ಮೊದಲ ಹಂತದ ಚುನಾವಣೆಯ ಬಳಿಕ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ಗೆಲುವು ತಮ್ಮದೇ ಎಂದು ಬೀಗುತ್ತಿವೆ. ಆದರೆ, ಬಂಗಾಳದ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಕೈಗಾರಿಕೀಕರಣ ಮತ್ತು ಬೆಲೆ ಏರಿಕೆಯಂತಹ ವಿಷಯಗಳನ್ನು ಮರೆಮಾಚಲು ನಡೆಸುತ್ತಿರುವ “ಗಾಳಿಯೊಂದಿಗಿನ ಗುದ್ದಾಟ”ವೆಂಬಂತೆಯೂ ಕಾಣಿಸುತ್ತಿದೆ.
ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು, 2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ದಾಖಲೆಯ 21 ಲಕ್ಷ ಹೆಚ್ಚುವರಿ ಮತಗಳು ಚಲಾವಣೆಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಇದು ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್ ಪ್ರಕ್ರಿಯೆಯ ಕಾರಣದಿಂದ ಮನೆಮಾಡಿರುವ ತೀವ್ರ ಅಸಮಾಧಾನ ಅಥವಾ ಬದಲಾವಣೆಯ ಹಂಬಲವನ್ನು ಸೂಚಿಸುತ್ತದೆ. ಬಿಜೆಪಿ ಕೋಮುವಾದಿ ಧ್ರುವೀಕರಣದ ರಾಜಕಾರಣ ಒಂದು ವರ್ಗವನ್ನು ಮತಗಟ್ಟೆಗೆ ಸೆಳೆದಿದ್ದರೆ, ಅದಕ್ಕೆ ಪ್ರತಿಯಾಗಿ ಸೆಕ್ಯುಲರ್ ಮೌಲ್ಯಗಳನ್ನು ಉಳಿಸಿಕೊಳ್ಳಲು ಮತ್ತೊಂದು ವರ್ಗ ಮತ ಚಲಾಯಿಸಿದೆ. ಈ ನಡುವೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ಕಳೆದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಪಂಚಾಯತ್ ಮಟ್ಟದ ಹಿಂಸಾಚಾರದ ವಿರುದ್ಧದ ಆಕ್ರೋಶ ಜನರನ್ನು ಮತಗಟ್ಟೆಗೆ ಎಳೆದು ತಂದಿರಬಹುದು.
ಮೊದಲ ಹಂತದ ಚುನಾವಣೆಯ ಬಳಿಕ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ಗೆಲುವು ತಮ್ಮದೇ ಎಂದು ಬೀಗುತ್ತಿವೆ. ಆದರೆ, ಬಂಗಾಳದ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಕೈಗಾರಿಕೀಕರಣ ಮತ್ತು ಬೆಲೆ ಏರಿಕೆಯಂತಹ ವಿಷಯಗಳನ್ನು ಮರೆಮಾಚಲು ನಡೆಸುತ್ತಿರುವ “ಗಾಳಿಯೊಂದಿಗಿನ ಗುದ್ದಾಟ”ವೆಂಬಂತೆಯೂ ಕಾಣಿಸುತ್ತಿದೆ. ಜನರ ಬದುಕಿನ ಬವಣೆಗಳಿಗಿಂತ ಹೆಚ್ಚಾಗಿ, ಧರ್ಮ ಮತ್ತು ವೈಯಕ್ತಿಕ ಟೀಕೆಗಳೇ ಟಿಎಂಸಿ ಮತ್ತು ಬಿಜೆಪಿ ಪ್ರಚಾರದ ಸರಕಾಗಿರುವುದು ಪ್ರಜಾಪ್ರಭುತ್ವದ ದುರಂತ.
ಇದನ್ನೂ ಓದಿ : ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?
ಹೆಚ್ಚಿದ ಮತದಾನದ ಪ್ರಮಾಣ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಎಡ-ಜಾತ್ಯತೀತ ಮೈತ್ರಿಕೂಟದ (Left-Secular Alliance) ಪರವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗ್ರಾಮೀಣ ಭಾಗಗಳಲ್ಲಿ ಟಿಎಂಸಿ ಕಾರ್ಯಕರ್ತರು ನಡೆಸಿದ ದೌರ್ಜನ್ಯ ಮತ್ತು ನಗರ ಪ್ರದೇಶಗಳಲ್ಲಿ ಬಿಜೆಪಿಯ ವಿಭಜಕ ನೀತಿಯಿಂದ ಬೇಸತ್ತಿರುವ ಮತದಾರರು, ಪರ್ಯಾಯ ಹಾದಿಯಾಗಿ ಎಡಪಕ್ಷಗಳತ್ತ ಮೊರೆ ಹೋಗಿರುವ ಸಾಧ್ಯತೆಯೂ ಇದೆ. ಯುವ ಮತದಾರರು “ಉದ್ಯೋಗ” ಮತ್ತು “ಶಿಕ್ಷಣ”ದ ಹೆಸರಿನಲ್ಲಿ ಎಡರಂಗದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಆಸಕ್ತಿ ತೋರಿರುವುದು ಈ ಬಾರಿ ಅಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಿರುವ ಕಾರಣವಿರಬಹುದು. ಮಾತ್ರವಲ್ಲದೆ, ಬಂಗಾಳದ ರಾಜಕಾರಣ ಕೇವಲ ಮೋದಿ ಮತ್ತು ದೀದಿಯವರ ನಡುವೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಈ ಮತದಾನದ ಪ್ರಮಾಣ ಸಾಬೀತುಪಡಿಸಬಹುದು.
ಮೋದಿ ಮತ್ತು ದೀದಿಯವರು ತಮ್ಮ ಅಂಕಿಅಂಶಗಳೊಂದಿಗೆ ಬೀಗುತ್ತಿರಬಹುದು. ಆದರೆ, ಬಂಗಾಳದ ಪ್ರಜ್ಞಾವಂತ ಮತದಾರ “ಅಧಿಕಾರದ ಅಹಂಕಾರ” ಮತ್ತು “ಕೋಮುವಾದದ ವಿಷ” ಎರಡನ್ನೂ ತಿರಸ್ಕರಿಸಿ, ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ್ದಾನೆಯೇ ಎಂಬುದಕ್ಕೆ ಈ 21 ಲಕ್ಷ ಮತಗಳೇ ಉತ್ತರ ನೀಡಲಿವೆ. ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ಕಂಡುಬಂದ ಭಾರಿ ಪ್ರಮಾಣದ ಮತದಾನಕ್ಕೆ (21 ಲಕ್ಷ ಹೆಚ್ಚುವರಿ ಮತಗಳು) ಕೇವಲ ರಾಜಕೀಯ ಅಲೆ ಮಾತ್ರವಲ್ಲದೆ, ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಮನೆಮಾಡಿದ್ದ ಆತಂಕ ಮತ್ತು ಆಕ್ರೋಶವೂ ಪ್ರಮುಖ ಕಾರಣ. ವಿಶೇಷವಾಗಿ SIR (Special Intensive Revision) ಪ್ರಕ್ರಿಯೆಯು ಈ ಬಾರಿ ಮತದಾರರನ್ನು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುವಂತೆ ಪ್ರೇರೇಪಿಸಿದೆ. ಜನರ ತೀರ್ಪು ‘ಜನಪರ’ವಾಗಿರಲಿದೆ ಎಂಬ ಆಶಾವಾದವನ್ನು ಪೂರೈಸಲಿದೆಯೇ ಎನ್ನುವುದನ್ನು ಫಲಿತಾಂಶ ಹೊರಬೀಳುವವರೆಗೆ ಕಾದುನೋಡಬೇಕಿದೆ.
ಎರಡನೇ ಹಂತದ ಚುನಾವಣೆಯ ಮೇಲೆ ಮೋದಿ ದೀದಿ ಕಣ್ಣು
ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆ (ಏಪ್ರಿಲ್ 29, 2026) ಸಮೀಪಿಸುತ್ತಿದ್ದಂತೆ, ಮೋದಿ ಮತ್ತು ದೀದಿ ಇಬ್ಬರೂ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಪೌರತ್ವದ ವಿಚಾರವನ್ನೇ ಪ್ರಧಾನ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಎರಡನೇ ಹಂತದ ಚುನಾವಣೆ ನಡೆಯಲಿರುವ ಜಿಲ್ಲೆಗಳಾದ ನಾದಿಯಾ (Nadia), ಉತ್ತರ 24 ಪರಗಣ (North 24 Parganas) ಮತ್ತು ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಮತದಾರರ ಪಟ್ಟಿಯಿಂದ ಭಾರಿ ಸಂಖ್ಯೆಯಲ್ಲಿ ಹೆಸರುಗಳನ್ನು ಕೈಬಿಡಲಾಗಿದೆ. ಎರಡನೇ ಹಂತದ ಪ್ರಮುಖ ಜಿಲ್ಲೆಯಾದ ಉತ್ತರ 24 ಪರಗಣದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 3.25 ಲಕ್ಷ ಮತದಾರರನ್ನು ನ್ಯಾಯಾಂಗ ಪರಿಶೀಲನೆಯ (Adjudication) ನಂತರ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಪೈಕಿ 63% ಹಿಂದೂಗಳು ಮತ್ತು 34% ಮುಸ್ಲಿಂ ಮತದಾರರು ಸೇರಿದ್ದಾರೆ. ವಿಶೇಷವಾಗಿ ಮತುವಾ (Matua) ಸಮುದಾಯದ ಪ್ರಭಾವವಿರುವ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಮತದಾರರ ಹೆಸರುಗಳು ಡಿಲೀಟ್ ಆಗಿದೆ.
ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಈ “ಡಿಲೀಟ್ ಆದ ಮತದಾರರ” ಸಂಖ್ಯೆ ಮತ್ತು ಅವರ ಆಕ್ರೋಶವು ಚುನಾವಣಾ ಫಲಿತಾಂಶವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಮೋದಿ ಮತ್ತು ದೀದಿ ಇಬ್ಬರಿಗೂ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.
ತೀವ್ರ ಪೈಪೋಟಿ ಇದ್ದರೂ ದೀದಿಯೇ ಫೇವರೇಟ್
ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆ ಇಂದಿಗೂ ಸ್ಥಿರವಾಗಿರಲು ಅವರು ಜಾರಿಗೆ ತಂದ ಜನಪರ ಯೋಜನೆಗಳು ಪ್ರಮುಖ ಕಾರಣವಾಗಿವೆ. ವಿಶೇಷವಾಗಿ ‘ಲಕ್ಷ್ಮೀರ್ ಭಂಡಾರ್’ (Lakshmir Bhandar) ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಮತ್ತು ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂಬ ಲೆಕ್ಕಚಾರವಿದೆ.
ಅನೇಕ ರಾಜಕೀಯ ಸವಾಲುಗಳ ನಡುವೆಯೂ, ‘ದುವಾರೆ ಸರ್ಕಾರ್’ (ಸರ್ಕಾರ ನಿಮ್ಮ ಮನೆ ಬಾಗಿಲಿಗೆ) ನಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದು ದೀದಿ ಮೇಲೆ ವಿಶ್ವಾಸ ಹೆಚ್ಚಿಸಲು ಕಾರಣವಾಗಿದೆ.
ಬಂಗಾಳದ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಎತ್ತಿಹಿಡಿಯುವಲ್ಲಿ ಅವರು ತೋರುವ ಆಕ್ರಮಣಕಾರಿ ಧೋರಣೆ, ಹೊರಗಿನ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡುವ ‘ಬಂಗಾಳದ ಮಗಳು’ (Banglar Nijer Meyee) ಎಂದು ಇನ್ನೂ ಬಂಗಾಳದ ಜನರಲ್ಲಿ ದೀದಿ ವಿಶ್ವಾಸ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ಗಿಂತಲೂ ಒಂದು ಪಟ್ಟು ಎಂಬಂತೆ ಬಿಜೆಪಿಯಂತಹ ಕೋಮುವಾದಿ ಪಕ್ಷದ ಎದುರು ಸೆಟೆದು ನಿಲ್ಲುತ್ತಿರುವುದು ಕೂಡ ಮತದಾರರಲ್ಲಿ ನಂ
ಆಡಳಿತ ವಿರೋಧಿ ಅಲೆ ಅಥವಾ ಭ್ರಷ್ಟಾಚಾರದ ಆರೋಪಗಳ ನಡುವೆಯೂ, ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವ ಯೋಜನೆಗಳನ್ನು ನೀಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ವರ್ಚಸ್ಸನ್ನು ಕುಗ್ಗದಂತೆ ಕಾಪಾಡುತ್ತಿವೆ. ಇವೆಲ್ಲಾ, ನಾಲ್ಕನೆ ಬಾರಿಗೆ ದೀದಿಯನ್ನು ಮುಖ್ಯಮಂತ್ರಿಯಾಗಿ ಮಾಡುವುದಕ್ಕೆ ಬಿಡಬಾರದು ಎಂಬ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನು ನಡೆಸುತ್ತಿರುವ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ.





