ಅಯೋಧ್ಯೆಯ ಜನರ ಅಳಲು ಮತ್ತು ಅಚ್ಚರಿಗೊಳಿಸದ ಚುನಾವಣಾ ಫಲಿತಾಂಶ

Date:

ಮಂದಿರದ ಉನ್ಮಾದದಲ್ಲಿ ಇಡೀ ದೇಶವೇ ಮುಳುಗಿ ಹೋಗಿದ್ದಾಗ ಚುನಾವಣೆಯಲ್ಲಿ ಮತ ಚಲಾಯಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವವ ಸ್ಥಳೀಯ ಮತಾದಾರನೆ ಹೊರತು ಮಹಾನಗರಿಯ ಪವಿತ್ರಯಾತ್ರಿಯಲ್ಲ ಎಂಬ ಆಲೋಚನೆ ಮನದ ಕನ್ನಡಿಯಲ್ಲಿ ಸುಳಿದಿರಲಾರದು. ಅಯೋಧ್ಯೆಯ ಚುನಾವಣಾ ಫಲಿತಾಂಶ ನನ್ನನು ಅಚ್ಚರಿಗೊಳಿಸಲಿಲ್ಲ. ಭವ್ಯ ರಾಮಮಂದಿರ ಕಟ್ಟಿದವರಿಗೆ ಮತ ಹಾಕದ ಸ್ಥಳೀಯರನ್ನು ಸದಾ ರಾಜಧರ್ಮ ಪಾಲಿಸುವ ರಾಮ ಕೂಡ ತೆಗಳಲಾರ!

ಚುನಾವಣಾ ಫಲಿತಾಂಶ ಬಂದು ಮೂರ್ನಾಲ್ಕು ದಿನಗಳೇ ಕಳೆದಿವೆ. ಆದ್ರೆ ಭಕ್ತರಿಗೆ ಗೊಂದಲ ಒಂದು ಬಹುದೊಡ್ಡ ಮಿಸ್ಟರಿಯಾಗಿಯೇ ಉಳಿದಿದೆ. ರಾಮ ಮಂದಿರ ಕಟ್ಟಿದ ಮೇಲೂ ನಾವು ಅಯೋಧ್ಯಾ ಒಳಪಡುವ ಫೈಝಬಾದ್ ಲೋಕಸಭಾ ಸೀಟ್ ಅನ್ನು ಯಾಕೆ ಸೋತ್ವಿ ಅನ್ನೋ ಮಹಾ ಗೊಂದಲವದು. ಹಲವರು ಮರ್ಯಾದಪುರುಷ ಶ್ರೀರಾಮನಿಗೆ ಮಾಡಿದ ಅವಮಾನವಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ದಿನ ಗುಡಿಸಲಲ್ಲಿದ್ದ ರಾಮ ಲಲ್ಲನಿಗೆ ಭವ್ಯ ದೇವಾಲಯ ಕಟ್ಟಿದಕ್ಕೆ ಜನರು ಹೀಗೆ ಮಾಡೋದಾ ಅಂತ ಸಿಟ್ಟು ಹೊರಹಾಕಿದ್ದಾರೆ. ಫಲಿತಾಂಶದ ನಂತರ ಸೋಜಿಗವೆಂಬಂತೆ ಜೈಶ್ರೀರಾಮ್ ನಾರೆಗಳು ಮಾಯವಾಗಿ ಜೈ ಜಗನ್ನಾಥ್ ಕೂಗು ಜಾಸ್ತಿಯಾಗಿದೆ!

ನಮ್ಮೂರಿನ ಗುಡಿ ಬಗ್ಗೆ ಒಂದು ಮಾತು ಹೇಳುವೆ ಕೇಳಿ. ನಮ್ಮೂರಲ್ಲಿ ಗುಡಿ ಅಂದ್ರೆ ಮಾರಮ್ಮನ ಗುಡಿ. ಆ ಗುಡಿಯ ದೇವಿಗೆ ಸಾವಿರಾರು ಜನ ನಡೆದುಕೊಳ್ಳುತ್ತಾರೆ. ಮಾರ್ಗದಲ್ಲೇ ನಿಂತು ಹಲವಾರು ಜನ ಕೈ ಮುಗಿದು ದಿನದ ಮುಂದಿನ ಕೆಲ್ಸ ಮಾಡುತ್ತಾರೆ. ಎಮ್ಮೆಕರ ಹೊಡೆದುಕೊಂಡು ಹೋಗುವವರು ಒಂದು ಕ್ಷಣ ನಿಂತು “ತಾಯಿ ನಮ್ಮವ್ವ ಕಾಪಾಡವ್ವ, ಇವತ್ತು ನಮ್ ದನಿಗೆ ಒಳ್ಳೆ ಮೇವು ಸಿಗಲಿ ಅಂತ ಬೇಡಿ ಮುಂದೆ ಸಾಗುತ್ತಾರೆ.” ಗುಡಿಯ ಸುತ್ತ ಹಣ್ಣು ಕಾಯಿ ತರಕಾರಿ ಮಾರುವವರ ಪುಟ್ಟ ಪುಟ್ಟ ಅಂಗಡಿಗಳಿವೆ, ಕಾರ, ಕಡ್ಲೆಪುರಿ, ಬತ್ತಾಸು ಮಾರುತ್ತಾರೆ. ವಾರಕ್ಕೊಮ್ಮೆ ಹಳ್ಳಿ ಜನ ಬಂದು ಕೋಳಿ ಬಲಿ ಕೊಟ್ಟು ಹಬ್ಬದೂಟ ಉಣ್ಣುತ್ತಾರೆ. ವರ್ಷಕೊಮ್ಮೆ ಭರ್ಜರಿ ಜಾತ್ರೆ ನಡೆಯುತ್ತೆ. ಮೊದಲು ದೇವಿಗೆ ಕೋಣ ಕಡಿಯುತ್ತಿದ್ದರು ಈಗ ಆ ಪದ್ಧತಿ ನಿಂತಿದೆ.

ಮುಸ್ಸಂಜೆ ವೇಳೆಗೆ ದೇವಸ್ಥಾನ ಮುಂದಿರುವ ಜಗಲಿ ಕಟ್ಟೆ ರಂಗೇರುತ್ತದೆ. ಹದಿಹರೆಯದ ಹುಡುಗರು ಕೂತು ಹರಟೆ ಹೊಡೆಯುತ್ತಾರೆ. ಹಿರಿಯರು ಅಲ್ಲೇ ವಲ್ಲಿ ಬಟ್ಟೆ ಹಾಕಿಕೊಂಡು ಕೂತು ಊರಿನ ರಾಜಕೀಯ ಅದು ಇದು ಅಂತ ಗಂಭೀರ ಚರ್ಚೆ ನಡೆಸುತ್ತಾರೆ. ಮನೆಯಲ್ಲಿ ಹೆಂಡತಿ ಕಾಟ ತಡೆಯೋಕೆ ಆಗದ ನನ್ನ ತಾತನಂತವರು ಕೂಡ ಜಗಲಿಯ ಮೇಲೆ ಕುಳಿತು ನಿಟ್ಟುಸಿರು ಬಿಡುತ್ತಾರೆ. ಗುಡಿಯ ಮುಂದಿರುವ ದೊಡ್ಡಮರದ ಗೂಡುಗಳಿಗೆ ಹಿಂದಿರುಗಿದ ಹಕ್ಕಿಗಳು, ಗುಟುಕು ತಿನ್ನಲು ಕಾದಿರುವ ಮರಿಗಳು ಸದ್ದು ಮಾಡುತ್ತವೆ. ನಮ್ಮೂರಿನ ಮಾರಮ್ಮನ ದೇವಾಳ, ದೇವಾಳ ಮಾತ್ರವಲ್ಲ, ಅದು ನಮ್ಮೂರಿನ ಜೀವಾಳ. ಊರಿನ ನಾಡಿಮಿಡಿತ ಅರಿಯಬೇಕೆಂದರೆ ಒಮ್ಮೆ ಮಾರಮ್ಮನ ಗುಡಿ ಸುತ್ತಾ ಮುತ್ತಾ ಓಡಾಡಿ ಬನ್ನಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗ ಮತ್ತೆ ಅಯೋಧ್ಯೆಗೆ ಹೋಗೋಣ. ಅಯೋಧ್ಯೆಯಲ್ಲಿ ಕಟ್ಟಬೇಕಿದ್ದ ದೇಗುಲ ರಾಜಾರಾಮನ ಅರಮನೆಯಂತಿರಬೇಕಿತ್ತು. ದೇಗುಲದ ದಾರಿ ರಾಮಾಯಣದ ರಾಜಾ ಬೀದಿಯಂತಿರಬೇಕಿತ್ತು. ರಾಜಕೀಯದ ಉದ್ದೇಶಕ್ಕೆಂದು ಕಟ್ಟಿದ ಗ್ರ್ಯಾಂಡ್ ನರೇಟಿವ್ ಅನುಗುಣವಾಗಿ ದೇಗುಲ ಎಲ್ಲಾ ರೀತಿಯಲ್ಲೂ ಗ್ರ್ಯಾಂಡ್ ಆಗಬೇಕಿತ್ತು. ಅಯೋಧ್ಯೆ ಜನರ ಪ್ರೀತಿಯ ರಾಮ್ ಲಲ್ಲಾ ಈಗ ರಾಜಾ ರಾಮನಾಗುವವನಿದ್ದ! ಇಂತಹ ಪೊಲಿಟಿಕಲ್ ಪ್ರಾಜೆಕ್ಟ್ ಒಂದರಿಂದ ಅಯೋಧ್ಯೆ ಜನ ಏನನ್ನು ಕಳೆದುಕೊಂಡರು ಎಂದರೆ ಮೇಲಿನ ಮಾರಮ್ಮ ಗುಡಿಯ ಬಗ್ಗೆ ಮತ್ತೊಮ್ಮೆ ಓದಿ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಕಟ್ಟಬೇಕೆಂಬುದು ಹಿಂದೂಗಳ ಕನಸು. ಅದರಲ್ಲಿ ಎರಡು ಮಾತಿಲ್ಲ. ಅದು ಸ್ಥಳೀಯರ ಕನಸು ಕೂಡ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ ಎಂಬುದರ ಬಗ್ಗೆ ಯಾರಿಗೂ ಸಂಶಯವಿರಲಾರದು. ಆದರೆ ರಾಮ ಮಂದಿರ ಕಟ್ಟುವ ನಿಟ್ಟಿನಲ್ಲಿ ಆದ ಪ್ರಮಾದಗಳೇನು? ಮಸೀದಿ ಕೆಡವಿದ್ದು, ತದನಂತರದ ಆ ಘಟನೆ ಕೋಮುಗಲಭೆಗೆ ಕಾರಣವಾಗಿದ್ದು, ದ್ವೇಷದ ದಳ್ಳುರಿ ಎಲ್ಲೆಡೆ ಹತ್ತಿ ಉರಿದಿದ್ದು, ನರಮೇಧ ನಡೆದದ್ದು… ಈ ಕುರಿತು ಮತ್ತೆ ಮಾತನಾಡುವುದಿಲ್ಲಿ ಅಸಮಂಜಸ. ಕಳೆದೈದು ವರ್ಷದಲ್ಲಾದ ಬೆಳವಣಿಗೆಯನ್ನು ಮಾತ್ರ ಗಮನಿಸೋಣ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ರಾಮ ಮಂದಿರಕ್ಕೆ ಹೋಗುವ ರಸ್ತೆಗಳ ಅಗಲೀಕರಣಕ್ಕೆ ಸುಮಾರು 200 ಮನೆಗಳನ್ನು ಉರುಳಿಸಲಾಯಿತು. 2200 ಸಣ್ಣ ಅಂಗಡಿ ಮುಂಗಟ್ಟುಗಳನ್ನು ಕೆಡವಲಾಯಿತು. ರಾಜಕೀಯವಾಗಿ ಪ್ರಚಲಿತದಲ್ಲಿದ್ದ ಗ್ರ್ಯಾಂಡ್ ನರೇಟಿವ್ ಅನುಗುಣವಾಗಿ ಇಂದು ಗ್ರ್ಯಾಂಡ್ ಮಂದಿರ ಕಟ್ಟಿದ ಮೇಲೆ ಸಣ್ಣ ಅಂಗಡಿ ಮುಂಗಟ್ಟು ಜಾಗದಲ್ಲಿ ದೊಡ್ಡ ತಿಮಿಂಗಿಲಗಳು ವ್ಯಾಪಾರ ಶುರುವಚ್ಚಿಕೊಂಡರು, ದೇವರಿಗೆ ನಡೆದ ಎಲ್ಲಾ ಪೂಜಾ ಕೈಂಕರ್ಯಗಳನ್ನು ಕೂಡ ದೂರದ ಉಡುಪಿ ಮಠದ ಸ್ವಾಮೀಜಿ ನಡೆಸಿಕೊಟ್ಟರು. ಸ್ಥಳೀಯರೇ ಸೇರುತ್ತಿದ್ದ ಗುಡಿ ನೋಡ ನೋಡುತ್ತಿದ್ದಂತೆ ದೇಶದ ಮಾತಾಯಿತು. ಬೃಹತ್ ಕಾರ್ಪೊರೇಟ್ ಕಟ್ಟಡದಂತಾಯಿತು. ಸ್ಥಳೀಯರನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸಿ ನೋಡಿ ನಾವು ಐನೂರು ವರ್ಷಗಳ ಕನಸನ್ನು ಪೂರೈಸಿದ್ದೇವೆ ಎಂಬ ಕಥನಗಳನ್ನು ಹರಡಲಾಯಿತು!

ದೇಗುಲ ಉದ್ಘಾಟನೆಯಾದ ದಿನದಂದು ಬೆಂಗಳೂರಿನಂತಹ ನಗರಗಳಲ್ಲಿ ಪಾನಕ ಕೋಸಂಬರಿ ಹಂಚಿ ಸಂಭ್ರಮಿಸುತ್ತಿದ್ದ ಭಕ್ತರು ಒಂದು ಕಡೆಯಾದರೆ, ಮನೆ ಮಠ ಕಳೆದುಕೊಂಡು ಸೂರಿಲ್ಲದೆ ಸರಿಯಾದ ಪರಿಹಾರವೂ ಸಿಗದೆ ಬೀದಿಗೆ ಬಿದ್ದ ಅಯೋಧ್ಯೆಯ ನಿಜ ರಾಮಭಕ್ತರು ಹೇಳಿಕೊಳ್ಳಲಾಗದ ವೇದನೆಯಲ್ಲಿದ್ದರು. ಮಹಾನಗರಿಗಳಿಂದ ದಂಡು ದಂಡಾಗಿ ಅಯೋಧ್ಯೆಗೆ ತೆರಳಿದ ಭಕ್ತಾದಿಗಳಿಂದ ಟೂರಿಸಂ ಏನೋ ಉದ್ದಾರವಾಯಿತು ಆದ್ರೆ ಅದರಿಂದ ಬಂದ ಲಾಭವನ್ನು ನುಂಗಿದವರು ಮಾತ್ರ ದೊಡ್ಡ ದೊಡ್ಡ ತಿಮಿಂಗಿಲಗಳೇ. ಟ್ರಾವೆಲ್ ಏಜೆನ್ಸಿಗಳೇ. ಮಂದಿರದ ಉನ್ಮಾದದಲ್ಲಿ ಇಡೀ ದೇಶವೇ ಮುಳುಗಿ ಹೋಗಿದ್ದಾಗ ಚುನಾವಣೆಯಲ್ಲಿ ಮತ ಚಲಾಯಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವವ ಸ್ಥಳೀಯ ಮತಾದಾರನೆ ಹೊರತು ಮಹಾನಗರಿಯ ಪವಿತ್ರಯಾತ್ರಿಯಲ್ಲ ಎಂಬ ಆಲೋಚನೆ ಮನದ ಕನ್ನಡಿಯಲ್ಲಿ ಸುಳಿದಿರಲಾರದು. ಅಯೋಧ್ಯೆಯ ಚುನಾವಣಾ ಫಲಿತಾಂಶ ನನ್ನನು ಅಚ್ಚರಿಗೊಳಿಸಲಿಲ್ಲ. ಭವ್ಯ ರಾಮಮಂದಿರ ಕಟ್ಟಿದವರಿಗೆ ಮತ ಹಾಕದ ಸ್ಥಳೀಯರನ್ನು ಸದಾ ರಾಜಧರ್ಮ ಪಾಲಿಸುವ ರಾಮ ಕೂಡ ತೆಗಳಲಾರ!

ದೇಶದ ಕಾಡು, ಬೆಟ್ಟ ಗುಡ್ಡಗಳ ವಿಷಯ ಬಂದಾಗ ಸ್ಥಳೀಯರ ಆಶಯಗಳಿಗೆ, ಬದುಕುವ ಮಾರ್ಗಕ್ಕೆ ಧಕ್ಕೆ ಬರುವಂತೆ ಪ್ರಭುತ್ವ ವರ್ತಿಸಿದ್ದು ಇದೆ ಮೊದಲಲ್ಲ. ಸ್ಥಳೀಯರ ಸಮ್ಮತಿಯಿಲ್ಲದೆ ಅಣೆಕಟ್ಟು ಕಟ್ಟಿ ಹಳ್ಳಿಗರನ್ನು ಗುಳೆ ಎಬ್ಬಿಸುವುದು, ಕಾಡು ಕಡಿದು ಬುಡಕಟ್ಟು ಜನಾಂಗದವರನ್ನು ಸ್ಥಳಾಂತರಗೊಳಿಸುವುದು, ಹರಿವ ನದಿಗೆ ಮಹಾನಗರದ ಕೊಳಕು ಕಾರ್ಖಾನೆ ನೀರನ್ನು ಹರಿಸಿ ಕಲುಷಿತಗೊಳಿಸಿ ನದಿ ತಡಿಯ ಜನರ ಜೀವನವನ್ನೇ ನರಕ ಮಾಡಿಬಿಡುವುದು, ಅದಿರಿಗಾಗಿ ಬೆಟ್ಟಗಳನ್ನೇ ಕರಗಿಸಿ ಹಳ್ಳಿಗರ ಜೀವನವನ್ನೇ ಹಾಳಗೆಡುವುದು, ರಾತ್ರೋರಾತ್ರಿ ಕಾಡುಗಳನ್ನು ರಾಷ್ಟ್ರೀಯ ಉದ್ಯಾನಗಳನ್ನಾಗಿ ಪರಿವರ್ತಿಸಿ ಕಾಡು ಜನರ ಬದುಕನ್ನೇ ದುಸ್ತರ ಮಾಡಿಬಿಡುವುದು, ರಾಷ್ಟ್ರೀಯ ಹೆದ್ದಾರಿಗಾಗಿ, ಉದ್ಯಮಿಗಳಿಗಾಗಿ ವಿಶೇಷ ಆರ್ಥಿಕ ವಲಯ ಸೃಷ್ಟಿಗಾಗಿ ರೈತರಿಂದ ಫಲವತ್ತಾದ ಭೂಮಿ ಕಸಿದುಕೊಳ್ಳುವುದು ಪ್ರಭುತ್ವಕ್ಕೆ ಹೊಸದಲ್ಲ. ಈಗ ಈ ಪಟ್ಟಿಗೆ ದೇಗುಲ ಕೂಡ ಸೇರ್ಪಡೆಯಾಗಿದ್ದು ಹೊಸದಷ್ಟೆ.

ಉತ್ತರಪ್ರದೇಶದ ಜನರು ಅಂತರಾಳದ ನೋವನ್ನು ತಮ್ಮ ಮತದ ಮೂಲಕ ಹೊರಹಾಕಿದ್ದಾರೆ. ಅವರನ್ನ ಕೃತಘ್ನರೆಂದು ದೂರುವುದು ತೀರಾ ಬಾಲಿಶವೆನಿಸುತ್ತದೆ. ಹಾಗೆ ದೂರುವುದು ಭಕ್ತರ ಅಹಂಕಾರವು ಹೌದು. 2017-2021ರ ನಡುವೆ ಉತ್ತರಪ್ರದೇಶ ಆರ್ಥಿಕ ಪ್ರಗತಿ ಕೆಲವ 1.95% ಇತ್ತು. ಇದರ ನಡುವೆ ಮನೆ, ಜೀವನ ಸಾಗಿಸಲು ಇದ್ದ ಪುಟ್ಟ ಅಂಗಡಿಗಳನ್ನು ಕಳೆದುಕೊಂಡ ಅಯೋಧ್ಯೆ ವಾಸಿಗಳ ಪಾಡು ಏನಾಗಿರಬೇಕು ಒಮ್ಮೆ ಯೋಚಿಸಿ?

ಅಯೋಧ್ಯಾ ವಾಸಿಗಳು
ಅಯೋಧ್ಯಾ ವಾಸಿಗಳು

ಪುರಿಯ ಜಗನ್ನಾಥ ದೇವಾಲಯ ನನಗೆ ಅಚ್ಚುಮೆಚ್ಚಿನ ದೇವಾಲಯ. ಜಗನ್ನಾಥ ದೇಗುಲದ ಒಳಗಿನ ಪ್ರಶಾಂತತೆ, ನೆಮ್ಮದಿ ನನಗೆ ನಮ್ಮೂರಿನ ಮಾರಮ್ಮನ ಗುಡಿಯ ಮುಂದಿನ ಜಗಲಿ ಕಟ್ಟೆಯ ಮೇಲೆ ಮಾತ್ರ ದೊರಕಲು ಸಾಧ್ಯವೆಂದರೆ ತಪ್ಪಾಗಲಾರದು. ಜಗನ್ನಾಥ ಜಗಕ್ಕೆ ವಿಷ್ಣು ಕೃಷ್ಣ ಆಗಬಹುದು ಆದರೆ ಅಲ್ಲಿನ ಜನರಿಗೆ ಆತನೊಬ್ಬ ಸಖ. ಮಾರಮ್ಮ ನಮ್ಮೂರಿನವಳು ಎನ್ನುವಂತೆ ಜಗನ್ನಾಥ್ ಆ ನಗರದ ವಾಸಿ.

ಅಗಲ ಕಣ್ಣುಗಳ ಜಗನ್ನಾಥನನ್ನು ನೋಡುವಾಗ ನನಗೆ ಆತನೆಂದೂ ವೈದಿಕರ ದೇವರೆಂದು ಅನ್ನಿಸಿಲ್ಲ, ಬದಲಾಗಿ ಬುಡಕಟ್ಟು ಜನರ ಪರಮಾಪ್ತನೆಂದು ಅನ್ನಿಸಿದೆ. ದೇಗುಲದ ಒಳಗೆ, ಜಗನ್ನಾಥ್ ಮಂದಿರದಿಂದ ಗುಂಡಿಚಾ ದೇಗುಲವರೆಗೆ ಸಾಗುವ ಹಾದಿಯಲ್ಲಿ ಇಡಿಯ ಪುರಿಯ ಜೀವಾಳವಿದೆ. ಜಗನ್ನಾಥನ ಪರಮ ಭಕ್ತರಾದ ಶ್ರೀ ಹರಿದಾಸ ಠಾಕೂರ, ಸಲ ಬೇಗ ಮುಸಲ್ಮಾನರು. ಪ್ರತಿ ವರುಷ ಜಗನ್ನಾಥ, ಸುಭದ್ರ, ಬಲದೇವನ ರಥ ಮಾಡುವವರು ಸ್ಥಳೀಯರು. ಇಂತಹ ದೇಗುಲ ಮತ್ತೊಂದು ರಾಜಕೀಯ ಅಜೆಂಡಕ್ಕೆ ಸಿಲುಕಿ ಬಳಲದಿರಲಿ. ಅಯೋಧ್ಯೆ ಜನರಿಗೆ ಬಹುಬೇಗ ಪರಿಹಾರ ಸಿಗಲಿ. Let these cities remain vibrant. They belong to the natives. They should not become part of political/ national narratives.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ಬಾಲ್ಯವಿವಾಹ | ಕರ್ನಾಟಕಕ್ಕೆ 2ನೇ ಸ್ಥಾನ: ನಾಚಿಕೆಗೇಡಿನ ಸಂಗತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ಅತಿ ಹೆಚ್ಚು...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...