ಪಶ್ಚಿಮ ಬಂಗಾಳದಲ್ಲಿ ಸತತ 34 ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗ, ಇಂದು ರಾಜ್ಯ ರಾಜಕಾರಣದಲ್ಲಿ 3/4 ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಜ್ಯೋತಿ ಬಸು ಅವರಂತಹ ಪ್ರಭಾವಿ ನಾಯಕರ ನಂತರ, ಜನಸಾಮಾನ್ಯರನ್ನು ಮತ್ತು ಯುವಕರನ್ನು ಸೆಳೆಯಬಲ್ಲ ಪ್ರಬಲ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವಲ್ಲಿ ಎಡರಂಗ ವಿಫಲವಾಯಿತು. ಆದರೆ, ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಡರಂಗದ ಮತ ಪ್ರಮಾಣ ಸ್ವಲ್ಪ ಮಟ್ಟಿಗೆ ಸುಧಾರಿಸಿರುವುದು ಪಕ್ಷ ಪುನಶ್ಚೇತನದ ಹಾದಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿ.
ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಒಂದು ಕಾಲದ ‘ಅಜೇಯ ಶಕ್ತಿ’ಯಾಗಿದ್ದ ಎಡರಂಗ (Left Front), ಇಂದು ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸ್ಥಿತಿಗೆ ಬಂದು ತಲುಪಿದೆ ಎಂದರೇ ತಪ್ಪಿಲ್ಲ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಭಾರತೀಯ ಜನತಾ ಪಾರ್ಟಿ (BJP) ನಡುವಿನ ತೀವ್ರ ಪೈಪೋಟಿಯ ನಡುವೆ ಎಡಪಕ್ಷಗಳ ಪ್ರಸ್ತುತ ಸ್ಥಿತಿಗತಿ ಚಿಂತಾಜನಕವಾಗಿದೆ.
ಬಂಗಾಳದ ʼಕೆಂಪುಕೋಟೆʼ ಕುಸಿದಿದ್ದು ಎಲ್ಲಿ?
ಪಶ್ಚಿಮ ಬಂಗಾಳದಲ್ಲಿ ಸತತ 34 ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗ, ಇಂದು ರಾಜ್ಯ ರಾಜಕಾರಣದ 3/4 ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ದಶಕಗಳ ಕಾಲ ಈ ಮಣ್ಣನ್ನು ಆಳಿದ ಎಡರಂಗ ಈಗ ಅಸ್ತಮಾನದ ಕಾಲದಲ್ಲಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಮೈತ್ರಿಕೂಟ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ವಿಧಾನಸಭೆಯಲ್ಲಿ ‘ಶೂನ್ಯ’ ಪ್ರತಿನಿಧಿಗಳನ್ನು ಹೊಂದುವ ಮೂಲಕ ಎಡಪಕ್ಷಗಳು ಐತಿಹಾಸಿಕ ಪತನ ಕಂಡವು. ಬಂಗಾಳದ ಮತದಾರರು ಟಿಎಂಸಿ ಮತ್ತು ಬಿಜೆಪಿ ನಡುವಿನ ದ್ವಿಮುಖ ಸ್ಪರ್ಧೆಗೆ (Bipolar Contest) ಒಗ್ಗಿಕೊಂಡಿರುವುದು ಎಡರಂಗದ ಅತಿದೊಡ್ಡ ಹಿನ್ನಡೆ.
2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಭರ್ಜರಿ ಜಯ ಸಾಧಿಸುವ ಮೂಲಕ ಎಡರಂಗವನ್ನು ಅಧಿಕಾರದಿಂದ ಕೆಳಗಿಳಿಸಿತು. ಎಡರಂಗ 41% ಕ್ಕಿಂತ ಹೆಚ್ಚು ಮತ ಪ್ರಮಾಣವನ್ನು ಪಡೆದಿದ್ದರೂ, ಕ್ಷೇತ್ರಗಳ ಸಂಖ್ಯೆ 62ಕ್ಕೆ ಇಳಿಯಿತು. 2016ರ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಕಾಂಗ್ರೆಸ್ ಪಕ್ಷದೊಂದಿಗೆ “ಮಹಾಜೋತ್” ಮೈತ್ರಿ ಮಾಡಿಕೊಂಡಿತು. ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಎಡರಂಗದ ಮತ ಹಂಚಿಕೆ ಸುಮಾರು 20%ಗೆ ಕುಸಿಯಿತು ಮತ್ತು ಕೇವಲ 32 ಕ್ಷೇತ್ರಗಳನ್ನು ಮಾತ್ರ ಗೆಲ್ಲುವಲ್ಲಿ ಸಾಧ್ಯವಾಯಿತು. 2021ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಸಂಪೂರ್ಣವಾಗಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಾಗಿ ಮಾರ್ಪಟ್ಟಿತು. ಇದರಿಂದಾಗಿ ಎಡರಂಗ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ಐತಿಹಾಸಿಕ ಸೋಲನ್ನು ಅನುಭವಿಸಿತು.
ಎಡಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿದೆ. ತೃಣಮೂಲ ಕಾಂಗ್ರೆಸ್ನ ದೌರ್ಜನ್ಯ ಮತ್ತು ಭ್ರಷ್ಟಾಚಾರವನ್ನು ಎದುರಿಸಲು ಎಡಪಕ್ಷಗಳು ಸಮರ್ಥವಾಗಿಲ್ಲ ಎಂದು ಭಾವಿಸಿದ ಮತದಾರರು, ಪ್ರಬಲ ಪರ್ಯಾಯವಾಗಿ ಬಿಜೆಪಿಯನ್ನು ಆರಿಸಿಕೊಂಡಿದ್ದಾರೆ ಎನ್ನುವುದು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ತಿಳಿದಿದೆ. ನೇರವಾಗಿ ಒಂದು ಕೋಮುವಾದಿ ಪಕ್ಷಕ್ಕೆ ರಾಜ್ಯದಲ್ಲಿ ಎಡರಂಗವೇ ಮಣೆ ಹಾಕಿ ಕೊಟ್ಟಿತ್ತು ಎಂದರೇ ತಪ್ಪೇನಿಲ್ಲ. “ಸೈದ್ಧಾಂತಿಕವಾಗಿ ವಿರೋಧವಿದ್ದರೂ, ಟಿಎಂಸಿ ಸೋಲಿಸಲು ಬಿಜೆಪಿಯೇ ಸರಿ” ಎಂಬ ಮತದಾರರ ಧೋರಣೆ ಎಡರಂಗಕ್ಕೆ ಮುಳುವಾಯಿತು.
ಇದನ್ನೂ ಓದಿ : ಅಹಿಂದ ನಾಯಕತ್ವ: ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಬಲ್ಲರೇ?
ತಳಮಟ್ಟದಲ್ಲಿ ಸಂಘಟನೆಯ ಶೈಥಿಲ್ಯ
ಒಂದು ಕಾಲದಲ್ಲಿ ಹಳ್ಳಿಹಳ್ಳಿಗಳಲ್ಲಿ ಬಲಿಷ್ಠವಾಗಿದ್ದ ‘ಕ್ಯಾಡರ್/ಕೇಡರ್’ ವ್ಯವಸ್ಥೆ ಇಂದು ಶಿಥಿಲಗೊಂಡಿದೆ. ಹಿರಿಯ ನಾಯಕರ ನಿವೃತ್ತಿ ಮತ್ತು ಯುವ ನಾಯಕರ ಕೊರತೆಯ ನಡುವೆ, ತೃಣಮೂಲ ಕಾಂಗ್ರೆಸ್ನ ಪ್ರಭಾವದಿಂದ ಅನೇಕ ಕಾರ್ಯಕರ್ತರು ಪಕ್ಷಾಂತರಗೊಂಡಿದ್ದಾರೆ ಅಥವಾ ರಾಜಕೀಯದಿಂದ ದೂರ ಉಳಿದಿದ್ದಾರೆ.
ಎಡರಂಗದ ಪಕ್ಷಗಳು ಕಾಣುತ್ತಿರುವ ಭಾರಿ ಹಿನ್ನಡೆಯ ನಡುವೆಯೂ ಸಣ್ಣದೊಂದು ಆಶಾದಾಯಕ ಕಿರಣವೆಂದರೆ ಯುವ ನಾಯಕರ ಉದಯ. ಮೀನಾಕ್ಷಿ ಮುಖರ್ಜಿ ಅಂತಹ ಯುವ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಎಡರಂಗಕ್ಕೆ ಹೊಸ ಚೈತನ್ಯ ನೀಡಲು ಪ್ರಯತ್ನಿಸುತ್ತಿದೆ. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಡರಂಗದ ಮತ ಪ್ರಮಾಣ ಸ್ವಲ್ಪ ಮಟ್ಟಿಗೆ ಸುಧಾರಿಸಿರುವುದು ಪಕ್ಷ ಪುನಶ್ಚೇತನದ ಹಾದಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ಆದರೇ, ವಿಧಾನಸಭಾ ಚುನಾವಣೆ ಅಥವಾ ಲೋಕಸಭಾ ಚುನಾವಣೆ ಬಂದಾಗ ಈ ಎಡರಂಗ ಪಕ್ಷಗಳು ಇದ್ದೂ ಇಲ್ಲದಂತಿರುತ್ತವೆ.
ಜ್ಯೋತಿ ಬಸು ಅವರಂತಹ ಪ್ರಭಾವಿ ನಾಯಕರ ನಂತರ, ಜನಸಾಮಾನ್ಯರನ್ನು ಮತ್ತು ಯುವಕರನ್ನು ಸೆಳೆಯಬಲ್ಲ ಪ್ರಬಲ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವಲ್ಲಿ ಎಡರಂಗ ವಿಫಲವಾಯಿತು. ಪಕ್ಷ ಹಳೆಯ ಸಿದ್ಧಾಂತಗಳಿಗೇ ಅಂಟಿಕೊಂಡಿದ್ದು, ಬದಲಾಗುತ್ತಿರುವ ಆಧುನಿಕ ಕಾಲದ ಮತದಾರರ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ ಎನ್ನುವುದು ಕೂಡ ಈ ಪರಿಸ್ಥಿತಿಗೆ ಮುಖ್ಯ ಕಾರಣ.
“ಮಾ, ಮಾತಿ, ಮಾನುಷ್” (ತಾಯಿ, ಭೂಮಿ ಮತ್ತು ಜನರು) ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ತೊರೆದು ಬಂದ ಮಮತಾ ಬ್ಯಾನರ್ಜಿ ಅವರು ಎಡರಂಗದ ವಿರುದ್ಧ ಪ್ರಬಲ ಪರ್ಯಾಯ ಶಕ್ತಿಯಾಗಿ ಬೆಳೆದರು. ಅವರು ಜನಸಾಮಾನ್ಯರ ಪರವಾಗಿ ಬೀದಿಗಿಳಿದು ನಡೆಸಿದ ಹೋರಾಟಗಳು ಎಡರಂಗದ ಭದ್ರಕೋಟೆಯನ್ನು ನಡುಗಿಸಿದವು. 2016ರ ನಂತರ, ಎಡರಂಗದ ಸಾಂಪ್ರದಾಯಿಕ ಮತದಾರರ ಒಂದು ದೊಡ್ಡ ವರ್ಗ ಭಾರತೀಯ ಜನತಾ ಪಾರ್ಟಿಯತ್ತ (BJP) ವಾಲುವುದಕ್ಕೆ ಶುರುಮಾಡಿತು. ಆಡಳಿತಾರೂಢ TMC ವಿರುದ್ಧ ಹೋರಾಡಲು BJP ಹೆಚ್ಚು ಸಮರ್ಥವಾಗಿದೆ ಎಂದು ಮತದಾರರು ಭಾವಿಸಿದ್ದೇ ಎಡರಂಗದ ಮತ ಹಂಚಿಕೆ 5%ಕ್ಕೆ ಇಳಿಯಲು ಕಾರಣವಾಯಿತು.
2021ರ ಚುನಾವಣೆಯಲ್ಲಿ ಎಡರಂಗ ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ (ISF)ನಂತಹ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅದರ ಜಾತ್ಯತೀತ ಸಿದ್ಧಾಂತವನ್ನು ನಂಬಿದ್ದ ಅನೇಕ ಬೆಂಬಲಿಗರಿಗೆ ಅಸಮಾಧಾನ ತರಿಸಿತ್ತು, ಇದು ಕೂಡ ಎಡರಂಗದ ಹೀನಾಯ ಸ್ಥಿತಿಗೆ ಕಾರಣ.
ಹೋರಾಟದ ಹಾದಿ ತಪ್ಪಿದ ಎಡರಂಗ
ಎಡಪಕ್ಷಗಳ ಅಧಃಪತನಕ್ಕೆ ಕೇವಲ ರಾಜಕೀಯ ಸಮೀಕರಣಗಳಷ್ಟೇ ಅಲ್ಲ, ಅವುಗಳ ಮೂಲ ಅಡಿಪಾಯವಾಗಿದ್ದ ‘ಚಳವಳಿ’ ಮತ್ತು ‘ಪ್ರಗತಿಪರ ಹೋರಾಟ’ಗಳಲ್ಲಿ ಕಂಡುಬಂದ ಶೈಥಿಲ್ಯವೇ ಪ್ರಮುಖ ಕಾರಣ. ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಎಡರಂಗ ಎಂದರೆ ಅದು ಕೇವಲ ಒಂದು ರಾಜಕೀಯ ಪಕ್ಷವಾಗಿರಲಿಲ್ಲ. ಅಕ್ಷರಶಃ ಅದೊಂದು ಸಾಮಾಜಿಕ ಚಳವಳಿಯಾಗಿತ್ತು. ಆದರೆ ಅಧಿಕಾರದಲ್ಲಿದ್ದ ಮೂರು ದಶಕಗಳಲ್ಲಿ ಆ ಚಳವಳಿಯ ಸ್ವರೂಪ ಬದಲಾಗಿದ್ದು ಇಂದು ಅದರ ನಗಣ್ಯದ ಸ್ಥಿತಿಗೆ ಕಾರಣವಾಗಿದೆ.
ಸತತ 34 ವರ್ಷಗಳ ಕಾಲ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳ ನಾಯಕರು ‘ಹೋರಾಟಗಾರ’ರ ಬದಲಿಗೆ ‘ಆಡಳಿತಗಾರ’ರಂತೆ ವರ್ತಿಸಲು ಶುರು ಮಾಡಿದರು. ಬೀದಿಯಲ್ಲಿ ನಿಂತು ಜನರ ಪರ ಧ್ವನಿ ಎತ್ತಬೇಕಿದ್ದ ಸಂಘಟನೆಗಳು, ಸರ್ಕಾರಿ ವ್ಯವಸ್ಥೆಯ ಭಾಗವಾಗಿ ಹೋದವು. ಇದರಿಂದಾಗಿ ಸಾಮಾನ್ಯ ಜನರ ನೋವುಗಳಿಗೆ ಸ್ಪಂದಿಸುವ ‘ಹೋರಾಟದ ಕಿಚ್ಚು’ ಆರಿಹೋಯಿತು.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?
ಸಿಂಗೂರು ಮತ್ತು ನಂದಿಗ್ರಾಮ: ಪ್ರಗತಿಪರತೆಯ ಮುಖವಾಡ ಕಳಚಿದ ಕ್ಷಣ
ಎಡಪಕ್ಷಗಳ ಅಧಃಪತನಕ್ಕೆ ನಾಂದಿ ಹಾಡಿದ್ದೇ ಈ ಎರಡು ಘಟನೆಗಳು. ಭೂಸುಧಾರಣೆಯ ಮೂಲಕ ರೈತರನ್ನು ಬೆಳೆಸಿದ ಎಡರಂಗ, ಅದೇ ರೈತರ ಭೂಮಿಯನ್ನು ಕೈಗಾರಿಕೆಗಳಿಗಾಗಿ ಬಲವಂತವಾಗಿ ಕಿತ್ತುಕೊಳ್ಳಲು ಮುಂದಾದಾಗ ಅವರ ‘ಪ್ರಗತಿಪರ ಮತ್ತು ಕಾರ್ಮಿಕ ಪರ’ ಸಿದ್ಧಾಂತಕ್ಕೆ ದೊಡ್ಡ ಹೊಡೆತ ಬಿತ್ತು. ಇದು ಜನರ ದೃಷ್ಟಿಯಲ್ಲಿ ಅವರು ತಮ್ಮ ಮೂಲ ತತ್ವಗಳಿಂದ ದೂರ ಸರಿದಿದ್ದಾರೆ ಎಂಬ ಭಾವನೆ ಮೂಡಿಸಿತು. ಇನ್ನು, ಜಗತ್ತು ಬದಲಾಗುತ್ತಿದ್ದಂತೆ ಎಡಪಕ್ಷಗಳು ಬದಲಾಗಲಿಲ್ಲ. ಆಧುನಿಕ ಯುವಜನತೆಯ ಆಶೋತ್ತರಗಳು, ತಂತ್ರಜ್ಞಾನ ಮತ್ತು ಬದಲಾದ ಆರ್ಥಿಕ ನೀತಿಗಳಿಗೆ ಪೂರಕವಾಗಿ ತಮ್ಮ ಮೂಲ ಸಿದ್ಧಾಂತಕ್ಕೆ ಧಕ್ಕೆಯಾಗದೇ, ಹೊಸ ರೂಪ ನೀಡುವಲ್ಲಿ ವಿಫಲವಾದವು. ಹಳೆಯ ಮಾದರಿಯ ಕಾರ್ಮಿಕ ಸಂಘಟನೆಗಳು (Unions) ಹೊಸ ಕಾಲದ ಉದ್ಯೋಗಿಗಳಿಗೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಗೆ ಹೊಂದಿಕೆಯಾಗಲಿಲ್ಲ. ಹಂತ ಹಂತವಾಗಿ ಪ್ರಗತಿಪರ ಚಿಂತಕರಿಂದ ಪಕ್ಷ ದೂರವೇ ಉಳಿಯಿತು. ಪಶ್ಚಿಮ ಬಂಗಾಳದ ಸಾಹಿತಿಗಳು, ಕಲಾವಿದರು ಮತ್ತು ಬುದ್ಧಿಜೀವಿಗಳು ಎಡಪಕ್ಷಗಳ ದೊಡ್ಡ ಶಕ್ತಿಯಾಗಿದ್ದರು. ಆದರೆ, 2000ದ ನಂತರದ ವರ್ಷಗಳಲ್ಲಿ ಪಕ್ಷದ ಅತಿಯಾದ ನಿಯಂತ್ರಣ (Partycracy) ಮತ್ತು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಪ್ರವೃತ್ತಿಯಿಂದಾಗಿ ಈ ಪ್ರಗತಿಪರ ವರ್ಗ ಮಮತಾ ಬ್ಯಾನರ್ಜಿಯವರ ‘ಪರಿಬರ್ತನ್’ (ಬದಲಾವಣೆ) ಘೋಷಣೆಯತ್ತ ವಾಲಿಬಿಟ್ಟಿತು.
ಪ್ರತಿಪಕ್ಷವಾಗಿ ಹೋರಾಟದ ವಿಫಲತೆ
2011ರಲ್ಲಿ ಅಧಿಕಾರ ಕಳೆದುಕೊಂಡ ನಂತರವೂ ಎಡಪಕ್ಷಗಳು ಸಮರ್ಥ ಪ್ರತಿಪಕ್ಷವಾಗಿ ರೂಪುಗೊಳ್ಳಲಿಲ್ಲ. ಟಿಎಂಸಿ ವಿರುದ್ಧ ಪ್ರಬಲ ಹೋರಾಟ ಕಟ್ಟುವಲ್ಲಿ ಅವರು ವಿಫಲರಾದ ಕಾರಣ, ಆ ಜಾಗವನ್ನು ಈಗ ಬಿಜೆಪಿ ಆಕ್ರಮಿಸಿಕೊಂಡಿತು. ಜನರ ಸಮಸ್ಯೆಗಳಿಗಾಗಿ ಬೀದಿಗಿಳಿಯುವ ಶಕ್ತಿ ಕುಂದಿದ್ದರಿಂದ ಮತದಾರರು ಎಡರಂಗವನ್ನು ಕಡೆಗಣಿಸಿರುವುದು ಕಳೆದ ಕೆಲವು ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
“ಯಾವ ಪಕ್ಷ ಚಳವಳಿಯಿಂದ ಹುಟ್ಟುತ್ತದೆಯೋ, ಅದು ಚಳವಳಿಯನ್ನು ಮರೆತಾಗ ಅಳಿಯತೊಡಗುತ್ತದೆ” ಎನ್ನುವುದಕ್ಕೆ ಎಡರಂಗ ಪಕ್ಷವೇ ಪ್ರಮುಖ ಸಾಕ್ಷಿಯಾಗಿ ನಮ್ಮ ಮುಂದಿದೆ. ಎಡರಂಗ ಇಂದು ತನ್ನ ಮೂಲ ಬೇರಾದ ‘ಜನಪರ ಚಳವಳಿ’ಯನ್ನು ಮರುಶೋಧಿಸಬೇಕಾದ ಅನಿವಾರ್ಯದ ಸ್ಥಿತಿಯಲ್ಲಿದೆ. ಕೇವಲ ಭಾಷಣಗಳಿಂದಲ್ಲ, ಜನರ ದೈನಂದಿನ ಸಂಕಷ್ಟಗಳ ಜೊತೆ ನಿಲ್ಲುವ ಹೋರಾಟಗಳಿಂದ ಮಾತ್ರ ‘ಕೆಂಪು ಕೋಟೆ’ಯನ್ನು ಮತ್ತೆ ಕಟ್ಟಲು ಸಾಧ್ಯ. ಎಡಪಕ್ಷಗಳು ಮತ್ತೆ ಪುಟಿದೇಳಬೇಕಾದರೆ, ‘ಜನಪರ ಹೋರಾಟ’ಕ್ಕೆ ಸಜ್ಜಾಗಬೇಕಿದೆ.





