2002ರ ಗುಜರಾತ್ ಗಲಭೆ ಆರೋಪಿಗಳೇಕೆ ಸರದಿಯಂತೆ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಿದ್ದಾರೆ?

Date:

ಗುಜರಾತ್ ಗಲಭೆ ಸಂದರ್ಭ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೂ, ಅವರನ್ನು ಹತ್ಯೆಗೈದವರು ಒಬ್ಬರ ನಂತರ ಮತ್ತೊಬ್ಬರು ನ್ಯಾಯಾಲಯದಿಂದ ಬಿಡುಗಡೆಗೊಳ್ಳುತ್ತಿರುವುದು ಏಕೆ?

ಅಹಮದಾಬಾದ್‌ನ ವಿಶೇಷ ನ್ಯಾಯಾಲಯ ಕಳೆದ ವಾರ ಬಿಜೆಪಿಯ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಮತ್ತು ಭಜರಂಗ ದಳದ ಬಾಬು ಭಜರಂಗಿ ಸೇರಿದಂತೆ 66 ಮಂದಿಯನ್ನು ಖುಲಾಸೆಗೊಳಿಸಿದೆ. ಇವರ ಮೇಲೆ 2002 ಗುಜರಾತ್ ಗಲಭೆ ಸಂದರ್ಭದಲ್ಲಿ ನರೋಡಾ ಗಾಮ್‌ನಲ್ಲಿ ಮುಸ್ಲಿಮ್ ಸಮುದಾಯದ 11 ಮಂದಿಯನ್ನು ಹತ್ಯೆಗೈದಿರುವ ಆರೋಪವಿದೆ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಿರುವುದು, ಹತ್ಯೆಗೈದಿರುವ ಹಿಂದೂಗಳ ಬಿಡುಗಡೆಯ ದೊಡ್ಡ ಪಟ್ಟಿಯಲ್ಲಿ ಇದು ಇತ್ತೀಚೆಗಿನದು.

ಗುಜರಾತ್‌ನ ಗೋಧ್ರಾ ಪಟ್ಟಣದಲ್ಲಿ ರೈಲಿಗೆ ತಗುಲಿದ ಬೆಂಕಿಯಲ್ಲಿ 60 ಹಿಂದೂ ಯಾತ್ರಿಗಳು ಮೃತಪಟ್ಟ ನಂತರ ಗಲಭೆ ಆರಂಭವಾಗಿತ್ತು. ರೈಲಿಗೆ ಬೆಂಕಿ ಪ್ರಕರಣದಲ್ಲಿ 11 ಮುಸ್ಲಿಂ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಆದರೆ ನಂತರದ ಗಲಭೆಯಲ್ಲಿ 2000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರು. ಈ ಗಲಭೆಯ ನಂತರ ನೂರಾರು ಹಿಂದುತ್ವ ಸಂಘಟನೆಗಳ ಸದಸ್ಯರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ನ್ಯಾಯಾಲಯಗಳಲ್ಲಿ ಅವರ ಬಿಡುಗಡೆಯಾಗುತ್ತಲೇ ಇದೆ. ಅನೇಕ ಪ್ರಕರಣಗಳಲ್ಲಿ ಶಿಕ್ಷೆಯಾದವರನ್ನೂ ಇತ್ತೀಚೆಗೆ ಬಿಡುಗಡೆ ಮಾಡಲಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗುಜರಾತ್ ಗಲಭೆ ನಡೆಯುವುದಕ್ಕೆ ಮೊದಲೇ ಆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಗಳ ಪೋಷಣೆಯಲ್ಲಿಯೇ ಮಾಯಾ ಕೊಡ್ನಾನಿ ಅವರಂತಹ ವ್ಯಕ್ತಿಗಳಿಗೆ ಕ್ಷಮೆ ದೊರೆತಿದೆ ಎಂದು ವಿಪಕ್ಷ ನಾಯಕರು ಮತ್ತು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಶಿಕ್ಷೆಯಾದ ಮೇಲೆ ಖುಲಾಸೆ

ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಕೊಡ್ನಾನಿ ಮೇಲಿದ್ದ ಎರಡನೇ ಅತಿದೊಡ್ಡ ಪ್ರಕರಣ ನರೋಡಾ ಗಾಮ್ ಹತ್ಯಾಕಾಂಡ. ಅವರೀಗ ಬಿಡುಗಡೆಯಾಗಿದ್ದಾರೆ. 2012ರಲ್ಲಿ ಅವರಿಗೆ ನರೋಡಾ ಪಾಟಿಯ ಹತ್ಯಾಕಾಂಡದಲ್ಲಿ 97 ಮುಸ್ಲಿಮರನ್ನು ಹತ್ಯೆಗೈದಿರುವ ಆರೋಪದಲ್ಲಿ 28 ವರ್ಷಗಳ ಶಿಕ್ಷೆಯಾಗಿತ್ತು. 2018ರಲ್ಲಿ ಈ ಪ್ರಕರಣದಿಂದ ಅವರನ್ನು ಗುಜರಾತ್‌ ಹೈಕೋರ್ಟ್ ಖುಲಾಸೆಗೊಳಿಸಿದೆ. ಇದೇ ಪ್ರಕರಣದಲ್ಲಿ ಬಾಬು ಭಜರಂಗಿಯ ಶಿಕ್ಷೆಯನ್ನು ಎತ್ತಿಹಿಡಿಯಲಾಯಿತು. ಆದರೆ ಜೀವಿತಾವಧಿಯವರೆಗೆ ಜೈಲು ಶಿಕ್ಷೆಯನ್ನು 21 ವರ್ಷಗಳ ಶಿಕ್ಷೆ ಎಂದು ಬದಲಿಸಲಾಗಿತ್ತು.

ಒಂಭತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 2002ರ ಗಲಭೆಯಲ್ಲಿ ಬಿಡುಗಡೆಗೊಂಡಿರುವ ಅನೇಕ ಹಿಂದೂ ಆರೋಪಿ- ಅಪರಾಧಿಗಳಲ್ಲಿ ಕೊಡ್ನಾನಿ ಮತ್ತು ಭಜರಂಗಿ ಇತ್ತೀಚೆಗಿನ ಸೇರ್ಪಡೆ.

2015ರಲ್ಲಿ ಸಬರಕಾಂತ ನ್ಯಾಯಾಲಯವು ಪ್ರಾಂತಿಜ್‌ ಪಟ್ಟಣದ ಬಳಿ ಬ್ರಿಟಿಷ್ ಮುಸ್ಲಿಮರು ಮತ್ತು ಅವರ ಚಾಲಕನನ್ನು ಹತ್ಯೆಗೈದ ಆರು ಮಂದಿಯನ್ನು ಬಿಡುಗಡೆ ಮಾಡಿದೆ.

2016 ಜೂನ್‌ನಲ್ಲಿ ಅಹಮದಾಬಾದ್‌ ನ್ಯಾಯಾಲಯವು ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡದಲ್ಲಿ 69 ಮುಸ್ಲಿಮರು ಮತ್ತು ಮಾಜಿ ಕಾಂಗ್ರೆಸ್ ಸಂಸದ ಎಹ್‌ಸಾನ್ ಜಾಫ್ರಿಯನ್ನು ಹತ್ಯೆಗೈದ ಆರೋಪ ಹೊತ್ತಿದ್ದ 36 ಮಂದಿಯನ್ನು ಬಿಡುಗಡೆಗೊಳಿಸಿದೆ.

2016 ಅಕ್ಟೋಬರ್‌ನಲ್ಲಿ ಮೆಹ್ಸಾನಾದ ಸರ್ದಾರ್‌ಪುರ ಹತ್ಯಾಕಾಂಡದಲ್ಲಿ 33 ಮುಸ್ಲಿಮರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳಾಗಿ 31 ಮಂದಿಯಲ್ಲಿ 14 ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಸಲ್ಲಿಸಿದ ಅರ್ಜಿಯನ್ನೂ ಹೈಕೋರ್ಟ್ ತಳ್ಳಿ ಹಾಕಿತ್ತು. ಇದೇ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಇತರ 31 ಮಂದಿಯನ್ನೂ ಬಿಡುಗಡೆಗೊಳಿಸಿದೆ.

ವರ್ಷದ ನಂತರ ಗಾಂಧಿನಗರ ನ್ಯಾಯಾಲಯವು ಸಾಕ್ಷ್ಯಗಳ ಕೊರತೆ ಮುಂದಿಟ್ಟು ಕಲೋಲ್ ತಾಲೂಕಿನ ಪಲಿಯಾಡ್ ಗ್ರಾಮದಲ್ಲಿ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿರುವುದು ಮತ್ತು ಆಸ್ತಿ ನಾಶದ ಪ್ರಕರಣದಲ್ಲಿ 287 ಮಂದಿಯನ್ನು ಖುಲಾಸೆಗೊಳಿಸಿದೆ.

2018 ಮೇನಲ್ಲಿ ಹೈಕೋರ್ಟ್‌ ಆನಂದ್‌ನ ಓಡ್ ಹತ್ಯಾಕಾಂಡದಲ್ಲಿ ಆರೋಪಿಗಳಾಗಿ ಆರು ವರ್ಷಗಳ ಶಿಕ್ಷೆ ಅನುಭವಿಸಿದ್ದ ಮೂವರನ್ನು ಬಿಡುಗಡೆಗೊಳಿಸಿದೆ. ವಿಚಾರಣಾ ನ್ಯಾಯಾಲಯವು 19 ಮಂದಿಗೆ ಶಿಕ್ಷೆ ನೀಡುವುದನ್ನು ಎತ್ತಿಹಿಡಿದಿದ್ದು, ಇತರ 23 ಮಂದಿಯನ್ನು ಬಿಡುಗಡೆಗೊಳಿಸಿತ್ತು.

ಇತ್ತೀಚೆಗೆ ಜನವರಿಯಲ್ಲಿ ಪಂಚಮಹಲ್‌ನ ನ್ಯಾಯಾಲಯವು 17 ಮುಸ್ಲಿಮರನ್ನು ಕೊಲೆಗೈದ 22 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಿದೆ.

ಏಪ್ರಿಲ್ 2ರಂದು ನ್ಯಾಯಾಲಯ ಗಾಂಧಿನಗರದ ಕರೋಲ್‌ನ ಬಳಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊತ್ತಿದ್ದ 27 ವ್ಯಕ್ತಿಗಳನ್ನು ಸಾಕ್ಷ್ಯವಿಲ್ಲವೆಂದು ಬಿಡುಗಡೆಗೊಳಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಲ್‌ಜಿ ಚುಡಾಸ್ಮ ಅವರು, “ಪ್ರಾಸಿಕ್ಯೂಶನ್ ಕೇವಲ ಸಂಶಯದಿಂದ ಪ್ರಕರಣ ದಾಖಲಿಸಿದೆಯೇ ವಿನಾ ದಾಖಲೆಯಲ್ಲಿ ಯಾವುದೇ ಸಾಕ್ಷ್ಯವಿಲ್ಲ” ಎಂದು ಅವಲೋಕನ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮೋದಿಯವರ ಮನದ ಮಾತು

ಮುಸ್ಲಿಮರನ್ನು ಕೊಂದವರು ಯಾರು ಎಂಬ ಪ್ರಶ್ನೆ

ಚಿಂತಕರು ಮತ್ತು ವಿಶ್ಲೇಷಕರು ನ್ಯಾಯಾಲಯದ ಬಿಡುಗಡೆಗಳನ್ನು ಪ್ರಶ್ನಿಸಿದ್ದಾರೆ. “ಗುಜರಾತ್‌ ಗಲಭೆ ಸಂದರ್ಭದಲ್ಲಿ 2000 ಮುಸ್ಲಿಮರು ಆತ್ಮಹತ್ಯೆ ಮಾಡಿಕೊಂಡರೆ? ಬಿಲ್ಕಿಸ್ ಬಾನೋರ ಅತ್ಯಾಚಾರಗೈದು ಅವರ ಕೊಲೆ ಮಾಡಲು ಬಾಹ್ಯಾಕಾಶ ಜೀವಿಗಳು ಬಂದಿದ್ದವೆ? ಎಹಸಾನ್ ಜಾಫ್ರಿ ತಮ್ಮ ಮನೆಯನ್ನು ಸ್ವತಃ ಸುಟ್ಟುಕೊಂಡು ಅದಕ್ಕೆ ಧುಮುಕಿ ಸತ್ತರೆ?” ಎಂದು ಉಪ್ಸಾಲಾ ವಿಶ್ವವಿದ್ಯಾಲಯದ ಶಾಂತಿ ಮತ್ತು ಸಂಘರ್ಷ ಸಂಶೋಧನೆಯ ಪ್ರೊಫೆಸರ್ ಅಶೋಕ್ ಸ್ವೇನ್ ಪ್ರಶ್ನಿಸಿದ್ದಾರೆ.

ಮಾಯಾ ಕೊಡ್ನಾನಿ ಬಿಡುಗಡೆ ಪ್ರಶ್ನಿಸಿದ ಎನ್‌ಸಿಪಿ ನಾಯಕ ಶರದ್ ಪವಾರ್‌, “ಆಡಳಿತವೇ ಗುಜರಾತ್ ಗಲಭೆ ಹಿಂದೆ ಇತ್ತು. ಅಲ್ಪಸಂಖ್ಯಾತ ಸಮುದಾಯದವರ ಕೊಲೆಯಾಗಿದೆ. ಬಹಳಷ್ಟು ಮಂದಿಯನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಶಾಸಕಿಯಾಗಿದ್ದರು. ಈಗ ನ್ಯಾಯಾಲಯ ಅವರನ್ನೆಲ್ಲ ಖುಲಾಸೆಗೊಳಿಸಿದೆ. ಹಾಗಿದ್ದರೆ ಸತ್ತವರನ್ನು ಕೊಂದವರು ಯಾರು? ಇದು ಸತ್ತವರ ಕೊಲೆ ಮಾತ್ರವಲ್ಲ. ಈ ದೇಶದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂವಿಧಾನದ ಕೊಲೆ. ಅಧಿಕಾರದಲ್ಲಿರುವವರು ತಮ್ಮ ಅಧಿಕಾರ ಬಳಸಿ ಇದನ್ನೆಲ್ಲ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಪ್ರಾಸಿಕ್ಯೂಷನ್‌ನ ವರ್ಗೀಯ ದೋಷದಿಂದಾಗಿ ಮಾಯಾ ಕೊಡ್ನಾನಿ ಮತ್ತು ಭಜರಂಗಿ ಬಿಡುಗಡೆಗೊಂಡಿದ್ದಾರೆ” ಎಂದು ಹೇಳಿರುವ ಕಾಂಗ್ರೆಸ್ ಗುಜರಾತ್‌ನ ಬಿಜೆಪಿ ಸರ್ಕಾರದ ಮೇಲೆ ದೋಷ ಹೊರಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...