ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ಕುರಿತಾಗಿ ವಿವಾದಾತ್ಮಕ ಮತ್ತು ಪಾಕಿಸ್ತಾನ ಪರವೆಂಬಂತೆ ಧ್ವನಿಸುವ ಪೋಸ್ಟ್‌ಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಅಸ್ಸಾಂನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ವಿಚಾರದಲ್ಲಿ ಹಲವರು ಕೇಂದ್ರ ಸರ್ಕಾರವನ್ನೇ ದೂಷಿಸಿದ್ದಾರೆ. ಕೆಲವರು ಪಾಕ್ ಪರವಾದಂತಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕಾಗಿ ಕೆಲವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
“ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹೋಲಿಕೆಗಳಿಲ್ಲ. ಎರಡೂ ದೇಶಗಳು ಶತ್ರು ರಾಷ್ಟ್ರಗಳು. ನಾವು ಹಾಗೆಯೇ ಇರಬೇಕು” ಎಂದು ಶರ್ಮಾ ಹೇಳಿದ್ದಾರೆ.
2019ರ ಪುಲ್ವಾಮಾ ಮತ್ತು ಇತ್ತೀಚಿನ ಪಹಲ್ಗಾಮ್ ದಾಳಿಗಳು ‘ಸರ್ಕಾರದ ಪಿತೂರಿಗಳು’ ಎಂದು ಹೇಳಿಕೆ ನೀಡಿದ್ದಕ್ಕಾಗಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ (ಎಐಯುಡಿಎಫ್) ಶಾಸಕ ಅಮೀನುಲ್ ಇಸ್ಲಾಂ ವಿರುದ್ಧವೂ ದೇಶದ್ರೋಹ ಆರೋಪ ಹೊರಿಸಲಾಗಿದೆ.