ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದೂ-ಮುಸ್ಲಿಂ ರಾಜಕಾರಣ ಬಿಟ್ಟರೆ ಬೇರೆ ಯಾವುದೇ ಅಜೆಂಡಾ ಉಳಿದಿಲ್ಲ, ಸೋಲಿನ ಭಯದಿಂದಾಗಿ ಈಗ ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಹಿಂದೂ ಮುಸ್ಲಿಂ ರಾಜಕಾರಣವನ್ನು ನಾನು ಎಂದಿಗೂ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ನಾಯಕರು ಪ್ರಧಾನಿ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ.
“ಕಳೆದ 10 ವರ್ಷಗಳಿಂದ ಅವರು (ಮೋದಿ) ತಮ್ಮ ರಾಜಕೀಯವನ್ನು ಕೇವಲ ಧರ್ಮದ ಆಧಾರದ ಮೇಲೆ ಮಾಡುತ್ತಿದ್ದಾರೆ. ಆದರೆ ತಾನು ಹಿಂದೂ-ಮುಸ್ಲಿಂ ರಾಜಕಾರಣ ಮಾಡಿಲ್ಲ, ತಾನು ಆ ರೀತಿಯ ರಾಜಕಾರಣ ಮಾಡಿದ್ದರೆ ಈ ಹುದ್ದೆಯಲ್ಲಿ ಉಳಿದುಕೊಳ್ಳಲೂ ಯೋಗ್ಯರಲ್ಲ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪುನರುಚ್ಛರಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಹಾಗೆಯೇ, “ಪ್ರಧಾನಿ ಮೋದಿ ಹಿಂದೂ-ಮುಸ್ಲಿಂ ರಾಜಕಾರಣ ಮಾಡಿಲ್ಲ ಎಂದು ಹೇಳುವುದಾದರೆ ಅವರು ಕಳೆದ 10 ವರ್ಷಗಳಿಂದ ಮಾಡುತ್ತಿರುವುದೇನು” ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, “ಒಂದೋ ನೀವು ಮೊದಲು ಸುಳ್ಳು ಹೇಳುತ್ತಿದ್ದೀರಿ ಅಥವಾ ನೀವು ಈಗ ಸುಳ್ಳು ಹೇಳುತ್ತಿದ್ದೀರಿ. ಇಡೀ ದೇಶವೇ ನೋಡುತ್ತಿದೆ. ಪ್ರಧಾನಿ ಬರೀ ಸುಳ್ಳು ಮಾತನಾಡುತ್ತಾರೆ, ಸುಳ್ಳನ್ನು ಹರಡುತ್ತಾರೆ” ಎಂದು ಟೀಕಿಸಿದರು.
ಇನ್ನು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಮಾತನಾಡಿ, “ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಸೋಲಿನ ಅರಿವಾಗಿದೆ. ಹಾಗಾಗಿ ಈಗ ಮುಸ್ಲಿಮರ ವಿರುದ್ಧ ಮಾತನಾಡಿರುವುದನ್ನು ನಿರಾಕರಿಸುತ್ತಿದ್ದಾರೆ” ಎಂದರು.
ಇದನ್ನು ಓದಿದ್ದೀರಾ? ನಿರ್ಗಮಿಸುವ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ: ಕಾಂಗ್ರೆಸ್ ವಾಗ್ದಾಳಿ
“ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡಿದ್ದಾರೆ. ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ ಬಿಜೆಪಿ ಇದುವರೆಗೆ ಸ್ಪರ್ಧಿಸಿರುವ 329 ಸ್ಥಾನಗಳಲ್ಲಿ 100ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ. ಈ ಪ್ರತಿಕೂಲ ಪರಿಸ್ಥಿತಿ ಮತ್ತು ಮುಂಬರುವ ಹಂತಗಳಲ್ಲಿ ಮತ ಹೆಚ್ಚಿಸಲು ಮೋದಿ ಈಗ ಮುಸ್ಲಿಮರು ಅಥವಾ ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.