ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರ ಬೆಂಬಲಿಗರು ಬಿಜೆಪಿ ತೊರೆದು ಸೋಮವಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸೋಮಶೇಖರ್ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ಮೂಲಕ ಆಪರೇಷನ್ ಹಸ್ತ ಆರಂಭವಾಗಿದ್ದು, ಮೊದಲ ಹಂತವಾಗಿ ಬಿಬಿಎಂಪಿ ಮಾಜಿ ಸದಸ್ಯರಾದ ಆರ್ಯ ಶ್ರೀನಿವಾಸ್, ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಶಿವಮಾದಯ್ಯ, ಹನುಮಂತೇಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ವೇಳೆ ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್, ಆನೇಕಲ್ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಉಪಸ್ಥಿತರಿದ್ದರು.
“ಸೋಮಶೇಖರ್ ಅವರಿಗೆ ಬಿಜೆಪಿಯಲ್ಲಿ ಇಲ್ಲಸಲ್ಲದ ಕಾಟ ಕೊಡುತ್ತಿದ್ದಾರೆ. ಹೀಗಾಗಿ ಸೋಮಶೇಖರ್ ಅವರು ಆದಷ್ಟು ಬೇಗ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ವೇದಿಕೆ ಮೇಲೆಯೇ ಆಹ್ವಾನ ನೀಡುತ್ತೇವೆ” ಎಂದು ಮಾಜಿ ಪಾಲಿಕೆ ಸದಸ್ಯ ರಾಜಣ್ಣ ಹೇಳಿದರು.
ಸೋಮಶೇಖರ್ ಹೆಸರು ಹೇಳದಂತೆ ಶಾಸಕ ಶ್ರೀನಿವಾಸ್ ಅವರು ತಡೆದ ಪ್ರಸಂಗ ನಡೆಯಿತು. ಕೂಡಲೇ ಮಾತು ಬದಲಾಯಿಸಿದ ಅವರು, “ಸೋಮಶೇಖರ್ ರಾಜಕೀಯ ಬೆಳವಣಿಗೆ ಬಗ್ಗೆ ಹೇಳಿದರು. ನಾನು ಮತ್ತು ಸೋಮಶೇಖರ್ ಒಂದೇ ಬಾರಿಗೆ ಚುನಾವಣೆಗೆ ಸ್ಫರ್ಧೆ ಮಾಡಿದ್ದೆವು. 2004 ರಲ್ಲಿ ನಮಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎರಡು ಬಾರಿ ಸೋತರೂ ಮತ್ತೆ ಟಿಕೆಟ್ ನೀಡಿತ್ತು. ಇದರರ್ಥ ಕಾಂಗ್ರೆಸ್ ನಮ್ಮ ಕೈಬಿಡಲ್ಲ. ಕೆಲವೊಂದು ಕಾರಣಗಳಿಂದ ಸೋಮಶೇಖರ್ ಬಿಜೆಪಿ ಹೋಗಿದ್ದಾರೆ” ಎಂದು ಹೇಳಿದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.