಕ್ಕದಲ್ಲಿ ಪುಟ್ಟದೊಂದು ಕುಟೀರ ಕಟ್ಟಿಕೊಂಡಿದ್ದಾರೆ. ನಮ್ಮದು ಬಾಡಿಗೆ ಮನೆಗಳ ಓಡಾಟದ ಕುಟುಂಬ. ವಿನೋಬಾ ನಗರ. ತದನಂತರ ಎಂ. ಸಿ. ಕಾಲೊನಿ. ಇದೀಗ ಸಿದ್ದವೀರಪ್ಪ ಬಡಾವಣೆ. ಒಂದೊಂದು ಓಣಿಯಲ್ಲಿ ಹದಿನೈದು ವರುಷಗಳು.

ಆಗ ರ್ಯಾಲಿ ಸೈಕಲ್ ಅಂದರೆ ತುಂಬಾನೆ ಸ್ಟ್ಯಾಂಡರ್ಡ್. ನಾನು ಕಂತುಗಳ ಸಾಲದಲ್ಲಿ ಅದನ್ನು ಖರೀದಿಸಿದ್ದೆ. ಹೆಂಡತಿಯನ್ನು ಸೈಕಲ್ ಮೇಲೆ ಕೂಡಿಸಿಕೊಂಡು ಹೋಗುವ ಖುಷಿಗೆ ಸಮನಾದ ಇನ್ನೊಂದು ಅಂತಹ ಖುಷಿ ನನಗೆ ಸಿಕ್ಕಿಲ್ಲ. ಅವಳು ಬಸುರಿಯಾದ ಮೇಲೂ ಹಿಂದಿನ ಸೀಟಲ್ಲಿ ಹತ್ತಿಸಿಕೊಳ್ಳುತ್ತಿದ್ದೆ. ಹೆರಿಗೆಗಾಗಿ ಆಕೆಯನ್ನು ಸರಕಾರದ ಸಿ. ಜಿ. ಆಸ್ಪತ್ರೆಗೆ ಸೇರಿಸಿದಾಗ ನಾನು ನೌಕರಿ ಮಾಡುತ್ತಿದ್ದ ಹದಡಿಯಿಂದ ನಿತ್ಯವೂ ಸೈಕಲ್ ಮೇಲೆಯೇ ಬಂದು ಆರೋಗ್ಯ ವಿಚಾರಿಸುತ್ತಿದ್ದೆ. ಅಷ್ಟೇಯಾಕೆ ಕೊಂಡಜ್ಜಿಯಿಂದಲೂ ಅನೇಕ ಬಾರಿ ಹದಡಿಗೆ ಸೈಕಲ್ ಮೇಲೆ ಓಡಾಡಿದ್ದೇನೆ. ಆಗ ನನಗೆ ಕಮ್ಮಿ ಪಗಾರ. ಸೈಕಲ್ ಕೂಡಾ ನೌಕರಿಗೆ ಸೇರಿದ ಆರು ವರ್ಷದ ನಂತರ ಖರೀದಿಸಿದ್ದು. ಅದಕ್ಕೆ ಮುನ್ನ ತಾಸಿಗೆ ಹತ್ತು ಪೈಸೆಯಂತೆ ವಿನೋಬನಗರದ ಸಲೀಮನ ಬಾಡಿಗೆ ಸೈಕಲ್ಲುಗಳು. ನಿಟ್ಟುವಳ್ಳಿಯ ತುಂಗಮ್ಮ ಬಿಲ್ಡಿಂಗಿನ ಗೆಳೆಯ ಚಂದ್ರಶೇಖರನ ಬತ್ತೇಕ ವಾರಕ್ಕೊಮ್ಮೆ ಭಾನುವಾರ ಸಲೀಮನ ಬಾಡಿಗೆ ಸೈಕಲ್ ಮೇಲೆ ಹೋಗಿ ಬರುತ್ತಿದ್ದೆ.

ಊರುತುಂಬಾ ಬಕ್ಕೇಶಿ, ಕೊಟ್ರೇಶಿ, ಕಲ್ಲೇಶಿ, ಮಲ್ಲೇಶಿ, ಗೋಣೇಶಿ ಹೆಸರಿನವರೇ ತುಂಬಿ ತುಳುಕುತ್ತಾರೆ. ಈಶ ಇವರ ಬಾಯಲ್ಲಿ ಈಜಿಯಾಗಿ ಈಶಿ ಆಗುತ್ತದೆ. ರೈಲುವೆ ಹಳಿಯಾಚೆಯ ಹಳೆ ಊರು ಡಾವಣಗೇರಿಯ ಮೈ ಮನಸುಗಳ ತುಂಬಾ ಜವಾರಿತನದ ಸೊಬಗು ಸೊಗಸು. ಅದರ ಸೊಗಡೇ ವಿಶಿಷ್ಟವಾದುದು. ಅದಿನ್ನೂ ಹಳ್ಳಿಯ ಕದರನ್ನು, ಕಸುವನ್ನು ಕಳಕೊಂಡಿಲ್ಲ. ದಿನನಿತ್ಯದ ಮಾತುಕತೆಗಳಿಂದ ಹಿಡಿದು ದುಗ್ಗಮ್ಮನ ಜಾತ್ರೆವರೆಗೂ ಅದರ ಗ್ರಾಮ್ಯಜನ್ಯ ಸಡಗರ ಹಾಸು ಹೊಕ್ಕಾಗಿದೆ. ಗರಡಿ ಮನೆಗಳು, ಮಟ್ಟಿಕಲ್ಲು, ಝಂಡೆ ಕಟ್ಟೆಗಳು, ತೋಟ ಕಣಗಳು, ಗಲ್ಲಿಗಳು ವೈವಿಧ್ಯತೆಯ ಈ ಹೆಸರುಗಳಲ್ಲೇ ಈ ಊರಿನ ಶಾಂತಿ ಸೌಹಾರ್ದತೆಯ ಸಂಕೇತಗಳಿವೆ. ವಿಶೇಷವಾಗಿ ದುಗ್ಗಮ್ಮನ ಹಬ್ಬವನ್ನು ಗ್ರಾಮದ ಮುಖಂಡರು ಸೇರಿ ಹಳ್ಳಿಯಲ್ಲಿ ಒಗ್ಗಟ್ಟಾಗಿ ಕುಂತು ಮಾತಾಡುವಂತೆ ಎಲ್ಲಾ ಜಾತಿಯ ಮುಖಂಡರು ಕಾರ್ಯ ಕಟ್ಟಳೆಗೆ ಮಾಡುವ ಸಿದ್ಧತೆಗಳು ಮತ್ತು ಅವುಗಳ ಆಚರಣಾ ವಿಧಾನಗಳು. ಚೆರಗ ಚೆಲ್ಲುವ ಸಾಂಪ್ರದಾಯಿಕ, ಧಾರ್ಮಿಕ, ಪರಂಪರೆಗಳ ಜೊತೆಯಲ್ಲಿ ಸಾಂಸ್ಕೃತಿಕ ಸಂವೇದನೆಗಳನ್ನು ಸಂಪನ್ನಗೊಳಿಸುತ್ತವೆ.

ಇದು ಕೇವಲ ದುಗ್ಗಮ್ಮನ ಹಬ್ಬ ಜಾತ್ರೆಗೆ ಸೀಮಿತವಾಗಿರದೇ ಅಲೈ ದೇವರ ಪೀರಲ್ಹಬ್ಬದ ಸಕ್ಕರೆ ಲೋಬಾನ, ಆರೇರ ಹಟ್ಟಿಯ ಜೋತೆಮ್ಮರ ಜೋಗತಿ ಮೇಳ, ಯಮನಪ್ಪನ ತಂಡದ ದೊಡ್ಡಾಟ, ಪೈಲ್ವಾನರ ಕಾಟಾ ನಿಖಾಲಿ ಕುಸ್ತಿ, ಗೋಂದಳಿಗರ ಭಜನಾ ಮಂಡಳಿ, ಉಕ್ಕಡಗಾತ್ರಿ ಕರ್ಬಸಜ್ಜನ ಪುಣ್ಯಸ್ಮರಣೆ, ಬಗಳಾಂಬಿಕೆಯ ಮಂಗಳಾರತಿ… ಹೀಗೆ ಅದರ ನಡವಳಿಕೆಗಳು ಜೀವಸಂವೇದನೆಗಳನ್ನು ಕಳಕೊಂಡಿಲ್ಲ. ಇತ್ತೀಚೆಗೆ ಅದು ಸ್ಮಾರ್ಟ್ ಸಿಟಿ ಆಗುವ ವೇಗದಲ್ಲಿ ಈ ಎಲ್ಲಾ ಸಾಂಸ್ಕೃತಿಕ ಪರಿಮಳಕ್ಕೆ, ಸಾಂಪ್ರದಾಯಿಕ ಫಿಲಿಂಗ್ಸ್ ಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ.

davanagere
ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಮತ್ತು ಶಾಮನೂರು ಶಿವಶಂಕರಪ್ಪ

ಬೇರೆ ಊರುಗಳಿಂದ ವಲಸೆ ಬಂದವರು ಕಟ್ಟಿಕೊಂಡ ಓಣಿಯ ಹೆಸರು ಬಂದವರ ಕ್ಯಾಂಪ್. ಅದು ಬರ ಬರುತ್ತಾ “ಬಂದೂರ್ ಕ್ಯಾಂಪ್” ಅಂತಲೇ ಹೆಸರಾಯಿತು. ಅದರ ಅಭಿವೃದ್ಧಿಗೆ ಶ್ರಮಿಸಿದ ಕೆ. ಟಿ. ಜಂಬಣ್ಣನವರ ಹೆಸರು ಈಗ ಅದಕ್ಕಿದೆ. ಹೀಗೆ ಅನೇಕ ಓಣಿಗಳಿಗೆ ಶ್ರಮಪಟ್ಟವರ ಹೆಸರುಗಳು ಅನೇಕ ಗಲ್ಲಿ, ಓಣಿಗಳಿಗಿವೆ. ಕಾಂ. ಪಂಪಾಪತಿ ನಗರಸಭಾಧ್ಯಕ್ಷರಾಗಿದ್ದಾಗ ಇಪ್ಪತ್ತೇಳು ಸಾವಿರದಷ್ಟು ಸಸಿಗಳನ್ನು ನೆಟ್ಟು ನೀರೆರೆದು ಮರವಾಗಿಸುವಲ್ಲಿ ಪರಿಶ್ರಮ ಪಟ್ಟವರು. ಈ ಊರನ್ನು ಹಸಿರಾಗಿಸುವಲ್ಲಿ ಮತ್ತು ದುಡಿಯುವ ವರ್ಗದ ಉಸಿರಾಗುವಲ್ಲಿ ಅವರ ಕೊಡುಗೆ ಅಮೋಘ. ಅಷ್ಟಕ್ಕೂ ಈ ಊರನ್ನು ಪೊಗದಸ್ತಾಗಿ ಕಟ್ಟಿದವರು ಪರ ಊರುಗಳಿಂದ ಬಂದವರೇ. ಅದರಲ್ಲೂ ಎರೆಸೀಮೆ ಕಡೆಯವರ ಕೊಡುಗೆ ಗಮನೀಯ.

ಬೆಳ್ಳೂಡಿ ಗಲ್ಲಿ, ಇಜಾರದಾರ ಗಲ್ಲಿಗಳ ಜತೆ ಮಂಡಿಪೇಟೆ, ಆನೆಕೊಂಡ ಪೇಟೆಗಳ ಹೊಕ್ಕುಬಳಕೆಯ ಸಮ್ಮಿಲನ.
ಪಿ.ಜೆ. ಬಡಾವಣೆಯ ಎಕ್ಸ್ಟೆನ್ಸನ್ ಕಲ್ಚರ್ ಎಂ.ಸಿ. ಕಾಲೊನಿಗಳ ಕಾಲನಿ ಕಲ್ಚರ್., ಕೈಯಲ್ಲಿ ಅಲ್ಲ ಕಣ್ಣಲ್ಲೇ ಇಟ್ಟುಕೊಂಡ ತಕ್ಕಡಿ ತೂಗುವ ಕಲ್ಚರ್. ಹೀಗೆ ತರಹೇವಾರಿ ಸಂಸ್ಕೃತಿಯ ಊರು. ಶಿಕ್ಷಣ ಕ್ರಾಂತಿಯ ಕಾಲೇಜುಗಳು. ಅದಕ್ಕೆ ಮಿಗಿಲಾಗಿ ವಿಶ್ವವಿದ್ಯಾಲಯವೇ ಶಿವಗಂಗೋತ್ರಿಯಾಗಿ ಮೇಳವಿಸಿದೆ. ಈ ಊರಲ್ಲಿ ಇರುವಷ್ಟು ಧರ್ಮಛತ್ರಗಳು ಭಾರತದ ಬೇರಾವ ಒಂದು ಊರಲ್ಲಿ ಇಲ್ಲ ಎಂದು ಪದ್ಮಭೂಷಣ ಡಾ. ಎಂ. ಸಿ. ಮೋದಿ ಹೇಳಿದ ಮಾತು. ರಾಜನಹಳ್ಳಿ ಹನುಮಂತಪ್ಪನ ಛತ್ರ ಎಂಬುದು ಮಾತು ಮಾತಿಗೂ ಸಾರ್ವಜನಿಕವಾಗಿ ಬಳಕೆಯಾಗುವ ಜನಜನಿತ ಜನಪದವೇ ಆಗಿದೆ.

ನಗರಸಭೆಯಿಂದ ಮಹಾನಗರಪಾಲಿಕೆ ಕಡೆಗೆ ಸ್ಮಾರ್ಟ್ ಸಿಟಿಗೆ ಪ್ರಮೊಷನ್ ಪಡೆದು ಭೌತಿಕವಾಗಿ ಬಹಳೇ ಬದಲಾಯಿಸಿ ಬಿಟ್ಟಿದೆ. ನೀವೇನೇ ಹೇಳಿ ಹಳೆಯ ಡಾವಣಗೇರಿಯ ಸೋಪಜ್ಞಶೀಲ ಸ್ಮಾರ್ಟ್ನೆಸ್ ಸ್ಮಾರ್ಟ್ ಸಿಟಿ ದಾವಣಗೆರೆಗೆ ದಕ್ಕಲು ಸಾಧ್ಯವಿಲ್ಲ. ಅದು ಜವಾರಿ ಮತ್ತು ಹೈಬ್ರಿಡ್ ಸಂಸ್ಕೃತಿಯ ನಡುವಣದ ಫರಕು. ಮ್ಯಾಂಚೆಸ್ಟರ್‌ ನಿಂದ ವಿದ್ಯಾಕಾಶಿಗೆ ರೂಪಾಂತರಗೊಂಡ ಕಥನ ಇನ್ನೊಮ್ಮೆ ಹೇಳುವೆ. ಆದರೆ ಅದು ವಿದ್ಯಾಕಾಶಿ ಎಂದು ಕರೆಸಿಕೊಳ್ಳುವಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಮರೆಯಲಾಗದು. ಶಾಮನೂರು ಮಲ್ಲಿಕಾರ್ಜುನ ಅವರು ಮೊದಲ ಬಾರಿಗೆ ಮಂತ್ರಿಯಾಗಿದ್ದಾಗ ಕುಂದುವಾಡ ಕೆರೆಯ ಕುಡಿಯುವ ನೀರಿನ ಯೋಜನೆ ರೂಪಿಸಿ ಈ ಊರಿನ ಬಾಯಾರಿಕೆ ನೀಗಿಸಿದರು. ಅಷ್ಟು ಮಾತ್ರವಲ್ಲದೇ ಅಂತರ್ಜಲ ಸಮೃದ್ಧಿಯಾಯಿತು. ಅವರ ಕಾಲದಲ್ಲೇ ನಿರ್ಮಾಣಗೊಂಡ ಗಾಜಿನಮನೆ ಮುದನೀಡುವ ಪ್ರೇಕ್ಷಣೀಯ ಸ್ಥಳ.

ಇತ್ತ ಗುಬ್ಬಿ ವೀರಣ್ಣನವರಿಂದ ಹಿಡಿದು ಅತ್ತ ಗರುಡ ಸದಾಶಿವರಾಯರ ಕಂಪನಿ ನಾಟಕಗಳು. ದಕ್ಷಿಣದ ಡಿ.ಕೆ. ಪಟ್ಟಮ್ಮಾಳ್ ಉತ್ತರದ ಗಂಗೂಬಾಯಿವರೆಗೆ ದಕ್ಷಿಣಾದಿ ಉತ್ತರಾದಿಗಳ ಸಂಗಮಿಸಿದ ನೆಲ ದಾವಣಗೆರೆ. ಇಲ್ಲಿ ಜರುಗುವಷ್ಟು ಯಶಸ್ವಿ ಸಮ್ಮೇಳನಗಳು ಬೇರೆಲ್ಲೂ ಜರುಗಲಾರವು. ಅಂತಹ ಊರೀಗ ವಿಶ್ವ ಕನ್ನಡ ಸಮ್ಮೇಳನಕ್ಕೆ ಕಾಯ್ದು ಕುಂತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ನಮಗೆ ವಿಶ್ವ ಕನ್ನಡ ಸಮ್ಮೇಳನ ಸಂಭ್ರಮಿಸುವ ಕಾತರ

ಕಡಕೋಳ
ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದಾವಣಗೆರೆಯ ಸಿದ್ಧಿವಿನಾಯಕ ಶಾಲೆ ವಿನೋಬಾ ನಗರ ಮುಂತಾದ ಪರಿಸರದಲ್ಲಿ ಬೆಳೆದ ಚಿಕ್ಕ ಹುಡುಗನಾಗಿ ನಾನು… ದಾವಣಗೆರೆಯ ನೆನಪುಗಳು ಸದಾ ಹಸಿರಾಗಿವೆ.. ನೀವು ಹೇಳುವ ಪ್ರತಿಯೊಂದು ಮಾತು ಅಮೋಘ ಹಾಗೂ ನೆನಪುಗಳ ರಾಶಿ ಸದಾ ಮತ್ತೆ ಮತ್ತೆ ನೆನಪಾಗುತ್ತದೆ ತಮ್ಮ ಈ ಲೇಖನ
    ಬಹಳ ಆನಂದವನ್ನು ನೀಡಿದೆ.. 👍👍👍 ದಾವಣಗೆರೆಯ ಎಲ್ಲಾ ಪಂಗಡದ ಜನರಲ್ಲಿ ಕೇಳುವುದು ಇಷ್ಟೇ ದಾವಣಗೆರೆ ಎಂಬ ಸೌಂದರ್ಯವನ್ನು ಹಾಗೂ ಅದರ ಸಾಂಸ್ಕೃತಿಕ ಪರಂಪರೆಯನ್ನು ಯಾರು ಕಳೆದುಕೊಳ್ಳಬಾರದು ಅದು ಹೋಯಿತಂದರೆ ದಾವಣಗೆರೆ ಹೋದಂತೆ….. ದಾವಣಗೆರೆ ಸಂಸ್ಕೃತಿಯ ವಿಶಿಷ್ಟ ಅಲ್ಲಿ ಬೆಳೆದವರು ಎಲ್ಲೆಲ್ಲೂ ಬೆಳಗುತ್ತಾರೆ… 🙏🙏🙏🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X