ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಹೇಳಿಕೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, “ರೈತರ ಒತ್ತಾಯದ ಮೇರೆಗೆ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, “ನೀರಿನ ಬೆಲೆಯೂ 25 ರೂಪಾಯಿ ಆಗಿದೆ. ರೈತರಿಗೆ ಸಿಗುವ ಹಾಲಿನ ಬೆಲೆ ಕಡಿಮೆಯಿದೆ. ಅದಕ್ಕೆ ರೈತರ ಒತ್ತಾಯದ ಮೇರೆಗೆ ಬೆಲೆ ಏರಿಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಹುಲ್ಲಿನ ಬೆಲೆ, ಪಶು ಆಹಾರ ಬೆಲೆ ಕೂಡ ಹೆಚ್ಚಳವಾಗಿದೆ. ಅನೇಕ ಹಾಲು ಉತ್ಪಾದಕ ಸಂಘಗಳು ಗಲಾಟೆ ಮಾಡುತ್ತಿದ್ದವು. ಅದಕ್ಕೆ ದರ ಏರಿಕೆಯ ಈ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.
ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದ್ದೇನೆ
“ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.
ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985 ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995 ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ” ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು, “ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಈ ರಾಜ್ಯಕ್ಕೆ ಸುಖ, ಶಾಂತಿ ನೆಮ್ಮದಿ ದೊರಕಲಿ ಜೊತೆಗೆ ನನಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಮಳೆ ಸ್ವಲ್ಪ ಕಡಿಮೆಯಾಗಿದೆ. ಇನ್ನೂ ಉತ್ತಮವಾಗಿ ಮಳೆ ಬೀಳಬೇಕು” ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ
ಅರಣ್ಯ ಭೂಮಿಯಲ್ಲಿ ವಾಸಿಸುವವರಿಗೆ ಹಕ್ಕು ಪತ್ರ ನೀಡುವ ವಿಚಾರವಾಗಿ ಕೇಳಿದಾಗ, “ಅರಣ್ಯ ಭೂಮಿಯಲ್ಲಿ ಅನೇಕ ವರ್ಷಗಳಿಂದ ವ್ಯವಸಾಯ ಹಾಗೂ ವಾಸ ಮಾಡುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ಸರ್ಕಾರ ತೊಂದರೆ ನೀಡಲು ಹೋಗುವುದಿಲ್ಲ. ಯಾರನ್ನೂ ಹೊರಗೆ ಹಾಕುವುದಿಲ್ಲ” ಎಂದು ತಿಳಿಸಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯಕ್ಕೆ ಎಂದೇ ಕಾನೂನು ರೂಪಿಸಿವೆ. ಓಬಿಸಿ, ಜನರಲ್ ಮತ್ತು ಎಸ್ಇ ಗಳಿಗೆ 75 ವರ್ಷ ಇದ್ದವರಿಗೆ ಹಾಗೂ 25 ವರ್ಷ ಬುಡಕಟ್ಟು ಸಮುದಾಯಕ್ಕೆ ನೀಡಬೇಕು ಎಂದು ತೀರ್ಮಾನವಾಗಿದೆ. ಇದರಲ್ಲಿ ತಾರತಮ್ಯವಾಗಿದೆ ಎಂದು ಒಂದಷ್ಟು ಜನ ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸಲಾಗುವುದು. ಬುಡಕಟ್ಟು ಸಮುದಾಯಕ್ಕೆ ಕಾಯ್ದೆ ಮಾಡಿದಂತೆ ಇತರೇ ಜನಾಂಗಗಳಿಗೂ ರಕ್ಷಣೆ ನೀಡುವಂತೆ ತಿದ್ದುಪಡಿ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅವರು ತೀರ್ಮಾನ ಮಾಡಬೇಕು” ಎಂದು ಡಿ ಕೆ ಶಿವಕುಮಾರ್ ಹೇಳಿದರು.
