ಸಿನಿಮಾ ವಿಮರ್ಶೆ | ನೋಡುಗನನ್ನು ನಜೀಬನ ಮರುಭೂಮಿಯ ಆಡಿನ ದೊಡ್ಡಿಗೆ ಕರೆದೊಯ್ಯುವ ‘ಆಡುಜೀವಿತಂ’

Date:

ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ದಾಖಲೆ ನಿರ್ಮಿಸಿದ ಕಾದಂಬರಿ ‘ಆಡುಜೀವಿತಂ'(ಆಡು ಜೀವನ). ಇದು ನಜೀಬ್ ಎಂಬ ಯುವಕ ಗಲ್ಫ್‌ನ ಮರುಭೂಮಿಯಲ್ಲಿ ಅನುಭವಿಸಿದ ನರಕಯಾತನೆಯ ಕಥೆ ಹೊಂದಿದೆ.  ಕಾದಂಬರಿಯನ್ನು ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು ನಿರ್ದೇಶಕ ಬ್ಲೆಸ್ಸಿ. ನಜೀಬನೇ ಆಗಿ ಬದುಕಿರುವ ಪೃಥ್ವಿರಾಜ್‌ ಸುಕುಮಾರನ್‌ ನಟನೆ, ಚಿತ್ತಕ್ಕಿಳಿಯುತ್ತದೆ…

ಸರ್ವೈವ್(Survive) ಡ್ರಾಮಾ ಅಥವಾ ಬದುಕಿ ಉಳಿಯಲು ಪ್ರಯತ್ನಿಸುವ ಕಥೆಯ ಸಿನಿಮಾಗಳು ಇತರೆ ಸಿನಿಮಾಗಳಿಗಿಂತ ಸದಾ ಭಿನ್ನವಾಗಿಯೇ ಇರುತ್ತವೆ. ಇತ್ತೀಚೆಗೆ ತೆರೆಕಂಡ ‘ಮಂಜುಮ್ಮೆಲ್ ಬಾಯ್ಸ್(manjummel boys)’ ಸಿನಿಮಾ ಈಗಾಗಲೇ ಇದನ್ನು ಸಾಬೀತುಪಡಿಸಿದೆ. ಇದಾದ ಬಳಿಕ ಮತ್ತೊಂದು ಸರ್ವೈವ್ ಸಿನಿಮಾ ”ಆಡು ಜೀವಿತಂ’ ಬಂದಿದೆ.

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೆಶಕ ಬ್ಲೆಸ್ಸಿ ನಿರ್ದೇಶಿಸಿದ ‘ಆಡುಜೀವಿತಂ’ ಸಿನಿಮಾವು ಬೆನ್ಯಾಮಿನ್ ಅವರು ಬರೆದಿರುವ ಕಾದಂಬರಿ ‘ದಿ ಗೋಟ್ ಲೈಫ್’ ಆಧರಿತವಾಗಿದೆ. ಮಲಯಾಳಿ ವಲಸಿಗ ನಜೀಬ್‌ ಮಹಮ್ಮದ್‌ ಅವರ ಬದುಕಿನ ಸತ್ಯಘಟನೆ ಆಧರಿತ ಸಿನಿಮಾ ಇದಾಗಿದೆ.

 

ಬರೋಬ್ಬರಿ 16 ವರ್ಷಗಳ ಹಿಂದೆ ಪ್ರಾರಂಭವಾದ ಸಿನಿಮಾ ಇದು. 2008ರಲ್ಲಿಯೇ ಚಿತ್ರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದರೂ, ಮಾರ್ಚ್ 2018ರಿಂದ ಜುಲೈ 2022ರವರೆಗೆ ಚಿತ್ರೀಕರಣವನ್ನು ವಿವಿಧ ಹಂತಗಳಲ್ಲಿ ಮುಗಿಸಲಾಗಿದೆ. ವಾಡಿ ರಮ್, ಜೋರ್ಡನ್ ಮತ್ತು ಅಲ್ಜೀರಿಯಾದ ಸಹಾರಾ ಮರುಭೂಮಿಗಳು ಹಾಗೂ ಹೆಚ್ಚುವರಿ ದೃಶ್ಯಗಳನ್ನು ಕೇರಳದಲ್ಲಿಯೂ ಚಿತ್ರೀಕರಿಸಲಾಗಿದೆ. ಒಟ್ಟಾರೆ ಇಡೀ ಚಿತ್ರ ತಂಡ 16 ವರ್ಷಗಳ ಕಾಲ ಚಿತ್ರಕ್ಕಾಗಿ ಶ್ರಮ ಸುರಿದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಜೀಬ್‌ (ಪೃಥ್ವಿರಾಜ್‌ ಸುಕುಮಾರನ್‌) ತನ್ನ ಪತ್ನಿ ಸೈನಿ (ಅಮಲಾ ಪೌಲ್‌) ಜತೆ ಕೇರಳದಲ್ಲಿ ಸುಂದರವಾದ ಜೀವನ ನಡೆಸುತ್ತಿರುವ ವ್ಯಕ್ತಿ. ತನ್ನ ಕುಟುಂಬದ ಜೀವನವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಆತ ಗಲ್ಫ್‌ಗೆ ಕೆಲಸಕ್ಕೆ ಹೋಗಲು ನಿರ್ಧರಿಸುತ್ತಾನೆ. HELPER ವೀಸಾದೊಂದಿಗೆ ಸ್ನೇಹಿತ ಹಕೀಮ್‌ ಜತೆ ಅಲ್ಲಿಗೆ ತಲುಪುತ್ತಾನೆ. ಏರ್‌ಪೋರ್ಟ್‌ನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ನಿಮ್ಮನ್ನು ನಿಮ್ಮ ‘ಬಾಸ್‌’ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ, ಗುರುತು ಪರಿಚಯವಿಲ್ಲದ ಸ್ಥಳವೊಂದಕ್ಕೆ ಈತನನ್ನು ಕರೆದೊಯ್ಯುತ್ತಾನೆ. ಸ್ಥಳೀಯ ಕುರಿಗಾಹಿಗಳ ಜತೆಗೆ ಮರುಭೂಮಿಯ ಮಧ್ಯಭಾಗದಲ್ಲಿ ಈತನನ್ನು ಬಿಡಲಾಗುತ್ತದೆ. ಹೊರಗಿನ ಪ್ರಪಂಚದ ಯಾವುದೇ ಸಂಪರ್ಕ ಇವರಿಗೆ ಇರುವುದಿಲ್ಲ. ಕಲಿತಿರುವುದು ಕೂಡ ಸ್ವಲ್ಪ. ಗೊತ್ತಿರೋದು ಮಲಯಾಳಂ ಭಾಷೆ ಮಾತ್ರ.

ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಜೀತದಾಳಾಗಿ ಮಾರ್ಪಾಡಾಗುತ್ತಾನೆ. ಸ್ವಲ್ಪ ಆಹಾರ ಮಾತ್ರ ನೀಡಲಾಗುತ್ತದೆ. ಕುಡಿಯಲು ನೀರು ಕೂಡ ಇರುವುದಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ವಾಪಸ್‌ ಬರಲು ಬಯಸುತ್ತಾನೆ. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಉರುಳುತ್ತವೆ. ಅಲ್ಲಿನ ಚಿತ್ರಹಿಂಸೆ, ಗುಲಾಮಗಿರಿಯ ಭಯಾನಕ ಜೀವನ ಮುಂದುವರೆಯುತ್ತದೆ. ಏರ್‌ಪೋರ್ಟಿನಲ್ಲಿ ಇಳಿದ ಬಳಿಕ ಜೊತೆಗಿದ್ದ ಇನ್ನೊಬ್ಬ ಮಲಯಾಳಿ ಹಕೀಮ್ ಇನ್ನೊಂದು ದೊಡ್ಡಿಯಲ್ಲಿರುತ್ತಾನೆ. ಆತ ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ಈ ನಡುವೆ, ದೌರ್ಜನ್ಯ ನೀಡುತ್ತಿದ್ದ ಮಾಲೀಕ, ತನ್ನ ಮಗಳ ಮದುವೆಗೆಂದು ಮರುಭೂಮಿಯಿಂದ ನಗರಕ್ಕೆ ಹೋಗಬೇಕಿರುತ್ತದೆ. ಈ ವೇಳೆ ಪರಾರಿಯಾಗುವ ಯೋಜನೆ ಹಾಕುವ ಹಕೀಮ್ ಮತ್ತು ಆಫ್ರಿಕಾದ ಇನ್ನೋರ್ವ ಜೊತೆಗಾರ ಇಬ್ರಾಹಿಂ ಖಾದಿರಿ ಹೇಗೆ ಸರ್ವೈವಲ್‌ ಆಗುತ್ತಾರೆ ಎಂಬುದೇ ಚಿತ್ರದ ತಿರುಳು.

ಇದನ್ನು ಓದಿದ್ದೀರಾ? ಸಿನಿ ಪ್ರಿಯರ ಮನಸ್ಸು ಗೆದ್ದ ಪೃಥ್ವಿರಾಜ್ ನಟನೆಯ ನೈಜ ಕಥೆಯಾಧರಿಸಿದ ‘ಆಡು ಜೀವಿತಂ’ ಸಿನಿಮಾ

ಈ ಸಿನಿಮಾ ನಜೀಬ್‌ ಅನುಭವಿಸಿದ ನೋವಿನ ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ಬ್ಲೆಸ್ಸಿ ಪ್ರಯತ್ನಿಸಿದ್ದಾರೆ. ಕೇರಳದ ಹಿನ್ನೀರಿನಲ್ಲಿ ಈಜುವ ಆರೋಗ್ಯವಂತನಾಗಿದ್ದ ಯುವಕ ನಜೀಬ್‌ನ ದೇಹವು ಮರುಭೂಮಿಯ ಬಿಸಿಲಿಗೆ ಹೇಗೆ ಒಣಗುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ಮರುಭೂಮಿಯಲ್ಲಿದ್ದು ಹಲವು ವರ್ಷಗಳ ನಂತರ ಸ್ನಾನ ಮಾಡಲು ನೀರಿನ ತೊಟ್ಟಿಯತ್ತ ನಜೀಬ್‌ ಬೆತ್ತಲೆಯಾಗಿ ನಡೆಯುವ ದೃಶ್ಯ ನೋಡುವಾಗ ನಮ್ಮ ಕಣ್ಣಿನಿಂದ ನೀರು ಜಿನುಗಿದರೂ ಕೂಡ ಅಚ್ಚರಿ ಇಲ್ಲ. ನಜೀಬ್‌ನ ಪ್ರತಿಯೊಂದು ಭಾವನೆಯನ್ನೂ, ಸಣ್ಣಸಣ್ಣ ವಿವರಗಳನ್ನೂ ಅದ್ಭುತವಾಗಿ ತೋರಿಸಲಾಗಿದೆ. ಆತನ ಮತ್ತು ಮೇಕೆಮರಿ ನಡುವಿನ ಸಂಬಂಧ, ಮೇಕೆಗಳಿಗೆ ವಿದಾಯ ಹೇಳುವ ಸಂದರ್ಭ ಹೃದಯವನ್ನು ತಟ್ಟುತ್ತದೆ.

ಸಿನಿಮಾದ ಮೊದಲಾರ್ಧ ಬಹುಪಾಲು ಮರುಭೂಮಿ, ಮೇಕೆ ಹಿಂಡು ಮತ್ತು ನರಳುತ್ತಿರುವ ನಜೀಬ್‌ನ ಬದುಕನ್ನು ನೋಡಬಹುದು. ದ್ವಿತೀಯಾರ್ಧದಲ್ಲಿ ನಜೀಬ್ ಮತ್ತು ಹಕೀಮ್ ಅವರ ಸ್ವಾತಂತ್ರ್ಯದ ಕಡೆಗಿನ ಪ್ರಯಾಸಕರ, ಅಸಾಧ್ಯವಾದ ಪ್ರಯಾಣವನ್ನು ಕಾಣಬಹುದು.

ಮರುಭೂಮಿಯಲ್ಲಿ ಕಷ್ಟ ಅನುಭವಿಸಿದ್ದ ನಜೀಬ್

ನಜೀಬ್ ಆಗಿ ಪೃಥ್ವಿರಾಜ್ ಸುಕುಮಾರನ್ ಅಸಾಧಾರಣ ಅಭಿನಯ ನೀಡಿದ್ದಾರೆ. ನಜೀಬ್ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದಾರೆ. ನಟನೆಗಾಗಿ ಅವರ ಬದ್ಧತೆಯನ್ನು ಶ್ಲಾಘಿಸಲೇಬೇಕು. ತಮ್ಮ ತೂಕ ಇಳಿಸಿಕೊಂಡು ಗಡ್ಡ, ಕಪ್ಪು, ಹಲ್ಲು, ಕೊಳಕು ಉಗುರು… ಹೀಗೆ ಆ ಪಾತ್ರಕ್ಕಾಗಿ ದೇಹ ದಂಡಿಸಿದ್ದಾರೆ. ಪ್ರತಿಭೆಯನ್ನೂ ಧಾರೆ ಎರೆದಿದ್ದಾರೆ. ಸ್ನಾನ ಮಾಡುವ ದೃಶ್ಯವೂ ಸೇರಿದಂತೆ ಹಲವಾರು ಕಡೆ ಅದ್ಭುತವಾಗಿ ನಟಿಸಿದ್ದಾರೆ.

ಜಿಮ್ಮಿ ಜೀನ್-ಲೂಯಿಸ್, ತಾಲಿಬ್ (ಕಫೀಲ್) ಮತ್ತು ಕೆ ಆರ್ ಗೋಕುಲ್ (ಹಕೀಮ್) ಅಭಿನಯವೂ ಅದ್ಭುತ. ಕೆಲವೇ ಪಾತ್ರಗಳಲ್ಲಿ ಮಾತ್ರ ಅಮಲಾ ಪೌಲ್‌ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ನಿರ್ದೇಶಕ ಬಳಸಿಕೊಂಡಿದ್ದಾರೆ. ಸಿನಿಮಾ ಮುಗಿದಾಗ ಕುಟುಂಬದೊಂದಿಗೆ ಸೇರುವ ದೃಶ್ಯವನ್ನೂ ತೋರಬಹುದಿತ್ತು ಅನ್ನುವ ಅಭಿಪ್ರಾಯ ಬಂದುಹೋಗುತ್ತದೆ.

ತಂತ್ರಜ್ಞರ ಬಗ್ಗೆ ಹೇಳುವುದಾದರೆ, ಸುನಿಲ್ ಕೆಎಸ್ ಸಿನಿಮಾಟೊಗ್ರಫಿ ಈ ಸಿನಿಮಾದ ಜೀವಾಳ. ನಜೀಬ್‌ ಅವರ ಪ್ರಯಾಣದ ಪ್ರತಿಯೊಂದು ಕ್ಷಣಗಳನ್ನೂ ದಾಖಲಿಸಲಾಗಿದೆ. ನಜೀಬ್‌ ಅನುಭವಿಸುವ ಬಾಯಾರಿಕೆ ನಮ್ಮ ಕಣ್ಣಿಗೆ, ಹೃದಯಕ್ಕೆ ತಾಗುತ್ತದೆ. ಆತನ ಒಣಗಿದ ತುಟಿಗಳನ್ನು ನೀರು ತಣಿಸುವಾಗ ನಿಮಗೂ ನೀರು ಕುಡಿಯಬೇಕು ಎಂದೆನಿಸುತ್ತದೆ. ಮರುಭೂಮಿಯ ವಿಷಪೂರಿತ ಹಾವುಗಳು, ಸುಂಟರಗಾಳಿಯಂತಹ ದೃಶ್ಯಗಳನ್ನು ಪ್ರೇಕ್ಷಕನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಲಾಗಿದೆ.

ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಮುಟ್ಟಿಸಿರುವುದು ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಹಿನ್ನೆಲೆ ಸಂಗೀತ. ಚಿತ್ರದ ಧ್ವನಿ ಮತ್ತು ಭಾವನೆಗಳಿಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರೇಬಿಕ್, ಭಾರತೀಯ, ಇಸ್ಲಾಮಿಕ್ ವಾಕ್ಯಗಳೂ ಸೇರಿದಂತೆ ಹಲವು ಹಿನ್ನೆಲೆ ಸಂಗೀತಗಳ ಮಿಳಿತವಿದೆ. ನಜೀಬ್‌ನ ಸುಖದುಃಖಗಳನ್ನು ಭಾವನಾತ್ಮಕವಾಗಿ ಎ ಆರ್ ರೆಹಮಾನ್ ಸಂಗೀತಕ್ಕೆ ಕನೆಕ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ಆಡು ಜೀವಿತಂ’ ಸುಮಾರು ಮೂರು ಗಂಟೆ ಅವಧಿಯ ಸಿನಿಮಾ. ಕೆಲವೊಂದು ಭಾಗದಲ್ಲಿ ದೀರ್ಘವಾಗಿ ಬೋರ್‌ ಹೊಡೆಸುತ್ತದೆ. ಆದರೂ ಸಿನಿಮಾ ಗೆಲ್ಲುವುದು ನಜೀಬ್‌ ಪಾತ್ರಧಾರಿ ಪೃಥ್ವಿರಾಜ್ ನಟನೆಯಿಂದ. ಸಿನಿಮಾ ಮುಗಿದಾಗ, ನಜೀಬ್‌ನಂತೆ ವೀಸಾ ಏಜೆಂಟರುಗಳ ಮೋಸಕ್ಕೆ ಎಷ್ಟು ಮಂದಿ ಮುಗ್ಧ ಬಡವರು ಮರುಭೂಮಿಗೆ ತೆರಳಿ ಪ್ರಾಣ ಕಳೆದುಕೊಂಡಿದ್ದಾರೋ? ಇಂದಿಗೂ “ಆಡು ಜೀವನ” ನಡೆಸುತ್ತಿರುವ ಮಂದಿ ಇರಬಹುದೇ? ಎಂಬ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ.

‘ಆಡುಜೀವಿತಂ’ ಪುಸ್ತಕ ಕನ್ನಡದಲ್ಲಿ ಓದುವುದಾದರೆ?

ಬೆನ್ಯಾಮಿನ್ ಇವರ ‘ಆಡು ಜೀವಿತಂ’ ಕೃತಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಲಭಿಸಿದೆ. ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಅರೇಬಿಕ್ ಹಾಗೂ ಕನ್ನಡ ಭಾಷೆಗಳಿಗೂ ಅನುವಾದಗೊಂಡಿದೆ. ಕನ್ನಡಕ್ಕೆ ಡಾ. ಅಶೋಕ್ ಕುಮಾರ್ ‘ಆಡು ಜೀವಿತಂ’ ಕೃತಿಯನ್ನು ಅನುವಾದಿಸಿದ್ದಾರೆ. ಹೇಮಂತ ಸಾಹಿತ್ಯ ಪ್ರಕಟಿಸಿದ್ದಾರೆ. ಬೆಂಗಳೂರಿನ ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿರುವ ಕಚೇರಿಯಲ್ಲಿ ಪ್ರತಿಗಳು ಲಭ್ಯವಿದೆ.

ಇರ್ಷಾದ್‌ ವೇಣೂರು
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ರೀಲ್ಸ್‌ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಜಾಮೀನು

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಬಿಗ್...

ಪ್ರಕಾಶ್ ರಾಜ್ ಬಿಜೆಪಿ ಸೇರ್ಪಡೆ ವದಂತಿ: ಬಹುಭಾಷಾ ನಟ ಹೇಳಿದ್ದೇನು?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಆ ಪಕ್ಷದಿಂದ ಈ ಪಕ್ಷಕ್ಕೆ...

‘ಕಿರಾತಕ’ ಖ್ಯಾತಿಯ ಖಳನಟ ಡೇನಿಯಲ್ ಬಾಲಾಜಿ ನಿಧನ

ಕಿರಾತಕ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ತಮಿಳಿನ ಖ್ಯಾತ ಖಳನಟ ಡೇನಿಯಲ್...