ಲೋಕಸಭಾ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ನಿಂದನೆಗೊಳಗಾಗಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿಯನ್ನೇ ಪಕ್ಷದಿಂದ ಮಾಯಾವತಿ ಉಚ್ಚಾಟಿಸಿದ್ದಾರೆ.
ಲೋಕಸಭೆಯಿಂದ ಪ್ರಶ್ನೆಗಾಗಿ ಲಂಚ ಆರೋಪ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
‘ಪಕ್ಷ ವಿರೋಧಿ ಚಟುವಟಿಕೆ’ ಎಂಬ ಕಾರಣ ನೀಡಿ ಡ್ಯಾನಿಶ್ ಅಲಿ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಿರುವುದಾಗಿ ತಿಳಿಸಲಾಗಿದೆ. ಡ್ಯಾನಿಶ್ ಅಲಿ ಅವರು ಅಮ್ರೋಹ ಕ್ಷೇತ್ರದ ಸಂಸದರಾಗಿದ್ದಾರೆ.
Danish Ali, BSP MP from Amroha suspended from the party over allegations of indulging in anti-party activities. pic.twitter.com/Uc7v5gYU4E
— Piyush Rai (@Benarasiyaa) December 9, 2023
ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆಗಳು ಅಥವಾ ಕ್ರಮಗಳ ವಿರುದ್ಧ ನಿಮಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅದರ ಹೊರತಾಗಿಯೂ ನೀವು ನಿರಂತರವಾಗಿ ಪಕ್ಷದ ವಿರುದ್ಧ ವರ್ತಿಸುತ್ತಿದ್ದೀರಿ ಎಂದು ಡ್ಯಾನಿಶ್ ಅಲಿಗೆ ಬಿಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.
ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿಯ ಸಂಸದ ರಮೇಶ್ ಬಿಧುರಿ, ಡ್ಯಾನಿಶ್ ಅಲಿ ಅವರನ್ನು ‘ಉಗ್ರವಾದಿ, ಭಯೋತ್ಪಾದಕ’ ಎಂದು ನಿಂದನೆ ಮಾಡಿದ್ದರು. ಇದು ದೇಶಾದ್ಯಂತ ವಿವಾದಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನಿಂದನೀಯ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ಸಂಸದ ರಮೇಶ್ ಬಿಧುರಿ ಕಳೆದ ಗುರುವಾರ ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದೆ ಕ್ಷಮೆ ಯಾಚಿಸಿದ್ದರು ಎಂದು ವರದಿಯಾಗಿದೆ.