ಜನವರಿ 22ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, “ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು.
“ಅಂದು ಪೂಜೆ ಪುರಸ್ಕಾರಗಳು ನಡೆಯಲಿವೆ. ಪೂಜೆಗೆ ಭಂಗ ಮಾಡಲ್ಲ. ಆದರೆ ಕಾನೂನು ವಿರೋಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿದ್ದೇವೆ” ಎಂದು ಹೇಳಿದರು.
“ಒಳಮೀಸಲಾತಿ ವಿಚಾರವಾಗಿ ಮಾತನಾಡಿ, ಈ ಹಿಂದೆ ಚಿತ್ರದುರ್ಗದಲ್ಲಿ ಒಳಮೀಸಲಾತಿಯನ್ನು ನೀಡುವ ನಿರ್ಣಯ ಮಾಡಿದ್ದೆವು. ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಮಂಡನೆ ಮಾಡುವ ಭರವಸೆ ಕೊಟ್ಟಿದ್ದೆವು” ಎಂದರು.
“ಬಿಜೆಪಿ ಸರ್ಕಾರದಲ್ಲಿ ಅಂದಿನ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿತ್ತು. ಅದರ ಪ್ರಕಾರ ಎಸ್ ಸಿ ಸಮುದಾಯದ 101 ಜಾತಿಗಳನ್ನು ನಾಲ್ಕು ಭಾಗ ಮಾಡಿ ಒಳಮೀಸಲು ವರ್ಗೀಕರಣ ಮಾಡಿದರು. ಅವರು ಹಂಚಿಕೆ ಮಾಡಿದ್ದ ಒಳಮೀಸಲಾತಿ ಅವೈಜ್ಞಾನಿಕ ಅಂತ ಎಂಬುದು ಅವರಿಗೂ ಗೊತ್ತಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
“ಕಾನೂನು ಅಭಿಪ್ರಾಯ ಪಡೆದು ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಅಂತ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ. ನಾವು ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದರೆ ಒಳಮೀಸಲಾತಿ ಕೊಡಬಹುದು” ಎಂದು ಹೇಳಿದರು.
“ಒಳಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಿಚಾರವಾಗಿ, ಬಿಜೆಪಿಯವರು ಏನೇ ವಿಶ್ಲೇಷಣೆ ಮಾಡಲಿ. ಆದರೆ ನಮ್ಮ ಕ್ರಮ ಸರಿಯಾಗಿದೆ. ಮೀಸಲಾತಿ ಹಾಗೂ ಒಳಮೀಸಲಾತಿ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು” ಎಂದು ತಿಳಿಸಿದರು.