ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದ್ದ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮತ್ತು ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ಮೇಲಿದೆ. ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದಕನೀಜ್ ಫಾತಿಮಾ ಅವರು ಅಫಿಡವಿಟ್‌ನಲ್ಲಿ ಸಲ್ಲಿಸಿರುವ ಹಲವಾರು ಮಾಹಿತಿಗಳು ತಪ್ಪಾಗಿವೆ. ಉದ್ದೇಶಪೂರ್ವಕವಾಗಿಯೇ ಅವರು ಸತ್ಯವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿ ಎ.ಎಸ್ ಶರಣಬಸಪ್ಪ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಶರಣಬಸಪ್ಪ ಅವರು ಫಾತಿಮಾ ಅವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದರು.
“ಫಾತಿಮಾ ಅವರು ಎಸ್‌ಬಿಐ ಸ್ಟೇಷನ್ ಬ್ರಾಂಚ್‌ನಲ್ಲಿರುವ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಫಾತಿಮಾ ಅವರು 2018 ರಲ್ಲಿ 14.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿದ್ದರು. ಆದರೆ, ಐದು ವರ್ಷಗಳ ನಂತರ ಅದರ ಮೌಲ್ಯ ಕೇವಲ 14.64 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಮಾಹಿತಿ ನಂಬಬಹುದಾದ ರೀತಿಯಲ್ಲಿ ಇಲ್ಲ. ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು” ಎಂದು ಅರ್ಜಿಯಲ್ಲಿ ವಾದಿಸಿದ್ದರು.
ಶರಣಬಸಪ್ಪ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಅವಕಾಶ ನೀಡಿ ನೋಟೀಸ್ ಜಾರಿ ಮಾಡಿದೆ.