ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ , “ಪ್ರಜ್ವಲ್ ಪ್ರಕರಣದಿಂದ ದೇವೇಗೌಡ ಹಾಗೂ ಅವರ ಪತ್ನಿ ತುಂಬಾ ನೊಂದುಕೊಂಡಿದ್ದಾರೆ” ಎಂದಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆರೋಗ್ಯವನ್ನು ವಿಚಾರಿಸಿದ ಬಳಿಕ ಮಾತನಾಡಿದ ಅವರು, “ಕುಮಾರಸ್ವಾಮಿ, ದೇವೇಗೌಡರು ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ವಿಶೇಷವಾಗಿ ದೇವೇಗೌಡರ ವೈಯಕ್ತಿಕ ಬದುಕು ತೆರೆದ ಪುಸ್ತಕ. ಅದರಲ್ಲಿ ಮುಚ್ಚುಮರೆ ಇಲ್ಲ. ದೇವೇಗೌಡರಾಗಲಿ, ಅಜ್ಜಿ ಚೆನ್ನಮ್ಮ ಅವರಾಗಲಿ ನಮ್ಮಂತ ಯುವಕರಿಗೆ ಸ್ಫೂರ್ತಿ. ದಂಪತಿ ಯಾವ ರೀತಿ ಬಾಳಿ ಬದುಕಬೇಕು ಅನ್ನೋದಕ್ಕೆ ಅವರಿಗಿಂತ ಉದಾಹರಣೆ ಯಾರು ನನಗೆ ಕಾಣುವುದಿಲ್ಲ. ಆದರೆ, ಈ ಪೆನ್‌ಡ್ರೈವ್ ಘಟನೆಯಿಂದ ತುಂಬಾ ನೊಂದಿದ್ದಾರೆ” ಎಂದರು.
ಹಾಸನ ಕೇಸ್ಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಹೇಳಿಕೆ ನೀಡಿರೋ ನಿಖಿಲ್ ಕುಮಾರಸ್ವಾಮಿ ಆ ಅಶ್ಲೀಲ ವಿಡಿಯೋ ನಾನು ನೋಡೋ ಧೈರ್ಯ ಮಾಡಿಲ್ಲ.. ನನ್ನ ಸುತ್ತಾಮುತ್ತ ಇರೋರು ಫೋನ್ ಮಾಡಿ ಹೇಳಿದ್ರು, ಕೇಳಿ ಬೇಜಾರಾಯ್ತು ಎಂದು ಹೇಳಿಕೆ ನೀಡಿದ್ದಾರೆ.@Nikhil_Kumar_k @iPrajwalRevanna#NikhilKumaraswamy #HassanCase #PrajwalRevanna pic.twitter.com/aSxlgYDfZA
— NewsFirst Kannada (@NewsFirstKan) May 4, 2024
“ದೇವೇಗೌಡರಿಗೆ 91 ವರ್ಷ. ಸಹಜವಾಗಿ ಇಂತಹ ವಿಷಯ ಕೇಳಿದ ಮೇಲೆ ದೇವೇಗೌಡರ ಮೇಲೆ ಯಾವ ರೀತಿ ಪರಿಣಾಮ ಆಗಿರುತ್ತೆ, ಅಘಾತವಾಗಿರುತ್ತೆ ಅಂತ ಯಾರು ಊಹೆ ಮಾಡಲು ಸಾಧ್ಯವಿಲ್ಲ. ದೇವೇಗೌಡರು ಸಾಕಷ್ಟು ನೊಂದಿದ್ದಾರೆ. ಇಡೀ ರಾಜ್ಯದ ಜನತೆಗೂ ಕೂಡಾ ದೇವೇಗೌಡ ಮನಸಿನ ಮೇಲೆ ಯಾವ ರೀತಿ ಪರಿಣಾಮ ಬೀರಿರಬೇಕು ಅಂತ ಎಲ್ಲರಿಗೂ ಗೊತ್ತಿರುವ ವಿಷಯ” ಎಂದರು.
“ನನಗೆ ಒಂದು ವಿಷಯಕ್ಕೆ ದುಃಖ ಆಗಿದೆ. ಆ ವಿಡಿಯೋಗಳನ್ನು ನೋಡಲು ನಾನು ಧೈರ್ಯ ಮಾಡಲಿಲ್ಲ, ನನ್ನ ಸ್ನೇಹಿತರು ಫೋನ್ ಮಾಡಿ ಹೇಳಿದರು. ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿದ್ದಾರೆ. ಆ ಹೆಣ್ಣು ಮಕ್ಕಳ ಮುಖ ಕಾಣುವ ರೀತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ರೀತಿ ವಿಡಿಯೋ ಬಿಡುಗಡೆ ಮಾಡಿರುವವರ ಮೇಲೆ ಕ್ರಮ ಆಗಬೇಕು” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಮೀಕ್ಷೆ | ‘ಬಿಜೆಪಿ ಬಂದ ಬಳಿಕವೂ ಭ್ರಷ್ಟಾಚಾರ ಕಡಿಮೆಯಾಗಿಲ್ಲ’ ಎಂದ ಉತ್ತರ ಕರ್ನಾಟಕದ ಮಂದಿ!
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡ, ಕುಮಾರಸ್ವಾಮಿಯವರನ್ನ ಎಳೆದು ತರೋದು ಸರಿಯಲ್ಲ. ತಪ್ಪು ಮಾಡಿದವರು ತಲೆ ಬಾಗಲೇಬೇಕು. ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಆಗುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಅಂತಿಮವಾಗಿ ಎಸ್‌ಐಟಿ ವರದಿ ಬಂದ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಅಂತಿಮವಾಗಿ ತನಿಖಾ ವರದಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ” ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
