ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ಅಧಿರ್ ಚೌಧರಿಯವರನ್ನು ಒಳಗೊಂಡ ಸಮಿತಿಯು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರನ್ನು ಮಂಗಳವಾರ ಮುಖ್ಯ ಲೋಕಪಾಲರಾಗಿ ನೇಮಕ ಮಾಡಿದ್ದಾರೆ.
13 ಮೇ 2016ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡು 29, ಜುಲೈ 2022ರಂದು ನಿವೃತ್ತರಾದ ಖಾನ್ವಿಲ್ಕರ್ ಅವರ ಲೆಗಸಿಯನ್ನು ಸ್ವಲ್ಪ ಅವಲೋಕಿಸೋಣವೇ?
ಏಕೆಂದರೆ ಈ ಆರು ವರ್ಷಗಳ ಅವಧಿಯಲ್ಲಿ ಬಹು ಮುಖ್ಯ ಪ್ರಕರಣಗಳು ಇವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
1. ಜೂನ್ 2018ರಂದು ಮೊದಲ ಬ್ಯಾಚ್‌ನಲ್ಲಿ, ಆಗಸ್ಟ್ 2018ರಂದು ಎರಡನೇ ಬ್ಯಾಚ್‌ನಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ನೆಪದಲ್ಲಿ ನ್ಯಾಯವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಚಿಂತಕರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿದರು.
ಇದನ್ನು ಪ್ರಶ್ನಿಸಿ ರೊಮಿಲಾ ಥಾಪರ್ ಹಾಗೂ ಇತರರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು ಮತ್ತು ತನಿಖೆಗಾಗಿ ಎಸ್‌ಐಟಿ ನೇಮಿಸಬೇಕೆಂದು ಒತ್ತಾಯಿಸಿದರು. ಇವರ ಪರವಾಗಿ ಇಂದಿರಾ ಜೈಸಿಂಗ್, ದುಷ್ಯಂತ್ ದವೆ ಮುಂತಾದ ನ್ಯಾಯವಾದಿಗಳು ವಕಾಲತ್ತು ವಹಿಸಿದ್ದರು.
ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಚಂದ್ರಚೂಡ್, ಖಾನ್ವಿಲ್ಕರ್ ಒಳಗೊಂಡ ವಿಭಾಗೀಯ ಪೀಠದ ಮುಂಚೆ ಇದರ ವಿಚಾರಣೆ ಪ್ರಾರಂಭವಾಯಿತು. ನಂತರ ಪೀಠವು ಈ ಬಂಧನದ ಕುರಿತು ಕಳವಳ ವ್ಯಕ್ತಪಡಿಸಿ ಬಂಧಿತರನ್ನು ಗೃಹ ಬಂಧನದಲ್ಲಿಡಬೇಕು, ಮತ್ತು ನ್ಯಾಯಬದ್ಧವಾದ ತನಿಖೆ ನಡೆಸಬೇಕು ಎಂದು ಹೇಳಿತು.
ಆದರೆ ಮರುದಿನ ಖಾನ್ವಿಲ್ಕರ್ ಅವರು ಪ್ರತ್ಯೇಕವಾಗಿ ತಮ್ಮ ತೀರ್ಪು ಓದಿ ಎಸ್‌ಐಟಿ ತನಿಖೆಯನ್ನು ನಿರಾಕರಿಸಿದರು, ಬೇಲ್ ಕೊಡಲು ಮತ್ತು ಸಾಕ್ಷ್ಯಗಳ ಫೋರೆನ್ಸಿಕ್ ಪರೀಕ್ಷೆಗೂ ನಿರಾಕರಿಸಿದರು. ಅಚ್ಚರಿಯೆಂದರೆ ಮೊದಲು ಪೀಠದ ಪರವಾಗಿ ಸಹಿ ಹಾಕಿದ್ದ ಮಿಶ್ರಾ ಅವರು ಮನಬದಲಿಸಿ ಖಾನ್ವಿಲ್ಕರ್ ತೀರ್ಪಿನ ಪರವಾಗಿ ಸಹಿ ಹಾಕಿದರು. ಎಸ್‌ಐಟಿ ತನಿಖೆಗೆ ಸಮ್ಮತಿಸಿದ, ಪೊಲೀಸರ ತನಿಖೆಯ ವಿಧಾನದಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ ಚಂದ್ರಚೂಡ್ ಅವರದು ಭಿನ್ನಮತೀಯ ತೀರ್ಪಾಗಿ ಪರಿಗಣಿಸಲಾಯಿತು.
ಖಾನ್ವಿಲ್ಕರ್ ಅವರು ಆರೋಪಿಗಳು ತನಿಖೆಯ ವಿಧಾನವನ್ನು ಸೂಚಿಸಬಾರದು ಎಂದು ಎಸ್‌ಐಟಿ ತನಿಖೆ ಮತ್ತು ಗೃಹ ಬಂಧನವನ್ನು ತಿರಸ್ಕರಿಸಿದರು. ಪೋಲೀಸರು excercised mala fide power ಎನ್ನುವ ಬಲವಾದ ಆರೋಪವನ್ನು ತಳ್ಳಿ ಹಾಕಿದರು. ಇವರ ಈ ನಡೆ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ನ್ಯಾಯಾಂಗದ ಇತಿಹಾಸದಲ್ಲಿ not fair ಮತ್ತು ಅನುಮಾನಾಸ್ಪದ ಎಂದು ಪರಿಗಣಿಸಲಾಗುತ್ತದೆ.
2. 2018ರಲ್ಲಿ ಜಹೂರ್ ಅಹ್ಮದ್ ಶಾ ವತಾಲಿ ಪ್ರಕರಣದಲ್ಲಿ ಎನ್‌ಐಎ ಸಂಸ್ಥೆ ಅವರ ಮೇಲೆ ಯುಎಪಿಎ ಕಾಯ್ದೆ ಹೇರಿ ಬಂಧಿಸಿದ್ದರು. ಟ್ರಯಲ್ ಕೋರ್ಟ್ ಈ ಬಂಧನವನ್ನು ಪುರಸ್ಕರಿಸಿದರೆ ದೆಹಲಿ ಹೈಕೋರ್ಟ್ ಸೂಕ್ತ ಸಾಕ್ಷಾಧಾರಗಳಿಲ್ಲ, ಅದನ್ನು manipulate ಮಾಡಿರುವ ಸಾಧ್ಯತೆಗಳಿವೆ ಎಂದು ಹೇಳಿ ಬೇಲ್ ಮನವಿಯನ್ನು ಮಾನ್ಯ ಮಾಡಿತು. ಆದರೆ ಎಪ್ರಿಲ್ 2019ರಂದು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿ ಖಾನ್ವಿಲ್ಕರ್ ‘ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಸರಿಯಲ್ಲ, ತನಿಖಾ ಸಂಸ್ಥೆಯ ಸಾಕ್ಷಿಗಳನ್ನು ಸೂಕ್ತವಾಗಿ ಪರಿಗಣಿಸಬೇಕು’ ಎಂದು ಹೇಳಿ ಜಾಮೀನು ನಿರಾಕರಿಸಿದರು.
3. ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ವಿರೋಧಿಗಳ ಮೇಲೆ Witch hunt ಮಾಡುವುದಕ್ಕಾಗಿ ಫೆರಾ ಕಾಯ್ದೆಯನ್ನು (Foreign Contribution (Regulation) Act) ತಿದ್ದುಪಡಿ ಮಾಡಿದರು. ಈ ತಿದ್ದುಪಡಿಯನ್ನು ಖಾನ್ವಿಲ್ಕರ್ ಅವರು ಅನುಮೋದಿಸಿದರು. ಆಗ ನ್ಯಾಯವಾದಿ ಗೌತಮ್ ಭಾಟಿಯಾ ‘ಈ ತೀರ್ಪು ಪ್ರಭುತ್ವಕ್ಕೆ ಹೆಚ್ಚು ಅನುಕೂಲಕರ ಮತ್ತು ಪ್ರಜೆಗಳಿಗೆ ಕಡಿಮೆ’ ಎಂದು ಹೇಳಿದ್ದರು. ಇಂದು ಅಮ್ನೆಸ್ಟಿ, ಆಕ್ಸಫಮ್ ಮುಂತಾದ ಎನ್‌ಜಿಒಗಳ ಮೇಲೆ ಈ ಕಾಯ್ದೆ ಬಳಸಿಕೊಂಡು ನಡೆಯುತ್ತಿರುವ ಏಕಪಕ್ಷೀಯ ದಾಳಿಯನ್ನು ಕಂಡಾಗ ಖಾನ್ವಿಲ್ಕರ್ ಎಂತಹ ತೀರ್ಪು ಕೊಟ್ಟರು ಎಂದು ಗೊತ್ತಾಗುತ್ತದೆ.
4. ಪಿಎಂಎಲ್‌ಎ (Prevention of Money Laundering Act) ಮತ್ತು ಇಡಿ ಸಂಸ್ಥೆಗೆ ಮಾಡಿದ ತಿದ್ದುಪಡಿಯ ಕರಾಳ ಶಾಸನದ ವಿರುದ್ಧ ಸುಮಾರು 200 ಅರ್ಜಿಗಳು ದಾಖಲಾಗಿದ್ದವು. ಈ ತಿದ್ದುಪಡಿಯ ಅನುಸಾರ ಆರೋಪಿಗಳಿಗೆ ಎಫ್‌ಐಆರ್ ಪ್ರತಿ ಕೊಡುವ ಅಗತ್ಯವಿಲ್ಲ, ಆರೋಪಿಯನ್ನು ಬಂಧಿಸಿದ ತಕ್ಷಣ ಆತ ಅಪರಾಧಿ ಎಂದು ಪರಿಗಣಿಸುವುದು, ತಾನು ನಿರಪರಾಧಿ ಎಂದು ಸ್ವತಃ ಆರೋಪಿಯೆ ಸಾಬೀತುಪಡಿಸಬೇಕು ಮತ್ತು ಅಲ್ಲಿಯವರೆಗೂ ಬೇಲ್ ನಿರಾಕರಣೆ, ಎನ್ನುವಂತಹ ಕರಾಳ ಶಾಸನವನ್ನು ಖಾನ್ವಿಲ್ಕರ್ ಒಳಗೊಂಡ ಮೂವರು ಸದಸ್ಯರ ವಿಭಾಗೀಯ ಪೀಠ ಮಾನ್ಯ ಮಾಡಿತು.
5. ಜೂನ್ 2022ರಂದು 2002ರ ಗುಜರಾತ್ ಹತ್ಯಾಕಾಂಡದ ಜಫಾರಿ ಜೆಫ್ರಿ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ನಿರಪರಾಧಿ ಎಂದು ತೀರ್ಪು ಕೊಟ್ಟಿರುವುದನ್ನು ಪ್ರಶ್ನಿಸಿದ ಅರ್ಜಿಯನ್ನು ಖಾನ್ವಿಲ್ಕರ್ ವಜಾಗೊಳಿಸಿದರು. ಮತ್ತು ಅರ್ಜಿದಾರರ ಉದ್ದೇಶವನ್ನು ಪ್ರಶ್ನಿಸಿದರು. ಇವರು ತೀರ್ಪು ಕೊಟ್ಟ ಮರುದಿನ ಗುಜರಾತ್ ಪೊಲೀಸರು ನ್ಯಾಯವಾದಿ ತೀಸ್ತಾ ಸೆಟಲ್ವಾಡ್ ಮತ್ತು ನಿವೃತ್ತ ಪೋಲೀಸ್ ಅಧಿಕಾರಿ ಶ್ರೀ ಕುಮಾರ್ ಅವರನ್ನು ಬಂಧಿಸಿದರು.
6. ತಮ್ಮ ನಿವೃತ್ತಿಗೆ ಹದಿನೈದು ದಿನಕ್ಕೂ ಮೊದಲು 14 ಜುಲೈ 2022ರಂದು ಖಾನ್ವಿಲ್ಕರ್ ಮತ್ತು ಪರ್ದೀವಾಲ ನೇತೃತ್ವದ ಪೀಠವು ದಾಂಟೇವಾಡದ 17 ಆದಿವಾಸಿಗಳ ಹತ್ಯೆಯನ್ನು ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದರು. ಮತ್ತು ಅರ್ಜಿದಾರ ಹಿಮಾಂಶು ಕುಮಾರ್ ಅವರಿಗೆ 5 ಲಕ್ಷ ದಂಡ ವಿಧಿಸಿದರು.
7. 2018ರಲ್ಲಿ ಆಧಾರ್ ಕಾರ್ಡ್ ನ ಮಾನ್ಯತೆಯನ್ನು ಪುರಸ್ಕರಿಸಿದ ಪೀಠದ ಭಾಗವಾಗಿದ್ದರು.
8. 2021ರಲ್ಲಿ ಪರಿಸರ ಸೂಕ್ಷ್ಮತೆಯನ್ನು ಉಲ್ಲಂಘಿಸುವ ಮತ್ತು ತೆರಿಗೆದಾರರ ಮೇಲೆ ಹೊರೆಯಾಗುವ ಹಾಗೂ ಸೂಕ್ತ ಸಮರ್ಥನೆಯಿಲ್ಲದ ಸೆಂಟ್ರಲ್ ವಿಸ್ತಾ ಯೋಜನೆಯನ್ನು (ಹೊಸ ಸಂಸತ್ ಭವನ) ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದರು.
9. 2018ರಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ಕೊಟ್ಟ ಪೀಠದ ಭಾಗವಾಗಿದ್ದ ಖಾನ್ವಿಲ್ಕರ್, ಒಂದು ವರ್ಷದ ನಂತರ ತಮ್ಮ ನಿಲುವು ಬದಲಿಸಿ ಈ ಪ್ರಕರಣವನ್ನು larger benchಗೆ ಮರು ಪರಿಶೀಲನೆಗೆ ವಹಿಸಬೇಕೆಂದು ಹೇಳಿದರು.
ಇದನ್ನು ಓದಿದ್ದೀರಾ? ಲೋಕಪಾಲ್ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇಮಕ
ತಮ್ಮ ವೃತ್ತಿ ಜೀವನದಲ್ಲಿ ಸದಾ ಪ್ರಭುತ್ವದ ಪರವಾಗಿ ತೀರ್ಪು ಕೊಡುತ್ತಾ, ಪ್ರಜೆಗಳ ಹಿತಾಸಕ್ತಿಯನ್ನು ಕಡೆಗಣಿಸಿದ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರಿಗೆ ಸೂಕ್ತ ಸ್ಥಾನಮಾನ ದೊರಕಿದೆಯಲ್ಲವೇ? ಉಫ್ ಬರೆಯುತ್ತಾ ಹೋದರೆ ಸುಸ್ತಾಗುತ್ತದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ತುಂಬಾ ಕಷ್ಟ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ