ಆತ ಹುಟ್ಟುವ 18 ವರ್ಷಗಳಿಗೆ ಮೊದಲು ಅಂದರೆ 1971ರಲ್ಲಿ ರೋಹಿತ್‌ನ ಧಾರುಣ ಜೀವನ ಕತೆ ಆರಂಭವಾಗುತ್ತದೆ
“ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಹೀಗೆ- ಬರೆದು ಕೊನೆಯುಸಿಳೆದವನು ರೋಹಿತ್ ವೇಮುಲಾ. ಆದರೀಗ ವೇಮುಲಾ ದಲಿತನೇ ಅಲ್ಲ ಎಂಬ ಷರವನ್ನು ಬರೆದುಬಿಟ್ಟಿದೆ ಪ್ರಭುತ್ವ.
“ರೋಹಿತ್ ವೇಮುಲಾ ಅವರು ದಲಿತ ಜಾತಿಗೆ ಸೇರಿದವರಲ್ಲ. ತಮ್ಮ ನಿಜವಾದ ಗುರುತು ಎಲ್ಲಿ ಬಯಲಾಗುತ್ತದೆಯೋ ಎಂಬ ಆತಂಕದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇಮುಲಾ ಅವರು 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರಿಗೆ ಹಲವು ಸಮಸ್ಯೆಗಳಿದ್ದವು. ಅವು ಆತ್ಮಹತ್ಯೆಗೆ ಪ್ರೇರೇಪಿಸಿವೆ. ತಾವು ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂಬುದು ಅವರಿಗೂ ಗೊತ್ತಿತ್ತು. ಎಸ್ಸಿ ಪ್ರಮಾಣ ಪತ್ರವನ್ನು ಅವರ ತಾಯಿಯೇ ಮೇಮುಲಾನಿಗೆ ಕೊಡಿಸಿದ್ದರು. ಇದು ಬಹಿರಂಗವಾದರೆ ಹಲವು ಸಂಕಷ್ಟಗಳು ಎದುರಾಗುತ್ತವೆ ಎಂದು ಅವರು ನಿರಂತರ ಭಯದಲ್ಲಿದ್ದರು. ತಾವು ಪಡೆದ ಶೈಕ್ಷಣಿಕ ಪದವಿಗಳು ವ್ಯರ್ಥವಾಗುತ್ತವೆ, ಜೊತೆಗೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಚಿಂತಿತರಾಗಿದ್ದರು” ಎಂಬ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆ ಮೂಲಕ ವೇಮುಲಾನನ್ನು ಮತ್ತೊಮ್ಮೆ ಇರಿಯಲಾಗಿದೆ!
ರೋಹಿತ್ ವೇಮುಲಾನ ಬದುಕಿನ ಪಥ ಎದೆ ಕಲಕುತ್ತದೆ. ಅವನ ಸುತ್ತ ಜಾತಿವಾದಿ ಪ್ರಭುತ್ವ ಸೃಷ್ಟಿಸಿದ ನೋವುಗಳು ಅಪಾರ. ಆತ ಹುಟ್ಟುವ 18 ವರ್ಷಗಳಿಗೆ ಮೊದಲು ಅಂದರೆ 1971ರಲ್ಲಿ ರೋಹಿತ್‌ನ ಧಾರುಣ ಜೀವನ ಕತೆ ಆರಂಭವಾಗುತ್ತದೆ.
ರೋಹಿತ್ ತಾಯಿ ರಾಧಿಕಾ ವೇಮುಲಾ ಅವರು ದಲಿತ ಕಾರ್ಮಿಕ ದಂಪತಿಯ ಮಗಳಾಗಿ ಜನಿಸಿದವರು. ಮಾಲಾ ಸಮುದಾಯಕ್ಕೆ ಸೇರಿದ ರಾಧಿಕಾರನ್ನು ದತ್ತು ತೆಗೆದುಕೊಂಡವರು ಅಂಜನಿ ದೇವಿ. ಅವಿಭಜಿತ ಆಂಧ್ರಪ್ರದೇಶದಲ್ಲಿ ಒಬಿಸಿ ಪಟ್ಟಿಯಲ್ಲಿನ ವಡ್ಡರ್ ಸಮುದಾಯಕ್ಕೆ ಸೇರಿದ ಅಂಜನಿದೇವಿಯವರ ಮನೆಯಲ್ಲಿ ಬೆಳೆದ ರಾಧಿಕಾರ ಬದುಕೇನೂ ಸುಖದಾಯಕವಾಗಿರಲಿಲ್ಲ. ಮನೆಗೆಲಸದವಳಂತೆ ಅಂಜನಿ ದೇವಿ ಆ ಮಗುವನ್ನು ನಡೆಸಿಕೊಂಡರು ಅಂತ ವರದಿಗಳು ಹೇಳುತ್ತವೆ.
ವಡ್ಡರ್ ಸಮುದಾಯಕ್ಕೆ ಸೇರಿದ ಮಣಿಯವರಿಗೆ ರಾಧಿಕಾರನ್ನು 14ನೇ ವಯಸ್ಸಿನಲ್ಲಿ ಮದುವೆ ಮಾಡಲಾಯಿತು. ಮೂವರು ಮಕ್ಕಳು ಜನಿಸಿದರು. ಆದರೆ ಗಂಡನಿಗೆ ರಾಧಿಕಾರ ನಿಜವಾದ ಜಾತಿ ತಿಳಿದ ಮೇಲೆ ಪರಿಸ್ಥಿತಿ ಬದಲಾಯಿತು. ಹೆಂಡತಿಗೆ ಕಿರುಕುಳ ನೀಡಲು ಶುರು ಮಾಡಿದ. ಗಂಡನನ್ನು ತೊರೆದ ರಾಧಿಕಾ ಮತ್ತೆ ತನ್ನ ಮಲತಾಯಿಯ ಮನೆಗೆ ಬಂದರು. ಮತ್ತದೇ ನಿಂದನೆ, ಕಿರುಕುಳ. ಜಾತಿ ವ್ಯವಸ್ಥೆಯ ಅಗಾಧ ನೋವನ್ನು ಎದೆಯಲ್ಲಿಟ್ಟುಕೊಂಡಿದ್ದ ವೇಮುಲಾ, “ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಎಂದು ಡೆತ್‌ನೋಟ್‌ನಲ್ಲಿ ಬರೆದ. ಆತ ಅಸಮಾನತೆಗಳನ್ನು ಕಂಡು ಅಸಹಾಯಕನಾಗಿದ್ದ. ಬಿಎಸ್ಸಿ ಪದವಿಧರನಾಗಿದ್ದ ವೇಮುಲಾ, ಹೈದ್ರಾಬಾದ್ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಎದುರಿಸಿದ ಸರಣಿ ನೋವುಗಳು ಆತನನ್ನು ಆತ್ಮಹತ್ಯೆಯತ್ತ ದೂಡಿದ್ದವು.
“ನಾನು ವಿಜ್ಞಾನದ ಬರಹಗಾರ ಆಗಬೇಕೆಂದುಕೊಂಡಿದ್ದೆ, ವಿಜ್ಞಾನ ಲೇಖಕ ಕಾರ್ಲ್ ಸಗಾನನ ಹಾಗೆ. ಆದರೆ ಕೊನೆಗೆ, ಇದೊಂದು ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು” ಎಂದು ಡೆತ್‌ನೋಟ್ ಬರೆದಿಟ್ಟ ರೋಹಿತ್ ವೇಮುಲಾ ಕೊನೆಯುಸಿರೆಳೆದದ್ದು ಜನವರಿ 17ರಂದು. ಅಂದರೆ ಇಲ್ಲಿಗೆ ಎಂಟು ವರ್ಷಗಳಾದವು.
ವೇಮುಲಾನ ಸಾವಿಗೆ ಯಾರು ಕಾರಣ? ಆತ ವಿದ್ಯಾರ್ಥಿಯಾಗಿ ಅನುಭವಿಸಿದ ಕಿರುಕುಳಗಳೇನು?- ಇವೆಲ್ಲವೂ ಬಿಜೆಪಿ ರಾಜಕಾರಣದಲ್ಲಿ ದಲಿತ ವಿದ್ಯಾರ್ಥಿಗಳ ನಿಜಸ್ಥಿತಿಗೆ ಹಿಡಿದ ಕನ್ನಡಿಯಂತೆ ಕಾಣುತ್ತಿವೆ.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಓದುತ್ತಾ ಬೆಳೆದ ರೋಹಿತ್, ಹೈದ್ರಾಬಾದ್ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಕಳೆದಿರಲಿಲ್ಲ. ಇತ್ತ ವಿ.ವಿಯಲ್ಲಿದ್ದ ’ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್’ನ, ಅಂದರೆ ಎಎಸ್‌ಎಯ ಸಕ್ರಿಯ ಕಾರ್ಯಕರ್ತನಾಗಿದ್ದ ವೇಮುಲಾ, ಈ ಸಂಘಟನೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಗಮನ ಸೆಳೆದಿದ್ದ. ಅಂಬೇಡ್ಕರ್ ವಿಚಾರಧಾರೆಗಳಿಂದ ಮುನ್ನುಗ್ಗುತ್ತಿದ್ದ ಎಎಸ್‌ಎ ವಿರುದ್ಧ ಬಿಜೆಪಿ ಸ್ಟುಡೆಂಟ್ ವಿಂಗ್ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಂದರೆ ’ಎಬಿವಿಪಿ’ ಹಲ್ಲು ಮಸೆಯುತ್ತಿತ್ತು. ಆರ್‌ಎಸ್‌ಎಸ್ ಮುಖವಾದ ಮೋದಿಯವರು ಅಧಿಕಾರಕ್ಕೇರಿದ ಮೇಲೆ ಎಬಿವಿಪಿಯವರಿಗೆ ಎಲ್ಲಿಲ್ಲದ ಶಕ್ತಿ ಬಂದಂತಾಯ್ತು. ಜಾತಿ ಮುಕ್ತ ಸಮಾಜದ ಕನಸು ಎಎಸ್‌ಎಯದ್ದಾಗಿದ್ದರೆ, ಹಿಂದೂರಾಷ್ಟ್ರ ಅಂತ ಎಬಿವಿಪಿ ಕೂತಿತ್ತು. ವಿವಿಯಲ್ಲಿ ಜಾತಿ ಶೋಷಣೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪರವಾಗಿ ರೋಹಿತ್ ವೇಮುಲ ದನಿ ಎತ್ತಿದ. ರೋಹಿತನಿಗೆ ವಿದ್ಯಾರ್ಥಿಗಳ ಬೆಂಬಲವೂ ದೊರಕಲಾರಂಭಿಸಿತು. ದನದ ಹೆಸರಲ್ಲಿ ನಡೆಯುವ ಮಾಬ್ ಲಿಂಚಿಂಗ್ ಮತ್ತು ಮರಣದಂಡನೆ ಶಿಕ್ಷೆ ವಿರುದ್ಧ ಮಾತನಾಡಿದ್ದ.
ಎಎಸ್‌ಎ ಹೀಗೆ ಸಮಸಮಾಜದ ಕನಸು ಕಾಣುತ್ತಿರುವುದನ್ನು ಸಹಿಸದ ಎಬಿವಿಪಿ ಮುಖಂಡ ಸುಶೀಲ್ ಕುಮಾರ್ 2015ರ ಆಗಸ್ಟ್ 3ರಂದು ಮಾಡಿದ ಪೋಸ್ಟ್‌ನಲ್ಲಿ ಎಎಸ್‌ಎ ಸಂಘಟನೆಯವರನ್ನು ಗೂಂಡಾಗಳೆಂದು ಕರೆದ. ಈ ಕುರಿತು ಸ್ಪಷ್ಟನೆ ಕೊಡಬೇಕೆಂದು ಎಎಸ್‌ಎ ಸದಸ್ಯರು ಆಗ್ರಹಿಸಿದರು. ಎಬಿವಿಪಿ ಮಾಡಿದ್ದ ಗಲಾಟೆಯನ್ನು ಎಎಸ್‌ಎ ಖಂಡಿಸಿದ್ದರಿಂದ ಹೀಗೆ ಪೋಸ್ಟ್ ಹಾಕಿದ್ದೆ ಎಂದು ಸುಶೀಲ್ ಕುಮಾರ್ ಒಪ್ಪಿಕೊಂಡಿದ್ದ. ಮಾತಿಗೆ ಮಾತು ಬೆಳೆದು ಸುಶೀಲ್‌ಕುಮಾರ್ ಕೊನೆಗೆ ಕ್ಷಮೆಯಾಚಿಸಿದ. ಇಲ್ಲಿಗೆ ಪ್ರಕರಣ ಮುಗಿದು ಹೋಗಿತ್ತು ಎನ್ನುವಾಗ ಬಿಜೆಪಿ ಮುಖಂಡರು ತಲೆಹಾಕಿದರು. ಆಮೇಲೆ ಆದದ್ದು ನಾವು ನೀವು ಊಹಿಸಲಾಗದ ಹಿಂಸೆ.
ಮಾರನೇ ದಿನ ಅಂದರೆ ಆಗಸ್ಟ್ 4ರಂದು ನಡೆದ ಘಟನೆ. ಸುಶೀಲ್ ಕುಮಾರ್ ಅಣ್ಣ ಹಾಗೂ ಬಿಜೆಪಿಯ ಯುವ ಮುಖಂಡ ಸೇರಿ ಸುಶೀಲ್‌ನನ್ನು ಒಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸಿ ಒಂದು ಡ್ರಾಮಾ ಶುರು ಮಾಡಿದರು. ಈ ಮೊದಲೇ ಸುಶೀಲ್‌ನಿಗೆ ಅಪೆಂಡಿಸೈಟಿಸ್ ಕಾಯಿಲೆ ಇತ್ತು. ಆ ಕಾರಣ ಆಪರೇಷನ್ ಮಾಡಿಸಲಾಯ್ತು. ಆದರೆ ಇದನ್ನೇ ನೆಪವಾಗಿಟ್ಟುಕೊಂಡ ಬಿಜೆಪಿ ಮುಖಂಡರು, “ಎಎಸ್‌ಎ ಸದಸ್ಯರು ಸುಶೀಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲಿ ನಡೆಸಿದ್ದಾರೆ. ಹೊಟ್ಟೆಗೆ ಪೆಟ್ಟಾಗಿರುವುದರಿಂದಾಗಿ ಆಪರೇಷನ್ ಮಾಡಿಸಬೇಕಾಗಿದೆ” ಎಂದು ಸುಳ್ಳು ಸುದ್ದಿ ಹರಿಬಿಟ್ಟರು. ಪೊಲೀಸರಿಗೂ ದೂರು ಕೊಟ್ಟರು. ಈ ನಕಲಿ ಪ್ರಕರಣದ ವಿರುದ್ಧ ಎಎಸ್‌ಎ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೇಸ್ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಅದೇ ದಿನ ಬಿಜೆಪಿ ಎಂಎಲ್‌ಸಿ ’ರಾಮಚಂದ್ರ ರಾವ್’ ತಮ್ಮ ಹಿಂಬಾಲಕ ಪಡೆಯೊಂದಿಗೆ ಯೂನಿವರ್ಸಿಟಿಗೆ ನುಗ್ಗಿ, “ಎಎಸ್‌ಎಯ ’ದೇಶದ್ರೋಹಿ’ಗಳನ್ನು ವಿವಿಯಿಂದ ಹೊರಹಾಕಬೇಕು” ಎಂದು ಉಪಕುಲಪತಿ ಪ್ರೊ. ಆರ್.ಪಿ.ಶರ್ಮಾ ಅವರಿಗೆ ಧಮುಕಿ ಹಾಕಿ ದಾಂಧಲೆ ನಡೆಸಿದರು. ಕುಲಪತಿ ಶರ್ಮಾ ಅವರು, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾಜಿ ಉಪಕುಲಪತಿ ಪ್ರೊ. ಅಲೋಕ್ ಪಾಂಡೆ ನೇತೃತ್ವದಲ್ಲಿ ಒಂದು ಸಮಿತಿ ನೇಮಿಸಿದರು. ಆಗಸ್ಟ್ 12ರಂದು ತನಿಖಾ ಸಮಿತಿ ವರದಿ ನೀಡಿತು. ಸುಶೀಲ್ ಕುಮಾರ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಅನುಪಮಾ ಅವರ ಸಾಕ್ಷಿಯನ್ನು ಪಡೆದಿದ್ದ ಸಮಿತಿ, ಹಲ್ಲೆ ನಡೆದಿರುವ ಆರೋಪವನ್ನು ತಳ್ಳಿಹಾಕಿತು.
ಇದರಿಂದ ಎಬಿವಿಪಿ, ಬಿಜೆಪಿ ಮುಖಂಡರಿಗೆ ಮುಖಭಂಗವಾಗಿತ್ತು. ಹೈದ್ರಾಬಾದ್‌ನಿಂದ ದಿಲ್ಲಿಯವರೆಗೆ ಪ್ರಕರಣ ಹೋಗಿದ್ದೇ ಆಗ. ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಆಂಧ್ರಪ್ರದೇಶದ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆದ ಎಬಿವಿಪಿ, ಬಿಜೆಪಿ ಮುಖಂಡರು ಎಎಸ್‌ಎ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ದತ್ತಾತ್ರೇಯ, ’ಎಎಸ್‌ಎಯ ದಲಿತ ವಿದ್ಯಾರ್ಥಿಗಳು ವಿವಿಯಲ್ಲಿ ನಡೆಸುತ್ತಿರುವ ತೀವ್ರಗಾಮಿ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಚಿವರಾಗಿದ್ದ ಸ್ಮೃತಿ ಇರಾನಿಯವರಿಗೆ ಪತ್ರ ಬರೆದರು. ಸ್ಮೃತಿ ಇರಾನಿಯವರು ಇದೇ ಬೇಕಿತ್ತು ಅನಿಸುತ್ತದೆ. ಮೇಲಿಂದ ಮೇಲೆ ಐದು ಪತ್ರಗಳನ್ನು ವಿಶ್ವವಿದ್ಯಾನಿಲಯಕ್ಕೆ ಇರಾನಿ ಬರೆದುಬಿಟ್ಟರು. ದಲಿತ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಕರೆದಿದ್ದ ಸ್ಮೃತಿ ಇರಾನಿ, “ಇವರನ್ನು ವಿವಿಯಿಂದ ಹೊರಹಾಕಿ, ಸ್ಕಾಲರ್‌ಶಿಪ್ ತಡೆಹಿಡಿಯಬೇಕು” ಎಂದು ಪತ್ರಗಳಲ್ಲಿ ಸೂಚಿಸಿದ್ದರು.
ಇಬ್ಬರು ಬಿಜೆಪಿ ನಾಯಕರು ತಲೆಹಾಕಿದ ನಂತರ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಬೇರೊಂದು ಸ್ವರೂಪ ಪಡೆಯಿತು. ವಿ.ವಿಗೆ ಹೊಸದಾಗಿ ಕುಲಪತಿಯಾಗಿ ನೇಮಕಗೊಂಡಿದ್ದ ಅಪ್ಪಾರಾವ್ ಪೊಡಿಲೆ, ಈ ಹಿಂದೆ ಪಾಂಡೆಯವರು ನೀಡಿದ್ದ ತನಿಖಾ ವರದಿಯನ್ನು ಮೂಲೆಗೆ ತಳ್ಳಿ ಹೊಸ ಸಮಿತಿ ರಚಿಸಿದರು. ಹೊಸ ಸಮಿತಿ ಯಾವ ತನಿಖೆಯನ್ನೂ ಮಾಡದೆ ಸುಶೀಲ್ ಕುಮಾರ್ ಮೇಲೆ ಹಲ್ಲೆ ನಡೆದಿರುವುದು ನಿಜ, ದಲಿತ ವಿದ್ಯಾರ್ಥಿಗಳನ್ನು ವಿ.ವಿಯಿಂದಲೇ ಸಸ್ಪೆಂಡ್ ಮಾಡಬೇಕು ಎಂದು ಶಿಫಾರಸ್ಸು ಮಾಡಿತು. ಇದಾದ ಐದು ದಿನಕ್ಕೆ ರೋಹಿತ್ ವೇಮುಲ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು. ವಿವಿಯೊಳಗೆ ಬಿಜೆಪಿ ರಾಜಕಾರಣ ಮಾಡುತ್ತಿರುವುದನ್ನು ಗಮನಿಸುತ್ತಿದ್ದ ದಲಿತೇತರ ವಿದ್ಯಾರ್ಥಿಗಳೂ ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡಸಿದರು. ಒತ್ತಡಕ್ಕೆ ಮಣಿದ ಕುಲಪತಿ ಮತ್ತೊಂದು ತನಿಖೆ ನಡೆಸುವುದಾಗಿ ತಿಳಿಸಿ 2015ರ ಸೆಪ್ಟೆಂಬರ್ 11ರಂದು ದಲಿತ ವಿದ್ಯಾರ್ಥಿಗಳ ಅಮಾನತು ವಾಪಸ್ ಪಡೆದರು.
ರಚನೆಯಾದ ಹೊಸ ಸಮಿತಿಯು ಕೇವಲ ಸುಶೀಲ್ ಕುಮಾರ್ ಮತ್ತು ಪೊಲೀಸರ ಹೇಳಿಕೆ ಪಡೆದು ವರದಿ ನೀಡಿತು. ಸುಶೀಲ್ ಮೇಲೆ ಹಲ್ಲೆಯಾಗಿಲ್ಲ ಎಂದೇ ಸಮಿತಿ ಹೇಳಿತ್ತು. ಯಾರ ಮೇಲೂ ಕ್ರಮ ಕೈಗೊಳ್ಳಲು ಅದು ಶಿಫಾರಸ್ಸು ಮಾಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ 2015ರ ಡಿಸೆಂಬರ್ 12ರಂದು ಕುಲಪತಿ ಅಪ್ಪಾರಾವ್ ’ಎಎಸ್‌ಎ’ನ ಐದು ಜನ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ವಿ.ವಿಯ ವಿದ್ಯಾರ್ಥಿನಿಲಯದಿಂದ ಅಮಾನತುಗೊಳಿಸಿ ಆದೇಶಿಸಿದರು. ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದರು. ನಕಲಿ ದೂರು ನೀಡಿ ರದ್ಧಾಂತ ಮಾಡಿದ್ದ ’ಎಬಿವಿಪಿ’ಯ ಸುಶೀಲ್ ಕುಮಾರನ ಮೇಲೆ ಯಾವುದೇ ಕ್ರಮ ಜರುಗಿಸಲೇ ಇಲ್ಲ.
ನೊಂದ ರೋಹಿತ್ ವೇಮುಲಾ ಬಾಬಾ ಸಾಹೇಬರ ಪೋಟೋ ಹಿಡಿದುಕೊಂಡು ತನ್ನ ಕೊಠಡಿಯಿಂದ ನಾಲ್ವರು ಸ್ನೇಹಿತರೊಂದಿಗೆ ಹೊರಬಿದ್ದ. ಕ್ಯಾಂಪಸ್ಸಿನೊಳಗೆ ’ವೆಲಿವಾಡ’ ಟೆಂಟ್ ಹಾಕಿಕೊಂಡು ಅನ್ಯಾಯವನ್ನು ಪ್ರಶ್ನಿಸಿದ. ವೆಲಿವಾಡ ಅಂದರೆ ಭಾರತದ ಹಿಂದೂ ಮೇಲ್ಜಾತಿಗಳು ದಲಿತರನ್ನು ಪ್ರತ್ಯೇಕವಾಗಿ ಇರಿಸುವ ವಾಸಸ್ಥಳ. ಒಂದು ತಿಂಗಳು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಕುಲಪತಿಯ ಮನಸ್ಸು ಕರಗಲೇ ಇಲ್ಲ. ವೇಮುಲಾ ಆರ್ಥಿಕ ಮುಗ್ಗಟ್ಟು ಮತ್ತು ಪ್ರಭುತ್ವದ ಕಿರುಕುಳದಿಂದಾಗಿ ಕುಗ್ಗಿಹೋಗಿದ್ದ. 2016ರ ಜನವರಿ 17ರಂದು ಸ್ನೇಹಿತನ ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಶರಣಾಗಿಬಿಟ್ಟ. ವಿಜ್ಞಾನಿಯಾಗುವ ಕನಸು ಕಂಡ ರೋಹಿತ್ ವೇಮುಲಾ ನಕ್ಷತ್ರವಾಗಿ ಕಳೆದು ಹೋಗಿದ್ದು ಹೀಗೆ. ಖಂಡಿತ ಇದು ಕೇವಲ ಆತ್ಮಹತ್ಯೆಯಂತೂ ಅಲ್ಲ, ಇದೊಂದು ಸಾಂಸ್ಥಿಕ ಕೊಲೆ.
ಆರ್‌ಎಸ್‌ಎಸ್, ಬಿಜೆಪಿ, ಎಬಿವಿಪಿ ನೀಡಿದ ಕಿರುಕುಳದಿಂದಾಗಿ ಸಾವಿನ ಕದವನ್ನು ರೋಹಿತ್ ತಟ್ಟಿದ. ಆತ ದಲಿತನೇ ಅಲ್ಲ ಎಂದು ಬಿಜೆಪಿ, ಸಂಘಪರಿವಾರ ಮೊದಲಿನಿಂದಲೂ ವಾದಿಸುತ್ತಾ ಬಂದಿತ್ತು. ಹೃದಯ ಕಲಕುವ ಪತ್ರ ಬರೆದು ಶಾಂತವಾದ ವೇಮುಲಾನ ಶವಕ್ಕೆ ಮತ್ತೊಮ್ಮೆ ಚುಕ್ಕುವ ರೀತಿ, “ಆತ ದಲಿತನೇ ಅಲ್ಲ” ಎಂದು ವರದಿ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ ವೇಮುಲಾನ ಕುಟುಂಬ ಮನವಿ ಸಲ್ಲಿಸಿದೆ.
ರೋಹಿತ್ ಪ್ರಕರಣಕ್ಕಷ್ಟೇ ದಲಿತ ವಿದ್ಯಾರ್ಥಿಗಳ ಸಾವುಗಳು ನಿಲ್ಲಲಿಲ್ಲ. ಐಐಟಿಗಳಲ್ಲಿ ಪ್ರತಿಷ್ಟಿತ ವಿವಿಗಳಲ್ಲಿ ದಲಿತ ವಿದ್ಯಾರ್ಥಿಗಳು ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗುತ್ತಲೇ ಇದ್ದಾರೆ. ಮೋದಿ ಕಾಲದಲ್ಲಿ ಭಾರತ ವಿಶ್ವಗುರುವಾಗಿದೆ ಎಂದು ಪ್ರಚಾರ ಮಾಡುತ್ತಿರುವವರಿಗೆ ’ವಿಶ್ವಗುರು ಭಾರತ’ದ ಇಂತಹ ಇನ್ನೆಷ್ಟು ಕತೆಗಳನ್ನು ಹೇಳಲಿ?

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.