Go back Shobha | ಕ್ಷೇತ್ರದ ಜನರಿಗೇ ಬೇಡವಾದರೇ ಶೋಭಾ ಕರಂದ್ಲಾಜೆ ? ಷಡ್ಯಂತ್ರ ಮಾಡುತ್ತಿರುವವರು ಯಾರು?

Date:

ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಳೆದ ಬಾರಿಯೇ ಟಿಕೆಟ್‌ ಕೊಡಬಾರದು ಎಂಬ ಕೂಗು ಕ್ಷೇತ್ರದಲ್ಲಿ ಎದ್ದಿತ್ತು. “ಗೋ ಬ್ಯಾಕ್‌ ಶೋಭಾ” ಎಂಬ ಅಭಿಯಾನವನ್ನು ಕಾರ್ಯಕರ್ತರು ಮಾಡಿದ್ದರು. ಕ್ಷೇತ್ರಕ್ಕೆ ಬರಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪ ಅವರ ಮೇಲಿತ್ತು. ಆದರೆ ಪಕ್ಷ ಟಿಕೆಟ್‌ ಕೊಟ್ಟಿತ್ತು. ಮೋದಿಯವರ ಮುಖ ನೋಡಿ ಅಲ್ಲಿನ ಜನ ಗೆಲ್ಲಿಸಿದ್ದರು.

 

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಮುಂದಿನ ವಾರವೇ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಈ ಬಾರಿಯೂ ಬಹುಮತದ ನಿರೀಕ್ಷೆ ಇಟ್ಟುಕೊಂಡಿದೆ. ತಮ್ಮ ಕೊನೆಯ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಮುಂದಿನ ಅವಧಿಯಲ್ಲಿ ಏನೆಲ್ಲ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ಈ ಬಾರಿ 400 ಸ್ಥಾನದ ಗುರಿ ಹೊಂದಿರುವುದಾಗಿ ಈಗಾಗಲೇ ಬಿಜೆಪಿ ಪ್ರಚಾರದಲ್ಲಿ ತೊಡಗಿದೆ.

ಆದರೆ, ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ರಾಜ್ಯ ಬಿಜೆಪಿ ಪರಿಸ್ಥಿತಿ ಹೇಗಿದೆ? ಪ್ರಮುಖ ನಾಯಕರಿಗೆ ಟಿಕೆಟ್‌ ಸಿಗುತ್ತಾ ಎಂದು ನೋಡಿದರೆ ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರೇ ತಮ್ಮ ನಾಯಕರಿಗೆ Go back ಹೇಳುತ್ತಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಳೆದ ಬಾರಿಯೇ ಟಿಕೆಟ್‌ ಕೊಡಬಾರದು ಎಂಬ ಕೂಗು ಕ್ಷೇತ್ರದಲ್ಲಿ ಎದ್ದಿತ್ತು. “ಗೋ ಬ್ಯಾಕ್‌ ಶೋಭಾ” ಎಂಬ ಅಭಿಯಾನವನ್ನು ಕಳೆದ ಬಾರಿ ಕ್ಷೇತ್ರದ ಕಾರ್ಯಕರ್ತರು ಮಾಡಿದ್ದರು. ಕ್ಷೇತ್ರಕ್ಕೆ ಬರಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪ ಅವರ ಮೇಲಿತ್ತು. ಆದರೆ ಪಕ್ಷ ಟಿಕೆಟ್‌ ಕೊಟ್ಟಿತ್ತು. ಮೋದಿಯ ಮುಖ ನೋಡಿ ಬಿಜೆಪಿಯನ್ನು ಅಲ್ಲಿನ ಜನ ಗೆಲ್ಲಿಸಿದ್ದರು.

2021ರಲ್ಲಿ ಸದಾನಂದ ಗೌಡರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ ಮೋದಿ ಸರ್ಕಾರ ಅಚ್ಚರಿಯ ಬೆಳವಣಿಗೆಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಕೃಷಿ ಕಲ್ಯಾಣ ರಾಜ್ಯ ಸಚಿವೆ ಮಾಡಿತ್ತು. ಆದರೆ, ರಾಜ್ಯ ಬಿಜೆಪಿಯಲ್ಲಿ, ಕ್ಷೇತ್ರದ ಕಾರ್ಯಕರ್ತರಲ್ಲಿ ಅದು ಸಂಭ್ರಮ ತಂದಿರಲಿಲ್ಲ. ಒಂದೇ ಒಂದು ಅಭಿನಂದನಾ ಸಮಾರಂಭವೂ ನಡೆದಿರಲಿಲ್ಲ. ಅದಾಗಿ ಮೂರು ವರ್ಷ ಕಳೆದಿದೆ. ಶೋಭಾ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಕೋಮು ದ್ವೇಷದ ಹೇಳಿಕೆ ನೀಡುವುದು ಬಿಟ್ಟರೆ ತನ್ನ ಇರುವಿಕೆಯನ್ನು ತೋರಿಸಿಲ್ಲ. ಈ ಬಾರಿ ಮತ್ತೆ ಕಾರ್ಯಕರ್ತರೇ Go back ಎನ್ನುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೀನುಗಾರರ ಮುಖಂಡರು ಶೋಭಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವೀಡಿಯೊ ವೈರಲ್‌ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ, ಕ್ಷೇತ್ರದ ಅಭಿವೃದ್ದಿ ಮಾಡದಿರುವ ಬಗ್ಗೆ ಗಮನ ಸೆಳೆದಿದ್ದರು. ಈ ಮಧ್ಯೆ ಆ ಕಾರ್ಯಕರ್ತರು ಪ್ರಮೋದ್‌ ಮಧ್ವರಾಜ್‌ ಬಣದವರು, ಈ ಬಾರಿ ಮೀನುಗಾರರ ಸಮುದಾಯದ ಪ್ರಮೋದ್‌ ಮಧ್ವರಾಜ್‌ ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್‌ ಕೊಡಬೇಕು ಎಂಬ ಲಾಬಿ ಶುರುವಾಗಿದೆ. ಅದರ ಪ್ರತಿಫಲನ ಕಾರ್ಯಕರ್ತರ ಸಭೆಯಲ್ಲಿ ಆಗಿದೆ ಎಂಬ ಮಾತೂ ಕೇಳಿ ಬಂದಿದೆ. ಶೋಭಾ ವಿರುದ್ಧ ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್‌ ಅಭಿಯಾನ ನಡೆಸಲಾಗಿದೆ. ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು ಶೋಭಾ ಅವರಿಗೆ ಟಿಕೆಟ್‌ ಕೊಡದಂತೆ ಹೈಕಮಾಂಡ್‌ಗೆ ನೂರಾರು ಪತ್ರ ಬರೆಯುವ ಪತ್ರ ಚಳವಳಿಯನ್ನೂ ನಡೆಸಿದ್ದಾರೆ. ಒಂದು ಕಡೆ ಶೋಭಾ ಅವರ ಬಗ್ಗೆ ಇರುವ ಆಡಳಿತ ವಿರೋಧಿ ಅಲೆ, ಯಾರಿಗೂ ಸಿಗದಿರುವ ಅವಕಾಶ/ಅಧಿಕಾರ ಯಡಿಯೂರಪ್ಪ ಆಪ್ತೆಯಾಗಿರುವ ಕಾರಣಕ್ಕೆ ಶೋಭಾ ಅವರಿಗೆ ಸಿಕ್ಕಿದೆ ಎಂಬ ಒಂದು ಬಗೆಯ ಅಸಹನೆ ಎಲ್ಲವೂ ಒಟ್ಟಾಗಿ ಶೋಭಾ ಅವರಿಗೆ ಬಿಸಿ ಮುಟ್ಟುವಂತಾಗಿದೆ.

ಫೆ. 26ರಂದು ಹಿಂದೆ ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, “ಶೋಭಾ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಆದರೆ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳಲ್ಲ. ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈ ಸಲವೂ ಅವರ ಗೆಲುವು ನಿಶ್ಚಿತ” ಎಂದು ಹೇಳಿದ್ದರು. ಅದಕ್ಕೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿ ಟಿ ರವಿ ಬಾಸ್‌ ಈಸ್‌ ಆಲ್ವೇಸ್‌ ರೈಟ್‌ ಎಂದು ಹೇಳಿಕೆ ನೀಡಿ ಕುಹಕದ ನಗೆ ಬೀರಿದ್ದರು. ಅದೇ ದಿನ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಶೋಭಾ, “ನನ್ನ ವಿರುದ್ಧ ಯಾರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದು ಗೊತ್ತಿದೆ. ಹೈಕಮಾಂಡ್‌ಗೆ ಪತ್ರ, ಗೋ ಬ್ಯಾಕ್‌ ಪೋಸ್ಟರ್‌ಗಳ ಹಿಂದೆ ಯಾರಿದ್ದಾರೆ ಎಂಬುದು ನಾಯಕರಿಗೆ ಗೊತ್ತಿದೆ. ಹೈಕಮಾಂಡ್‌ ವರದಿ ತರಿಸಿಕೊಂಡಿದೆ. ರಾಜ್ಯ ಬಿಜೆಪಿ ನಾಯಕರು ನಿಷ್ಪಕ್ಷಪಾತ ವರದಿ ಕೊಡುವ ಭರವಸೆ ಇದೆ” ಎಂದು ಹೇಳಿದ್ದರು. ಕಾರ್ಯಕರ್ತರ ಸಭೆ ಮುಗಿಸಿದ ಶೋಭಾ ನೇರವಾಗಿ ಚಿಕ್ಕಮಗಳೂರಿನ ಜೈಲಿನಲ್ಲಿರುವ ಭಜರಂಗದಳ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದ್ದರು. “ಚುನಾವಣೆ ಸಮೀಪಿಸುತ್ತಿದ್ದಂತೆ ಸಚಿವರಿಗೆ ಜೈಲಿನಲ್ಲಿರುವ ಕಾರ್ಯಕರ್ತರ ನೆನಪಾಗಿದೆ” ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

2018ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಕಾಂಗ್ರೆಸ್‌ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ನಂತರ 2019ರಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಬಿಜೆಪಿಗೆ ಸೇರಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಕೊಟ್ಟಿರಲಿಲ್ಲ. ಹಾಗಾಗಿ ಲೋಕಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಸೋತು ಪಕ್ಷದ ಯಾವುದೇ ಹುದ್ದೆಯಲ್ಲಿಯೂ ಇಲ್ಲದೇ ಖಾಲಿ ಕೂತಿರುವ ಸಿ ಟಿ ರವಿ ಕೂಡಾ ಈ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇಬ್ಬರೂ ಸ್ಥಳೀಯರು, ಶೋಭಾ ಹೊರಗಿನವರು. ಈ ಬಾರಿ ಹೊರಗಿನವರಿಗೆ ಮಣೆ ಹಾಕೋದು ಬೇಡ ಎಂಬ ಒಂದು ವಾದವನ್ನು ತೇಲಿ ಬಿಡಲಾಗಿದೆ. ಇದರ ಜೊತೆಗೆ ಮಾಜಿ ಶಾಸಕ ಡಿ ಎನ್‌  ಜೀವರಾಜ್‌ ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.

ದೊಡ್ಡವರ ಕೃಪಾಕಟಾಕ್ಷವಿರುವ ಅದೃಷ್ಟವಂತೆ ಶೋಭಾ

ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಬಹಳ ಅದೃಷ್ಟವಂತೆ ಹೆಣ್ಣುಮಗಳು. ಪುತ್ತೂರಿನ ಕುಗ್ರಾಮದ ಬಡ ಕೃಷಿ ಕುಟುಂಬದ ಹೆಣ್ಣುಮಗಳು ಶೋಭಾ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘದ ಸಹವಾಸಕ್ಕೆ ಬಂದವರು. ಆ ಮೂಲಕ ಅನಂತಕುಮಾರ್‌, ಯಡಿಯೂರಪ್ಪನವರ ಸಂಪರ್ಕಕ್ಕೆ ಬಂದು 2004ರಲ್ಲಿ ಎಂಎಲ್‌ಸಿ ಆಗಿದ್ದ ಶೋಭಾ ಕರಂದ್ಲಾಜೆ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ಶಾಸಕಿಯಾದ ಮೊದಲ ಸಂಪುಟದಲ್ಲೇ ಗ್ರಾಮೀಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆಯಾದರು. ಅಷ್ಟೇ ಅಲ್ಲ ಹೆಣ್ಣುಮಕ್ಕಳಿಗೆ ಸಿಗದೇ ಇರುವ ಇಂಧನ ಖಾತೆಯನ್ನೂ ನಿರ್ವಹಿಸಿದಾಕೆ. ಯಡಿಯೂರಪ್ಪನವರ ಆಪ್ತೆಯಾಗಿದ್ದ ಕಾರಣ ಆಕೆ ಒಂದೇ ಅವಧಿಯಲ್ಲಿ ಮೂರು ಪ್ರಭಾವೀ ಖಾತೆಯನ್ನು ಪಡೆಯುವಂತಾಯಿತು. ಈ ಕಾರಣಕ್ಕೆ ಜಗದೀಶ್‌ ಶೆಟ್ಟರ್‌ ಅವರ ವಿರೋಧ ಎದುರಾಗಿತ್ತು. 2013 ರ ಚುನಾವಣೆಯಲ್ಲಿ ಎಸ್‌ ಟಿ ಸೋಮಶೇಖರ್‌ ಎದುರು ಸೋತ ನಂತರ ಒಂದೇ ವರ್ಷದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಂಡು ಸಂಸದೆಯಾದರು. 2019ರಲ್ಲಿ ಮತ್ತೆ ಗೆಲುವು, 2021ರಲ್ಲಿ ಕೇಂದ್ರದ ಸಚಿವ ಸ್ಥಾನದಿಂದ ಡಿ ವಿ ಸದಾನಂದ ಗೌಡರನ್ನು ಕೆಳಗಿಳಿಸಿದ ನಂತರ ಶೋಭಾಗೆ ಕೇಂದ್ರ ಸಚಿವೆಯಾಗುವ ಅದೃಷ್ಟ ಒಲಿದಿತ್ತು.

ಸದಾ ಕೋಮುವಾದಿ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುತ್ತಿದ್ದ ಶೋಭಾ ಕರಂದ್ಲಾಜೆ ತನ್ನ ಮೊದಲ ಅವಧಿಯಲ್ಲಿ ಲೋಕಸಭೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಟೀಕಿಸುತ್ತಾ, ಕೊಲೆಯಾದ ಹಿಂದೂ ಕಾರ್ಯಕರ್ತರ ಪಟ್ಟಿ ಕೊಡುವಾಗ ಬದುಕಿದ್ದವರ ಹೆಸರನ್ನೂ ಸೇರಿಸಿ ಗೇಲಿಗೊಳಗಾಗಿದ್ದರು. ಅಷ್ಟೇ ಅಲ್ಲ ಕಾರವಾರದ ಕೂಲಿ ಕಾರ್ಮಿಕ ಯುಪಿ ಮೂಲದ ಪರೇಶ್‌ ಮೇಸ್ತ ಎಂಬ ಯುವಕನ ಆಕಸ್ಮಿಕ ಸಾವನ್ನು ಸಿದ್ದರಾಮಯ್ಯ ಸರ್ಕಾರದ ತಲೆಗೆ ಕಟ್ಟಲು ಪ್ರಯತ್ನಿಸಿ ಜಿಲ್ಲೆಯಲ್ಲಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು. ಮುಸ್ಲಿಂ ಯುವಕರು ಪರೇಶನನ್ನು ಕೊಂದು ಕೆರೆಗೆ ಎಸೆದಿದ್ದರು ಎಂದು ಸುಳ್ಳು ಕತೆ ಕಟ್ಟಿದ ಬಿಜೆಪಿಯ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಸರ್ಕಾರ ಆ ಪ್ರಕರಣವನ್ನು ಸಿಬಿಐಗೆ ನೀಡಿತ್ತು.

ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪರೇಶ್‌ ಮೇಸ್ತನ ಸಾವಿನ ಪ್ರಕರಣವನ್ನು ಮುಂದುವರಿಸಲು ಸಿಬಿಐಗೆ ಸಹಕರಿಸಲಿಲ್ಲ. ಹೀಗೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪದೇ ಪದೇ ಟೀಕಿಸುತ್ತಾ ಹೆಣ ರಾಜಕಾರಣ ಮಾಡುವುದರಲ್ಲೇ ಶೋಭಾ ನಿರತರಾದರು. ಎರಡನೇ ಅವಧಿಗೆ ಸಂಸದೆಯಾದ ನಂತರ, ಸಚಿವೆಯೂ ಆದರು. ಆದರೆ ಅವರು ತಮ್ಮ ಕ್ಷೇತ್ರಕ್ಕೆ ಯಾವುದೇ ಯೋಜನೆ ತರಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪ ಆರಂಭದಿಂದಲೂ ಇತ್ತು. ಎರಡನೇ ಅವಧಿಗೆ ಟಿಕೆಟ್‌ ನೀಡಬಾರದು ಎಂಬ ಒತ್ತಾಯವನ್ನು ಕ್ಷೇತ್ರದ ಜನ ಮಾಡಿದ್ದರು. ಆದರೂ ಹೈ ಕಮಾಂಡ್‌ ಟಿಕೆಟ್‌ ನೀಡಿತ್ತು. ಮೋದಿಯ ಗೆಲುವಿಗಾಗಿ ಬಿಜೆಪಿ ಪಕ್ಷದ ಚಿಹ್ನೆಗಾಗಿ ಕಾರ್ಯಕರ್ತರು ದುಡಿದಿದ್ದರು. ಮತದಾರರು ಮೋದಿಯನ್ನು ಗೆಲ್ಲಿಸಲು ಶೋಭಾಗೆ ಮತ ಹಾಕಿದ್ದರು. ಈಗಲೂ ಶೋಭಾ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಶೋಭಾಗೆ ಟಿಕೆಟ್‌ ಕೊಟ್ಟರೆ ಗೆಲ್ಲುವುದು ಅಷ್ಟು ಸುಲಭವಿಲ್ಲ ಎಂಬ ವಾತಾವರಣವಂತು ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | 100% ಮತದಾನ ದಾಖಲಿಸಿದ ಕುಗ್ರಾಮ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ದಕ್ಷಿಣ...

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...

ಲೋಕಸಭೆ ಹಣಾಹಣಿ -2024 | 5 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ.63.90 ಮತದಾನ

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ...

ಬೆಲೆಯೇರಿಕೆ, ನಿರುದ್ಯೋಗ, ರೈತರ ಬಗ್ಗೆ ಪ್ರಧಾನಿ ಮೋದಿ ತುಟಿಯೇ ಬಿಚ್ಚಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆಯೇ ಮಾಡುವುದಿಲ್ಲ. ಕೇವಲ...