ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳ ಮೇಲಿನ ಶಿಕ್ಷೆ ರದ್ದುಮಾಡಿ, ಅವಧಿಪೂರ್ವ ಬಿಡುಗಡೆಗೆ ಸೂಚಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ವಿಶೇಷ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಮತ್ತು ಹೊಸ ಪೀಠ ಸ್ಥಾಪಿಸಬೇಕು ಎಂದು ಕೋರಿ ಬಿಲ್ಕಿಸ್ ಬಾನು ಅವರ ವಕೀಲೆ ಶೋಭಾ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮತ್ತು ಜೆ ಬಿ ಪರ್ಡಿವಾಲ ಅವರಿದ್ದ ಪೀಠ, ಈ ಕುರಿತು ಪರಿಶೀಲಿಸಿ ʻಹೊಸ ಪೀಠ ಸ್ಥಾಪಿಸಲಾಗುವುದುʼ ಎಂದು ಹೇಳಿದೆ.
ಗುಜರಾತ್ ಸರ್ಕಾರದ 2022ರ ಮೇ 12ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.