- ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಮಾಹಿತಿ
- ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆ : ತುಷಾರ್ ಗಿರಿನಾಥ್
ಬಿಬಿಎಂಪಿಯ ಗುಣ ನಿಯಂತ್ರಣ ಕಟ್ಟಡದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಒಂಭತ್ತು ಸಿಬ್ಬಂದಿಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಹೇಳಿದ್ದಾರೆ.
ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂಭತ್ತು ಜನರಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ, ಇಇ ಕಿರಣ್ ಸ್ಥಿತಿ ಗಂಭೀರವಾಗಿದೆ ಎಂದು ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಚೀಫ್ ಇಂಜಿನಿಯರ್ ಶಿವಕುಮಾರ್ ಅವರಿಗೆ ಶೇ 25 ರಷ್ಟು ಸುಟ್ಟಗಾಯವಾಗಿದೆ. ಇವರಿಗೆ ಗಂಟಲಿನ ಸಮಸ್ಯೆಯಾಗಿದ್ದು, ಮಾತನಾಡಲು ಕಷ್ಟವಾಗುತ್ತಿದೆ. ಇಇ ಕಿರಣ್ ಸ್ಥಿತಿ ಕೂಡ ಗಂಭೀರವಾಗಿದ್ದು, ಡಯಾಲಿಸೀಸ್ ಮಾಡಲಾಗಿದೆ. ಆಪರೇಟರ್ ಜ್ಯೋತಿ ಅವರ ಮುಖಕ್ಕೆ ಹಾನಿಯಾಗಿದ್ದು, ಉಸಿರಾಟದ ಸಮಸ್ಯೆಯಾಗಿದೆ. ಈ ಮೂವರು ಇನ್ನೂ 4ರಿಂದ5 ದಿನ ಐಸಿಯುನಲ್ಲಿಯೇ ಇರಿಸಲಾಗುತ್ತದೆ. ಉಳಿದ ಆರು ಜನರು ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆ : ತುಷಾರ್ ಗಿರಿನಾಥ್
ಬೆಂಕಿ ಅವಘಡ ಘಟನೆಯನ್ನು ಬಿಬಿಎಂಪಿಯ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಬಿಬಿಎಂಪಿಯಿಂದ ಆಂತರಿಕ ತನಿಖೆ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ನೇತೃತ್ವದಲ್ಲಿ ತನಿಖೆ ನಡೆಯಲಾಗುತ್ತಿದೆ. ತನಿಖಾ ವರದಿಯನ್ನು ಸಿಎಂ, ಡಿಸಿಎಂಗೆ ಸಲ್ಲಿಸಲಾಗುತ್ತದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ತನಿಖೆಗೆ ನಮ್ಮ ಅಧಿಕಾರಿಗಳು ಸೂಕ್ತ ಸಹಕಾರ ನೀಡುತ್ತಿದ್ದಾರೆ. ಲ್ಯಾಬ್ನಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.
ಡಿ ಗ್ರೂಪ್ ನೌಕರ ಲ್ಯಾಬ್ ನಲ್ಲಿ ಸಹಾಯ ಮಾಡಬಹುದು. ಆದರೆ ಎಲ್ಲ ಕೆಲಸ ಅವರೇ ಮಾಡುವಂತಿಲ್ಲ. ಅಗ್ನಿ ಅವಘಡದಲ್ಲಿ ಒಂಬತ್ತು ಜನರಲ್ಲಿ 6 ಜನರಿಗೆ ಯಾವುದೇ ಅಪಾಯವಾಗಿಲ್ಲ. ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿ ವತಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಮುಖ ಸುಟ್ಟವರಿಗೆ ಸರ್ಜರಿ ಮಾಡಿಸಲಾಗುವುದು ಎಂದರು.
ಮೂವರು ಆರೋಪಿಗಳಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ
ಇನ್ನು ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಆನಂದ್, ಸ್ವಾಮಿ, ಸುರೇಶ್ ಸ್ಟೇಷನ್ ಬೇಲ್ ಮೂಲಕ ಬಿಡುಗಡೆಯಾಗಿದ್ದು, ವಿಚಾರಣೆಗೆ ಕರೆದಾಗ ಮತ್ತೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.