ಲೋಕಸಭಾ ಚುನಾವಣೆ | ವಿಪಕ್ಷಗಳ ಮೇಲೆ ಮೋ-ಶಾ ಪ್ರಯೋಗಿಸುತ್ತಿರುವ ಅಸ್ತ್ರಗಳಿವು

Date:

ಅಕಾಲಿಕ ಮಳೆಯ ಹಿನ್ನೆಲೆ, ಇಡೀ ದೇಶದಲ್ಲಿ ಬರದ ಛಾಯೆ ಮೂಡಿದೆ. ಈ ರಣ ಬಿಸಿಲಿನ ಜತೆಗೆ, ಚುನಾವಣಾ ಕಾವು ಏರಿದೆ. 2024ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ದೇಶದ ಚುಕ್ಕಾಣಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಥವಾ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ವಶವಾಗುತ್ತಾ ಎಂಬುದು ಜೂನ್‌ 4ರಂದು ಗೊತ್ತಾಗಲಿದೆ. ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗಾಗಿ ಎರಡು ಮೈತ್ರಿಕೂಟಗಳು ಹೋರಾಟ ನಡೆಸುತ್ತಿವೆ.

ಸಂವಿಧಾನದ ವಿರೋಧಿ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೆರಬೇಕೆಂದು ಕಾಂಗ್ರೆಸ್‌ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದರೆ, ಇನ್ನೊಂದೆಡೆ, ಕಾಂಗ್ರೆಸ್‌ ಮತ್ತು ವಿಪಕ್ಷಗಳನ್ನು ಹತ್ತಿಕ್ಕಲು ಪ್ರಧಾನಿ ಮೋದಿ ಮತ್ತು ಬಿಜೆಪಿಗರು ನಾನಾ ರೀತಿಯಲ್ಲಿ ತಂತ್ರ ಹೆಣೆಯುತ್ತಿದ್ದಾರೆ. ಒಂದಿಲ್ಲೊಂದು ಷಡ್ಯಂತ್ರ ರೂಪಿಸಿ ವಿಪಕ್ಷಗಳ ಮೈತ್ರಿಯನ್ನು ಹಿಮ್ಮೆಟ್ಟಿಸಿ, ಸತತವಾಗಿ ಮೂರನೇ ಬಾರಿಗೆ ತಾವೇ ಅಧಿಕಾರಕ್ಕೇರುವ ಧಾವಂತದಲ್ಲಿದ್ದಾರೆ.

ಆಡಳಿತಾರೂಢ ಬಿಜೆಪಿ ತಮ್ಮ ಅಧಿಕಾರ ಬಳಸಿಕೊಂಡು ಐಟಿ, ಸಿಬಿಐ, ಇಡಿ ಸೇರಿದಂತೆ ಹಲವಾರು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಕೆಲವು ರಾಜ್ಯಗಳಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತಿವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೊಂಡಿದೆ. ಕಾಂಗ್ರೆಸ್ ಸಹ ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೊಂಡಿದೆ.

‘ಇಂಡಿಯಾ’ ಬದಲಿಗೆ ಭಾರತ್ ಎಂದು ಮರುನಾಮ
ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಾಣಲು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಎಂಬ ಹೆಸರಿನೊಂದಿಗೆ ಮುನ್ನೆಲೆಗೆ ಬಂದಿತ್ತು. ವಿಪಕ್ಷಗಳು ತಮ್ಮ ಮೈತ್ರಿಗೆ ‘ಇಂಡಿಯಾ’ ಎಂಬ ಹೆಸರಿಡುತ್ತಲೇ, ಕೇಂದ್ರ ಸರ್ಕಾರವು ದೇಶದ ಹೆಸರನ್ನೇ ಬದಲಿಸಲು ಮುಂದಾಯಿತು. ತನ್ನ ಆದೇಶ/ಅಧಿಸೂಚನೆ ಪ್ರತಿಯ ಮೇಲೆ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ, ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೆ, ಇದು ಹಲವಾರು ಚರ್ಚೆಗಳಿಗೆ ಗ್ರಾಸವಾಯಿತು. ಸಾಕಷ್ಟು ಟೀಕೆಗಳು ಕೂಡ ಇದರ ವಿರುದ್ಧ ಕೇಳಿ ಬಂದವು.

ವಿಪಕ್ಷಗಳ ಪ್ರಮುಖ ನೇತಾರನನ್ನೇ ಸೆಳೆದುಕೊಂಡ ಬಿಜೆಪಿ
ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಎಪ್ರಿಲ್‌ನಲ್ಲಿ ಉನ್ನತ ಮಟ್ಟದ ಸಭೆಗಳನ್ನು ಪ್ರಾರಂಭಿಸಿದವು. ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಎರಡು ಪ್ರಮುಖ ಸಭೆಗಳು ನಡೆದವು. ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ (INDIA) ಎಂದು ಹೆಸರಿಸಲಾದ ಮೈತ್ರಿಯು ಏಳು ರಾಜ್ಯಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಲವಾರು ಪಕ್ಷಗಳ ಒಟ್ಟು 142 ಸದಸ್ಯರನ್ನು ಹೊಂದಿತ್ತು.

ಎರಡು ರಾಷ್ಟ್ರೀಯ ಮತ್ತು 24 ಪ್ರಾದೇಶಿಕ ಪಕ್ಷಗಳು ಸೇರಿದಂತೆ ದೇಶದ 26 ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಟದಲ್ಲಿ ಒಗ್ಗೂಡಿದವು. ಆದರೆ, ಇಂಡಿಯಾ ಮೈತ್ರಿಕೂಟಕ್ಕೆ ಬೆಚ್ಚಿದ ಬಿಜೆಪಿ ತನ್ನ ಕುದುರೆ ವ್ಯಾಪಾರ ಮತ್ತು ಬೆದರಿಕೆಯ ಅಸ್ತ್ರಗಳನ್ನು ಬಳಸಲಾರಂಭಿಸಿತು. ಇಂಡಿಯಾ ಮೈತ್ರಿಕೂಟದಲ್ಲಿ ಸಂಚಾಲಕರಾಗಿದ್ದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ತನ್ನತ್ತ ಸೆಳೆದುಕೊಂಡಿತು. ನಿತೀಶ್‌ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದರು. ಪದೇಪದೆ ಮೈತ್ರಿಕೂಟ ಬದಲಿಸುವ ನತೀಶ್, ಇನ್ನು ಮುಂದೆ ಎನ್‌ಡಿಎ ಕೂಟದಲ್ಲಿಯೇ ಇರುವುದಾಗಿ ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ್ದಾರೆ.

PM Narendra Modi Takes A Step To Keep Nitish Kumar In Good Humour

ಇದಷ್ಟೇ ಅಲ್ಲದೇ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿವೆ. ಅಜಿತ್ ಪವಾರ್ ಅವರ ಎನ್‌ಸಿಪಿ ಕೂಡ ಇಂಡಿಯಾ ಮೈತ್ರಿಕೂಟದಿಂದ ಹೊರನಡೆದು, ಎನ್‌ಡಿಎ ಸೇರಿದೆ.

ಕಾಂಗ್ರೆಸ್‌ಕೆಲವು ಬ್ಯಾಂಕ್ ಖಾತೆಗಳಿಗೆ ನಿರ್ಬಂಧ
ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಲೇ ಇರುವ ಬಿಜೆಪಿ ಮತ್ತು ಮೋದಿ-ಅಮಿತ್ ಶಾ ಪಡೆ, 2019ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ವಿರುದ್ಧ ಐಟಿ ದಾಳಿಗಳನ್ನು ನಡೆಸಿತ್ತು. ಇದೀಗ,  2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ಗೆ ಮತ್ತೆ ಭಾರೀ ದಂಡ ವಿಧಿಸಲು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿದೆ.

ಕಾಂಗ್ರೆಸ್‌ನ ಹಳೆಯ ‘ಆದಾಯ ತೆರಿಗೆ ರಿಟರ್ನ್’ ಸಲ್ಲಿಕೆಯನ್ನು ಮರುಮೌಲ್ಯಮಾಪನ ಮಾಡುತ್ತಿರುವ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದೆ. ಈ ಮೂಲಕ ವಿಪಕ್ಷಗಳನ್ನು ಕೇಂದ್ರ ಸರ್ಕಾರವು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Congress claims party's bank accounts frozen weeks ahead of upcoming Lok Sabha elections – India TV

ಸುಮಾರು ₹135 ಕೋಟಿಯನ್ನು ಹಳೆಯ ತೆರಿಗೆ ಮತ್ತು ದಂಡವೆಂದು ಐಟಿ ಇಲಾಖೆಯು ಕಾಂಗ್ರೆಸ್‌ ಖಾತೆಯಿಂದ  ವಿತ್‌ಡ್ರಾ ಮಾಡಿಕೊಂಡಿದೆ. ಈಗ ಲೆಕ್ಕಪತ್ರವಿಲ್ಲದ ₹524 ಕೋಟಿ ವಹಿವಾಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಮತ್ತೊಂದು ನೋಟಿಸ್ ನೀಡಿದೆ. ಅದು ಕೂಡಾ 2014-2021 ಸಾಲಿನ ಹಣಕಾಸು ವಹಿವಾಟಿನ ವಿಚಾರಕ್ಕಾಗಿ.

ಇನ್ನು, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿರುವುದನ್ನು ಖಂಡಿಸಿ ಹೇಳಿಕೆ ನೀಡಿರುವ ಅಮೇರಿಕಾ, ”ತೆರಿಗೆ ಅಧಿಕಾರಿಗಳು ಕಾಂಗ್ರೆಸ್‌ನ ಕೆಲವು ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದಾರೆ. ಇದರಿಂದಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಚಾರಕ್ಕೆ ತೊಂದರೆಯಾಗಲಿದೆ ಎಂಬ ವಿಷಯಗಳನ್ನು ಕೂಡ ಗಮನಿಸಿದ್ದೇವೆ” ಎಂದು ಹೇಳಿದೆ.

“ಕೇಂದ್ರ ಸರ್ಕಾರ ಈ ಬಾರಿ ಚುನಾವಣೆಯನ್ನು ಅಕ್ರಮವಾಗಿ ನಡೆಸಲು ಮುಂದಾಗಿದೆ. ಚುನಾವಣಾ ಬಾಂಡ್​ಗಳಿಂದ ಬಂದ ಹಣದಿಂದ ಚುನಾವಣೆ ಎದುರಿಸಲು ಮುಂದಾಗಿದೆ. ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಷಡ್ಯಂತ್ರ ನಡೆಸುತ್ತಿದ್ದಾರೆ” ಎಂದು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ದೂರಿದ್ದಾರೆ.

“31 ವರ್ಷಗಳ ಹಿಂದಿನ ಕೇಸ್​ಗೆ ಸಂಬಂಧಿಸಿದಂತೆ ಬ್ಯಾಂಕ್​ ಅಕೌಂಟ್​ ಸೀಜ್​ ಮಾಡಲಾಗಿದೆ. ಖಾತೆಯಲ್ಲಿರುವ 250 ಕೋಟಿ ರೂಪಾಯಿ ಹಣವನ್ನು ಬಳಕೆ ಮಾಡಲಾಗುತ್ತಿಲ್ಲ. ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮಗಳಿಗೆ ಪ್ರಚಾರದ ಜಾಹೀರಾತು ನೀಡಬೇಕಿದೆ. ಸಭೆ, ಸಮಾರಂಭ ಮಾಡಲೂ ಸಹ ನಮಗೆ ಸಾಧ್ಯವಾಗುತ್ತಿಲ್ಲ. ಖಾತೆಯನ್ನೇ ಸೀಜ್​ ಮಾಡಲಾಗಿದೆ. ಇದರಿಂದ ಹಣವನ್ನು ಬಳಕೆ ಮಾಡಲಾಗುತ್ತಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ” ಎಂದು ಆರೋಪಿಸಿದ್ದಾರೆ.

ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ಮಹುವಾ ಮನೆ ಮೇಲೆ ಸಿಬಿಐ ದಾಳಿ
ಸಂಸತ್ತಿನಲ್ಲಿ ಧೈರ್ಯವಾಗಿ ನಿಂತು ಪ್ರಶ್ನೆ ಕೇಳುತ್ತಿದ್ದ ಮಹುವಾ ಮೊಯಿತ್ರಾ ಅವರನ್ನು ‘ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ’ದಲ್ಲಿ ಸಂಸತ್‌ನಿಂದ ಉಚ್ಛಾಟನೆ ಮಾಡಲಾಗಿದೆ. ಅಲ್ಲದೆ, ಇತ್ತೀಚೆಗೆ, ಕೋಲ್ಕತ್ತಾ ಮತ್ತು ಇತರ ನಗರಗಳಲ್ಲಿರುವ ಮೊಯಿತ್ರಾ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿರುವ ಲೋಕಪಾಲ್, ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚುನಾವಣೆಗೆ ಬಿಜೆಪಿಯ ಬ್ರಹ್ಮಾಸ್ತ್ರ ಸಿಎಎ
ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಧಾರ್ಮಿಕ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುವ ಮೂಲಕ ಕೋಮು ಧ್ರುವೀಕರಣದ ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅದರ ಭಾಗವಾಗಿಯೇ, ಮಾರ್ಚ್ 11ರಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿದೆ.

ಅಸ್ಸಾಂನ 1.5 ಲಕ್ಷ ಅಲ್ಪಸಂಖ್ಯಾತರು ಸೇರಿದಂತೆ ಬುಡಕಟ್ಟು, ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಗುರಿಯಾಗಿಸಿಯೇ ಸಿಎಎ ಜಾರಿ ಮಾಡಲಾಗಿದೆ ಎನ್ನುವ ಆರೋಪವಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಸಿಎಎ ಜಾರಿಯಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ವರದಿಯಾಗಿದೆ.

CAA: NESO says citizenship law will not be accepted, PM Modi will face protests in Northeast

ಸಿಎಎ ಅನುಮೋದನೆಗೊಂಡ ನಂತರ ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ತಮಿಳುನಾಡು ಸರ್ಕಾರಗಳು ಸಿಎಎ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿವೆ. ಈಗ, ಸಿಎಎ ನಿಯಮಗಳ ಅಧಿಸೂಚನೆ ಪ್ರಕಟವಾದ ನಂತರ, ವಿವಿಧ ಪಕ್ಷಗಳು ಹೇಗೆ ಪ್ರತಿಕ್ರಿಯಿಸಿವೆ ಎಂಬುದರಲ್ಲಿಯೇ ಚುನಾವಣೆಯಲ್ಲಿ ಅದು ಯಾವ ಪಾತ್ರ ವಹಿಸಲಿದೆ ಎಂಬುದರ ಸೂಚನೆಗಳಿವೆ.

ಜಾರ್ಖಂಡ ಸಿಎಂ ಬಂಧನ
ಇದೇ ವರ್ಷದ ಜನವರಿಯಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚದ ನಾಯಕ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಭೂಹಗರಣದ ಆರೋಪದಡಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದಿಂದಾಗಿ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ, ಜಾರ್ಖಂಡ್‌ನಲ್ಲಿ ಜೆಎಂಎಂ ಪಕ್ಷವನ್ನು ಚುನಾವಣೆಯಲ್ಲಿ ಮಣಿಸಲು ಬಿಜೆಪಿ ಹವಣಿಸುತ್ತಿದೆ.

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹೊತ್ತಿಗೆ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಕೇಜ್ರಿವಾಲ್ ಬಂಧನದ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕಾ, “ಕೇಜ್ರಿವಾಲ್ ಪ್ರಕರಣದಲ್ಲಿ ನ್ಯಾಯೋಚಿತ, ಪಾರದರ್ಶಕತೆ ಹಾಗೂ ಸಮಯಕ್ಕೆ ಸರಿಯಾದ ಕಾನೂನು ಪ್ರಕ್ರಿಯೆಯನ್ನು ನಡೆಸಬೇಕು” ಎಂದು ತಿಳಿಸಿದೆ.

ಮೊದಲ ಆದೇಶ, ಕೇಜ್ರಿವಾಲ್

ಈ ವರ್ಷದಲ್ಲಿಯೇ ಇಬ್ಬರು ಮುಖ್ಯಮಂತ್ರಿಗಳನ್ನು ಬಂಧನ ಮಾಡಿರುವ ಕೀರ್ತಿ ಮೋದಿ ಸರ್ಕಾರದ್ದಾಗಿದೆ. ತಮ್ಮ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದ್ದರು ಅದನ್ನ ಕಾಣದೆ, ತೆಗೆಯದೇ, ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣ ನೋಡಿ ನಗುವಂತಿದೆ ಪ್ರಧಾನಿ ಮೋದಿ ಅವರ ಆಡಳಿತ.

ಪ್ರಧಾನಿ ಮೋದಿ ಅವರು ಅಧಿಕಾರಕ್ಕೇರಿ 10 ವರ್ಷಗಳು ಕಳೆದಿವೆ. ಈ ಹತ್ತು ವರ್ಷಗಳಲ್ಲಿ ಮೋದಿ ಅವರು ಧೈರ್ಯವಾಗಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕರೆದಿಲ್ಲ. ದೇಶದ ಯಾವುದೇ ಭಾಗದಲ್ಲಿ ಸಮಸ್ಯೆಗಳು ಎದುರಾದಾಗಲೂ ಮಾತಾನಾಡಲಿಲ್ಲ. ಕಿವಿಯಿದ್ದು ಕಿವುಡರಂತೆ ಇದ್ದರು. ಮಣಿಪುರದಲ್ಲಿ ಮಹಿಳೆಯರ ಮೇಲೆ ಲೈಂಗಿಕವಾಗಿ ಹಿಂಸಾಚಾರ ನಡೆದು, ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದಾಗಲೂ, ಮೋದಿ ಅವರು ತುಟಿ ಬಿಚ್ಚಲಿಲ್ಲ. ಮಣಿಪುರಕ್ಕೆ ಭೇಟಿಯನ್ನೂ ನೀಡಲಿಲ್ಲ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಳುವವರ ಕೊಡಲಿಗೆ ಹಾಡಹಗಲೇ ಬಲಿಯಾಗತೊಡಗಿವೆ ಒಕ್ಕೂಟದ ಬೇರುಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಡಾಡುವ ಮೋದಿಯವ ಕಣ್ಣಿಗೆ ತಿಂಗಳಾನುಗಟ್ಟಲೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಮಹಿಳಾ ಕುಸ್ತಿಪಟುಗಳು ಮೋದಿಯವರ ಕಣ್ಣಿಗೆ ಬೀಳಲಿಲ್ಲ. ಅಸ್ಸಾಂನ ಬಿಜೆಪಿಯ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡರೊಬ್ಬರು 500 ರೂಪಾಯಿ ನೋಟುಗಳ ರಾಶಿ ನಡುವೆ ಮಲಗಿರುವುದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ ಕೂಡ ಆತನ ಮೇಲೆ ಚುನಾವಣಾ ಸಮಯದಲ್ಲಿ ಮೋದಿ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

Coronation over, arrogant king…': Rahul Gandhi jabs Modi on wrestlers' protest | Latest News India - Hindustan Times

ಇನ್ನು ಇಡೀ ದೇಶದಲ್ಲಿಯೇ ಚುನಾವಣಾ ಬಾಂಡ್ ದೊಡ್ಡ ಹಗರಣವೆಂದು ಬಿಂಬಿತವಾಗುತ್ತಿದೆ. ಚುನಾವಣಾ ಬಾಂಡ್ ಮೂಲಕ ಬಂಡವಾಳಶಾಹಿಗಳಿಂದ ಬಿಜೆಪಿ ಇಲ್ಲಿಯವರೆಗೂ ₹8,252 ಕೋಟಿ ಹಣವನ್ನು ಪಡೆದಿದೆ. ಆದರೂ ಪ್ರಧಾನಿ ಅವರಿಂದ ಈ ಬಗ್ಗೆ ಒಂದೇ ಒಂದು ಮಾತಿಲ್ಲ.

ಸಮಯ ಸಾಧಕರು ಎಂದರೆ ಅದಕ್ಕೆ ಉತ್ತಮ ಉದಾಹರಣೆ, ಪ್ರಧಾನಿ ಮೋದಿ ಎನ್ನಬಹುದು. ಚುನಾವಣಾ ಸಮಯದಲ್ಲಿ ಬೇರೆ ಪಕ್ಷಗಳನ್ನ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಮೋದಿ ಅವರು ತಮ್ಮ ಪಕ್ಷದಲ್ಲಿ ಏನೇ ನಡೆದರೂ ಅದನ್ನ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ.

ಸಿಎಎ, ಪುಲ್ವಾಮಾ, ಅಯೋಧ್ಯೆ ಹೆಸರಲ್ಲಿ ಮೋದಿ ಮತ್ತು ಬಿಜೆಪಿಗರು ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಮಕವಾಗಿ ಮರಳು ಮಾಡಲು ಸಾಧ್ಯ? ವಿಪಕ್ಷಗಳನ್ನು ತನಿಖಾ ಸಂಸ್ಥೆಗಳ ಮೂಲಕ ನಿಯಂತ್ರಿಸಿದರೂ, ಜನರ ಆಲೋಚನೆಗಳನ್ನು, ಜ್ಞಾನವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಭಾರತೀಯ ಪ್ರಜೆಗಳು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಸರ್ವಾಧಿಕಾರಿ, ಫ್ಯಾಸಿಸ್ಟ್‌ ಧೋರಣೆಗಳನ್ನು ಸೋಲಿಸಲು ಸಜ್ಜಾಗುತ್ತಿದ್ದಾರೆ. 10 ವರ್ಷಗಳ ಕಾಲ ಜನರನ್ನು ವಂಚಿಸಿದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ಉತ್ತರಿಸಲಿದೆ ಎಂದು ಹೇಳುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶಕ್ಕೆ ಮಣಿದು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌...

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...