‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಎನ್ನುವುದು ಕರ್ನಾಟಕದಲ್ಲಿ ಕೇವಲ ಒಂದು ರಾಜಕೀಯ ಸಮೀಕರಣವಲ್ಲ. ಅದೊಂದು ಪ್ರಬಲ ಸಾಮಾಜಿಕ ಚಳವಳಿಯೂ ಹೌದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಹಾಗಾಗಿ ʼಅಹಿಂದʼ ರಾಜಕಾರಣವನ್ನು ಮುಂದುವರಿಸುವವರು ಯಾರು ಎನ್ನುವ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ʼಅಹಿಂದʼ ವರ್ಗವನ್ನು ಮುಂದುವರಿಸುವ ನಾಯಕ ಯಾರೆಂಬ ಪ್ರಶ್ನೆ ಎದ್ದಾಗ ಮೊದಲು ಕೇಳಿ ಬರುವುದೇ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು. ಆದರೇ, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗುವ ಸಾಮರ್ಥ್ಯ ಜಾರಕಿಹೊಳಿ ಹೊಂದಿದ್ದಾರೆಯೇ ಎನ್ನುವ ಪ್ರಶ್ನೆಯೂ ಇದೆ.
ಸತೀಶ್ ಜಾರಕಿಹೊಳಿ ತಮ್ಮಲ್ಲಿ ವೃದ್ಧಿಸಿಕೊಂಡಿರುವ ವೈಚಾರಿಕತೆ ಅವರ ಪ್ರಬಲ ಶಕ್ತಿ. ಮೂಢನಂಬಿಕೆ ವಿರೋಧಿ ಚಳವಳಿ ಮತ್ತು ‘ಮಾನವ ಬಂಧುತ್ವ ವೇದಿಕೆ’ಯ ಮೂಲಕ ಅವರು ಕೇವಲ ಅಧಿಕಾರಕ್ಕಾಗಿ ಅಲ್ಲದೆ, ಕೆಳವರ್ಗದವರ ಪ್ರಜ್ಞೆ ಜಾಗೃತಗೊಳಿಸಲು ಶ್ರಮಿಸುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ಆರಂಭಿಕ ದಿನಗಳ ಹೋರಾಟವನ್ನು ನೆನಪಿಸುತ್ತದೆ.
ಇದನ್ನೂ ಓದಿ : ‘ಗೋದಿ-ಮೋದಿ’ ಮೀಡಿಯಾ ಅಲ್ಲ ಶ್ವೇತಭವನದ ಮೀಡಿಯಾ; ಅಲ್ಲಿ ನಸುನಗುತ್ತಲೇ ಸರ್ಕಾರದ ಬೆವರಿಳಿಸುತ್ತಾರೆ ಪತ್ರಕರ್ತರು!
ಉತ್ತರ ಕರ್ನಾಟಕದಲ್ಲಿ ಅಹಿಂದ ಮತಗಳನ್ನು ಕ್ರೋಡೀಕರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಲಿಂಗಾಯತ ಪ್ರಾಬಲ್ಯದ ಈ ನೆಲದಲ್ಲಿ ದಲಿತ-ಹಿಂದುಳಿದ ವರ್ಗಗಳ ಧ್ವನಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಅಬ್ಬರದ ರಾಜಕಾರಣದ ನಡುವೆಯೂ ಸತೀಶ್ ಅವರ ಸೌಮ್ಯ ಸ್ವಭಾವ ಮತ್ತು ವಿವಾದಮುಕ್ತ ಆಡಳಿತ ಶೈಲಿ ಶೋಷಿತ ವರ್ಗಗಳಿಗೆ ಭರವಸೆ ಮೂಡಿಸಿದೆ.
ʼಅಹಿಂದʼ ಪಥದ ಮುಂದಿರುವ ಅಡೆತಡೆಗಳು
ಸಿದ್ದರಾಮಯ್ಯನವರ ಎತ್ತರಕ್ಕೆ ಬೆಳೆಯಲು ಸತೀಶ್ ಅವರ ಮುಂದಿರುವ ಸವಾಲುಗಳು ಸಣ್ಣದಲ್ಲ. ಸಿದ್ದರಾಮಯ್ಯನವರು ಕುರುಬ ಸಮುದಾಯದ ಪ್ರಬಲ ಹಿನ್ನೆಲೆಯೊಂದಿಗೆ ಇಡೀ ರಾಜ್ಯದ ಅಹಿಂದ ವರ್ಗವನ್ನು ಸೆಳೆದವರು. ಸತೀಶ್ ಜಾರಕಿಹೊಳಿ ಅವರು ‘ವಾಲ್ಮೀಕಿ’ ಸಮುದಾಯಕ್ಕೆ ಸೇರಿದವರು. ಬಿಜೆಪಿ ಕಡೆಗೆ ಬಹುತೇಕ ವಾಲಿರುವ ವಾಲ್ಮಿಕಿ ಸಮುದಾಯವನ್ನು ಅಹಿಂದದೆಡೆಗೆ ಮರಳಿ ಓಲೈಸುವ ಹೊಣೆಗಾರಿಯನ್ನು ಹೊರಬೇಕಾಗುತ್ತದೆ. ಮಾತ್ರವಲ್ಲದೆ, ಮೀಸಲಾತಿ ಲಾಬಿಯ ಆಚೆಗೂ ಇಡೀ ದಲಿತ ಸಮುದಾಯವನ್ನು (ಎಡ-ಬಲ ಪಂಗಡಗಳು) ಏಕೀಕರಿಸುವುದು ಅವರಿಗೆ ದೊಡ್ಡ ಸವಾಲಾಗಿ ಮುಂದಿದೆ. ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿಯ ಬಳಿಕ ಸತೀಶ್ ಜಾರಕಿಹೊಳಿ ಎಲ್ಲರೊಂದಿಗೆ ಸಮನ್ವಯ ಸಾಧಿಸುತ್ತಾರೆಯೇ ಎನ್ನುವುದು ನಮ್ಮ ಮುಂದಿರುವ ಯಕ್ಷ ಪ್ರಶ್ನೆ.
ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್ ಅಂತಹವರ ಪ್ರಭಾವದ ನಡುವೆ ತಳಮಟ್ಟದ ಸಂಘಟನೆಯನ್ನು ಹಿಡಿದಿಟ್ಟುಕೊಳ್ಳುವ ಸವಾಲು ಸತೀಶ್ ಜಾರಕಿಹೊಳಿ ಮುಂದಿದೆ. ಇಷ್ಟಲ್ಲದೆ, ‘ಜಾರಕಿಹೊಳಿ ಸಹೋದರರು’ ಎಂಬ ಕೌಟುಂಬಿಕ ಪ್ರಭಾವ ಮತ್ತು ಸಕ್ಕರೆ ಕಾರ್ಖಾನೆಗಳ ಹಿನ್ನೆಲೆ, ಸಿದ್ಧಾಂತ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ ಸಂಘರ್ಷವನ್ನು ಮೆಟ್ಟಿ ನಿಲ್ಲುವ ಅಗತ್ಯತೆಯೂ ಇದೆ.
“ಅಹಿಂದ ಎನ್ನುವುದು ಕೇವಲ ಚುನಾವಣೆ ಗೆಲ್ಲುವ ಸೂತ್ರವಲ್ಲ, ಅದು ಸಾಮಾಜಿಕ ನ್ಯಾಯದ ರಥ. ಈ ರಥವನ್ನು ಎಳೆಯಲು ಕೇವಲ ಮತಗಳು ಸಾಲದು, ಶೋಷಿತರ ನೋವಿಗೆ ಮಿಡಿಯುವ ಎದೆಯೂ ಇರಬೇಕು.” ಎಂದು ಸ್ವತಃ ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಮೇಲ್ನೋಟಕ್ಕೆ ಅವರ ಕುಟುಂಬ, ಅವರ ಹಣ ಬಲ, ಬೆಳಗಾವಿ ಭಾಗದಲ್ಲಿರುವ ರಾಜಕೀಯ ಪ್ರಭಾವ, ಸಕ್ಕರೆ ಕಾರ್ಖಾನೆಗಳ ಮಾಲೀಕತ್ವಗಳನ್ನೆಲ್ಲಾ ಗಮನಿಸಿದರೆ ಶೋಷಿತರ ಪರವಾಗಿ ಧ್ವನಿ ಎತ್ತುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದರೂ, ವೈಚಾರಿಕತೆಯನ್ನು ಪಾಲಿಸುವುದರಲ್ಲಿ ಜಾರಕಿಹೊಳಿ ಹಿಂದೆ ಬಿದ್ದಿಲ್ಲ, ಸೌಮ್ಯವಾದ ಸಿದ್ಧಾಂತಕ್ಕೆ ಅವರು ತೋರಿಸುವ ಬದ್ಧತೆ ಎಲ್ಲವೂ ಅವರ ಮೇಲೊಂದು ಭರವಸೆ ಮೂಡಿಸುತ್ತದೆ. ಆದರೆ, “ಸಿದ್ದರಾಮಯ್ಯನವರ ನಂತರ ಅಹಿಂದ ನಾಯಕತ್ವಕ್ಕೆ ದೊಡ್ಡ ನಿರ್ವಾತ ಸೃಷ್ಟಿಯಾಗಲಿದೆ. ಆ ನಿರ್ವಾತವನ್ನು ತುಂಬಲು ಕೇವಲ ಜಾತಿ ನಾಯಕತ್ವ ಸಾಲದು, ಬದಲಿಗೆ ಅಂಬೇಡ್ಕರ್ ಮತ್ತು ಲೋಹಿಯಾ ಸಿದ್ಧಾಂತಗಳ ಸ್ಪಷ್ಟ ತಿಳಿವಳಿಕೆ ಇರುವ ನಾಯಕ ಬೇಕು.” “ಸತೀಶ್ ಜಾರಕಿಹೊಳಿ ಅವರು ಸ್ಮಶಾನದಲ್ಲಿ ವಾಸ್ತವ್ಯ ಹೂಡುವ ಮೂಲಕ ಅಂಧಶ್ರದ್ಧೆಯ ವಿರುದ್ಧ ಸಮರ ಸಾರಿದವರು. ಅಧಿಕಾರದ ಕುರ್ಚಿಗಿಂತಲೂ ಜನರ ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸುವುದು ಅವರ ಆದ್ಯತೆಯಾದಾಗ ಮಾತ್ರ ಅವರು ಅಹಿಂದದ ನಿಜವಾದ ಉತ್ತರಾಧಿಕಾರಿಯಾಗಬಲ್ಲರು.”
ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಬೇಕೆಂದರೆ ಅವರು ‘ಜಾರಕಿಹೊಳಿ ಬ್ರದರ್ಸ್’ ಎಂಬ ಪ್ರಾದೇಶಿಕ ಚೌಕಟ್ಟಿನಿಂದ ಹೊರಬರಬೇಕು. ಉತ್ತರ ಕರ್ನಾಟಕದ ಪ್ರಭಾವದ ಜೊತೆಗೆ ಹಳೆ ಮೈಸೂರು ಭಾಗದ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿಶ್ವಾಸ ಗಳಿಸುವುದು ಅನಿವಾರ್ಯ. ಸಿದ್ದರಾಮಯ್ಯನವರಲ್ಲಿರುವ ‘ಮಾಸ್ ಅಪೀಲ್’ ಮತ್ತು ‘ನಿರ್ದಾಕ್ಷಿಣ್ಯ ನಿರ್ಧಾರ’ ತೆಗೆದುಕೊಳ್ಳುವ ಗುಣವನ್ನು ಸತೀಶ್ ಅವರು ಮೈಗೂಡಿಸಿಕೊಂಡರೆ, ಕರ್ನಾಟಕದ ಭವಿಷ್ಯದ ಸಾಮಾಜಿಕ ನ್ಯಾಯದ ರಾಜಕಾರಣದ ಸಾರಥ್ಯ ಅವರದಾಗುವುದರಲ್ಲಿ ಸಂಶಯವಿಲ್ಲ.
ಅವಕಾಶಗಳು ಎದುರಾಗಬಹುದು, ಆದರೆ ದಾರಿ ಸಂಘರ್ಷಮಯವಾಗಿದೆ. ಸಿದ್ಧಾಂತ ಮತ್ತು ಅಧಿಕಾರದ ನಡುವಿನ ಸಮತೋಲನವೇ ಸತೀಶ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ.
ಭಾವನಾತ್ಮಕ vs ವೈಚಾರಿಕ
ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಇಬ್ಬರೂ ಅಹಿಂದ ರಾಜಕಾರಣದ ಪ್ರಮುಖ ಧ್ರುವಗಳೇ ಆಗಿದ್ದರೂ, ಅಹಿಂದ ವರ್ಗವು ಅವರನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳಿವೆ.
ಸಿದ್ದರಾಮಯ್ಯನವರು ಅಹಿಂದ ವರ್ಗಕ್ಕೆ ಒಬ್ಬ ‘ಭಾವನಾತ್ಮಕ ಜನನಾಯಕ’. ಅವರು ಆ ವರ್ಗದ ಭಾಷೆಯಲ್ಲೇ ಮಾತನಾಡುತ್ತಾರೆ, ಅವರಂತೆಯೇ ಉಣ್ಣುತ್ತಾರೆ ಮತ್ತು ಅವರ ನೋವಿಗೆ ನೇರವಾಗಿ ಸ್ಪಂದಿಸುತ್ತಾರೆ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಕೇವಲ ನಾಯಕರಲ್ಲ, ತಮ್ಮ ಮನೆಯ ಹಿರಿಯ ಸದಸ್ಯನಂತೆ ಕಾಣುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸತೀಶ್ ಜಾರಕಿಹೊಳಿ ಅವರು ‘ವೈಚಾರಿಕ ಮತ್ತು ಸೈದ್ಧಾಂತಿಕ ನಾಯಕ’. ಹಾಗಂತ ಸಿದ್ದರಾಮಯ್ಯನವರು ಸಿದ್ಧಾಂತವನ್ನು ಪಾಲಿಸುತ್ತಿಲ್ಲವೆಂದಲ್ಲ. ಸಿದ್ದಾಂತದ ಜೊತೆಗೆ ಭಾವನಾತ್ಮಕವಾಗಿಯೂ ಅವರು ಸಂಬಂಧ ಬೆಸೆದುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಮೂಢನಂಬಿಕೆ ವಿರೋಧಿ ಚಳವಳಿ, ಸ್ಮಶಾನ ವಾಸ್ತವ್ಯದಂತಹ ಕಾರ್ಯಕ್ರಮಗಳ ಮೂಲಕ ಕೆಳವರ್ಗದವರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಜನರು ಪ್ರೀತಿಯಿಂದ ಒಪ್ಪಿಕೊಂಡರೆ, ಸತೀಶ್ ಅವರನ್ನು ಗೌರವದಿಂದ ನೋಡುತ್ತಾರೆ.
ಸಂಘಟನಾ ಶಕ್ತಿ ಮತ್ತು ವ್ಯಾಪ್ತಿ
1) ಸಿದ್ದರಾಮಯ್ಯನವರು ದಶಕಗಳ ಕಾಲ ರಾಜ್ಯಾದ್ಯಂತ ಸುತ್ತಾಡಿ, ಪ್ರತಿ ಹಳ್ಳಿಯಲ್ಲೂ ತಮ್ಮದೇ ಆದ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಹಳೆಯ ಮೈಸೂರು ಭಾಗದಿಂದ ಹಿಡಿದು ಕಲ್ಯಾಣ ಕರ್ನಾಟಕದವರೆಗೆ ಅವರ ಪ್ರಭಾವವಿದೆ.
2) ಸತೀಶ್ ಜಾರಕಿಹೊಳಿ ಅವರ ಪ್ರಭಾವ ಸದ್ಯಕ್ಕೆ ಉತ್ತರ ಕರ್ನಾಟಕ ಮತ್ತು ಬೆಳಗಾವಿ ಭಾಗಕ್ಕೆ ಹೆಚ್ಚು ಸೀಮಿತವಾಗಿದೆ. ಅಹಿಂದ ವರ್ಗದ ದೊಡ್ಡ ಭಾಗವಾಗಿರುವ ದಲಿತ ಸಮುದಾಯದಲ್ಲಿ ಸತೀಶ್ ಅವರಿಗೆ ಭದ್ರ ಬುನಾದಿ ಇದೆ. ಆದರೆ, ಹಳೆಯ ಮೈಸೂರು ಭಾಗದ ಕುರುಬರು ಅಥವಾ ಹಿಂದುಳಿದ ವರ್ಗಗಳು ಸಿದ್ದರಾಮಯ್ಯನವರನ್ನು ಒಪ್ಪಿಕೊಂಡಷ್ಟು ಸಹಜವಾಗಿ ಸತೀಶ್ ಅವರನ್ನು ಒಪ್ಪಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.
3) ಸಿದ್ದರಾಮಯ್ಯನವರಿಗೆ ಇರುವ ಒಂದು ವಿಶೇಷ ಗುಣವೆಂದರೆ ಅವರ ನೇರ ನಡೆ-ನುಡಿ. ಇದು ಶೋಷಿತ ವರ್ಗಗಳಿಗೆ ತುಂಬಾ ಇಷ್ಟವಾಗುತ್ತದೆ. ಸತೀಶ್ ಜಾರಕಿಹೊಳಿ ಅವರು ಸ್ವಲ್ಪ ಮಿತಭಾಷಿ ಮತ್ತು ಸೌಮ್ಯ ಸ್ವಭಾವದವರು. ರಾಜಕಾರಣದಲ್ಲಿ ಅಬ್ಬರದ ಮಾತುಗಳು ಮತ್ತು ಜನರನ್ನು ಸೆಳೆಯುವ ಚಾತುರ್ಯ ಸಿದ್ದರಾಮಯ್ಯನವರಲ್ಲಿ ಇರುವಷ್ಟು ಸತೀಶ್ ಅವರಲ್ಲಿ ಇನ್ನೂ ಪೂರ್ಣವಾಗಿ ಅನಾವರಣಗೊಂಡಿಲ್ಲ.
4) ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ದಂತಹ ಯೋಜನೆಗಳ ಮೂಲಕ ಅಹಿಂದ ವರ್ಗದ ಪ್ರತಿಯೊಂದು ಮನೆಗೂ ತಲುಪಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಇನ್ನೂ ಅಂತಹ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆ ತರುವ ಅವಕಾಶ ಪಡೆದಿಲ್ಲ. ಅಹಿಂದ ವರ್ಗವು ನಾಯಕನನ್ನು ಒಪ್ಪಿಕೊಳ್ಳುವುದು ಕೇವಲ ಭಾಷಣದಿಂದಲ್ಲ, ಬದಲಿಗೆ ಆ ನಾಯಕನಿಂದ ತಮ್ಮ ಬದುಕಿನಲ್ಲಿ ಉಂಟಾದ ಆರ್ಥಿಕ ಬದಲಾವಣೆಯಿಂದ.
ಸಿದ್ದರಾಮಯ್ಯ ಕುರುಬ ಸಮುದಾಯದವರು, ಸತೀಶ್ ವಾಲ್ಮೀಕಿ ಸಮುದಾಯದವರು. ಅಹಿಂದ ಒಕ್ಕೂಟದ ಒಳಗಿರುವ ಉಪಜಾತಿಗಳ ನಡುವಿನ ಆಂತರಿಕ ಪೈಪೋಟಿ ಕೂಡ ಇಲ್ಲಿ ಕೆಲಸ ಮಾಡುತ್ತದೆ. ಸಿದ್ದರಾಮಯ್ಯನವರ ನಂತರ ಅಹಿಂದಕ್ಕೆ ಪರ್ಯಾಯ ಯಾರು ಎಂಬ ಪ್ರಶ್ನೆ ಬಂದಾಗ, ಸತೀಶ್ ಅವರ ವೈಚಾರಿಕ ಬದ್ಧತೆಯೇ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಏಕೆಂದರೆ ಅಹಿಂದ ವರ್ಗಕ್ಕೆ ಕೇವಲ ರಾಜಕಾರಣಿಯಲ್ಲ, ಒಬ್ಬ ಸೈದ್ಧಾಂತಿಕ ಮಾರ್ಗದರ್ಶಿಯೂ ಬೇಕಾಗಿದ್ದಾರೆ. ನಾಯಕ ಸಮುದಾಯ ಕೇಸರೀಕರಣಗೊಂಡಿದೆ. ಅವರನ್ನು ಅಲ್ಲಿಂದ ಬಿಡಿಸಿ ತರುವ ಸವಾಲು ಮತ್ತು ಜವಾಬ್ದಾರಿ ಸತೀಶ್ ಮೇಲಿದೆ.
ಸಿದ್ದರಾಮಯ್ಯನವರನ್ನು ಅಹಿಂದ ವರ್ಗವು ‘ನಮ್ಮ ಸಿದ್ದಣ್ಣ’ ಎಂದು ಒಪ್ಪಿಕೊಂಡಿದೆ. ಸತೀಶ್ ಜಾರಕಿಹೊಳಿ ಅವರು ಆ ಹಂತಕ್ಕೆ ತಲುಪಬೇಕಾದರೆ, ಬೆಳಗಾವಿಯ ಆಚೆಗೂ ರಾಜ್ಯದ ಪ್ರತಿ ಮೂಲೆಯ ಶೋಷಿತರ ಧ್ವನಿಯಾಗಿ ಗಟ್ಟಿಯಾಗಿ ಹೊರಹೊಮ್ಮಬೇಕು. ಸಿದ್ದರಾಮಯ್ಯನವರದು ‘ಜನಪ್ರಿಯತೆ’ಯ ಆಧಾರಿತ ಒಪ್ಪಿಗೆಯಾದರೆ, ಸತೀಶ್ ಜಾರಕಿಹೊಳಿ ಅವರದು ‘ಪರಿವರ್ತನೆ’ಯ ಆಧಾರಿತ ಒಪ್ಪಿಗೆಯಾಗಬೇಕಿದೆ. ಸತೀಶ್ ಜಾರಕಿಹೊಳಿ ಅವರಿಗೆ ಸಿದ್ದರಾಮಯ್ಯನವರಷ್ಟು ವ್ಯಾಪಕ ಒಪ್ಪಿಗೆ ಸಿಗಲು ಸಾಧ್ಯವಿದೆ, ಆದರೆ ಅದು ಕೇವಲ ಅಧಿಕಾರದಿಂದ ಬರುವುದಿಲ್ಲ; ಸಿದ್ದರಾಮಯ್ಯನವರಂತೆ ಅವರು ಜನಸಾಮಾನ್ಯರ ಜೊತೆಗಿನ ಭಾವನಾತ್ಮಕ ಬೆಸುಗೆಯನ್ನು ಗಟ್ಟಿಗೊಳಿಸಿಕೊಳ್ಳಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.




