ಭಾರತ ಹಾಕಿಗೆ ಮರುಜೀವ ನೀಡಿದವರು ಒಡಿಶಾದ ನವೀನ್ ಪಟ್ನಾಯಕ್. ಈಗ ಹೊಸ ಒಡಿಶಾ ಸರ್ಕಾರ ಅವರು ತೋರಿದ ದಾರಿಯಲ್ಲೇ ನಡೆದಿದೆ. ಒಂದೊಂದು ರಾಜ್ಯ, ಒಂದೊಂದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ ಎಂಬ ಪಣ ತೊಟ್ಟರೆ ಭಾರತದಲ್ಲಿ ಹೊಸದೊಂದು ಕ್ರೀಡಾಯುಗ ಶುರುವಾಗಬಹುದು. ರಾಜಕೀಯ ಇಚ್ಛಾಶಕ್ತಿ, ಬಹುದೊಡ್ಡ ವಿಷನ್ ಬೇಕಷ್ಟೇ.
2008ರಲ್ಲಿ ಭಾರತದ ಹಾಕಿ ತಂಡ ಒಲಿಂಪಿಕ್ಕಿಗೆ ಕ್ವಾಲಿಫೈ ಆಗಲಿಲ್ಲ. ಆ ವರುಷ ಭಾರತ ತಂಡಕ್ಕೆ ಆದ ಅವಮಾನ ಅಷ್ಟಿಷ್ಟಲ್ಲ. 2012ರಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಸೋತಿತು. 2016ರ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಕ್ವಾಟರ್ ಫೈನಲ್ ತಲುಪಿತು. 2020 ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಿತು. ಮತ್ತೀಗ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿದೆ. ಎರಡು ದಶಕಗಳ ಸುದೀರ್ಘ ಏಳುಬೀಳುಗಳ ಪಯಣದಲ್ಲಿ ತಂಡದ ಜೊತೆಗಿದ್ದವರು ಕೇರಳದ ಶ್ರೀಜೇಶ್. ಕಳೆದು ಹೋಗಿದ್ದ ಭಾರತದ ಹಾಕಿ ಸುವರ್ಣ ಯುಗವನ್ನು ಮತ್ತೆ ನೆನಪಿಸುವ ಹಂತಕ್ಕೆ ತಂಡವನ್ನು ಕರೆದೊಯ್ಯುವಲ್ಲಿ ಶ್ರೀಜೇಶ್ ಪಾತ್ರ ದೊಡ್ಡದು.
ನನಗೆ ಬಹಳ ಖುಷಿ ಕೊಟ್ಟ ಇನ್ನೊಂದು ವಿಷಯ ಏನು ಅಂದ್ರೆ ಹಾಕಿ ತಂಡದಲ್ಲಿರುವ ಹಳ್ಳಿ ಮತ್ತು ಪುಟ್ಟ ಪುಟ್ಟ ಪಟ್ಟಣಗಳ ಹುಡುಗರು. ಶ್ರೀಜೇಶ್ ಕೇರಳದ ಪುಟ್ಟ ಹಳ್ಳಿಯ ಹುಡುಗ. ಸಂಜಯ್, ಶಮ್ಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಸುಖ್‌ಜೀತ್ ಸಿಂಗ್, ರಾಜ್ಕುಮಾರ್ ಪಾಲ್ ಹಳ್ಳಿಯ ಹುಡುಗರು. ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಲಲಿತ್ ಕುಮಾರ್, ಮನ್‌ದೀಪ ಸಿಂಗ್, ಅಮಿತ್ ರೋಹಿದಾಸ್, ಸುಮಿತ್ ವಾಲ್ಮೀಕಿ ಪುಟ್ಟ ಪಟ್ಟಣದವರು. ಗುರ್ಜಂತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್ ಅಮೃತಸರದವರು.
ಈ ಪಂದ್ಯಾವಳಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ಹತ್ತು ಗೋಲ್ ಸಿಡಿಸಿ ಭಾರತದ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಭಾರತದ ಡಿಫೆನ್ಸ್ ಭದ್ರಕೋಟೆಯಂತಿತ್ತು. ಗ್ರೇಟ್ ಬ್ರಿಟನ್ ವಿರುದ್ಧ ಸುಮಾರು 43 ನಿಮಿಷಗಳ ಕಾಲ ಕೇವಲ ಹತ್ತು ಆಟಗಾರರನ್ನು ಹೊಂದಿದ್ದ ಭಾರತದ ತಂಡದ ಡಿಫೆನ್ಸ್ ಮತ್ತು ಕಂಚಿನ ಪದಕಕ್ಕೆ ಸ್ಪೇನ್ ವಿರುದ್ಧ ಆಡಿದ ಪಂದ್ಯದ ಡಿಫೆನ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸದೆ ಇರಲಾಗದು. ಜರ್ಮನಿಯ ವಿರುದ್ಧ ಭಾರತ ತಂಡ ಸೆಮಿಫೈನಲ್ ಪಂದ್ಯ ಆಡಿದ ವೇಗ ವಿಸ್ಮಯಕಾರಿ ಆಗಿತ್ತು. ನಿಜವಾಗಿಯೂ ಭಾರತದ ಹಾಕಿ ತಂಡ ಸರಿಯಾದ ದಾರಿಯಲ್ಲಿದೆ.
ಶ್ರೀಜೇಶ್ ಹಾಕಿಗೆ ವಿದಾಯ ಹೇಳಿದ್ದಾರೆ. ಅವರನ್ನು ಮತ್ತು ಇಡೀ ತಂಡವನ್ನು ಒಡಿಶಾ ರಾಜ್ಯದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿಡಿಯೋ ಕಾಲ್ ಮಾಡಿ ಅಭಿನಂದಿಸಿದ್ದಾರೆ.
ಭಾರತ ಹಾಕಿ ತಂಡದ ಮರು ಹುಟ್ಟಿಗೆ ನವೀನ್ ಪಟ್ನಾಯಕ್ ಮತ್ತು ಒಡಿಶಾ ಸರ್ಕಾರ ಕಾರಣವೆಂದರೆ ತಪ್ಪಾಗಲಾರದು. ಸಹಾರ ಕಂಪನಿ ಮುಳುಗಿ ಭಾರತ ಹಾಕಿ ತಂಡಕ್ಕೆ ಪ್ರಾಯೋಜಕರೇ ಇಲ್ಲದಿದ್ದಾಗ ಹೀನಾಯ ಸ್ಥಿತಿಯಲ್ಲಿದ್ದ ಭಾರತ ತಂಡದ ನೆರವಿಗೆ ಬಂದವರು ನವೀನ್ ಪಟ್ನಾಯಕ್ ಮತ್ತು ಒಡಿಶಾ ಸರ್ಕಾರ. ಶಾಲಾ ದಿನಗಳಲ್ಲಿ ಹಾಕಿ ಗೋಲ್ ಕೀಪರ್ ಆಗಿದ್ದ ನವೀನ್ ಅವರಿಗೆ ನಗೆಪಾಟಲಿಗೆ ಗುರಿಯಾಗಿದ್ದ ತಂಡಕ್ಕೆ ಹೊಸ ಚೈತನ್ಯ, ಸ್ಪೂರ್ತಿ ತುಂಬಲು ಕಷ್ಟವಾಗಲಿಲ್ಲ. ಒಡಿಶಾ ಸರ್ಕಾರ ವಿಶ್ವಮಟ್ಟದ ಎಲ್ಲಾ ಮೂಲ ಸೌಕರ್ಯವನ್ನು ಭಾರತ ತಂಡಕ್ಕೆ ಒದಗಿಸತೊಡಗಿತು. ವಿಶ್ವದಲ್ಲಿಯೇ ಅತಿ ದೊಡ್ಡ ಹಾಕಿ ಕ್ರೀಡಾಂಗಣವನ್ನು ರೂರ್ಕೇಲದಲ್ಲಿ ಕಟ್ಟಿಸಿ ಭಾರತ ಹಾಕಿಯ ಮರುಹುಟ್ಟಿಗೆ ಅಡಿಪಾಯ ಹಾಕಿಕೊಟ್ಟಿತು. ಒಡಿಶಾ ಸರ್ಕಾರ ರೂರ್ಕೇಲದಂತಹ ಪುಟ್ಟ ಪಟ್ಟಣ ಎರಡು ಬಾರಿ ವಿಶ್ವಕಪ್ ಹಾಕಿ ಆಯೋಜಿಸಿತು!
ಇದನ್ನು ಓದಿದ್ದೀರಾ?: ವ್ಯಕ್ತಿ ವಿಶೇಷ | ಜಗದೀಪ್ ಧನಖರ್ ಎಂಬ ‘ಸಮರ್ಥ’ ಸಭಾಪತಿ
ಅಂದು ಒಡಿಶಾ ರಾಜ್ಯ ತೆಗೆದುಕೊಂಡ ದಿಟ್ಟ ಹೆಜ್ಜೆಯಿಂದ ಫಲ ನೀಡುತ್ತಿದೆ. ಒಂದು ಸರ್ಕಾರ ಮನಸ್ಸು ಮಾಡಿದ್ರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಒಡಿಶಾ ಸರ್ಕಾರ ನಿದರ್ಶನ! ಇಂದು ಜಾರ್ಖಂಡ್, ಒಡಿಶಾ, ವೆಸ್ಟ್ ಬೆಂಗಾಲ್, ಆಂಧ್ರ, ಛತ್ತೀಸಗಢದ ಬುಡಕಟ್ಟು ಜನಾಂಗದವರು ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ.
1928ರಿಂದ 1980ರವರೆಗೆ ಹಾಕಿ ಕ್ರೀಡೆಯ ಅಧಿಪತಿಯಾಗಿದ್ದ ಭಾರತ ತಂಡ ಮತ್ತೊಂದು ಪದಕ ಗೆಲ್ಲಲು ನಲವತ್ತು ವರುಷ ಕಾಯಬೇಕಾಯಿತು. ರಾಜಕೀಯದಲ್ಲಿ ನವೀನ್ ಪಟ್ನಾಯಕ್ ಅವರ ಕುರಿತು ಹಲವರಿಗೆ ಬೇರೆ ಬೇರೆ ಅಭಿಪ್ರಾಯಗಳಿರಬಹುದು, ಆದರೆ ಭಾರತ ಹಾಕಿಗೆ ಮರುಜೀವ ನೀಡದವರು ಅವರೇ ಎಂಬುದು ನನ್ನ ಅನಿಸಿಕೆ. ಸ್ವತಃ ಕ್ರೀಡಾಳುವಾಗಿದ್ದ ಅವರಿಗೆ ಮಾತ್ರ ಕ್ರೀಡೆಯ ಅಪರಿಮಿತ ಸಾಧ್ಯತೆಗಳ ಅರಿವಿತ್ತು ಅನಿಸುತ್ತೆ.
ಇಂದು ಅವರು ಅಧಿಕಾರದಲ್ಲಿಲ್ಲ, ಆದರೆ ಹೊಸ ಒಡಿಶಾ ಸರ್ಕಾರ ಅವರು ತೋರಿದ ದಾರಿಯಲ್ಲೇ ನಡೆದಿದೆ. ಪದಕ ಗೆದ್ದ ಭಾರತ ತಂಡಕ್ಕೆ ಧನ ಪ್ರಶಸ್ತಿ ಘೋಷಿಸಿದೆ. ಕ್ರೀಡೆಯನ್ನು ಹೇಗೆ ಪುನಶ್ಚೇತನಗೊಳಿಸಬಹುದು ಎಂಬುದಕ್ಕೆ ಒಡಿಶಾ ಬಹು ದೊಡ್ಡ ಮಾದರಿ. ಒಂದೊಂದು ರಾಜ್ಯ ಒಂದೊಂದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ ಎಂಬ ಪಣ ತೊಟ್ಟರೆ ಭಾರತದಲ್ಲಿ ಹೊಸದೊಂದು ಕ್ರೀಡಾ ಯುಗ ಶುರುವಾಗಬಹುದು. ರಾಜಕೀಯ ಇಚ್ಛಾಶಕ್ತಿ, ಬಹುದೊಡ್ಡ ವಿಷನ್ ಬೇಕಷ್ಟೇ. ಭಾರತ ತಂಡದ ಆಟಗಾರರ ಕೊರಳಿನ ಸುತ್ತ ಕಂಚಿನ ಪದಕ ನೋಡಿ ವಿಷನರಿ ನವೀನ್ ಪಟ್ನಾಯಕ್ ಸಹಜವಾಗಿಯೇ ಭಾವುಕರಾಗಿದ್ದಾರೆ.
ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ