- ಪ್ರಾಯೋಗಿಕ ಜಾರಿ ಬಗ್ಗೆ ಮಾಹಿತಿ ಹಂಚಿಕೊಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
- ಯಶಸ್ವಿಯಾದರೆ, ಉಳಿದ ನಿಗಮಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನ
ಸಾರಿಗೆ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC)ಬಸ್ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಟಿಕೆಟ್ಗಳಿಗೆ ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸಲು ಪ್ರಾಯೋಗಿಕ ಆಧಾರದ ಮೇಲೆ ಯುಪಿಐ ಆಧಾರಿತ ಪಾವತಿಗಳನ್ನು ಪ್ರಾರಂಭಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಸ್ಗಳಲ್ಲಿ ಮಾತ್ರ ಜಾರಿ ಮಾಡಲಾಗಿದ್ದು, ಒಂದು ವೇಳೆ ಇದು ಯಶಸ್ವಿಯಾದರೆ, ಉಳಿದ ನಿಗಮಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಬಿಎಂಟಿಸಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಚಾಲ್ತಿಯಲ್ಲಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಭರತ್ ಎಸ್, “ನಿನ್ನೆ(ಸೆ.1)ಯಿಂದ ಪ್ರಾಯೋಗಿಕವಾಗಿ ಎರಡು ಬಸ್ಗಳಿಗೆ ಅಳವಡಿಸಿದ್ದೆವು. ಇಂದು(ಸೆ.2) 10 ಬಸ್ಗಳಲ್ಲಿ ಅಳವಡಿಸಿದ್ದೇವೆ. ಇದು ಯಶಸ್ವಿಯಾದರೆ ಎಲ್ಲ ಬಸ್ಗಳಲ್ಲಿ ಅಳವಡಿಸುವ ಚಿಂತನೆ ಮಾಡುತ್ತಿದ್ದೇವೆ. ಸದ್ಯಕ್ಕೆ ವಾಯವ್ಯ ಕರ್ನಾಟಕ ಬಸ್ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಪ್ರಯಾಣಿಕರು ಹಣ ಪಾವತಿಸಬಹುದು. ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.
“ಆರಂಭದಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ ಗ್ರಾಮಾಂತರ 3ನೇ ಡಿಪೋ ಬಸ್ಸುಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಇದರ ಸಾಧಕ-ಬಾಧಕಗಳು ಹಾಗೂ ಸಾರ್ವಜನಿಕ ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಇತರೆ ಬಸ್ಸುಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ” ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಹೆಚ್. ರಾಮನಗೌಡರ ಈ ದಿನ.ಕಾಮ್ಗೆ ತಿಳಿಸಿದ್ದಾರೆ.

ಯುಪಿಐ ಟಿಕೆಟ್ ಮಾದರಿ
ಬಸ್ಗಳಲ್ಲಿ ಚಿಲ್ಲರೆಗಾಗಿ ಹೊಡೆದಾಟ ನಡೆಯುವ ಸುದ್ದಿಗಳು ಕಿವಿಗೆ ಬೀಳುತ್ತಿರುವ ಮಧ್ಯೆಯೇ ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದ್ದು, ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆ ಮೂಲಕ ಚಿಲ್ಲರೆ ಸಮಸ್ಯೆ ನೀಗಬಹುದು ಎಂದು ಅಂದಾಜಿಸಲಾಗಿದೆ.
‘ಬಸ್ನಲ್ಲೀ ಈ ಮೊದಲು ಗೂಗಲ್ ಪೇ, ಪೋನ್ಪೇ ಆಗುತ್ತಿರಲಿಲ್ಲ. ಚಿಲ್ಲರೆ ಸಮಸ್ಯೆ ತಪ್ಪುತ್ತದೆ. ಇದರಿಂದ ಬಹಳ ಅನುಕೂಲ ಆಗಿದೆ’ ಎಂದು ಬೆಳಗಾವಿಯ ಪ್ರಯಾಣಿಕ ಅರವಿಂದ್ ಆಚಾರ್ ಎಂಬವರು ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4,830 ಬಸ್ಸುಗಳಿದ್ದು 4,359 ಅನುಸೂಚಿಗಳ ಮೂಲಕ ಪ್ರತಿದಿನ 15 ಲಕ್ಷ ಕಿಲೋಮೀಟರ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಶಕ್ತಿ ಯೋಜನೆಗೆ ಮೊದಲು ನಿತ್ಯ 17.48 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ 24 ರಿಂದ 26 ಲಕ್ಷಕ್ಕೆ ಹೆಚ್ಚಳವಾಗಿದೆ.