ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

Date:

Advertisements

ಹಿಂದಿಯಲ್ಲೊಂದು ಗಾದೆಯಿದೆ; ‘ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‍ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ‘ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’ ಎಂಬ ಗಾದೆ ಸೂಕ್ತವಾಗಿದೆ. ರಾಹುಲ್ ಗಾಂಧಿ ಇಂಗ್ಲೆಂಡಿನ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಮೇಲೆ ಸೃಷ್ಟಿಸುತ್ತಿರುವ ಗಲಾಟೆ ನೋಡಿದರೆ ಈ ಗಾದೆಯೇ ನೆನಪಾಗುವುದು.

ನಿಸ್ಸಂಶಯವಾಗಿ ದೇಶದ ಆಂತರಿಕ ವಿಷಯಗಳ ಬಗ್ಗೆ ವಿದೇಶದಲ್ಲಿ ಮಾಡುವ ಹೇಳಿಕೆಗಳಲ್ಲಿ ಒಂದು ಮಟ್ಟದ ಘನತೆ ಇರಲೇಬೇಕು. ವಿರೋಧಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಈ ಘನತೆಯ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದರು; ಆದರೆ ಯಾವುದೇ ಪಕ್ಷದ ಯಾವ ನಾಯಕರೂ ಇಂದು ಆ ಹಂತಕ್ಕೆ ತಲುಪುವುದಿಲ್ಲ. ಅಂದಹಾಗೆ ಈಗ ಮನೆಯ ಮಾತು ಮನೆಯಲ್ಲಿಯೇ ಮುಚ್ಚಿಡಬಹುದಾದ ಆ ದಿನಗಳೂ ಇಲ್ಲ. ಇಂಟರ್‌ನೆಟ್‌ ಮತ್ತು ಜಾಗತಿಕ ಮಾಧ್ಯಮಗಳ ಕಾಲದಲ್ಲಿ ಅಂತರಿಕ ಗೌಪ್ಯ ವಿಷಯಗಳನ್ನು ಹೊರಗೆ ಹೇಳಬೇಕಾದ-ಹೇಳಬಾರದ ಸಂಗತಿಗಳೆಂದೂ ಉಳಿದಿಲ್ಲ. ಆದರೂ, ಕನಿಷ್ಠ ಮೂರು ಘನತೆಯ ಸೂತ್ರಗಳನ್ನು ವ್ಯಾಖ್ಯಾನಿಸಬಹುದಾಗಿದೆ.

ಮೊದಲನೆಯದಾಗಿ ಯಾವುದೇ ಪಕ್ಷ ಇತರ ಪಕ್ಷಗಳನ್ನು ಟೀಕೆ ಮಾಡಲಿ, ಆದರೆ ಯಾವುದೇ ಕೆಳಮಟ್ಟ ಅಗ್ಗದ ಗಾಸಿಪ್‍ ಅನ್ನು ಹೊರಗೆ ಹೋಗಿ ಹರಡಬಾರದು. ಎರಡನೆಯದಾಗಿ, ಇತರ ಪಕ್ಷಗಳ ಆಡಳಿತದ ಬಗ್ಗೆ ಟೀಕೆ ಮಾಡಬಹುದು, ಆದರೆ ಇಡೀ ದೇಶದ ಗೌರವವನ್ನು ತಗ್ಗಿಸುವ ಮಾತುಗಳನ್ನು ಆಡಬಾರದು. ಮೂರನೆಯದಾಗಿ, ನಮ್ಮ ಸಮಸ್ಯೆಗಳು ಏನೇ ಇರಲಿ, ವಿದೇಶಿಯರ ಹಸ್ತಕ್ಷೇಪದ ಬೇಡಿಕೆ ಇಡಬಾರದು ಹಾಗೂ ಅವರ ವಿಷಯಗಳಲ್ಲಿ ನಾವು ತಲೆತೂರಿಸಬಾರದು.

Advertisements

ಮೊದಲ ಮಾನದಂಡವನ್ನು ತೆಗೆದುಕೊಂಡರೆ, ರಾಹುಲ್ ಗಾಂಧಿಯ ಹೇಳಿಕೆಯಲ್ಲಿ ಅಗ್ಗದ ಅಥವಾ ತೀರಾ ಕೆಳಮಟ್ಟದ ಅಂತಹ ಯಾವ ಮಾತೂ ಕಾಣಿಸಲಿಲ್ಲ. ಅವರು ಸಂಸತ್ತಿನಲ್ಲಿ ವಿರೋಧಪಕ್ಷಗಳ ನಾಯಕರ ಮೈಕ್ ಬಂದ್ ಮಾಡುವುದರ ಬಗ್ಗೆ ಹೇಳಿದರು, ವಿರೋಧಪಕ್ಷದವರ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ರೇಡ್‍ಗಳ ಬಗ್ಗೆ ಹೇಳಿದರು ಹಾಗೂ ವಿರೋಧಪಕ್ಷಗಳ ನಾಯಕರ ಮೇಲೆ ಪೆಗಸಸ್ ಮೂಲಕ ಕಣ್ಗಾವಲು ಇಟ್ಟಿದ್ದರ ಬಗ್ಗೆ ಹೇಳಿದರು. ಈ ವಾಸ್ತವಗಳು ಜಗಜ್ಜಾಹೀರಾಗಿರುವ ವಾಸ್ತವಗಳು. ರಾಹುಲ್ ಗಾಂಧಿ ಗೌಪ್ಯವಾಗಿದ್ದ ಏನನ್ನೂ ಹೇಳಿಲ್ಲ. ಭಾರತವಷ್ಟೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಇಂತಹದ್ದೇ ರೀತಿಯಲ್ಲಿ ದಾಳಿಗಳು ಆಗುತ್ತಿವೆ. ಒಂದು ವೇಳೆ ಒಂದು ದೇಶದ ಒಬ್ಬ ಸಂಸದ, ಇನ್ನೊಂದು ದೇಶದ ಸಂಸದರೊಂದಿಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡಿದರೆ, ಅವರು ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡದೇ ಇದ್ದರೆ ಮತ್ಯಾವುದರ ಬಗ್ಗೆ ಚರ್ಚೆ ಮಾಡಿಯಾರು?

ಈ ಹೇಳಿಕೆಯನ್ನು ನೀವು 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್‍ನ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣದೊಂದಿಗೆ ಹೋಲಿಸಿ. ಅಲ್ಲಿ ಮೋದಿಯವರು ರಾಜೀವ್ ಗಾಂಧೀಯನ್ನು ಟೀಕಿಸುತ್ತ ಹೇಳಿದ್ದೇನೆಂದರೆ, ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಕೆಳಗೆ ತಲುಪುವ ಆ ದಿನಗಳು ಈಗಿಲ್ಲ ಎಂದರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ರೀತಿಯಲ್ಲಿ ‘ಆ 85 ಪೈಸೆಗಳನ್ನು ಸವೆಸುತ್ತಿದ್ದ ‘ಕೈ’ ಯಾವುದಿತ್ತು’ ಎಂದು ಕೇಳಿದರು. ವಿದೇಶದಲ್ಲಿ ಮಾಡಿದ ಈ ಅಗ್ಗದ ಚುನಾವಣಾ ಭಾಷಣದ ಬಗ್ಗೆ ಪ್ರಧಾನಮಂತ್ರಿಯವರು ಕ್ಷಮೆಯನ್ನೂ ಕೇಳಲಿಲ್ಲ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ನೀಡಲಿಲ್ಲ.

rahul gandhi1678189595

ಬಹುಶಃ ಬಿಜೆಪಿಯ ನಾಯಕರ ದೂರು ಎರಡನೆಯ ಮಾನದಂಡದ ಬಗ್ಗೆ ಇದೆ; ಅದು ರಾಹುಲ್ ಗಾಂಧಿ ಮಾತುಗಳಲ್ಲಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಘನತೆಯ ಪತನದ ಬಗ್ಗೆ ವ್ಯಕ್ತಪಡಿಸಿದ ಕಾಳಜಿಯಿಂದ ದೇಶದ ಇಮೇಜ್ ಕುಸಿದಿದೆ ಎಂದು. ಒಂದು ವೇಳೆ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಶಕ್ತಿಗಳು ಇಲ್ಲವಾಗಿವೆ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಡೆಸುವುದು ಭಾರತೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದರೆ, ಆ ಮಾನದಂಡ ಉಲ್ಲಂಘಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಅವರು ಇಂಥದ್ದೇನೂ ಹೇಳಲಿಲ್ಲ, ಅದರ ಬದಲಿಗೆ ಭಾರತದ ಜನರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯು ಆಳವಾಗಿ ಬೇರುಬಿಟ್ಟಿದ್ದನ್ನು ಎತ್ತಿತೋರಿಸಿದರು. ಅವರ ಈ ಹೇಳಿಕೆಯನ್ನು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ನೀಡಿದ ಭಾಷಣದೊಂದಿಗೆ ಹೋಲಿಕೆ ಮಾಡಿನೋಡಿ. ಅಲ್ಲಿ ಹಿಂದಿನ ಸರಕಾರಗಳ ಮೇಲೆ ದಾಳಿ ಮಾಡುತ್ತ ಮೋದಿಯವರು ‘ಹೀಗೂ ಒಂದು ಸಮಯವಿತ್ತು, ಆಗ ಜನರು ತಮ್ಮ ಕಳೆದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ ಏನೋ, ಅದಕ್ಕಾಗಿ ಹಿಂದುಸ್ತಾನದಲ್ಲಿ ಹುಟ್ಟಿದ್ದೀವಿ ಎಂದು ಯೋಚಿಸುತ್ತಿದ್ದರು’ ಎಂದು ಹೇಳಿದರು. ದೇಶದ ಪ್ರತಿಷ್ಠೆಯನ್ನು ತಗ್ಗಿಸುವ ಮಾನದಂಡದಲ್ಲಿ ದೇಶವನ್ನು ಅವಮಾನಿಸುವ ದೊಡ್ಡ ದೋಷಿ ಮೋದಿಜಿಯ ಈ ಹೇಳಿಕೆ ಎಂದು ನಿಸ್ಸಂಶಯವಾಗಿ ಹೇಳಬೇಕಿದೆ.

ಮೂರನೆಯ ಮಾನದಂಡ ವಿದೇಶಿಯರ ಹಸ್ತಕ್ಷೇಪವನ್ನು ಆಹ್ವಾನಿಸುವುದರ ಬಗ್ಗೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಂದಿನ ಜನಸಂಘದ ಸಂಸದ ಸುಬ್ರಮಣ್ಯಂ ಸ್ವಾಮಿಯೊಂದಿಗೆ ಅನೇಕ ವಿರೋಧಪಕ್ಷದ ನಾಯಕರು ಅಮೆರಿಕ ಮತ್ತು ಇತರ ದೇಶಗಳಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಸ್ತಕ್ಷೇಪ ಮಾಡುವ ಬೇಡಿಕೆ ಇಟ್ಟಿದ್ದರು. ಅಂತಹ ವಿಪತ್ತಿನ ಕಾಲದಲ್ಲಿ ಹೀಗೆ ಮಾಡಬೇಕೇ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ, ಆದರೆ ಸದ್ಯಕ್ಕೆ ಇಂತಹದ್ದೇನೂ ಆಗಿಲ್ಲ. ಬಿಜೆಪಿಯ ನಾಯಕರು ಆರೋಪವನ್ನಂತೂ ಮಾಡುತ್ತಿದ್ದಾರೆ, ಆದರೆ ಇಂಗ್ಲೆಂಡಿನ ಸಂಸದರು ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕು ಎಂಬ ಮನವಿ ಮಾಡಿರುವಂತಹ ಯಾವ ಹೇಳಿಕೆಗಳೂ ರಾಹುಲ್ ಗಾಂಧಿಯ ಮಾತುಗಳಲ್ಲಿ ಕಾಣಸಿಗುತ್ತಿಲ್ಲ. ಸ್ವಾಭಾವಿಕವಾಗಿಯೇ, ಇಂತಹ ಆರೋಪ ಮೋದಿಯವರ ಮೇಲೆಯೂ ಇಲ್ಲ. ಆದರೆ, ಇನ್ನೊಂದು ದಿಕ್ಕಿನಿಂದ ಅವರು ಖಂಡಿತವಾಗಿಯೂ ಈ ಘನತೆಯ ಉಲ್ಲಂಘನೆ ಮಾಡಿದ್ದಾರೆ; ಅದು ಅವರು ಅಮೆರಿಕದ ಹೂಸ್ಟನ್ ನಗರದಲ್ಲಿ 2019ರಲ್ಲಿ ಆದ ರ್ಯಾಲಿಯಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯನ್ನು ಕೂಗಿ, ಸುಮ್‍ಸುಮ್ನೆ ಅಮೇರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಲಸ ಮಾಡಿದರು. ಈ ಅಸಫಲ ಮತ್ತು ಹಾಸ್ಯಾಸ್ಪದ ಪ್ರಯತ್ನದ ಪರಿಣಾಮಗಳನ್ನು ದೇಶ ಅನುಭವಿಸಬೇಕಾಯಿತು.

ahul gandhi cambridge1679046453

ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಮೂರು ಮಾನದಂಡಗಳು ರಾಹುಲ್ ಗಾಂಧಿಯ ಮೇಲೆ ಅನ್ವಯ ಆಗುವುದಿಲ್ಲ ಎಂದಮೇಲೆ ಬಿಜೆಪಿ ಇಷ್ಟು ವಿಚಲಿತವಾಗಿದ್ದು ಏಕೆ? ಒಂದೋ, ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಗಲಾಟೆ ಸೃಷ್ಟಿಸುತ್ತಿದ್ದಾರೆ, ಅಥವಾ ರಾಹುಲ್ ಗಾಂಧಿಯು ಮೋದಿ ಸರಕಾರದ ಮರ್ಮಸ್ಥಾನದ ಮೇಲೆಯೇ ಪೆಟ್ಟುಕೊಟ್ಟಿದ್ದಾರೆಯೇ? ನಿಜ ಏನೆಂದರೆ, ಭಾರತದ ಪ್ರಜಾಸತ್ತಾತ್ಮಕ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಭಾರತ ಸರಕಾರವು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಬ್ಯಾನ್ ಮಾಡಿದಾಗ ಹಾಗೂ ಬಿಬಿಸಿ ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾದಾಗ. ಭಾರತೀಯ ಅರ್ಥವ್ಯವಸ್ಥೆಯ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಹಿಂಡನ್‍ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ಆದ ಹಗರಣ ತಡೆಯಲು ಭಾರತ ಸರಕಾರ ಮತ್ತು ಅದರ ಸಂಸ್ಥೆಗಳು ಏನನ್ನೂ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾದಾಗ. ಒಂದು ಸಶಕ್ತ ದೇಶದ ರೂಪದಲ್ಲಿ ಭಾರತದ ಪ್ರತಿಷ್ಠೆ ಯಾವಾಗ ಕುಸಿಯುತ್ತೆ ಎಂದರೆ, ಚೀನಾ ದೇಶವು ಭಾರತದ 2000 ಚದರ ಕಿಲೊಮೀಟರ್ ಆಕ್ರಮಿಸಿದೆ ಎಂದು ಸೆಟಲೈಟ್ ಮೂಲಕ ಜಗತ್ತಿಗೆ ತಿಳಿದಾಗ ಹಾಗೂ ಸರಕಾರ ಅದರ ಬಗ್ಗೆ ಮೌನವಹಿಸಿದ್ದನ್ನು ನೋಡಿದಾಗ. ಯಾರೂ ನಮ್ಮ ಗಡಿಯಲ್ಲಿ ಪ್ರವೇಶಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳ್ತಾರೆ ಹಾಗೂ ಚೀನಾದ ಬಳಿ ಎಷ್ಟು ಆರ್ಥಿಕ ಶಕ್ತಿ ಇದೆಯೆಂದರೆ, ನಾವು ಅವರೊಂದಿಗೆ ಕಾಲ್ಕೆರೆದು ಜಗಳವಾಡಲು ಸಾಧ್ಯವಿಲ್ಲ ಎಂದು ವಿದೇಶ ಮಂತ್ರಿ ಹೇಳುತ್ತಾರೆ. ಒಂದು ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯ ಮೇಲೆ ದೇಶದ ಪ್ರತಿಷ್ಠೆ ಕಡಿಮೆ ಮಾಡಿದ ಆರೋಪ ಹೊರಿಸುವ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಆಕ್ರಮಣದ ಬಗ್ಗೆ ಬಾಯ್ಬಿಟ್ಟಿದ್ದರೆ ದೇಶದ ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X