ದೇಶವು ಮತ್ತೊಂದು ಮಿನಿ ಜನಾಭಿಪ್ರಾಯ ಸಂಗ್ರಹಣೆಯನ್ನು ಎದುರು ನೋಡುತ್ತಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆಗಳು ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಹೊಸ ತಿರುವು ನೀಡುವುದೇ, ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳಿಗೆ ಒಂದು ಸಣ್ಣ ಸಂದೇಶವನ್ನು ರವಾನಿಸಬಹುದೇ?
ಲೋಕಸಭೆ ಚುನಾವಣೆ ನಡೆದು ಮೂರು ತಿಂಗಳ ನಂತರ ದೇಶವು ಮತ್ತೊಂದು ಮಿನಿ ಜನಾಭಿಪ್ರಾಯ ಸಂಗ್ರಹಣೆಯನ್ನು ಎದುರು ನೋಡುತ್ತಿದೆ. ಈಗ ಬರಲಿರುವ ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆಗಳು ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಹೊಸ ತಿರುವು ನೀಡದಿದ್ದರೂ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳಿಗೆ ಒಂದು ಸಣ್ಣ ಸಂದೇಶವನ್ನು ಖಂಡಿತಾ ನೀಡಲಿದೆ. ಅಕ್ಟೋಬರ್ 1 ರಂದು, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಮತದಾರರು ಹೊಸ ಶಾಸಕರನ್ನು ಆಯ್ಕೆ ಮಾಡುವುದರೊಂದಿಗೆ ನೂತನ ಸರ್ಕಾರವನ್ನು ರಚಿಸಲಿದ್ದಾರೆ. ವಿಧಾನಸಭೆ ಚುನಾವಣೆ ನಡೆಯುವ ಉತ್ತರ ಭಾರತದ ಇವೆರಡು ಪ್ರದೇಶಗಳು ವಿಭಿನ್ನ ರಾಜಕೀಯ ವೈವಿಧ್ಯತೆಯನ್ನು ಹೊಂದಿವೆ.
ಜಮ್ಮು ಮತ್ತು ಕಾಶ್ಮೀರವು ಈಗ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವುದರೊಂದಿಗೆ 90 ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಸಂವಿಧಾನದ 370ನೇ ವಿಧಿ ರದ್ದುಪಡಿಸಿ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ರಾಜ್ಯ ಸ್ಥಾನಮಾನವನ್ನು ಕಳೆದುಕೊಂಡಿದೆ. ಕಣಿವೆ ಪ್ರದೇಶದ 88.66 ಲಕ್ಷ ಮತದಾರರು ಮೂರು ಹಂತದ ಚುನಾವಣೆಯಲ್ಲಿ 10 ವರ್ಷಗಳ ನಂತರ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ಬಾರಿ ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಪೀಳಿಗೆಯ 4.27 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಸಂಸತ್ತು ಆಗಸ್ಟ್ 2019ರಲ್ಲಿ ಲಡಾಖ್ ಹಾಗೂ ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ ನಂತರ ಭೌಗೋಳಿಕ ವಿಭಜನೆ ಹಾಗೂ ಕ್ಷೇತ್ರ ವಿಭಜನೆಯಲ್ಲಿ ಕೂಡ ಕಣಿವೆ ಪ್ರದೇಶವು ಹತ್ತಾರು ಬದಲಾವಣೆಗಳನ್ನು ಕಂಡಿದೆ. ಜಮ್ಮು ಮತ್ತು ಕಾಶ್ಮೀರವು ಎರಡು ಪ್ರದೇಶಗಳನ್ನು ಉಳಿಸಿಕೊಂಡಿದ್ದು, ದಶಕಗಳಿಂದ ಇಲ್ಲಿನ ರಾಜಕೀಯ ಸಂಬಂಧಗಳು ವಿಭಿನ್ನವಾಗಿವೆ. ಕಣಿವೆ ಪ್ರದೇಶವು ದೇಶದಲ್ಲಿಯೇ ಭೌಗೋಳಿಕವಾಗಿ ಹಲವು ಪ್ರಾಮುಖ್ಯತೆಯನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ, ಪಾಕಿಸ್ತಾನವು ಕೆಲವು ಬಾರಿ ಕಾಶ್ಮೀರದ ಮೇಲೆ ನಡೆಸಿದ ಯುದ್ಧಗಳಿಗೆ ಸಾಕ್ಷಿಯಾಗಿದೆ. ಕಣಿವೆ ಪ್ರದೇಶದ ಬೆಳವಣಿಗೆಗಳು ಕೆಲವೊಮ್ಮೆ ನೆರೆಹೊರೆ ದೇಶದವರು ನಡೆಸುವ ದಾಳಿಗಳ ಪರಿಣಾಮದಿಂದ ಅಂತಾರಾಷ್ಟ್ರೀಯ ಗಮನವನ್ನು ಪಡೆದುಕೊಳ್ಳುತ್ತವೆ. ಈ ಪ್ರದೇಶದಲ್ಲಿ ಗಡಿಯಾಚೆಗಿನ ಸಂಪರ್ಕಗಳೊಂದಿಗೆ ಭಯೋತ್ಪಾದನೆ ವಿಷಯವು ಕೂಡ ಕಳೆದ ಹಲವಾರು ದಶಕಗಳಿಂದ ಭಾರತದೊಂದಿಗೆ ಪ್ರಧಾನ ಕಾಳಜಿಯ ವಿಷಯವಾಗಿದೆ.
ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಿಸಿದ ನಂತರ ಕಳೆದ ಐದು ವರ್ಷಗಳಿಂದ, ದೇಶದಲ್ಲಿ ಬೇರೆಡೆಗೆ ಅನ್ವಯಿಸುವ ಹಲವಾರು ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ವಿಸ್ತರಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಭಜನೆಯ ನಂತರದ ಕ್ಷೇತ್ರ ಮರುವಿಂಗಡನೆಯ ಕಾರ್ಯದ ನಂತರ, ವಿಧಾನಸಭೆ ಕ್ಷೇತ್ರಗಳ ಸಂಖ್ಯೆಗಳನ್ನು ಲಡಾಖ್‌ನ 4 ಕ್ಷೇತ್ರಗಳನ್ನು ಹೊರತುಪಡಿಸಿ 83 ರಿಂದ 90ಕ್ಕೆ ಹೆಚ್ಚಿಸಲಾಗಿದೆ. ಇವುಗಳಲ್ಲಿ 16 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಣಿವೆ ಪ್ರದೇಶದ ಪರಿಸ್ಥಿತಿ ಬದಲಾವಣೆ, ದೀರ್ಘಾವಧಿಯ ಶಾಂತಿಯ ವರದಿಗಳು ಮತ್ತು ನಿರಾಶ್ರಿತರಿಗೆ ನವೀಕೃತ ಆರ್ಥಿಕ ಚಟುವಟಿಕೆಯ ಮೇಲೆ ಒತ್ತು ನೀಡುವುದು ಸೇರಿದಂತೆ ಮುಂತಾದ ಕಾರಣಗಳಿಂದ ಚುನಾವಣೆಯಲ್ಲಿ ಜನರ ಮತ ಚಲಾವಣೆಯ ವಿಷಯದಲ್ಲಿ ಒಂದಿಷ್ಟು ಭಿನ್ನ ಆಶಯಗಳು ವ್ಯಕ್ತವಾಗಿರಬಹುದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎತ್ತಿನಹೊಳೆಯಲ್ಲಿ ನೀರಿಗಿಂತ ಹೆಚ್ಚು ಹಣವೂ ಹರಿದಿದೆ; ಪಶ್ಚಿಮಘಟ್ಟವೂ ನಾಶವಾಗಿದೆ
2014ರಲ್ಲಿ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಾಗ 28 ಸ್ಥಾನ ಗೆದ್ದಿದ್ದ ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದ ಜೆ ಅಂಡ್ ಕೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಪಕ್ಷದ ಬೆಂಬಲದೊಂದಿಗೆ 25 ಕ್ಷೇತ್ರಗಳನ್ನು ಜಯಿಸಿದ್ದ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆದರೆ ಎರಡು ಪಕ್ಷಗಳ ಸಂಬಂಧಗಳು ಹೆಚ್ಚು ದಿನ ಉಳಿಯಲಿಲ್ಲ. ಮೆಹಬೂಬಾ ಮುಫ್ತಿ ಪಿಡಿಪಿಯನ್ನು ಮುನ್ನಡೆಸುತ್ತಿದ್ದು, ಸದ್ಯ ಇವೆರಡೂ ಪಕ್ಷಗಳು ಯಾವುದೇ ಚುನಾವಣಾ ಒಪ್ಪಂದಕ್ಕೆ ಬಂದಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಜೆ ಅಂಡ್ ಕೆ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಕಾಂಗ್ರೆಸ್‌ನೊಂದಿಗೆ ಮೈತ್ರಿ ರಚಿಸಿಕೊಂಡು ಚುನಾವಣಾ ಅಖಾಡಕ್ಕಿಳಿದಿದೆ. ಕಣಿವೆ ಪ್ರದೇಶದ ಧ್ವನಿಯಾಗಿ ಉಳಿದಿರುವ ಇವೆರಡು ಪ್ರಾದೇಶಿಕ ಪಕ್ಷಗಳು ಕಳೆದ 2014ರ ಚುನಾವಣೆಯಲ್ಲಿ ಶೇ.44 ರಷ್ಟು ಮತಗಳನ್ನು ಗಳಿಸಿದ್ದವು.
ಆದರೆ, ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಭಿನ್ನವಾದ ಫಲಿತಾಂಶ ಹೊರಬಿದ್ದಿದೆ. ಯುಎಪಿಎ ಅಡಿಯಲ್ಲಿ ಉಗ್ರವಾದದ ಚುಟುವಟಿಕೆಯ ಆರೋಪವನ್ನು ಎದುರಿಸುತ್ತಿರುವ ಸೆರೆಮನೆಯಲ್ಲಿರುವ ಇಂಜಿನಿಯರ್ ರಶೀದ್ ಪಕ್ಷೇತರ ಅಭ್ಯರ್ಥಿಯಾಗಿ ಎನ್‌ಸಿಯ ಒಮರ್ ಅಬ್ದುಲ್ಲಾ ಅವರನ್ನು ಬಾರಾಮುಲ್ಲಾದಿಂದ ಸೋಲಿಸಿದ್ದರು. ರಶೀದ್ ಅವರ ಅವಾಮಿ ಇತ್ತೆಹಾದ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎನ್‌ಸಿ ಹಾಗೂ ಪಿಡಿಪಿಗೆ ಹೋಲಿಸಿದರೆ ಅವಾಮಿ ಇತ್ತೆಹಾದ್ ಪಕ್ಷವು ಭಿನ್ನವಾದ ಪ್ರಾದೇಶಿಕ ನಿಲುವನ್ನು ಹೊಂದಿದೆ. ಈ ಅಂಶವು ಕೂಡ ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ. ಪಿಡಿಪಿಯ ಮೆಹಬೂಬಾ ಮುಫ್ತಿ ಕೂಡ ನ್ಯಾಷನಲ್ ಕಾನ್ಫರೆನ್ಸ್‌ನ ಸೂಫಿ ಪೀರ್ ಮಿಯಾನ್ ಅಲ್ತಾಫ್ ಅಹ್ಮದ್ ವಿರುದ್ಧ ಲೋಕ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರ ರಾಜಕೀಯದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ ಮತ್ತು ಎನ್‌ಸಿ ಪಕ್ಷಗಳು ತಮ್ಮ ಪಕ್ಷದ ಅಸ್ತಿತ್ವವನ್ನು ಮರುಸ್ಥಾಪಿಸಲು ಉತ್ಸುಕವಾಗಿವೆ. ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶವನ್ನು ಪಡೆದ ಕಾಂಗ್ರೆಸ್, ಎನ್‌ಸಿಯ ಬೆಂಬಲದೊಂದಿಗೆ ಗೆಲುವಿನ ಹುರುಪಿನಲ್ಲಿದೆ. ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ ಕೂಡ ಪ್ರದೇಶದಲ್ಲಿ ಹಲವು ಹೊಸ ಬದಲಾವಣೆಗಳನ್ನು ಜಾರಿಗೊಳಿಸಿರುವುದು ತನಗೆ ಲಾಭವಾಗಬಹುದು ಎಂದುಕೊಂಡಿದೆ.
ಹರಿಯಾಣದಲ್ಲಿ ಬೀಸಲಿದೆಯೆ ಹೊಸ ಗಾಳಿ?
ದೆಹಲಿಯೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಹರಿಯಾಣ ಕೂಡ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರವಹಿಸಲಿದೆ. ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಹರಿಯಾಣದಿಂದ 10 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಸಮನಾಗಿ ಗೆಲುವು ಸಾಧಿಸುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಯಾರ ಮುಡಿಗೆ ಸೇರಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
ರಾಜ್ಯ ರಾಜಕೀಯದಲ್ಲಿ ಉಂಟಾಗುವ ತಿರುವುಗಳನ್ನು ಗಮನಿಸುತ್ತಿರುವ ರಾಜಕೀಯ ಪಂಡಿತರ ಅಭಿಪ್ರಾಯವೆಂದರೆ ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶಗಳು ಅಲ್ಲಿನ ಜನರಲ್ಲಿ ರಾಜ್ಯದ ದುರಾಡಳಿತದ ಕೋಪ ಮತ್ತು ಹತಾಶೆಯ ಭಾವನೆಯನ್ನು ವ್ಯಕ್ತಪಡಿಸಲಿಲ್ಲ. ಕಳೆದ 20 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮನಾಗಿ ಅಧಿಕಾರ ಅನುಭವಿಸಿವೆ. ಮನೋಹರ್ ಲಾಲ್ ಕಟ್ಟರ್ 2014ರಿಂದ 2024ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ರಾಷ್ಟ್ರ ರಾಜಕಾರಣಕ್ಕೆ ಜಿಗಿದ ನಂತರ ಕಳೆದ 6 ತಿಂಗಳ ಹಿಂದೆ ನಯಾಬ್ ಸಿಂಗ್ ಸೈನಿ ಅವರಿಗೆ ಪದವಿಯನ್ನು ಹಸ್ತಾಂತರಿಸಿದ್ದಾರೆ. 2014ರ ಹತ್ತು ವರ್ಷದ ಮುಂಚೆ ಕಾಂಗ್ರೆಸಿನ ಭೂಪೇಂದರ್ ಸಿಂಗ್ ಹೂಡ ಸಿಎಂ ಆಗಿದ್ದರು. ಜನತಾದಳ ಹಾಗೂ ಐಎನ್‌ಎಲ್‌ಡಿ ಮೂಲಕ ಮಾಜಿ ಉಪ ಪ್ರಧಾನಿ ಹಾಗೂ ಸಿಎಂ ಆಗಿದ್ದ ದೇವಿಲಾಲ್, ಅವರ ಮೊಮ್ಮಗ ಹರಿಯಾಣದ ಮೂರನೇ ತಲೆಮಾರಿನ ರಾಜಕಾರಣಿ ಮಾಜಿ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ತಮ್ಮ ಜನನಾಯಕ ಜನತಾ ಪಕ್ಷದೊಂದಿಗೆ(ಜೆಜೆಪಿ) ಕಳೆದ 10 ವರ್ಷಗಳಿಂದ ಬಿಜೆಪಿಗೆ ಬೆಂಬಲ ನೀಡಿದ್ದರು. ಸದ್ಯ ಈ ಪಕ್ಷವೂ ಬಿಜೆಪಿಯೊಂದಿಗೆ ಭಿನ್ನಮತ ಎದುರಿಸುತ್ತಿದೆ.
ಸದ್ಯ ಈ ವಿಧಾನಸಭೆ ಚುನಾವಣೆಯಲ್ಲಿ ಜೆಜೆಪಿ ಪಕ್ಷವು ದಲಿತ ನಾಯಕ ಮತ್ತು ಸಂಸದ ಚಂದ್ರಶೇಖರ್ ಆಜಾದ್ ನೇತೃತ್ವದ ಆಜಾದ್ ಸಮಾಜ ಪಕ್ಷದೊಂದಿಗೆ (ಕಾನ್ಶಿ ರಾಮ್) ಮೈತ್ರಿ ಮಾಡಿಕೊಂಡಿದೆ. ಜಾಟ್ ಸಮುದಾಯವಿರುವ ಹಲವು ಕ್ಷೇತ್ರಗಳಲ್ಲಿ ಶೇ. 20ಕ್ಕಿಂತ ಹೆಚ್ಚು ದಲಿತ ಸಮುದಾಯದ ಮತಗಳಿದ್ದು, ಚುನಾವಣೆಯಲ್ಲಿ ಮಹತ್ತರ ಪಾತ್ರವಹಿಸುವ ಸಾಧ್ಯತೆಯಿದೆ. ಜಾಟ್ ಸಮುದಾಯ ರಾಜ್ಯದಲ್ಲಿ ರಾಜಕೀಯ ಶಕ್ತಿಯಾಗಿದ್ದು, ರಾಜ್ಯದ ಆರ್ಥಿಕತೆಗೆ ಪ್ರಮುಖವಾದ ಕೃಷಿ ಕ್ಷೇತ್ರದ ಬೆನ್ನೆಲುಬಾಗಿದ್ದಾರೆ.
ಕಳೆದ 10 ವರ್ಷಗಳಲ್ಲಿ ಜಾಟ್ ಸಮುದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಿಜೆಪಿ ಸರ್ಕಾರಗಳು ತಿರಸ್ಕರಿಸಿರುವ ಕಾರಣ ಭಾರತೀಯ ಜನತಾ ಪಕ್ಷಗೆ ಈ ಬಾರಿ ಹಿನ್ನಡೆಯುಂಟಾಗಬಹುದು ಎಂದು ಹೇಳಲಾಗುತ್ತಿದೆ. ಅಸಮಾಧಾನದಿಂದಾಗಿ ಜಾಟ್ ಸಮುದಾಯದ ರೈತ ನಾಯಕರು ಒಂದು ದಶಕದಿಂದ ಹೋರಾಟಗಳನ್ನು ನಡೆಸುತ್ತಿದ್ದಾರೆ. ಮನೋಹರ್ ಲಾಲ್ ಖಟ್ಟರ್ ಸಿಎಂ ಕುರ್ಚಿಯಿಂದ ಕೆಳಗಿಳಿದಾಗ ಪ್ರಮುಖ ನಾಯಕರನ್ನು ಕಡೆಗಣಿಸಿ ನಯಾಬ್ ಸಿಂಗ್ ಸೈನಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದು, ಹಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇವೆಲ್ಲವೂ ಆಡಳಿತ ಪಕ್ಷಕ್ಕೆ ವಿರೋಧವಾಗಲಿದೆ. ಮುಂದಿನ ತಿಂಗಳು ಒಟ್ಟು 90 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ದಲಿತ ಹಾಗೂ ಜಾಟ್ ಸಮುದಾಯ ಯಾರಿಗೆ ಹೆಚ್ಚು ಬೆಂಬಲ ನೀಡುತ್ತಾರೋ ಕಾಂಗ್ರೆಸ್ ಸೇರಿ ಉಳಿದ ಎಲ್ಲ ಪಕ್ಷಗಳಿಗೆ ಇದರಿಂದ ಅಧಿಕಾರ ನಿರ್ಣಾಯಕವಾಗಲಿದೆ.