ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ ತಿರುಪತಿ ದೇವಸ್ಥಾನ. ಇಲ್ಲಿ ಭಕ್ತಿಯ ಜೊತೆ ಕೂದಲಿನ ವ್ಯಾಪಾರ ಕೋಟ್ಯಂತರ ರೂಪಾಯಿಯ ಉದ್ಯಮವಾಗಿಯೂ ಮಾರ್ಪಟ್ಟಿದೆ.
ಕೂದಲು, ಮಾನವನ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಕೂದಲು ಸೌಂದರ್ಯದ ಪ್ರತೀಕವಾಗಿದೆ ಎನ್ನಲಾಗುತ್ತಿದೆ. ಕೂದಲಿನ ಸೌಂದರ್ಯ ಎಂದ ಕೂಡಲೇ ಹೆಣ್ಣುಮಕ್ಕಳ ನೀಳ ಕೇಶರಾಶಿಯು ನೆನಪಾಗುತ್ತದೆ. ಕೂದಲ ಸೌಂದರ್ಯ ಕಾಪಾಡಿಕೊಳ್ಳುವುದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಯುವತಿಯರು ಒಂದೆಡೆಯಾದರೆ, ಇರುವ ಕೂದಲನ್ನು ಉಳಿಸಿಕೊಳ್ಳುವ ಪುರುಷರ ಪೇಚಾಟ, ತಳಮಳಗಳ ಪುರಾಣ ಇನ್ನೊಂದೆಡೆ.
ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ ತಿರುಪತಿ ದೇವಸ್ಥಾನ. ಇಲ್ಲಿ ಭಕ್ತಿಯ ಜೊತೆ ಕೂದಲಿನ ವ್ಯಾಪಾರ ಕೋಟ್ಯಂತರ ರೂಪಾಯಿಯ ಉದ್ಯಮವಾಗಿಯೂ ಮಾರ್ಪಟ್ಟಿದೆ.
ತಿರುಪತಿಯ ಕೂದಲು ಉದ್ಯಮ
ಭಾರತದಲ್ಲಿನ ಕೂದಲಿನ ಉದ್ಯಮದಲ್ಲಿ ಸಿಂಹಪಾಲು ಹೊಂದಿರುವುದು ತಿರುಪತಿ ಕ್ಷೇತ್ರ. ಭಾರತದಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ಕೊಡುವ ಪ್ರಮುಖವಾದ ಧಾರ್ಮಿಕ ಕ್ಷೇತ್ರ ತಿರುಪತಿಯಾಗಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರು ಮುಡಿ ಅರ್ಪಿಸುವುದು ಧಾರ್ಮಿಕ ಆಚರಣೆ. ಈ ಮೂಲಕ ಸಂಗ್ರಹವಾಗುವ ಕೂದಲನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ವಿಂಗಡಿಸಿ, ಗುಣಮಟ್ಟದ ಆಧಾರದಲ್ಲಿ ಹರಾಜು ಮಾಡುತ್ತದೆ.


ಇಲ್ಲಿನ ಕೂದಲಿನ ಪ್ರತಿ ಇಂಚಿಗೂ ಬೆಲೆ
ಸೆಪ್ಟೆಂಬರ್ 3 ರಂದು ನಡೆದ ಕೂದಲಿನ ಹರಾಜಿನಲ್ಲಿ ಕೆ.ಜಿಯೊಂದಕ್ಕೆ 84 ಸಾವಿರಕ್ಕೆ ಬಿಡ್ ಆಗುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಆಂದ್ರಪ್ರದೇಶ ಸರ್ಕಾರದ ಕೊನುಗೋಲು ಈ-ಆಕ್ಷನ್ ಪ್ಲಾಟ್‌ಫಾರಂನಲ್ಲಿ 27 ಇಂಚು ಉದ್ದದ, ಕಪ್ಪು ಬಣ್ಣದ ಉತ್ಕೃಷ್ಟ ಗುಣಮಟ್ಟದ 97.3 ಟನ್ ಕೂದಲನ್ನು ಕೆಜಿಗೆ 84 ಸಾವಿರದ ಹಾರಾಜು ಹಾಕುವ ಮೂಲಕ ಟಿಟಿಡಿ 119.5 ಕೋಟಿ ಗಳಿಸಿದೆ.
ಕೂದಲಿನ ಬೆಲೆ ಎಲ್ಲ ಸಂದರ್ಭದಲ್ಲೂ ಒಂದೇ ಆಗಿರುವುದಿಲ್ಲ. ಕೂದಲಿನ ಉದ್ದ, ಗುಣಮಟ್ಟ, ಬಣ್ಣ, ಮೂಲ, ಕತ್ತರಿಸಿದ ವಿಧಾನ ಮತ್ತು ಸಂಸ್ಕರಣೆಯ ಆಧಾರದ ಮೇಲೆ ಬೆಲೆ ಬದಲಾಗುತ್ತದೆ. ಉತ್ತಮ ಗುಣಪಟ್ಟದ ಕೂದಲು ಅಂದರೆ ಕೂದಲಿನ ಬೇರು ಮತ್ತು ತುದಿಯ ದಿಕ್ಕು ಒಂದೇ ಆಗಿರಬೇಕು ಇದನ್ನು ಗ್ರೇಡ್-1 ಗುಣಮಟ್ಟದ ಕೂದಲು ಎನ್ನುತ್ತಾರೆ. ಕಚ್ಚಾ ಕೂದಲಿನ ಸಾಮಾನ್ಯ ಬೆಲೆ ಪ್ರತಿ ಕೆ.ಜಿಗೆ ಸುಮಾರು 100 – 150 ಡಾಲರ್. ಅರೆಸಂಸ್ಕರಿಸಿದ ಕೂದಲು ಪ್ರತಿ ಕೆ.ಜಿಗೆ ಸುಮಾರು 200-250 ಡಾಲರ್ ಆಗಿರುತ್ತದೆ.
ಭಕ್ತರು ಸಮರ್ಪಿಸುವ ಕೂದಲೊಂದರಲ್ಲೆ ಟಿಟಿಡಿಗೆ ಹಲವಾರು ಕೋಟಿ ಆದಾಯ ಬರುತ್ತಿದೆ
2020-21 ರಲ್ಲಿ 67 ಕೋಟಿ,
21-22ರಲ್ಲಿ 75 ಕೋಟಿ,
22-23ರಲ್ಲಿ 135 ಕೋಟಿ,
23-24ರಲ್ಲಿ 167 ಕೋಟಿ,
24-25ರಲ್ಲಿ 190 ಕೋಟಿ (ಅಂದಾಜಿನ ಆದಾಯ)
ಕೂದಲು ಸಂಗ್ರಹದಿಂದ ಅಂತಿ ಉತ್ಪನ್ನದವರೆಗಿನ ಪ್ರಕ್ರಿಯೆ
ಕೂದಲು ಸಂಗ್ರಹಣೆ – ಸ್ಥಳೀಯ ವ್ಯಾಪಾರಿಗಳು – ಸಂಸ್ಕರಣಾ ಘಟಕಗಳು – ರಫ್ತುದಾರರು ಮತ್ತು ಅಂತರರಾಷ್ಟ್ರೀಯ ವ್ಯಾಪಾರಿಗಳು – ಅಂತಿಮ ಉತ್ಪಾದಕರು ಇಲ್ಲಿಂದ ಜಾಗತಿಕ ಮಾರುಕಟ್ಟೆ
ಧಾರ್ಮಿಕ ಸಮರ್ಪಣೆಯಿಂದ ಬೃಹತ್ ವ್ಯಾಪಾರ : ತಿರುಪತಿಯಲ್ಲಿ ಕೂದಲಿನ ವ್ಯಾಪಾರ ಆರಂಭವಾದದ್ದು ಒಂದು ದಿನದ ಬೆಳವಣಿಗೆಯಲ್ಲ. ಇದರ ಹಿಂದೆ ಶತಮಾನಗಳ ಧಾರ್ಮಿಕ ಆಚರಣೆ, ದೇವಸ್ಥಾನ ಆಡಳಿತ ವ್ಯವಸ್ಥೆ, ಕ್ಷೌರಿಕರ ವೃತ್ತಿ, ಕೂದಲಿನ ಅಂತರಾಷ್ಟ್ರೀಯ ಬೇಡಿಕೆ ಮತ್ತು ಆಧುನಿಕ ಹರಾಜು ವ್ಯವಸ್ಥೆಯ ಬೆಳವಣಿಗೆ ಇದೆ.
ಕೂದಲು ಅರ್ಪಿಸುವ ಧಾರ್ಮಿಕ ಹಿನ್ನೆಲೆ : ತಿರುಪತಿಯಲ್ಲಿ ಭಕ್ತರು ಮುಡಿ ಕೊಡಿಸುವ ಪದ್ಧತಿ ಎಲ್ಲಿಂದ ಆರಂಭವಾಯಿತು ಎನ್ನು ಸಾಧ್ಯವಿಲ್ಲ. ಇದಕ್ಕೆ ಹಲವಾರು ಪೌರಾಣಿಕ ಹಿನ್ನೆಲೆಗಳಿವೆ. ಭಕ್ತರು ಹರಕೆ ತೀರಿಸುವ ಸಂದರ್ಭದಲ್ಲಿ ತಮ್ಮ ಕೂದಲನ್ನು ದೇವರಿಗೆ ಅರ್ಪಿಸುತ್ತಾರೆ.


ಕೂದಲು ಉದ್ಯಮದ ಆರಂಭಿಕ ಇತಿಹಾಸ
1938ರಿಂದಲೇ ಟಿಟಿಡಿ ಪ್ರಕಾರ ಖಾಸಗಿ ವ್ಯಕ್ತಿಗಳು ತಿರುಮಲದಲ್ಲಿ ಮುಡಿ ಮಾಡುವ ಮತ್ತು ಕೂದಲಿನ ವ್ಯವಹಾರದಲ್ಲಿ ತೊಡಗಿದ್ದರು. ಇದರಿಂದ ಕೂದಲು ಸಂಗ್ರಹಣ ಮತ್ತು ಮಾರಾಟ ವ್ಯವಸ್ಥೆ ಕೇಂದ್ರೀಕೃತಾಗಿರಲಿಲ್ಲ. 1970-1980 ಅವಧಿಯಲ್ಲಿ ಕಲ್ಯಾಣ ಕಟ್ಟೆಗಳಲ್ಲಿ ಮುಡಿ ಮಾಡುವ ಹಕ್ಕು ಯಾರಿಗೆ ಸೇರಬೇಕು ಎಂಬ ವಿವಾದಗಳು ನ್ಯಾಯಾಲದವರೆಗೂ ತಲುಪಿದ್ದವು.
1985 ರಲ್ಲಿ ಟಿಟಿಡಿ ನೇರ ಆಡಳಿತಕ್ಕೆ ಕೂದಲು ಸಂಗ್ರಹ ಮತ್ತು ಮಾರಾಟ : 1985ರಲ್ಲಿ ಕಲ್ಯಾಣಕಟ್ಟೆಗಳ ನಿರ್ವಹಣೆ ಮತ್ತು ಮಾನವ ಕೂದಲಿನ ಮಾರಾಟವನ್ನು ದೇವಸ್ಥಾನದ ಆಡಳಿತ ತನ್ನ ನೇರ ನಿಯಂತ್ರಣಕ್ಕೆ ತೆಗೆದುಕೊಂಡಿತು.
- ಇದರಿಂದಾಗಿ ಕೂದಲು ಸಂಗ್ರಹಣೆಯ ಮೇಲೆ ದೇವಸ್ಥಾನದ ನೇರ ನಿಯಂತ್ರಣ ಆರಂಭವಾಯಿತು.
- ಕಲ್ಯಾಣ ಕಟ್ಟೆಗಳ ನಿರ್ವಹಣೆ ವ್ಯವಸ್ಥಿತವಾಯಿತು.
- ಕೂದಲನ್ನು ದೇವಸ್ಥಾನದ ಆಸ್ತಿಯಾಗಿ ಪರಿಗಣಿಸಿ ಮಾರಾಟ ಮಾಡುವ ವ್ಯವಸ್ಥೆ ರೂಪುಗೊಂಡಿತು
- ಆಯ್ದ ಏಜೆಂಟರ ಮೂಲಕ ಕೂದಲಿನ ಹರಾಜು ನಡೆಯತೊಡಗಿತು.
1999 – 2000 ದಶಕದ ಅವಧಿಯಲ್ಲಿ ತಿರುಪತಿಯ ಕೂದಲಿನ ಗುಣಮಟ್ಟದಲ್ಲಿನ ಉತ್ಕೃಷ್ಟತೆ, ಅದರ ಉದ್ದ, ಕಪ್ಪು ಬಣ್ಣ ಮತ್ತು ಗುಣಮಟ್ಟದಿಂದಾಗಿ ಬೇಡಿಕೆ ಹೆಚ್ಚಾಗತೊಡಗಿತು.
2011 ರಲ್ಲಿ ಆನ್‌ಲೈನ್ ಇ- ಹರಾಜು ಆರಂಭ
2011ರಲ್ಲಿ MSTC ಸಹಯೋಗದಲ್ಲಿ ಮಾನವ ಕೂದಲಿನ ಇ-ಹರಾಜು ವ್ಯವಸ್ಥೆಯನ್ನು ಆರಂಭಿಸಲಾಯಿತು. ಇದಕ್ಕೆ ಮುಖ್ಯ ಕಾರಣ ಹಿಂದಿನ ಹರಾಜು ವ್ಯವಸ್ಥೆಯಲ್ಲಿ ಬೆಲೆಗಳನ್ನು ಕಡಿಮೆ ಮಟ್ಟದಲ್ಲಿ ನಿಯಂತ್ರಿಸುತ್ತಿದ್ದ ವ್ಯಾಪಾರಿಗಳ ಸಿಂಡಿಕೇಟ್ ಅನ್ನು ತಡೆಯುವುದು ಮತ್ತು ಹೆಚ್ಚು ಸ್ಪರ್ಧಾತ್ಮಕ ಬೆಲೆ ಪಡೆಯುವುದಾಗಿತ್ತು.
ಇ-ಹರಾಜಿನಿಂದ:
- ವ್ಯಾಪಾರಿಗಳು ಆನ್‌ಲೈನ್ ಮೂಲಕ ಬಿಡ್ ಸಲ್ಲಿಸುವ ಅವಕಾಶ ಪಡೆದರು.
- ಕೂದಲಿನ ಗುಣಮಟ್ಟದ ಆಧಾರದ ಮೇಲೆ ವರ್ಗೀಕರಣ ನಡೆಯಿತು.
- ಹೆಚ್ಚು ಸ್ಪರ್ಧಾತ್ಮಕ ಬಿಡ್‌ಗಳಿಗೆ ಅವಕಾಶ ದೊರೆಯಿತು.
- ದೇವಸ್ಥಾನದ ಆದಾಯ ಹೆಚ್ಚಿಸಲು ಸಾಧ್ಯವಾಯಿತು.
2012–2014: ಕೂದಲಿನ ಹರಾಜಿನಿಂದ ನೂರಾರು ಕೋಟಿ ಆದಾಯ
TTD ಪ್ರಕಟಣೆಗಳ ಪ್ರಕಾರ, 2012ರ ಜೂನ್‌ನಲ್ಲಿ ನಡೆದ ಇ-ಹರಾಜಿನಿಂದ ₹130 ಕೋಟಿ ಆದಾಯ ಬಂದಿರುವುದು ದಾಖಲೆಯಾಗಿದೆ. 2014ರ ಜನವರಿ 30ರಂದು ನಡೆದ ಇ-ಹರಾಜಿನಿಂದ ₹77.72 ಕೋಟಿ ಆದಾಯ ಬಂದಿತ್ತು. ಇದು ತಿರುಪತಿ ಕೂದಲಿನ ವ್ಯಾಪಾರವು ದೇವಸ್ಥಾನದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿ ಬೆಳೆದಿದ್ದನ್ನು ತೋರಿಸುತ್ತದೆ.
ತಿಂಗಳಿಗೊಮ್ಮೆ ಇ-ಹರಾಜು
- 2015ರ ಫೆಬ್ರವರಿ 16ರಂದು TTD ಅಧಿಕೃತವಾಗಿ ತಿಂಗಳಿಗೊಮ್ಮೆ ಕೂದಲಿನ ಇ-ಹರಾಜು ನಡೆಸುವ ನಿರ್ಧಾರ ಪ್ರಕಟಿಸಿತು.
- ಇದಕ್ಕೂ ಮೊದಲು ಮೂರು ತಿಂಗಳಿಗೊಮ್ಮೆ ಹರಾಜು ನಡೆಯುತ್ತಿತ್ತು. 2015ರ ಮಾರ್ಚ್ 5ರಿಂದ ಪ್ರತಿ ತಿಂಗಳ ಮೊದಲ ಗುರುವಾರ MSTC ವೇದಿಕೆಯ ಮೂಲಕ ಹರಾಜು ನಡೆಸಲು ನಿರ್ಧರಿಸಲಾಯಿತು.
- ಇದೇ ವರ್ಷ ಡಿಸೆಂಬರ್ 10ರಂದು 30,800 ಕೆ.ಜಿ. ಕೂದಲಿನ ಹರಾಜಿನಿಂದ ₹26.11 ಕೋಟಿ ಆದಾಯ ಬಂದಿತ್ತು.
ಒಬ್ಬರಿಗೆ ಭಕ್ತಿಯ ಸಮರ್ಪಣೆಯಾದರೆ, ಮತ್ತೊಬ್ಬರಿಗೆ ವ್ಯಾಪಾರ, ಮಗದೊಬ್ಬರಿಗೆ ಬೃಹತ್ ಕೋಟ್ಯಾಂತರ ಡಾಲರ್‌ನ ಉದ್ಯಮ. ಇದು ತಿರುಪತಿ ಕೂದಲಿನ ಪುರಾಣ. ಇದರಿಂದ ಗೊತ್ತಾಗುವುದೇನೆಂದರೆ ಭಾರತವು ಕೇವಲ ಕೂದಲು ಸಂಗ್ರಹಿಸುವ ದೇಶವಲ್ಲ. ಅಂತರರಾಷ್ಟ್ರೀಯ ಕೂದಲು ಪೂರೈಕೆ ಸರಪಳಿಯ ಪ್ರಮುಖ ಮೂಲ ಎಂಬುದು ಸ್ಪಷ್ಟವಾಗುತ್ತದೆ.
ಕೂದಲಿನ ಬಗ್ಗೆ ಇನ್ನಷ್ಟು ಕುತೂಹಲಕರ ಸಂಗತಿಗಳ ಬಗ್ಗೆ ಈ ಭಾಗದಲ್ಲಿ ತಿಳಿಯೋಣ
ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಆವರಿಸಿಕೊಂಡಿರುವ ಕೂದಲಿನ ಆರ್ಥಿಕ ವಿಕಾಸ ಆರಂಭವಾಗಿದ್ದು ನೆನ್ನೆ ಮೊನ್ನೆಯಲ್ಲ. ಪೌರಾಣಿಕ ಕಾಲದಿಂದಲೂ ಕೂದಲು ತನ್ನದೇ ಆದ ಸ್ಥಾನಮಾನಗಳನ್ನು ಹೊಂದಿದೆ. ಇದರ ಮೇಲೆ ಹಲವಾರು ಜಾನಪದ ಕಥೆಗಳು ಹುಟ್ಟಿಕೊಂಡಿವೆ.
ಪುರಾಣ ಮತ್ತು ಜಾನಪದ ಕಥೆಗಳಲ್ಲಿ ಕೂದಲು ಕೇವಲ ಸೌಂದರ್ಯ ಸಂಕೇತವಾಗಿ ಇರಲಿಲ್ಲ, ಅದು ಶಕ್ತಿ, ದೈವತ್ವ, ಬುದ್ದಿವಂತಿಕೆಯ ಮತ್ತು ಸಮೃದ್ದಿಯ ಪ್ರತೀಕವಾಗಿದೆ. ಪ್ರಪಂಚದಾದ್ಯಂತ ವಿವಿಧ ಸಂಸ್ಕೃತಿಗಳಲ್ಲಿ ಕೂದಲಿಗೆ ಸಂಬಂಧಿಸಿದ ಅನೇಕ ಪ್ರಸಿದ್ದ ಪೌರಾಣಿಕ ಕಥೆಗಳಿವೆ.
ಪೌರಾಣಿಕ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಮುನ್ನ ನಮ್ಮ ಕೂದಲಿನ ವೈಜ್ಞಾನಿಕ ಮಾಹಿತಿಯನ್ನೊಮ್ಮೆ ತಿಳಿದುಕೊಳ್ಳಬೇಕು.
ಮಾನವನ ದೇಹದ ಪ್ರತಿಯೊಂದು ಅಂಗವೂ ಜೀವಕೋಶಗಳಿಂದ ನಿರ್ಮಾಣವಾಗಿದೆ. ಈ ಜೀವಕೋಶಗಳ ನಿರಂತರ ವಿಭಜನೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿಯೇ ಕೂದಲಿನ ಹುಟ್ಟು ಕೂಡ ಅಡಗಿದೆ. ಚರ್ಮದ ಒಳಭಾಗದಲ್ಲಿರುವ ಕೂದಲಿನ ಕಿರುಚೀಲದಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಅವು ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಗಟ್ಟಿಗೊಂಡು ಕೂದಲಾಗಿ ರೂಪುಗೊಳ್ಳುತ್ತವೆ. ಜೀವಂತ ದೇಹದಿಂದ ಬೇರ್ಪಟ್ಟ ನಂತರವೂ ತನ್ನ ಭೌತಿಕ ರಚನೆಯನ್ನು ಉಳಿಸಿಕೊಳ್ಳುವ ಈ ಕೂದಲು, ಧಾರ್ಮಿಕ ನಂಬಿಕೆಯ ಸಂಕೇತವಾಗುವುದರ ಜೊತೆಗೆ ಜಾಗತಿಕ ಮಾರುಕಟ್ಟೆಯ ಅಮೂಲ್ಯ ವಾಣಿಜ್ಯ ಉತ್ಪನ್ನವಾಗುತ್ತದೆ.



ಮಾನವನ ದೇಹದ ಜೀವಕೋಶಗಳು ಮತ್ತು ಕೂದಲಿನ ನಡುವೆ ಅತ್ಯಂತ ನಿಕಟವಾದ ಜೈವಿಕ ಸಂಬಂಧವಿದೆ. ವಾಸ್ತವವಾಗಿ, ಕೂದಲು ಕೂಡ ಜೀವಕೋಶಗಳಿಂದಲೇ ನಿರ್ಮಾಣವಾಗುತ್ತದೆ. ಆದರೆ, ದೇಹ ಇತರ ಜೀವಂತ ಅಂಗಾಂಶಗಳಿಗಿಂತ ಕೂದಲಿನ ವಿಶೇಷತೆಯೆಂದರೆ, ಚರ್ಮದ ಮೇಲ್ಬಾಗಕ್ಕೆ ಬಂದ ನಂತರ ಅದರ ಬಹುಪಾಲು ಜೀವಕೋಶಗಳು ಸತ್ತ ಸ್ಥಿತಿಯಲ್ಲಿರುತ್ತದೆ.
ಮಾನವನ ಕೂದಲಿನ DNA, ಕೂದಲಿನ ಬೇರು ಮತ್ತು ಕೂದಲಿನ ಕಾಂಡದಲ್ಲಿ ಹೇಗೆ ಭಿನ್ನವಾಗಿರುತ್ತದೆ? ಇದು ತಲೆನೀಲದ ವೈಜ್ಞಾನಿಕ ಮತ್ತು ವಿಧಿ ವಿಜ್ಞಾನ ಆಯಾಮವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಮ್ಮ ದೇಹದ ಅನುಪಯುಕ್ತ, ಸತ್ತ ಜೀವಕೋಶವಾಗಿ ಹೊರಗೆ ಬರುವ ಕೂದಲಿನ ಪುರಾಣ ಒಂದೆರಡಲ್ಲ. ದೇಹದೊಳಗೆ ಅನುಪಯುಕ್ತವೆಂದು ಹೊರಗೆ ಬರುವ ಕೂದಲು ಇಡೀ ಭೂಂಡಲದಲ್ಲೇ ತನ್ನ ಛಾಪನ್ನು ಮೂಡಿಸಿಬಿಟ್ಟಿದೆ.
ಮೊದಲಿಗೆ ಭಾರತದ ಪುರಾಣಗಳಲ್ಲಿ ಕೂದಲಿನ ಕಥೆಗಳೇನಿದೆ
ಶಿವನ ಜಟೆ ಮತ್ತು ಗಂಗಾವತರಣ : ಭಗೀರಥನ ಮೆಚ್ಚಿ ಸ್ವರ್ಗದಿಂದ ಭೂಮಿಗೆ ಧುಮುಕಿದ ಗಂಗೆಯ ರಭಸವನ್ನು ತಡೆಯಲು ಭೂಮಿಗೆ ಸಾಧ್ಯವಿರಲಿಲ್ಲ. ಆಗ ಶಿವನು ತನ್ನ ಜಟೆಯನ್ನು ಬಿಚ್ಚಿ ಗಂಗೆಯನ್ನು ಅದರಲ್ಲಿ ಬಂಧಿಸಿ, ನಂತರ ಸಣ್ಣ ಧಾರೆಯಾಗಿ ಭೂಮಿಗೆ ಹರಿಯುವಂತೆ ಮಾಡಿದನು.
ವೀರಭದ್ರನ ಜನನ : ದಕ್ಷಯಜ್ಞದಲ್ಲಿ ಸತಿಯ ಅವಮಾನದಿಂದ ಕೋಪಗೊಂಡ ಶಿವನು, ತನ್ನ ತಲೆಯಿಂದ ಒಂದು ಜಟೆಯನ್ನು ಕಿತ್ತು ನೆಲಕ್ಕೆ ಅಪ್ಪಳಿಸಿದನು. ಆ ಕೂದಲಿನಿಂದ ಮಹಾಶಕ್ತಿಶಾಲಿಯಾದ ವೀರಭದ್ರನು ಜನ್ಮತಾಳಿದನೆಂಬುದು ಪುರಾಣ.
ದ್ರೌಪದಿಯ ಪ್ರತಿಜ್ಞೆ : ಕೌರವ ಸಭೆಯಲ್ಲಿ ಅವಮಾನಕ್ಕೊಳಗಾದ ದ್ರೌಪದಿಯು, ದುಶ್ಯಾಸನನ ರಕ್ತದಿಂದ ತನ್ನ ಕೂದಲನ್ನು ತೊಳೆಯುವವರೆಗೂ ತಾನು ಮುಡಿಯನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು. ಇದು ಮಹಾಭಾರತ ಯುದ್ಧದ ಪ್ರಮುಖ ಘಟನೆಗಳಲ್ಲಿ ಒಂದಾಯಿತು.



ಶ್ರೀನಿವಾಸ ಮತ್ತು ನೀಲಾದೇವಿ : ತಿರುಪತಿ ವೆಂಕಟೇಶ್ವರನ ತಲೆಗೆ ಪೆಟ್ಟಾಗಿ ಕೂದಲು ಉದುರಿದಾಗ, ಗಂಧರ್ವ ರಾಜಕುಮಾರಿ ನೀಲಾದೇವಿಯು ತನ್ನ ಸುಂದರವಾದ ಕೂದಲನ್ನು ಕತ್ತರಿಸಿ ದೇವರಿಗೆ ಅರ್ಪಿಸಿದಳು. ಇದಕ್ಕೆ ಮೆಚ್ಚಿದ ದೇವರು, ಭಕ್ತರು ತಮ್ಮ ಕೂದಲನ್ನು ಇಲ್ಲಿ ಅರ್ಪಿಸಿದರೆ ಅದು ನಿನಗೆ ಸಲ್ಲುತ್ತದೆ ಎಂದು ವರ ನೀಡಿದನಂತೆ.
ಗ್ರೀಕ್ ಮತ್ತ ರೋಮನ್ ಪುರಾಣ ಕಥೆಗಳನ್ನೊಮ್ಮೆ ನೋಡೋಣ
ಮೆಡೂಸಾ : ಮೆಡೂಸಾ ಒಬ್ಬ ಸುಂದರ ಯುವತಿಯಾಗಿದ್ದಳು, ಆದರೆ ಅಥೇನಾ ದೇವತೆಯ ಶಾಪದಿಂದ ಅವಳ ಸುಂದರ ಕೂದಲು ವಿಷಪೂರಿತ ಹಾವುಗಳಾಗಿ ಬದಲಾದವು. ಅವಳ ಕಣ್ಣುಗಳನ್ನು ನೋಡಿದವರು ಕಲ್ಲಾಗುತ್ತಿದ್ದರಂತೆ.


ಬೆರೆನಿಸ್‌ನ ಕೂದಲು (Coma Berenices) : ಈಜಿಪ್ಟ್‌ನ ರಾಣಿ ಬೆರೆನಿಸ್ ತನ್ನ ಪತಿ ಯುದ್ದದಿಂದ ಸುರಕ್ಷಿತವಾಗಿ ಮರಳಿದರೆ ತನ್ನ ಸುಂದರವಾದ ಕೂದಲನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದಳು. ಪತಿ ಮರಳಿದ ನಂತರ ಅವಳು ಕೂದಲನ್ನು ಅರ್ಪಿಸಿದಳು, ಮತ್ತು ಆ ಕೂದಲು ಆಕಾಶದಲ್ಲಿ ಒಂದು ನಕ್ಷತ್ರಪುಂಜವಾಗಿ ಬದಲಾಯಿತಂತೆ.
ಇನ್ನು ಬೈಬಲ್ ಮತ್ತು ಯುರೋಪಿಯನ್ ಜಾನಪದ ಕಥೆಗಳಿಗೆ ಬಂದರೆ
ಸ್ಯಾಂಪ್ಸನ್ ಮತ್ತು ಡೆಲಿಲಾ (Samson and Delilah) : ಬೈಬಲ್ ಕಥೆಯ ಪ್ರಕಾರ, ಸ್ಯಾಂಪ್ಸನ್‌ಗೆ ಅಪಾರ ದೈಹಿಕ ಶಕ್ತಿಯಿತ್ತು ಮತ್ತು ಆ ಶಕ್ತಿಯ ರಹಸ್ಯ ಅವನ ಉದ್ದನೆಯ ಕೂದಲಿನಲ್ಲಿತ್ತು. ಅವನ ಪ್ರೇಯಸಿ ಡೆಲಿಲಾ ಮೋಸದಿಂದ ಅವನ ಕೂದಲನ್ನು ಕತ್ತರಿಸಿದಾಗ ಅವನು ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಂಡನು.
ರಪುಂಜೆಲ್ (Rapunzel) : ಜರ್ಮನ್ ಜಾನಪದ ಕಥೆಯಾದ ರಪುಂಜೆಲ್‌ನಲ್ಲಿ, ಮಾಟಗಾತಿಯೊಬ್ಬಳು ರಪುಂಜೆಲ್‌ಳನ್ನು ಎತ್ತರದ ಗೋಪುರದಲ್ಲಿ ಬಂಧಿಸಿಟ್ಟಿರುತ್ತಾಳೆ. ಗೋಪುರಕ್ಕೆ ಹತ್ತಲು ಅವಳ ಉದ್ದನೆಯ ಮತ್ತು ಬಲವಾದ ಬಂಗಾರದ ಕೂದಲನ್ನೇ ಏಣಿಯಂತೆ ಬಳಸಲಾಗುತ್ತಿತ್ತು.



ಸಿಫ್‌ಳ ಬಂಗಾರದ ಕೂದಲು (Sif’s Golden Hair) : ನಾರ್ಸ್ (Norse) ಪುರಾಣದಲ್ಲಿ, ಗುಡುಗು ಸಿಡಿಲಿನ ದೇವರು ಥಾರ್‌ನ ಪತ್ನಿ ಸಿಫ್‌ಳಿಗೆ ಅತ್ಯಂತ ಸುಂದರವಾದ ಬಂಗಾರದ ಕೂದಲಿತ್ತು. ಕಿಡಿಗೇಡಿ ದೇವರು ಲೋಕಿ ತಮಾಷೆಗಾಗಿ ಅವಳ ಕೂದಲನ್ನು ಕತ್ತರಿಸಿದಾಗ, ಕುಬ್ಜರು ನಿಜವಾದ ಬಂಗಾರದಿಂದಲೇ ಹೊಸ ಕೂದಲನ್ನು ತಯಾರಿಸಿಕೊಟ್ಟರು.
ಇತಿಹಾಸದ ವಿಷಯಕ್ಕೆ ಬಂದರೆ ಕೂದಲು ಕೇವಲ ಫ್ಯಾಷನ್‌ಗೆ ಮಾತ್ರ ಸೀಮಿತವಾಗಿರದೆ, ರಾಜಕೀಯ ಪ್ರತಿಷ್ಠೆ, ಧಾರ್ಮಿಕ ನಂಬಿಕೆ, ಕ್ರಾಂತಿ ಮತ್ತು ಅಪರಾಧ ಪತ್ತೆಹಚ್ಚುವಿಕೆಯ ಪ್ರಮುಖ ಸಾಧನವಾಗಿತ್ತು. ಪ್ರಪಂಚದ ಇತಿಹಾಸದಲ್ಲಿ ಕೂದಲಿಗೆ ಸಂಬಂಧಿಸಿದಂತೆ ನಡೆದಿದೆನ್ನಲಾದ ಕೆಲವು ಕುತೂಹಲಕಾರಿ ಘಟನೆಗಳು ಇವೆ.
ಚಾಣಕ್ಯನ ಜುಟ್ಟಿನ ಪ್ರತಿಜ್ಞೆ : ಕ್ರಿ.ಪೂ. 4ನೇ ಶತಮಾನದಲ್ಲಿ ಮಗಧ ಸಾಮ್ರಾಜ್ಯವನ್ನು ಆಳುತ್ತಿದ್ದ ನಂದ ವಂಶದ ರಾಜ ಧನನಂದನು, ಬ್ರಾಹ್ಮಣ ವಿದ್ವಾಂಸರಾಗಿದ್ದ ಚಾಣಕ್ಯರನ್ನು ತನ್ನ ಆಸ್ಥಾನದಲ್ಲಿ ಅವಮಾನಿಸಿ ಹೊರಹಾಕಿದನು. ಈ ಅವಮಾನದಿಂದ ಕೋಪಗೊಂಡ ಚಾಣಕ್ಯರು ತಮ್ಮ ಜುಟ್ಟನ್ನು ಬಿಚ್ಚಿ, ಕ್ರೂರಿಯಾದ ನಂದ ವಂಶವನ್ನು ನಿರ್ನಾಮ ಮಾಡಿ ಒಬ್ಬ ಸಮರ್ಥ ರಾಜನನ್ನು ಸಿಂಹಾಸನದ ಮೇಲೆ ಕೂರಿಸುವವರೆಗೂ ತಾನು ಜುಟ್ಟನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ನಂತರ ಅವರು ಚಂದ್ರಗುಪ್ತ ಮೌರ್ಯನಿಗೆ ತರಬೇತಿ ನೀಡಿ, ನಂದ ಸಾಮ್ರಾಜ್ಯವನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರವೇ ತಮ್ಮ ಕೂದಲನು ಕಟ್ಟಿದರು.
ಚೀನಾದ ʼಕ್ಯೂʼ(Queue) ಕೇಶವಿನ್ಯಾಸ ಮತ್ತು ಕ್ರಾಂತಿ : 17ನೇ ಶತಮಾನದಲ್ಲಿ ಚೀನಾವನ್ನು ವಶಪಡಿಸಿಕೊಂಡ ಮಂಚು (Manchu) ರಾಜವಂಶವು, ಸ್ಥಳೀಯ ಹಾನ್ ಚೀನೀಯರ ಮೇಲೆ ಒಂದು ಕಠಿಣ ನಿಯಮವನ್ನು ಹೇರಿತು. ಎಲ್ಲ ಪುರುಷರು ತಮ್ಮ ತಲೆಯ ಮುಂಭಾಗವನ್ನು ಬೋಳಿಸಿಕೊಂಡು, ಹಿಂಭಾಗದ ಕೂದಲನ್ನು ಉದ್ದವಾಗಿ ಜಡೆ ಹೆಣೆದುಕೊಳ್ಳಬೇಕು ಎಂದು ಆದೇಶಿಸಲಾಯಿತು. ಇದನ್ನು ನಿರಾಕರಿಸುವವರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಸುಮಾರು 250 ವರ್ಷಗಳ ಕಾಲ ಇದು ಗುಲಾಮಗಿರಿಯ ಸಂಕೇತವಾಗಿತ್ತು. 1911ರ ಚೀನಿ ಕ್ರಾಂತಿಯ ಸಮಯದಲ್ಲಿ, ಜನರು ತಮ್ಮ ಉದ್ದನೆಯ ಜಡೆಗಳನ್ನು ಕತ್ತರಿಸಿಕೊಳ್ಳುವ ಮೂಲಕ ರಾಜಪ್ರಭುತ್ವದ ವಿರುದ್ಧ ತಮ್ಮ ಸ್ವಾತಂತ್ರ್ಯವನ್ನು ಸಾರಿದರು.



ರಷ್ಯಾದ ʼಗಡ್ಡದ ತೆರಿಗೆʼ : 1698ರಲ್ಲಿ ರಷ್ಯಾದ ಚಕ್ರವರ್ತಿ ಪೀಟರ್ ದಿ ಗ್ರೇಟ್ ತನ್ನ ದೇಶವನ್ನು ಪಶ್ಚಿಮ ಯುರೋಪಿನಂತೆ ಆಧುನಿಕಗೊಳಿಸಲು ಬಯಸಿದನು. ಯೂರೋಪಿಯನ್ನರಂತೆ ರಷ್ಯಾದ ಪುರುಷರು ಕ್ಲೀನ್-ಶೇವ್ ಮಾಡಿಕೊಳ್ಳಬೇಕು ಎಂದು ಅವನು ಬಯಸಿದನು. ಆದರೆ, ಧಾರ್ಮಿಕ ಕಾರಣಗಳಿಗಾಗಿ ಜನರು ಗಡ್ಡ ತೆಗೆಯಲು ನಿರಾಕರಿಸಿದರು. ಆಗ ಗಡ್ಡ ವಿಡುವವರ ಮೇಲೆ ಗಡ್ಡದ ತೆರಿಗೆ ವಿಧಿಸಿದನು. ತೆರಿಗೆ ಕಟ್ಟಿದವರಿಗೆ ಒಂದು ವಿಶೇಷ ತಾಮ್ರದ ಅಥವಾ ಬೆಳ್ಳಿಯ ಟೋಕನ್ ನೀಡಲಾಗುತ್ತಿತ್ತು. ಅದನ್ನು ಅವರು ಸದಾ ತಮ್ಮ ಬಳಿ ಇಟ್ಟುಕೊಳ್ಳಬೇಕಿತ್ತು.
ಬ್ರಿಟಿಷ್ ನ್ಯಾಯಾಲಯಗಳಲ್ಲಿ ʼಪೌಡರ್ಡ್ ವಿಗ್ ʼ: 17ನೇ ಶತಮಾನದಲ್ಲಿ ಫ್ರಾನ್ಸ್‌ನ ರಾಜ 14ನೇ ಲೂಯಿ ಮತ್ತು ಇಂಗ್ಲೆಂಡ್ ರಾಜ ಎರಡನೇ ಚಾರ್ಲ್ಸ್ ತಮ್ಮ ಬೋಳುತಲೆಯನ್ನು ಮರೆಮಾಚಲು ಕೃತಕ ವಿಗ್‌ಗಳನ್ನು ಧರಿಸಲು ಪ್ರಾರಂಭಿಸಿದರು. ರಾಜರು ವಿಗ್ ಧರಿಸಲು ಆರಂಭಿಸಿದ ತಕ್ಷಣ, ಅದು ಶ್ರೀಮಂತರು ಮತ್ತು ನ್ಯಾಯಾಧೀಶರ ಪ್ರತಿಷ್ಠೆಯ ಸಂಕೇತವಾಯಿತು. ಹೇನು ಮತ್ತು ದುರ್ವಾಸನೆ ತಡೆಯಲು ಈ ವಿಗ್‌ಗಳಿಗೆ ಸುಗಂಧದ್ರವ್ಯ ಬೆರೆಸಿದ ಬಿಳಿ ಪುಡಿಯನ್ನು ಹಾಕಲಾಗುತ್ತಿತ್ತು.
ಸಾಮಾನ್ಯ ಜನರು ಈ ಪದ್ದತಿಯನ್ನು ಬಿಟ್ಟರೂ, ಬ್ರಿಟನ್ ಮತ್ತು ಕಾಮನ್‌ವೆಲ್ತ್ ದೇಶಗಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಗೌರವದ ಸಂಕೇತವಾಗಿ ಇಂದಿಗೂ ಬಿಳಿ ವಿಗ್ ಧರಿಸುವ ಸಂಪ್ರದಾಯವಿದೆ.
ಕ್ವೀನ್ ಎಲಿಜಬೆತ್ ಮತ್ತು ಕೆಂಪು ವಿಗ್‌ಗಳು : 16ನೇ ಶತಮಾನದಲ್ಲಿ ಇಂಗ್ಲೆಂಡ್ ರಾಣಿ ಎಲಿಜಬೆತ್ ಸಿಡುಬು ರೋಗಕ್ಕೆ ತುತ್ತಾದ ನಂತರ, ಆಕೆಯ ನೈಸರ್ಗಿಕ ಕೂದಲು ಬಹುತೇಕ ಉದುರಿಹೋಯಿತು. ತನ್ನ ಬೋಳುತಲೆಯನ್ನು ಮರೆಮಾಚಲು ಆಕೆ ಸುಮಾರು 80ಕ್ಕೂ ಹೆಚ್ಚು ದುಬಾರಿ ಕೆಂಪು ಬಣ್ಣದ ವಿಗ್‌ಗಳನ್ನು ಬಳಸುತ್ತಿದ್ದಳು. ರಾಣಿಯನ್ನು ಅನುಕರಿಸಲು ಇಡೀ ಇಂಗ್ಲೆಂಡ್‌ನ ಶ್ರೀಮಂತ ಮಹಿಳೆಯರು ತಮ್ಮ ಕೂದಲಿಗೆ ಕೆಂಪು ಬಣ್ಣ ಹಚ್ಚಿಕೊಳ್ಳಲು ಅಥವಾ ಕೆಂಪು ವಿಗ್ ಧರಿಸಲು ಪ್ರಾರಂಭಿಸಿದರು.
ಇವಿಷ್ಟು ಕೂದಲಿನ ವೈಜ್ಞಾನಿಕ, ಪೌರಾಣಿಕ, ಐತಿಹಾಸಕ ಕಥೆಗಳು. ಸಾವಿರಾರು ವರ್ಷಗಳಿಂದ ಇಷ್ಟೆಲ್ಲಾ ಹಿನ್ನೆಲೆಯಿರುವ ಕೇವಲ ಸತ್ತ ಜೀವಕೋಶಗಳಾಗಿ ಹೊರಗೆ ಬರುವ ಕೂದಲಿನ ಮೇಲಿನಷ್ಟು ಕಥೆಗಳು ಮನುಷ್ಯರ ಇನ್ಯಾವ ಅಂಗಗಳ ಮೇಲೆ ಬಂದಿಲ್ಲವೆನಿಸುತ್ತದೆ.
ಪುರಾಣ, ಇತಿಹಾಸದಲ್ಲಿ ಇಷ್ಟೆಲ್ಲಾ ಪ್ರಭಾವ ಹೊಂದಿರುವ ಕೂದಲು ಪ್ರಸ್ತುತ ಆಧುನಿಕ ಯುಗದಲ್ಲಿ ಕೋಟ್ಯಾಂತರ ಮೌಲ್ಯದ ಉದ್ಯಮವಾಗಿ ರೂಪುಗೊಂಡಿರುವುದು ಆಶ್ಚರ್ಯವೇನಲ್ಲ.
ಬನ್ನಿ ಪ್ರಸ್ತುತ ಜಾಗತಿಕ ಕೂದಲಿನ ಉದ್ಯಮದ ಗಾತ್ರವನ್ನು ನೋಡೋಣ.
ಜಾಗತಿಕ ಕೂದಲಿನ ಉದ್ಯಮದಲ್ಲಿ ಮಾನವನ ಕೂದಲಿನ ವ್ಯಾಪಾರ, ವಿಗ್‌ಗಳು, ಹೇರ್ ಎಕ್ಸ್‌ಟೆನ್ಶನ್‌ಗಳು, ಕೂದಲಿನ ಆರೈಕೆ ಉತ್ಪನ್ನಗಳು ಮತ್ತು ಸಲೂನ್ ಸೇವೆಗಳು ಪ್ರಮುಖ ಭಾಗಗಳು.
ಕೂದಲಿನ ಉದ್ಯಮದಲ್ಲಿ ಪ್ರತ್ಯೇಕ ವಿಭಾಗಗಳು ಇದೆ. ಒಂದು ಮಾನವ ಕೂದಲಿನ ವ್ಯಾಪಾರ ಮತ್ತು ಕೂದಲಿನ ಆರೈಕೆ ಮಾರುಕಟ್ಟೆ. 2025ರ ಅಂದಾಜಿನ ಪ್ರಕಾರ ಕೂದಲಿನ ಆರೈಕೆ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 97.2 ರಿಂದ 113.93 ಬಿಲಿಯನ್ ಡಾಲರ್‌ಗಳಷ್ಟಾದರೆ ವಿಗ್ ಮತ್ತು ಹೇರ್ ಎಕ್ಸ್‌ಟೆನ್ಶನ್‌ಗಳ ಮೌಲ್ಯ 15.2 ಬಿಲಿಯನ್ ಡಾಲರ್‌ಗಳಾಗಿದೆ.


ವಿಶ್ವದ ಮಾನವ ಕೂದಲಿನ ವ್ಯಾಪಾರದಲ್ಲಿ ಭಾರತ ಪ್ರಮುಖ ರಫ್ತುದಾರ ರಾಷ್ಟ್ರವಾಗಿದೆ. 2024 ವಿಶ್ವ ಬ್ಯಾಂಕ್ WITS/UN Comtrade ವ್ಯಾಪಾರ ದತ್ತಾಂಶದ ಪ್ರಕಾರ ಸಂಸ್ಕರಿಸಿದ, ಸಂಸ್ಕರಿಸದ ಕೂದಲಿನ ರಫ್ತು ಮೌಲ್ಯ ಕೆಳಕಂಡಂತಿದೆ
ದೇಶ ಸಂಸ್ಕರಿಸದ ಕೂದಲಿನ ಮೌಲ್ಯ (ಮಿಲಿಯನ್ ಡಾಲರ್‌ಗಳಲ್ಲಿ)
ಭಾರತ 185.88
ಪಾಕಿಸ್ತಾನ 5.57
ಅಮೆರಿಕ 1.18
ಬ್ರೆಜಿಲ್ 0.82
ಮ್ಯಾನ್ಮಾರ್ 0.71
ಸಂಸ್ಕರಿಸಿದ ಮಾನವ ಕೂದಲಿನ ರಫ್ತು
ದೇಶ ಸಂಸ್ಕರಿಸದ ಕೂದಲಿನ ಮೌಲ್ಯ (ಮಿಲಿಯನ್ ಡಾಲರ್‌ಗಳಲ್ಲಿ)
ಭಾರತ 574.37
ಚೀನಾ 209.25
ಮ್ಯಾನ್ಮಾರ್ 54.78
ಆಸ್ಟ್ರಿಯಾ 35.62
ಇಟಲಿ 25.32
ವಿಗ್ ಮತ್ತು ಹೇರ್ ಎಕ್ಸ್‌ಟೆನ್ಶನ್ ಮಾರುಕಟ್ಟೆ : 2025ರಲ್ಲಿ ಜಾಗತಿಕ ಮಾರುಕಟ್ಟೆ ಮೌಲ್ಯ : 15.2 ಬಿಲಿಯನ್ ಡಾಲರ್‌ಗಳಿತ್ತು. 2026ರಲ್ಲಿ 16.4 ಬಿಲಿಯನ್ ಡಾಲರ್‌ಗೆ ಏರಿತು. 2033 ರಲ್ಲಿ 31.1 ಬಿಲಿಯನ್ ಡಾಲರ್‌ಗಳಷ್ಟಾಗುವ ಅಂದಾಜಿದೆ. 2025ರಲ್ಲಿ ಮಾನವ ಕೂದಲಿನಿಂದ ತಯಾರಿಸಿದ ಉತ್ಪನ್ನಗಳ ಪಾಲು 52.7% ಇದ್ದರೆ ವಿಗ್‌ಗಳ ಪಾಲು 47.3% ಇದೆ.
ಮಾನವ ಕೂದಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ರಫ್ತಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ. ಕೂದಲಿನ ಸಂಸ್ಕರಣೆ, ವಿಗ್ ತಯಾರಿಕೆ ಮತ್ತು ಜಾಗತಿಕ ಆಮದು ಮಾರುಕಟ್ಟೆಯಲ್ಲಿ ಚೀನಾ ಪ್ರಮುಖವಾಗಿದೆ. ಕಚ್ಚಾ ಮತ್ತು ಸಂಸ್ಕರಿಸಿದ ಕೂದಲಿನ ವ್ಯಾಪಾರದಲ್ಲಿ ಮ್ಯಾನ್ಮಾರ್ ಪ್ರಮುಖವಾಗಿದೆ.
ವಿಶ್ವ ಕೂದಲು ವ್ಯಾಪಾರವನ್ನು ನೋಡಿದರೆ ಅದರಲ್ಲಿ ಭಾರತದ ಪಾಲೇ ಹೆಚ್ಚು. ಭಾರತದಿಂದ ಕೂದಲು ವಿಶ್ವದ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತದೆ. 2024 ರಲ್ಲಿ ಭಾರತದ ಸಂಸ್ಕರಿಸಿದ ಕೂದಲಿನ ರಫ್ತಿನ ಪ್ರಮುಖ ರಾಷ್ಟ್ರಗಳು.
ದೇಶ ರಫ್ತು ಮೌಲ್ಯ (ಮಿಲಿಯನ್ ಡಾಲರ್‌ಗಳಲ್ಲಿ)
ಚೀನಾ 468.35
ವಿಯೆಟ್ನಾಂ 35.76
ಅಮೆರಿಕ 19.58
ಪರಾಗ್ವೆ 7.45
ಟ್ಯುನೀಷಿಯಾ 7.03



