ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…

Date:

Advertisements

ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಜನ್ಮದಿನ. ಓರ್ವ ದೂರದೃಷ್ಟಿಯ ನಾಯಕನಾಗಿ ನೆಹರೂರವರು ಈ ದೇಶಕ್ಕೆ ಏನೇನನ್ನು ನೀಡಿದ್ದಾರೆ ಎನ್ನುವುದರ ಮಹತ್ವ ನಮಗಿಂದು ಸ್ಪಷ್ಟವಾಗುತ್ತಿದೆ.

ಕನ್ನಡದ ನವ್ಯಕವಿ ಎಂ ಗೋಪಾಲಕೃಷ್ಣ ಅಡಿಗರ ’ನೆಹರೂ ನಿವೃತ್ತರಾಗುವುದಿಲ್ಲ’(1958) ಕವನದ ಸಾಲೊಂದನ್ನು ಈ ಲೇಖನಕ್ಕೆ ಶೀರ್ಷಿಕೆಯಾಗಿ ನೀಡಿದ್ದೇವೆ (ಪೂರ್ಣ ಕವನ ಲೇಖನದ ಕೊನೆಯಲ್ಲಿ ಇದೆ). ಸ್ವತಂತ್ರ ಭಾರತವನ್ನು ’ವಿವೇಚನಾತ್ಮಕ ಆಧುನಿಕತೆ’ಯ ಪಥದಲ್ಲಿ ಮುನ್ನಡೆಸಲು ಪರಿಶ್ರಮಿಸಿದವರು ಪಂಡಿತ್ ಜವಾಹರಲಾಲ್ ನೆಹರೂ. ಅವರಂತಹ ಚಿಂತನಶೀಲ ಧೀಮಂತನನ್ನು ಸಾರ್ವಜನಿಕ ನೆನಪಿನಿಂದ ಅಳಿಸಿಹಾಕುವ ಬೃಹತ್ ಪ್ರಯತ್ನ ನಮ್ಮಲ್ಲೀಗ ನಡೆಯುತ್ತಿದೆ. ಭಾರತವನ್ನು ಆಧುನಿಕ ರಾಷ್ಟ್ರವನ್ನಾಗಿ ಕಟ್ಟಿ, ವಿಶ್ವ ನಕಾಶೆಯಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ನಡೆಸಿದ ನೆಹರೂರವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ವಿಕೃತವಾಗಿ ಚಿತ್ರಿಸುವ ಅಧಿಕಾರಶಾಹಿಯ ಹುನ್ನಾರಕ್ಕೆ ಭಾರತದ ಹೊಸ ಮಧ್ಯಮವರ್ಗದ ಬೆಂಬಲವೂ ಇರುವಂತಿದೆ.

ದೇಶ ಸ್ವತಂತ್ರಗೊಂಡ ಹತ್ತೇ ವರ್ಷಗಳಲ್ಲಿ ನೆಹರೂರವರ ಬಗ್ಗೆ ದೇಶದ ಕೆಲ ಮೇಲ್ಜಾತಿ ಮಧ್ಯಮವರ್ಗಕ್ಕಿದ್ದ ಅಸಹನೆಯನ್ನು ಅಡಿಗರು ನೆಹರೂ ನಿವೃತ್ತರಾಗುವುದಿಲ್ಲ ಎಂಬ ಕವನದ ಮೂಲಕ ವ್ಯಕ್ತಪಡಿಸಿದ್ದರು. ಆದರೆ ಇಲ್ಲೊಂದು ಸ್ವಾರಸ್ಯ ಇದೆ. ಅಡಿಗರ ಕವನದ ಮೊದಲೆರಡು ಭಾಗಗಳು ನೆಹರೂರವರನ್ನು ವ್ಯಂಗ್ಯ ಮಾಡಿದ್ದರೂ ಮೂರನೇ ಭಾಗ ಹಾಗಿಲ್ಲ. ಅಲ್ಲಿ ನೆಹರೂ ಬದಲು ಕಾರ್ಪೊರೇಟ್ ವ್ಯಾಪಾರಿಗಳ ಹಿತಾಸಕ್ತಿಯನ್ನಷ್ಟೇ ರಕ್ಷಿಸುವ ಯಾವುದೇ ದೇಶದ ಆಡಳಿತಾರೂಢ ನಾಯಕನ ಹೆಸರು ಹಾಕಿಯೂ ಕವನವನ್ನು ಓದಬಹುದಾಗಿದೆ. ಇದು ಕಾವ್ಯದ ಶಕ್ತಿಯೂ ಹೌದು. ಇರಲಿ, ನಮ್ಮ ಉದ್ದೇಶ ಕವನದ ವಿಮರ್ಶೆ ಮಾಡುವುದಲ್ಲ. ನೆಹರೂರವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಚಿಂತನೆ ಮತ್ತು ಕ್ರಿಯಾಚರಣೆಯ ಕೆಲವು ಪ್ರಮುಖ ಅಂಶಗಳನ್ನು ಗುರುತಿಸುವುದಷ್ಟೇ ಆಗಿದೆ.

Advertisements

ನೆಹರೂರವರ ಚಿಂತನೆ ತನ್ನ ಮೂಲ ಸ್ವರೂಪದಲ್ಲಿಯೇ ವಿಶ್ವಾತ್ಮಕವಾದದ್ದು. ಯಾವ ಚಿಂತಕರ ವಿಚಾರಗಳು ತಾವು ಬದುಕಿದ ಸಮಾಜದ ಸಾಂಸ್ಕೃತಿಕ ನಿರ್ದಿಷ್ಟತೆಯಲ್ಲಿ ಹುಟ್ಟಿ, ಅಲ್ಲೇ ವಿರಮಿಸದೆ ವಿಶ್ವದ ಇತರೆಡೆಗಳಲ್ಲಿಯೂ ಪ್ರತಿಫಲಿತಗೊಳ್ಳುವವೋ ಅವೆಲ್ಲವನ್ನೂ ವಿಶ್ವಚಿಂತನೆಗಳೆಂದೇ ಪರಿಭಾವಿಸಬಹುದು. ಈ ಅರ್ಥದಲ್ಲಿ ನೆಹರೂರವರ ಚಿಂತನೆ-ಕ್ರಿಯಾಚರಣೆಗಳು ಭಾರತ ನಿರ್ದಿಷ್ಟವಾಗಿರದೆ ವಿಶ್ವಾತ್ಮಕ ಆಯಾಮಗಳನ್ನು ಹೊಂದಿವೆ. ನೆಹರೂ, ಹೊಸದಾಗಿ ರೂಪುಗೊಳ್ಳುತ್ತಿರುವ ವಿಶ್ವದ ಅವಿಭಾಜ್ಯ ಭಾಗವಾಗಿಯೇ ಆಧುನಿಕ ಭಾರತವನ್ನು ಕಂಡವರು.

Gka
ಕವಿ ಗೋಪಾಲಕೃಷ್ಣ ಅಡಿಗ

ಎರಡನೆಯ ಮಹಾಯುದ್ಧದ ನಂತರದ ಹೊಸ ವಿಶ್ವದಲ್ಲಿ ಭಾರತದ ಸ್ಥಾನ-ಮಾನವೇನು? ಇತರ ರಾಷ್ಟ್ರಗಳ ಜೊತೆಗೆ ಭಾರತ ಇರಿಸಿಕೊಳ್ಳಬೇಕಾದ ಸಹ-ಸಂಬಂಧದ ಸ್ವರೂಪವೇನು? ಎನ್ನುವ ಕುರಿತು ನೆಹರೂ ಚಿಂತನೆ ನಡೆಸಿದ್ದರು. ಈ ದೃಷ್ಟಿಯಿಂದ ನೆಹರೂರವರನ್ನು ಸಕಾರಾತ್ಮಕವಾದ ಅರ್ಥದಲ್ಲಿ ’ಕಾಸ್ಮೋಪೊಲಿಟನ್’ ಎಂದು ಕರೆಯಬಹುದು. ಪ್ರಜಾತಾಂತ್ರಿಕ ಗಣರಾಜ್ಯವಾಗಿ ಮತ್ತು ಆಧುನಿಕ ರಾಷ್ಟ್ರವಾಗಿ ಭಾರತ ತನ್ನನ್ನು ತಾನು ಹೇಗೆ ನಿರ್ವಹಿಸಿಕೊಳ್ಳಬೇಕು?, ಜಗತ್ತಿನ ಆಗುಹೋಗುಗಳಲ್ಲಿ ಭಾರತ ಯಾವ ಬಗೆಯ ಪಾತ್ರವನ್ನು ನಿರ್ವಹಿಸಬೇಕು? ಎನ್ನುವುದು ನೆಹರೂರವರ ಚಿಂತನೆಯ ಕೇಂದ್ರ ಕಾಳಜಿಯಾಗಿತ್ತು ಮತ್ತು ಅದೇ ಅವರ ಕ್ರಿಯಾಚರಣೆಯ ನೆಲೆಗಟ್ಟೂ ಆಗಿತ್ತು.

ನೆಹರೂರವರ ಚಿಂತನೆಯಲ್ಲಿ ಅಂತಸ್ಥವಾಗಿರುವ ಕಾಸ್ಮೋಪೊಲಿಟನ್ ನೋಟವನ್ನು ಅವರ ಪ್ರಮುಖ ಕೃತಿಗಳಾದ ಆನ್ ಅಟೋಬಯೋಗ್ರಫಿ, ಡಿಸ್ಕವರಿ ಆಫ್ ಇಂಡಿಯಾ ಹಾಗೂ ಗ್ಲಿಂಪ್ಲಸ್ ಆಫ್ ವರ್ಲ್ಡ್ ಹಿಸ್ಟರಿ ಗಳಲ್ಲಿ ನೋಡಬಹುದು. ಇವುಗಳನ್ನು ಅನುಕ್ರಮದಲ್ಲಿ ಇಟ್ಟು ನೋಡಿದಾಗ ನೆಹರೂರವರ ಆತ್ಮಕಥೆ ’ಸ್ವ’ದ ನಿರೂಪಣೆಯಾಗಿಯೂ, ಭಾರತ ದರ್ಶನ ರಾಷ್ಟ್ರದ ನಿರ್ವಚನವಾಗಿಯೂ ಹಾಗೂ ’ಜಾಗತಿಕ ಇತಿಹಾಸದ ಇಣುಕು ನೋಟ’ ನೆಹರೂರವರ ವಿಶ್ವನೋಟದ ಕಾಣ್ಕೆಯಾಗಿಯೂ ಕಾಣಿಸಿಕೊಳ್ಳುತ್ತದೆ. ಅಂದರೆ ’ಸ್ವ’ ವಿಸ್ತಾರಗೊಂಡು ’ರಾಷ್ಟ್ರ’ವಾಗುತ್ತ, ’ರಾಷ್ಟ್ರ’ ವಿಸ್ತಾರಗೊಂಡು ’ವಿಶ್ವ’ವಾಗುತ್ತ, ಒಂದನ್ನೊಂದು ಒಳಗೊಳ್ಳುವ ವಿದ್ಯಮಾನವಾಗಿದೆ ಇದು. ಇದು ನೆಹರೂ ತನ್ನನ್ನು ರಾಷ್ಟ್ರದೊಂದಿಗೆ ಮತ್ತು ರಾಷ್ಟ್ರವನ್ನು ವಿಶ್ವದೊಂದಿಗೆ ಬೆಸೆಯುವ ಕ್ರಮವೂ ಹೌದು.

ನೆಹರೂ

ನೆಹರೂರವರ ರಾಜಕೀಯ ಚಿಂತನೆಯಲ್ಲಿ ಪರಸ್ಪರಾವಲಂಬಿತವಾದ ಐದು ಎಳೆಗಳಿವೆ. ಮೊದಲನೆಯದು, ಆಧುನಿಕತೆಯ ವಿಮರ್ಶಾತ್ಮಕ ಪ್ರತಿಪಾದನೆ. ಎರಡನೆಯದು, ಬಹುತ್ವದ ನೆಲೆಯ ರಾಷ್ಟ್ರವಾದದ ನಿರೂಪಣೆ. ಮೂರನೆಯದು, ವಿವೇಚನಾಶೀಲ ಪ್ರಜಾತಂತ್ರದ ಬಗೆಗಿನ ಬದ್ಧತೆ ಹಾಗೂ ಅದನ್ನು ಸ್ಥಿರಗೊಳಿಸಲು ಬೇಕಾಗಿರುವ ಕ್ರಿಯಾಶೀಲತೆ. ನಾಲ್ಕನೆಯದು, ಭಾರತ ನಿರ್ದಿಷ್ಟವಾದ ಸೆಕ್ಯುಲರ್ ನೋಟ. ಐದನೆಯದು, ಅಲಿಪ್ತ ನೀತಿ ಮತ್ತು ವಿಶ್ವಶಾಂತಿಯ ಪ್ರಯತ್ನ.

ಇವುಗಳ ಜೊತೆಗೆ ನೆಹರೂರವರು ತಮ್ಮ ಕಾಲದ ಎಂತೆಂತಹ ಧೀಮಂತರ ಜೊತೆಗೆ ಗಂಭೀರವಾದ ಸಂವಾದಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ನೆಹರೂ-ಗಾಂಧಿ, ನೆಹರೂ-ಮುಹಮ್ಮದ್ ಇಕ್ಬಾಲ್, ನೆಹರೂ-ಮುಹಮ್ಮದ್ ಅಲಿ ಜಿನ್ನಾ, ನೆಹರೂ-ಸರ್ದಾರ್ ವಲ್ಲಭ ಭಾಯ್ ಪಟೇಲ್, ನೆಹರೂ-ಬಿ ಆರ್ ಅಂಬೇಡ್ಕರ್, ನೆಹರೂ-ಶ್ಯಾಮ್‌ಪ್ರಸಾದ್ ಮುಖರ್ಜಿ ಮೊದಲಾದವರ ಜೊತೆ ನಡೆಸಿದ ಸಂವಾದಗಳು ಭಾರತವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಖ್ಯವಾದ ಒಳನೋಟಗಳನ್ನು ಕೊಡುವಂಥವುಗಳೂ ಆಗಿವೆ. ಇವುಗಳಲ್ಲಿ ಬಹುತೇಕವಾದವುಗಳು ಪತ್ರಗಳ ಮೂಲಕ ನಡೆದ ಸಂವಾದಗಳೇ ಆಗಿವೆ. ಇವೆಲ್ಲವನ್ನೂ ವಿಸ್ತಾರವಾಗಿ ಚರ್ಚಿಸುವುದು ಇಲ್ಲಿ ಸಾಧ್ಯವಿಲ್ಲವಾದುದರಿಂದ ನೆಹರೂರವರ ಮೂರು ಪ್ರಮುಖ ವಿಚಾರಗಳನ್ನಷ್ಟೆ ಸ್ಥೂಲವಾಗಿ ವಿಶ್ಲೇಷಿಸುತ್ತೇವೆ.

ನಮ್ಮ ಕೈಗಾರಿಕೆಗಳು ಹಾಗೂ ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎನ್ನುವ ನೆಹರೂರವರ ಸುಪ್ರಸಿದ್ಧ ಉದ್ಗಾರ ಆಧುನಿಕತೆಯ ಬಗೆಗಿನ ಅವರ ಅಚಲ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಭಾರತದಲ್ಲಿ ನೆಹರೂರವರು ಅಳವಡಿಸಲು ಯತ್ನಿಸಿದ ಆಧುನೀಕರಣದ ಮಾದರಿಯನ್ನೂ ಸೂಚಿಸುತ್ತದೆ. ಆಧುನಿಕ ಶಿಕ್ಷಣ ಪಡೆದ ವೈಜ್ಞಾನಿಕ ಮನೋಭಾವದ ಜನತೆ ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ನಿರಂತರ ಅನ್ವಯದ ಮೂಲಕ ಭಾರತದ ಸರ್ವತೋಮುಖ ವಿಕಾಸವನ್ನು ಸಾಧಿಸುತ್ತದೆ ಎಂಬ ಕನಸನ್ನು ನೆಹರೂ ಕಂಡರು.

ನೆಹರೂರವರು ಭಾರತದಲ್ಲಿ ಅನುಷ್ಠಾನಗೊಳಿಸಲು ಯತ್ನಿಸಿದ ಆಧುನಿಕತೆಯ ಈ ನಮೂನೆಯನ್ನು ಅವರ ರಾಜಕೀಯ ಪ್ರತಿದ್ವಂದ್ವಿಗಳು ಟೀಕಿಸಿದ್ದಾರೆ. ಈ ಹೊಸ ಕಾರ್ಯಸೂಚಿ ಅನೇಕ ಬಗೆಯ ದುಷ್ಪರಿಣಾಮಗಳಿಗೆ ಎಡೆಮಾಡಿಕೊಟ್ಟಿದೆ ಎನ್ನುವ ಆಪಾದನೆಯನ್ನು ನೆಹರೂರವರ ಸಮಕಾಲೀನರೂ ಮಾಡಿದ್ದಾರೆ. ಈ ಆಪಾದನೆಗಳಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶ ಇದೆಯಾದರೂ ಆಧುನಿಕತೆಯ ಕುರಿತಾದ ಸಂಭ್ರಮ ನೆಹರೂರವರಿಗೆ ಮಾತ್ರ ಸೀಮಿತವಾದುದಲ್ಲ. ವಸಾಹತುಶಾಹಿಯಿಂದ ಮುಕ್ತವಾದ ಯಾವುದೇ ಜನಸಮುದಾಯ ತನ್ನ ಸ್ವಾತಂತ್ರ್ಯವನ್ನು ಸಂಭ್ರಮಿಸುವ ರೀತಿಯೂ ಇದು ಹೌದು. ಆಧುನಿಕತೆಯ ಬಗೆಗಿನ ಭಾರತೀಯರೆಲ್ಲರ ಆಶಾವಾದವನ್ನು ನೆಹರೂ ಪ್ರತಿನಿಧಿಸುತ್ತಾರೆ. ಆದ್ದರಿಂದಲೇ, 50-60 ದಶಕವನ್ನು ನಾವು ನೆಹರೂ ಯುಗ ಎನ್ನುತ್ತೇವೆ.

ನೆಹರೂರವರು, ಆಧುನಿಕತೆ ಪ್ರತಿನಿಧಿಸಿದ ವೈಚಾರಿಕ ಮೌಲ್ಯಗಳ ಕುರಿತು ಶ್ರದ್ಧೆಯನ್ನು ಇರಿಸಿಕೊಂಡವರು. ಅವರು ಆಧುನಿಕವಾದಿ ಎನ್ನುವುದೆಷ್ಟು ನಿಜವೋ; ಅಷ್ಟೇ ನಿಜ ಅವರು ಪ್ರಜಾತಂತ್ರವಾದಿ ಎನ್ನುವುದು ಕೂಡಾ. ವಿವಿಧತೆಯಲ್ಲಿ ಏಕತೆ ಎನ್ನುವ ಅವರ ಭಾರತೀಯ ರಾಷ್ಟ್ರವಾದ ದ ನಿರೂಪಣೆ, ಇಂದಿಗೂ ನಮಗೆ ನಮ್ಮ ದೇಶವನ್ನು ಗ್ರಹಿಸಲು ಅತ್ಯಂತ ಸೂಕ್ತವಾದ ನಿರೂಪಣೆ. ಒಂದು ರಾಷ್ಟ್ರವಾಗಿ ಭಾರತ ಸಂಸದೀಯ ಪ್ರಜಾತಂತ್ರದ ತಳಹದಿಯಲ್ಲಿ ಸರ್ವಧರ್ಮ ಸಮಭಾವದ ಸೆಕ್ಯುಲರ್ ಸಮಾಜವಾಗಿ ರೂಪುಗೊಳ್ಳಬೇಕು ಎಂಬುದು ನೆಹರೂರವರ ಆಧುನಿಕತೆಯ ಆಧ್ಯಾತ್ಮಿಕ ಶ್ರದ್ಧೆ.

527b349972628

ಓರ್ವ ದೂರದೃಷ್ಟಿಯ ನಾಯಕನಾಗಿ ನೆಹರೂರವರು ಈ ದೇಶಕ್ಕೆ ಏನೇನನ್ನು ನೀಡಿದ್ದಾರೆ ಎನ್ನುವುದರ ಮಹತ್ವ ನಮಗಿಂದು ಸ್ಪಷ್ಟವಾಗುತ್ತಿದೆ. ನೆಹರೂರವರನ್ನು ನಿವೃತ್ತಿಗೊಳಿಸುವುದೆಂದರೆ ಭಾರತವೆನ್ನುವ ಬಹುವಚನವನ್ನು ನಿರಾಕರಿಸುವುದೇ ಆಗಿದೆ.

ಇಂದು ನಮಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸರ್ವನಾಶದ ಭೀತಿಯ ಸನ್ನಿವೇಶದಲ್ಲಿ ನೆಹರೂರವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ಪರಿಶ್ರಮಿಸಿದ ಅಲಿಪ್ತ ನೀತಿ ಮತ್ತು ವಿಶ್ವಶಾಂತಿಯ ಕಾಳಜಿಗಳನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ಭಾರತದಂತಹ ದೇಶಗಳು ಯಾವ ಮಿಲಿಟರಿ ಗುಂಪಿಗೂ ಸೇರದೆ ನೀತ್ಯಾತ್ಮಕ ನೆಲೆಯಲ್ಲಿ ತಮ್ಮತಮ್ಮ ನಿಲುವುಗಳನ್ನು ಮುಂದಿಡಬೇಕು ಎನ್ನುವುದು ಅಲಿಪ್ತ ನೀತಿಯ ಅತ್ಯಂತ ಪ್ರಮುಖ ಕಾಳಜಿ. ತನ್ನಂತೆ ಯೋಚಿಸುವ ಇತರ ವಿಶ್ವ ನಾಯಕರೊಂದಿಗೆ ಕೂಡಿ ನೆಹರೂರವರು ರೂಪಿಸಿದ ವಿಶ್ವನೋಟವಿದು. ಅಲಿಪ್ತ ನೀತಿಯೆಂದರೆ ನಿರ್ಲಿಪ್ತತೆಯಲ್ಲ. ನ್ಯಾ-ಅನ್ಯಾಯ, ಶಾಂತಿ-ಸಮರಗಳ ನಡುವೆ ನಾವು ನಿರ್ಲಿಪ್ತರಾಗಲು ಸಾಧ್ಯವಿಲ್ಲವೆಂಬುದು ನೆಹರೂರವರ ಅಚಲ ನೈತಿಕ ನೋಟ.

ತನಗೆ ದಾರಿ ತಿಳಿದಿದೆ ಮತ್ತು ತಾನೇ ಎಲ್ಲರಿಗೂ ದಾರಿ ತೋರಿಸುವವನು ಎಂಬ ಸರ್ವಜ್ಞ ಗರ್ವ ಯಾವುದೇ ರಾಷ್ಟ್ರ-ಪ್ರಭುತ್ವದ ತಲೆಗೇರಿದರೆ ಅದು ತನ್ನನ್ನು ತಾನೇ ’ವಿಶ್ವಗುರು’ ಎಂದು ಘೋಷಿಸಿಕೊಳ್ಳುತ್ತದೆ. ಇದರ ಬದಲಾಗಿ, ಅಲಿಪ್ತ ನೀತಿಯನುಸಾರ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ದಾರಿಯನ್ನು ಎಲ್ಲರೂ ಜೊತೆಯಾಗಿ ಹುಡುಕೋಣವೆಂಬ ವಿನೀತ ಭಾವ ಪ್ರತಿಯೊಂದು ದೇಶಕ್ಕೂ ಬಂದರೆ ಆಗ ಅದು ’ವಿಶ್ವಬಂಧು’ವಾಗುತ್ತದೆ.

ಅಲಿಪ್ತ ನೀತಿಯ ಮೂಲಕ ಭಾರತ ’ವಿಶ್ವಬಂಧು’ವಾಗಿ ಕ್ರಿಯಾಶೀಲವಾದರೆ ಅಲ್ಲಿ ಲೋಕಹಿತ ಇದೆ ಎಂದು ಭಾವಿಸಿ, ಅದಕ್ಕಾಗಿ ಹಂಬಲಿಸಿದ ನೆಹರೂ ಎಂಬ ಧೀಮಂತರನ್ನು ಅರ್ಥ ಮಾಡಿಕೊಳ್ಳುವುದು ಈಗಿನ ಸಮರವ್ಯಾಮೋಹಿ ಕಾಲದಲ್ಲಿ ಬಹಳ ಮುಖ್ಯವಾದುದು.

ಎಂ ಗೋಪಾಲಕೃಷ್ಣ ಅಡಿಗರ `ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ’ ಕವನದ ಪೂರ್ಣಪಠ್ಯ

1
ನೆಹರೂ ನಿವೃತ್ತರಾಗುವುದಿಲ್ಲ,
ಇನ್ನು ಪರವಾ ಇಲ್ಲ.
ಗಾಳಿ ಯಥಾ ಪ್ರಕಾರ ಬೀಸಲು ಬಹುದು;
ಕೋಳಿ ಕೋಕೋ ಎಂದು ಕುಕಿಲ ಬಹುದು.
ಕಾಗೆ ಬಂಗಾರವೇ ಆಗಿ ಬರಿ ಬಂಗಾರ,
ಉದ್ದುದ್ದ ಮಾತುಗಳ ಕೊಂಡಿಕೊಂಡಿ ನಿಚ್ಚಣಿಕೆತುದಿ
ಅಲಾಕಾವತಿಖಜಾನೆ ಮೂಸದಿರದು;
ಹರಿದೀತು ವಾಗ್ರೂಪದಲ್ಲಿ ಹಾಲಿನ ಹಳ್ಳ
ತುಂಬಿಕೊಳ್ಳುವ ಹಾಗೆ ತಗ್ಗು-ತೆವರು;
ಬುದ್ಧಿಸಮತೆ ಧಮಾಸು ಕೂಗಿಗೆಲ್ಲ ಸಫಾಯಿ,
ಆಸೇತು ತುಹಿನಾಚಲ!

2
ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ,
ಯಾವ ಬಂದಳಿಕೆಗೂ ಶಂಕೆ ಬೇಡ!
ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ,
ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ;
ಬೇಸಗೆಯ ಗೆರೆತೊರೆಯ ಕನ್ನಡಿಜಲದ ಮೇಲೆ
ಮಳೆಗಾಳಿನೆಗಸುಗಳ ನಗುವ ವೀರ.
ಮುಗಿಲನಳೆಯುವ ಹೆಜ್ಜೆ ನೆಲಕೆ ಸೋಕದಿದ್ದರು ಸರಿಯೆ,
ಬಲಿಯ ತಲೆಮೆಟ್ಟುವುದೆ ಕಾರಭಾರ.
ಅಳಿವೆ ಬಳಿ ಬುಗುರಿಗಿರಗಿರ ದೋಣಿಗಳ ಮೇಲೆ
ಉದ್ಬಾಹು ನಿಗಚುವನು ಮುಗಿಲ ಫಲಕೆ.
ಅಳಿವೆಯಾಚೆಗೆ ಕಪ್ಪುಕಡಲೇ ? ಅಸಂಬದ್ಧ!
ಎಷ್ಟು ಚೆನ್ನಾಗಿದೆಯೋ ಮುಗಿಲ ಬಣ್ಣ!

3
ಭರತವಾಕ್ಯಕ್ಕು ಬೆದರನೀತ ಧೀರೋದಾತ್ತ ನಾಯಕ,
ತೆರೆಬಿದ್ದರೂ ರಂಗಬಿಡದ ಚಿರಯುವಕ;
ಹೊತ್ತು ಸುತ್ತುತ್ತಾನೆ ಬಲು ಭಾರಿ ಭೂಗೋಳ,
ಗಂಟೆಗೆಂಭತ್ತೆಂಟು ಮೈಲಿ ಸ್ವಗತ;
ಪ್ರೇಕ್ಷಕರ ಕಣ್ಣಲ್ಲೆ ಬೆವರೊರೆಸಿ, ನರಳಿ, ನಿಟ್ಟುಸಿರ ತಿದಿಯೊತ್ತಿ,
ಹೊರೆಹೊತ್ತೆ ನಿಂತು ನಸುನಗುವ ಭಂಗಿ!
ಚಪ್ಪಾಳೆಗೊಂದೊಂದಪೂರ್ವ ತಾನಿನ ವರಸೆ;
ಈತನಿಂದಲೇ ರಂಗಭೂಮಿ ಭರ್ತಿ.
ಇಲ್ಲವಾದರೆ ಮರುಕ್ಷಣ ಕಂಪನಿ ದಿವಾಳಿ;
ಇದ ತಿಳಿದ ಶೇರುದಾರರೆ, ಕೇಳಿ, ಕೇಳಿ;
ಇಲ್ಲ, ಇಲ್ಲ; ನೆಹರೂ ನಿವೃತ್ತರಾಗುವುದಿಲ್ಲ;
ಶೇಕಡಾ ಹತ್ತಕ್ಕೆ ಮೋಸವಿಲ್ಲ!

?s=150&d=mp&r=g
ರಾಜಾರಾಮ ತೋಳ್ಪಾಡಿ
+ posts
?s=150&d=mp&r=g
ನಿತ್ಯಾನಂದ ಬಿ ಶೆಟ್ಟಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಸರ್ ನಮಸ್ಕಾರ, ಲೇಖನ ಓದಿದೆ.

    ಇಷ್ಟು ವರ್ಷಗಳ ನಂತರ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ವ್ಯಂಗ್ಯವನ್ನು ಒಂದು ‘ಮೌಲ್ಯ’ ವಾಗಿ ಪರಿವರ್ತಿ‍ಸಿದೆ ನಿಮ್ಮ ಬರಹ. ನೆಹರೂ ಅವರನ್ನು ನಿವೃತ್ತಗೊಳಿಸುವುದು ಭಾರತದ ಬಹುವಚನವನ್ನು ನಿವೃತ್ತಗೊಳಿಸಿದಂತೆ ಎಂದಿರುವ ಮಾತುಗಳು ನಿಜಕ್ಕೂ ಬ್ಯೂಟಿಫುಲ್…😍
    ಅಡಿಗರು ಈಗಲೂ ಇದ್ದು, ( ಜನಸಂಘ, ಇಂದಿನ ಬಿಜೆಪಿಯ ಪರವಾಗಿಯೇ ಇದ್ದು) ಈ ಪದ್ಯವನ್ನೂ ನಿಮ್ಮ ಬರೆಹವನ್ನು ಓದಿದ್ದರೆ?😃

    ಯಾವುದು ಹೋದರೆ ಈ ವ್ಯವಸ್ಥೆ ಸರಿಯಾಗುತ್ತದೆ ಎಂದು ಅಡಿಗರು ನಂಬಿದ್ದರೋ ಅದು ಹೋಗಿ ಅವರು ಬಯಸಿದ ‘ಪರಿವಾರವೇ’ ಅಧಿಕಾರಕ್ಕೆ ಬಂದರೂ ಅದು ನೆಹರೂರನ್ನೂ / ಅಡಿಗರ ಆದರ್ಶ ರಾಜಕೀಯ ಕಾಣ್ಕೆಯನ್ನೂ ಮುಟ್ಟದೆ ಅದೂ ಸಹ ಅಡಿಗರ ಮಾತಿನಲ್ಲೇ ಹೇಳುವುದಾದರೆ ‘ಶೇಕಡಾ ಹತ್ತಕ್ಕೆ ಮೋಸವಿಲ್ಲ!’ ಎಂಬಂತಾದ ಬಗೆಯನ್ನು ಕಾಣಲಾದರೂ ‘ಇಲ್ಲ, ಇಲ್ಲ, ಅಡಿಗರು ಇರಲೇ ಬೇಕಿತ್ತು’ 🌱

    -ಗೋವಿಂದರಾಜು ಎಂ ಕಲ್ಲೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X