ಓದುಗರ ಕೈಗೆ ಮಹೇಂದ್ರ ಕುಮಾರ್‌ ’ಎದೆಯ ದನಿ’: ಅಂಗುಲಿಮಾಲನ ನೆನೆದ ಒಡನಾಡಿಗಳು

“ಚರ್ಚ್ ದಾಳಿಯ ಹಿಂದೆ ಇದ್ದದ್ದು ಸಂಘಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಅಹಂಕಾರ…”

“ಮಹೇಂದ್ರ ಕುಮಾರ್‌ ಅವರು ನನ್ನ ಪ್ರಕಾರ ಒಬ್ಬ ಅಂಗುಲಿಮಾಲ. ಬೆರಳುಗಳನ್ನು ಕತ್ತರಿಸಿ ಮಾಲೆ ಹಾಕಿಕೊಂಡು ರುದ್ರಾವತಾರ ಮಾಡುತ್ತಿದ್ದ ಅಂಗುಲಿಮಾಲನಿಗೆ ಆತನ ತಪ್ಪುಗಳು ಅರಿವಾಗಿದ್ದವು. ನಂತರ ಆತ ಪುಣ್ಯಾಕ್ಷನಾಗಿ ಬದಲಾದ. ಹಾಗೆ ಪರಿವರ್ತನೆ ಹೊಂದಿದವನ ಕಥೆ- ‘ನಡು ಬಗ್ಗಿಸದ ಎದೆಯ ದನಿ’ ಕೃತಿಯಾಗಿ ನಮ್ಮ ಕಣ್ಣಮುಂದೆ ಮೂಡಿದೆ…”

-ಹೀಗೆ ಹೇಳಿದ್ದು ಕಾಂಗ್ರೆಸ್‌ ಯುವ ನಾಯಕ, ಸಂಘಪರಿವಾರದ ಮಾಜಿ ಮುಖಂಡ ನಿಕೇತ್‌ ರಾಜ್‌ ಮೌರ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂಘಪರಿವಾರದ ಹಿಂಸಾ ರಾಜಕಾರಣ ಮತ್ತು ಬಡ ಸಮುದಾಯಗಳನ್ನು ಬಲಿಪಶು ಮಾಡುವ ಹಿಕಮತ್ತನ್ನು ಅರಿತು ಹೊರಗೆ ಬಂದವರು ಅನೇಕರು. ಅಂಥವರಲ್ಲಿ ಮಹೇಂದ್ರ ಕುಮಾರ್‌ ಒಬ್ಬರು.

ಕರ್ನಾಟಕದಲ್ಲಿ ಬಜರಂಗದಳವನ್ನು ಕಟ್ಟಿದ‍ ಮಹೇಂದ್ರಕುಮಾರ್‌, ಮಂಗಳೂರು ಚರ್ಚ್ ದಾಳಿ ಪ್ರಕರಣದಲ್ಲಿ ಜೈಲಿ ಸೇರಿದವರು. ಆದರೆ ಸಂಘಪರಿವಾರದ ನಿಜದರ್ಶನವಾದ ಮೇಲೆ ಅಲ್ಲಿಂದ ಹೊರಬಂದು ಸಮ ಸಮಾಜ, ಸೌಹಾರ್ದ ಕರ್ನಾಟಕವನ್ನು ಕಟ್ಟಲು ಶ್ರಮಿಸಿದರು.

‘ನಮ್ಮದನಿ’ ಆರಂಭಿಸಿ ಸಂಚಲನ ಮೂಡಿಸಿ ಹಠಾತ್‌ ನಿರ್ಗಮನವಾದ ‘ಮಹೇಂದ್ರ ಕುಮಾರ್‌’ ಅವರು ಆತ್ಮಸಾಕ್ಷಿ ಮಾರಿಕೊಂಡಿದ್ದರೆ ಸಚಿವರೋ, ಸಂಸದರೋ ಆಗಿರುತ್ತಿದ್ದರು. ಅವರು ಜೈಲಿನಿಂದ ಹೊರಬಂದಾಗ ಬಿದ್ದ ಮಾಲೆಗಳನ್ನು ಹಿಡಿದುಕೊಳ್ಳಲು ನಿಂತಿದ್ದ ವ್ಯಕ್ತಿ ಮೂರು ಸಲ ಸಂಸದರಾಗಿದ್ದು ಇತಿಹಾಸ.

ಕೋಮುವಾದಿ ಹತಾರಗಳಾಗಿ ಬಳಕೆಯಾಗುವ ಮುಗ್ಧ ಯುವಜನರನ್ನು ಎಚ್ಚರಿಸುತ್ತಿದ್ದ ಮಹೇಂದ್ರ ಅವರ ಕುರಿತು ಪತ್ರಕರ್ತ ನವೀನ್ ಸೂರಿಂಜೆ ಅವರು ಬರೆದಿರುವ ‘ನಡುಬಗ್ಗಿಸದ ಎದೆಯ ದನಿ’ ಕೃತಿ ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಗೊಂಡಿತು. ಇದು ಮೂರರಲ್ಲಿ ಮತ್ತೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವಾಗಿರಲಿಲ್ಲ. ಮಹೇಂದ್ರಕುಮಾರ್‌ ಅವರು ಕಟ್ಟಲು ಬಯಸಿದ ನಿಜಸಮಾಜದ ಕನಸುಗಾರರು ಅಲ್ಲಿದ್ದರು. ಎದೆಯ ದನಿಯ ವ್ಯಕ್ತಿತ್ವ ಮತ್ತು ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳನ್ನು ಚರ್ಚಿಸುವ ವೇದಿಕೆಯಾಗಿಯೂ ಈ ಕಾರ್ಯಕ್ರಮ ಹೊಮ್ಮಿತು.

ಮಂಗಳೂರಿನಲ್ಲಿ ಪ್ರಜ್ಞಾವಂತ ಸಮೂಹ ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರುತ್ತಿದ್ದ ‘ಜನನುಡಿ’ಯ ಮೂಲಕ ಪ್ರಗತಿಪರ ವಲಯಕ್ಕೆ ಅಧಿಕೃತ ಪ್ರವೇಶ ಪಡೆದವರು- ಮಹೇಂದ್ರಕುಮಾರ್‌, ಸುಧೀರ್‌ ಕುಮಾರ್‌ ಮೊರಳ್ಳಿ ಮತ್ತು ನಿಕೇತ್‌ ರಾಜ್‌ ಮೌರ್ಯ. ಈ ಮೂವರು ಅಂದು ಆಡಿದ್ದ ಮಾತುಗಳು ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿದ್ದವು.

ತಮ್ಮ ಅನುಭವಗಳನ್ನು ದಾಖಲಿಸುವ ಕನಸು ಕಂಡಿದ್ದ ಮಹೇಂದ್ರ ಅವರು, ಅವುಗಳನ್ನು ಬರಹರೂಪಕ್ಕೆ ಇಳಿಸುವ ಮುನ್ನವೇ ಹೊರಟು ಹೋದರು. ಆದರೆ ಒಂದು ಕಾಲದಲ್ಲಿ ಮಹೇಂದ್ರ ಕುಮಾರ್‌ ಅವರ ವಿರುದ್ಧ ವರದಿಗಳನ್ನು ಮಾಡುತ್ತಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರೇ ಇಂದು ಅವರ ನೆನಪುಗಳನ್ನು, ಮಾತುಗಳನ್ನು, ಅನುಭವಗಳನ್ನು ದಾಖಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಕೇತ್, ಸುಧೀರ್‌ ಉಪಸ್ಥಿತರಿದ್ದು ಮಹೇಂದ್ರ ಅವರೊಂದಿಗಿನ ಒಡನಾಟಗಳನ್ನು ಪ್ರಾಸಂಗಿಕವಾಗಿ ಮೆಲುಕು ಹಾಕಿದರು. ಸಚಿವ ಸಂತೋಷ್ ಲಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಹಿರಿಯ ನಟ ಪ್ರಕಾಶ್ ರಾಜ್‌ ಅಧ್ಯಕ್ಷತೆ ವಹಿಸಿ ಆಡಿದ ಮಾತುಗಳು ಮೋದಿಯವರ ಆಡಳಿತ ವೈಖರಿಯನ್ನು ತೀವ್ರ ವಿಡಂಬನೆ ಮಾಡಿದವು.

ನಿಕೇತ್ ರಾಜ್‌ ಮಾತನಾಡಿ, “ನಮಗೆ ಸತ್ಯ ಮತ್ತು ಅಸತ್ಯದ ನಡುವೆ ಗೆರೆ ಗೊತ್ತಾಯಿತು. ನಮಗೆ ಮೊದಲ ಬಾರಿಗೆ ವೇದಿಕೆಯನ್ನು ಕೊಟ್ಟಿದ್ದು ಜನನುಡಿ. ಬುದ್ಧಿಜೀವಗಳೆಲ್ಲ ಸೇರಿರುತ್ತಾರೆ, ನಮ್ಮ ಮಾತುಗಳನ್ನು ಆಲಿಸುತ್ತಾರಾ ಎಂಬ ಗೊಂದಲವಿತ್ತು. ಆದರೆ ಸರ್ಕಸ್ ನೋಡಲು ಸೇರಿದಂತೆ ಜನ ಅಂದು ಆಗಮಿಸಿದ್ದರು” ಎಂದು ಮೆಲುಕು ಹಾಕಿದರು.

“ದೇಶಪ್ರೇಮವೆಂದರೆ ದ್ವೇಷಪ್ರೇಮವಲ್ಲ. ಪ್ರೀತಿ ಮಾಡುವುದಷ್ಟೇ ದೇಶಪ್ರೇಮ ಎಂದು ಯುವಕರಿಗೆ ಬುದ್ಧಿ ಹೇಳಲು, ತಾನು ಅನುಭವಿಸಿದ ಮೋಸಗಳ ಕುರಿತು ತಿಳಿಸಲು ಮಹೇಂದ್ರ ಕುಮಾರ್‌ ಹೊರಗಡೆ ಬಂದರು. ಬಜರಂಗದಳವನ್ನು ರಾಜ್ಯ ಸುತ್ತಾಡಿ ಕಟ್ಟಿದ್ದ ಅವರು, ಮತ್ತೆ ಸುತ್ತಾಡಿ ಪ್ರೀತಿಯ ಸಮಾಜವನ್ನು ನಿರ್ಮಿಸಲು ಮುಂದಾದರು” ಎಂದು ಬಣ್ಣಿಸಿದರು.

“ಈ ನೆಲ ದ್ವೇಷವನ್ನು ಒಪ್ಪಲ್ಲ ಎನ್ನುತ್ತಿದ್ದರು ಮಹೇಂದ್ರಣ್ಣ. ಕಳ್ಳತನ ಮಾಡುತ್ತಿದ್ದ ಮೋಹನ ದಾಸ- ಮಹಾತ್ಮ ಗಾಂಧಿಯಾದರು. ಚಾಣಕ್ಯನ ಕುತಂತ್ರಗಳ ಮೂಲಕ ಆಡಳಿತ ನಡೆಸಿದ ಚಂದ್ರಗುಪ್ತ ಮೌರ್ಯ, ಕೊನೆಗೆ ಸಲ್ಲೇಖನ ವ್ರತ ಕೈಗೊಂಡು ಕರ್ನಾಟಕಕ್ಕೆ ಬಂದು ಜೀವ ತ್ಯಜಿಸಿದ. ಯಾರು ಕೂಡ ಕ್ರೌರ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದರು.

“ಮಹೇಂದ್ರ ಕುಮಾರ್‌ ಬಹಳ ಅವಸರದಲ್ಲಿದ್ದರು. ‘ಎಲ್ಲಿದೆ ರೀ ಟೈಮ್’ ಎನ್ನುತ್ತಿದ್ದರು. ಆ ಮನುಷ್ಯನ ಸ್ವಭಾವವೇ ಸಿಟ್ಟು. ಅವರು ಬರೆಯಲು ಹೊರಟಿದ್ದ ಪುಸ್ತಕ ಪೂರ್ಣವಾಗಲಿಲ್ಲ. ಮಹೇಂದ್ರಕುಮಾರ್‌ ಅವರ ಬದುಕು ಕೂಡ ಅರ್ಧ ಆಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಮಹೇಂದ್ರ ಅವರ ಒಡನಾಡಿ, ವಕೀಲ ಸುಧೀರ್ ಕುಮಾರ್‌ ಮುರೊಳ್ಳಿ ಮಾತನಾಡಿ, “ದೇವೇಗೌಡರು ಸೆಕ್ಯುಲರ್‌ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ ಎಂದು ಭಾವಿಸಿ ಜೆಡಿಎಸ್‌ಗೆ ಮಹೇಂದ್ರ ಹೋದರು. ಒಂದು ತಿಂಗಳಾದ ಮೇಲೆ ಕರೆ ಮಾಡಿ, ‘ಸುಧೀರ ನೀನು ದಳಕ್ಕೆ ಬರದೇ ಹೋದದ್ದು ಸರಿಯಾಯಿತು. ಸೆಕ್ಯುಲರ್‌ ಎಂಬುದೆಲ್ಲ ಮಣ್ಣಂಗಟ್ಟೆ. ಇದೊಂದು ಆರ್‌ಎಸ್‌ಎಸ್‌ನ ಬಿ ಟೀಮ್’ ಎಂದಿದ್ದರು. ಇದು ಹತ್ತು ವರ್ಷಗಳ ಹಿಂದಿನ ಮಾತು” ಎಂದು ನೆನೆದರು.

“ಬದಲಾವಣೆ ಹೇಗೆ ಸಾಧ್ಯ ಎಂಬುದಕ್ಕೆ ನನ್ನ ಜೊತೆ ಇರುವ ವಿಜಯಾನಂದ ಎಂಬ ಹುಡುಗ ಸಾಕ್ಷಿ. ಒಂದು ಕಾಲದಲ್ಲಿ ನನ್ನ ಕಚೇರಿಗೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿದ ಕಿಡಿಗೇಡಿಗಳಲ್ಲಿ ಈತನೂ ಒಬ್ಬ. ಆದರೆ ಅಂಬೇಡ್ಕರ್‌- ಗಾಂಧಿ ವಿಚಾರಗಳ ಜೊತೆಯಲ್ಲಿ ಹೊರಟೆ. ಆ ಹುಡುಗ ನನ್ನ ಜೊತೆಯಲ್ಲಿ ಬಂದಿದ್ದಾನೆ” ಎಂದು ತಮ್ಮ ಸೈದ್ಧಾಂತಿಕ ನಡೆಯನ್ನು ತಿಳಿಸಿದರು.

“ಕೋಮು ಸೌಹಾರ್ದತೆ ವೇದಿಕೆಯವರು ನೂರಾರು ಹಾಡು ಬರೆಯುತ್ತಾರೆ, ನಮಗೊಂದು ಹಾಡು ಬೇಕು ಎಂದು ಮಹೇಂದ್ರ ಸಂಘದಲ್ಲಿದ್ದಾಗ ಹೇಳಿದ್ದರು. ನಮ್ಮ ಜೊತೆಯಲ್ಲಿದ್ದ ನವೀನ್ ಕರ್ವಾನೆ ಒಂದು ಹಾಡು ಬರೆದು, ಅಶ್ವಿನಿ ಆಡಿಯೊಕ್ಕೆ ಹೋಗಿ ತಾನೇ ದುಡ್ಡು ಕೊಟ್ಟು ಕ್ಯಾಸೆಟ್ ಮಾಡಿಸಿಕೊಂಡು ಬಂದ. ಆ ವಿಚಾರಧಾರೆ ಬೇಡವೆಂದು ನವೀನ್‌ ಈಗ ನಮ್ಮ ಜೊತೆಯಲ್ಲಿ ಬಂದಿದ್ದಾನೆ. ಆದರೆ ಅವರು ನವೀನ್ ಬರೆದ ಹಾಡನ್ನು ಹೇಳಿಕೊಂಡು ತಿರುಗುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

(ಇದರ ನಡುವೆ ಸಚಿವ ಸಂತೋಷ್ ಲಾಡ್, “ಆ ಕಾಪಿರೈಟ್ಸ್ ವಾಪಸ್ ತಗೊಳ್ಳೋಕೆ ಹೇಳ್ರಿ…” ಎಂದಿದ್ದು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು.)

ಇದನ್ನೂ ಓದಿರಿ: ಹಿಂದುತ್ವಕ್ಕೆ ಅಂಬೇಡ್ಕರ್‌ವಾದವೇ ಪರ್ಯಾಯ: ಸಂತೋಷ್ ಲಾಡ್

“ನಾವು ಅವರನ್ನು ಶಕ್ತಿಗಳ ಮೂಲಕ ಎದುರಿಸುವುದಕ್ಕಿಂತ ವಿಚಾರದ ಮೂಲಕ ಎದುರಿಸಿದರೆ ಸೋಲಿಸುವುದು ಸುಲಭ. ಶಕ್ತಿಗಳ ಮೂಲಕ ಅವರನ್ನು ಎದುರಿಸಲು ಸಾಧ್ಯವಿಲ್ಲ. ಅವರು ಬಾಂಬ್ ವಿದ್ಯಾ ಪ್ರವೀಣರು, ಕುಟಿಲ ವಿದ್ಯಾ ಪ್ರವೀಣರು, ಅಪಪ್ರಚಾರದ ಪ್ರವೀಣರು” ಎಂದು ಎಚ್ಚರಿಸಿದರು.

ಚರ್ಚ್ ದಾಳಿಯ ಹಿಂದೆ ಇದ್ದದ್ದು ಕಲ್ಲಡ್ಕ ಪ್ರಭಾಕರ ಭಟ್ ಅಹಂಕಾರ: ಸುಧೀರ್‌

ಇದೇ ವೇಳೆ ಸತ್ಯವೊಂದನ್ನು ಬಿಚ್ಚಿಟ್ಟ ಸುಧೀರ್‌ ಮುರೊಳ್ಳಿಯವರು, “ಚರ್ಚ್ ದಾಳಿಯ ಗಂಭೀರ ಆಪಾದನೆಯನ್ನು ನನ್ನ ಮಹೇಂದ್ರ ಕಳೆದುಕೊಳ್ಳಲು ಸಾಯುವವರೆಗೂ ಯತ್ನಿಸುತ್ತಿದ್ದರು. ಈ ವೇದಿಕೆ ಮುಖೇನ ಸತ್ಯ ಹೇಳುತ್ತೇನೆ. ಚಿಕ್ಕಮಗಳೂರು ತಾಲ್ಲೂಕಿನ ತಾಂಡ್ಯಾದ ಮಾರ್ಕೇಂಡೇಶ್ವರ ದೇವಸ್ಥಾನದಲ್ಲಿ ಯುವ ಸಮ್ಮಿಲನ ಕಾರ್ಯಾಗಾರ ನಡೆಯುತ್ತಿತ್ತು. ಬಿಜೆಪಿ- ದಳದ ಸಮ್ಮಿಶ್ರ ಸರ್ಕಾರ ಬಂದಿತ್ತು. ಉಪಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಕೂತಿದ್ದರು. ಅವರು ಮಂಗಳೂರಿಗೆ ಹೋಗಿ ಬಂದಿದ್ದರು. ಆದರೆ ಮಂಗಳೂರಿನ ಶಕ್ತಿಕೇಂದ್ರವಾಗಿದ್ದ ಕಲ್ಲಡ್ಕ ಪ್ರಭಾಕರ ಭಟ್ಟರ ಮನೆಗೆ ಹೋಗಲು ಯಡಿಯೂರಪ್ಪನವರಿಗೆ ಪುರಸೊತ್ತು ಇರಲಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಇಗೋಕ್ಕೆ ಹರ್ಟ್ ಆಯಿತು. ಯಡಿಯೂರಪ್ಪನವರು ತನ್ನ ಕಾಲ ಬುಡಕ್ಕೆ ಬರಬೇಕು ಎಂಬ ಏಕಮಾತ್ರ ಕಾರಣಕ್ಕೆ ಮಹೇಂದ್ರ ಕುಮಾರ್‌ ಅವರನ್ನು ಪ್ರಚೋದಿಸಿ, ಮತಾಂತರದ ವಿಚಾರವನ್ನು ಇಟ್ಟುಕೊಂಡು ಕ್ರೈಸ್ತ ಮಂದಿರಗಳ ಮೇಲೆ ದಾಳಿ ಮಾಡಿಸಿದರು. ಆಗ ಮಹೇಂದ್ರ ಅವರಿಗೆ, ದಯವಿಟ್ಟು ಇದನ್ನು ಮಾಡಬೇಡ ಎಂದಿದ್ದೆ” ಎಂದು ಘಟನೆಯನ್ನು ವಿವರಿಸಿದರು.

“ವಿಶಾಲವಾದ ಹಿಂದೂ ಸಮಾಜ ಕಟ್ಟೋಣ, ಮತ್ತೆ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ ನಿಮ್ಮ ವಿಶಾಲವಾದ ಹಿಂದೂ ಸಮಾಜದೊಳಗೆ ನನ್ನ ಅಂಬೇಡ್ಕರ್‌ಗೆ ಜಾಗವಿಲ್ಲ. ನನ್ನ ಗಾಂಧಿಗೆ, ರಾಮಕೃಷ್ಣ ಪರಮಹಂಸರಿಗೆ, ವಿವೇಕಾನಂದರಿಗೆ, ಬಸವಣ್ಣನವರಿಗೆ, ಕುವೆಂಪು, ಸಂತ ಶಿಶುನಾಳ ಶರೀಫ, ನಾರಾಯಣ ಗುರು, ಕನಕದಾಸ- ಇವರ್‍ಯಾರಿಗೂ ಜಾಗವಿಲ್ಲ. ಹೆಡಗೇವಾರ್‌, ಗೋಳ್ವಲ್ಕರ್‌, ಸಾವರ್ಕರ್‌, ಗೋಡ್ಸೆಗೆ ಜಾಗ ಇಟ್ಟುಕೊಂಡಿರುವ ನಿಮ್ಮದು ವಿಶಾಲ ಹಿಂದೂ ಸಮಾಜ ಆಗಲಿಕ್ಕೆ ಸಾಧ್ಯವಿಲ್ಲ” ಎಂದು ಗುಡುಗಿದರು.

ಹೋರಾಟಗಾರ ಮುನೀರ್‌ ಕಾಟಿಪಳ್ಳ ಮಾತನಾಡಿ, “ನಾನು ಕಾಂಗ್ರೆಸ್‌ ಕುಟುಂಬದಿಂದ ಬಂದು ಎಡಪಂಥೀಯ ಚಳವಳಿಗೆ ಹೋದವನು. ಮಹೇಂದ್ರಕುಮಾರ್‌ ಅವರು ಬಲಪಂಥೀಯ ಕುಟುಂಬದಿಂದ ಬಂದು ಜನಪರ ಚಳವಳಿಗೆ ಹೋದವರು. ಚರ್ಚ್ ದಾಳಿಯ ಸಂದರ್ಭದಲ್ಲಿ ಬಜರಂಗದಳ ಮತ್ತು ಮಹೇಂದ್ರ ಕುಮಾರ್‌ ವಿರುದ್ಧ ಘೋಷಣೆ ಕೂಗಿದ್ದೆವು. ಆದರೆ ಈ ಎಲ್ಲವನ್ನೂ ತೊರೆದು ಬಂದ ಮಹೇಂದ್ರ ಅವರು ನಮ್ಮ ಎರಡು ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದರು” ಎಂದು ಆ ದಿನಗಳನ್ನು ಮೆಲುಕು ಹಾಕಿದರು.

“ನಮ್ಮ ಕಾರ್ಯಕ್ರಮಗಳಿಗೆ ಅವರು ಭಾಷಣಕಾರರಾಗಿ ಬರುತ್ತಿರಲಿಲ್ಲ. ಕೋಮುವಾದಿ ಶಕ್ತಿಗಳನ್ನು ಹೇಗೆ ಎದುರಿಸಬೇಕು ಎಂದು ತಂತ್ರಗಳನ್ನು ಇಟ್ಟುಕೊಂಡು ಆಗಮಿಸುತ್ತಿದ್ದರು. ಮಹೇಂದ್ರ, ಮಾತುಗಳನ್ನು ಆರಂಭಿಸಿದ್ದರು. ಈಗ ನಮ್ಮ ಮಾತುಗಳನ್ನು ಕೇಳುವ ಕಿವಿಗಳು ಹೆಚ್ಚಾಗಿದ್ದಾರೆ. ಮೊನ್ನೆ ಪ್ರಕಾಶ್‌ ರಾಜ್ ಅವರು ಮಾಡಿದ ಭಾಷಣವನ್ನು ಜನರು ಮತ್ತೆ ಮತ್ತೆ ಆಲಿಸುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

“ಈ ಕೃತಿಯು ನಮಗೊಂದು ಟೂಲ್‌ಕಿಟ್. ಸಂಘಪರಿವಾರವನ್ನು ಎದುರಿಸಲು ಮಾರ್ಗ ತೋರಿಸುತ್ತದೆ. ಮಹೇಂದ್ರ ಕುಮಾರ್‌ ಅವರು ಜೈಲಿನಲ್ಲಿದ್ದಾಗ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಳಿನ್ ಕುಮಾರ್‌ ಕಟೀಲ್ ಮೂರು ಅವಧಿಗೆ ಸಂಸದರಾದರು” ಎಂದು ಕುಟುಕಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, “ಕೋಮುವಾದಿಗಳನ್ನು ಎದುರಿಸಲು ನಮ್ಮದೇ ಆದ ಒಂದು ನರೇಟಿವ್‌ ಬೇಕಾಗಿದೆ. ಫ್ರಿಂಜ್‌ಗಳು ಈಗ ಮೇನ್‌ಸ್ಟ್ರೀಮ್‌ ಆಗಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ಅಂತ್ಯವಾಗುತ್ತಾ?

ಹೈಕೋರ್ಟ್ ವಕೀಲ ಎಸ್.ಬಾಲನ್‌ ಮಾತನಾಡಿ, “ಎರಡು ಎಸ್‌ಗಳು  1925ರಿಂದ  1945ರವರೆಗೆ ಜರ್ಮನಿಯಲ್ಲಿ 60 ಲಕ್ಷ ಯಹೂದಿಗಳನ್ನು ಕೊಂದಿದ್ದನ್ನು ನೋಡಿದ್ದೇವೆ. ಇದೇ ಭಾರತದಲ್ಲಿ 1925ರಲ್ಲಿ ‘ಎಸ್‌ಎಸ್‌’ ಶುರುವಾಯಿತು. ಮೊದಲು ಬ್ರಹ್ಮ ಸಮಾಜ ಅಂತಿತ್ತು, ನಂತರ ಆರ್ಯ ಸಮಾಜವಾಯಿತು. ಬಳಿಕ ಹಿಂದೂ ಮಹಾಸಭಾ ಎಂದಾಯ್ತು. ಅಂತಿಮವಾಗಿ ರಾಷ್ಟ್ರೀಯ ಸ್ವಯಂ ಸಂಘ ಎಂದು ಕರೆದುಕೊಂಡಿತು. ಇಲ್ಲಿ ರಾಷ್ಟ್ರೀಯ ಎಂದರೆ ಬ್ರಾಹ್ಮಣ, ಬನಿಯಾ ಸಂಘ. ಜರ್ಮನಿಯಲ್ಲಿ ಎಸ್‌ಎಸ್‌ 1945ರಲ್ಲಿ ಸತ್ತು ಹೋಯಿತು. ಈಗ ಇಲ್ಲಿ 2024ರಲ್ಲಿ ಸತ್ತು ಹೋಗುತ್ತೋ ಗೊತ್ತಿಲ್ಲ. ಇದನ್ನು ಸಾಯಿಸಲು ನೂರಾರು ಮಹೇಂದ್ರಕುಮಾರ್‌ ಬೇಕಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಎದೆಯ ದನಿಗೆ ಕಿವಿಯಾಗಲು ಸಭಾಂಗಣ ಕಿಕ್ಕಿರಿದು ತುಂಬಿತ್ತು. ಮಹೇಂದ್ರ ಅವರ ನೆನಪಿನ ಸುತ್ತ ಭಾವುಕ ಜಗತ್ತು ನಿರ್ಮಾಣವಾಗಿತ್ತು. ಲೇಖಕ ನವೀನ್ ಸೂರಿಂಜೆ, ಪ್ರಕಾಶಕ ಬಸವರಾಜ ಸೂಳಿಬಾವಿ, ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here