ಕಾವೇರಿ ಜಲವಿವಾದಕ್ಕೆ ಬರೋಬ್ಬರಿ 134 ವರ್ಷ! ನದಿಯೊಂದಿಗೆ ಹರಿಯುತ್ತಲೇ ಇದೆ ನಿರಂತರ ವಿವಾದ

Date:

ಕರ್ನಾಟಕ- ತಮಿಳುನಾಡು ಕಾವೇರಿ ಜಲವಿವಾದ ಆರಂಭವಾಗಿ ಶತಮಾನವೇ ಕಳೆದುಹೋಗಿದೆ. ಪ್ರತಿಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕೂಗು ಕೇಳಿಬರುತ್ತಲೇ ಇದೆ. ಇದರ ಹಿನ್ನೆಲೆ ಏನು? ಐತಿಹಾಸಿಕ, ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಕರ್ನಾಟಕಕ್ಕೆ ಕಾವೇರಿ ವಿಷಯದಲ್ಲಿ ಹಿನ್ನಡೆಗೆ ಹೇಗೆ ಕಾರಣವಾದವು ಎಂಬುದನ್ನು ಗಮನಿಸಬೇಕು. ಈ ಅಂತರ್‌ ರಾಜ್ಯ ಜಲ ವಿವಾದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

- Advertisement -

ಕಾವೇರಿ ನದಿ ಕರ್ನಾಟಕ ಮತ್ತು ತಮಿಳುನಾಡಿನ ಜೀವನದಿ ಎಂದೇ ಹಳೇ ಮೈಸೂರು ಸೀಮೆಯ ಜನರ ಭಾವನೆ. ಕೊಡಗಿನ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಹುಟ್ಟಿ ಸುಮಾರು 800 ಕಿ.ಮೀ. ಹರಿದು ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಪೊಂಪುಹಾರ್‌ ಸ್ಥಳದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುವ ನದಿಯಿದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ತಾನು ಹರಿಯುವ ನದೀ ಕಣಿವೆಯ ಉದ್ದಕ್ಕೂ ಕೋಟ್ಯಂತರ ಜೀವಿಗಳನ್ನು ಸಲಹಿ ಬದುಕನ್ನ ಹಸನಾಗಿಸಿ ಕೆಲವೆಡೆ ಮಂದಸ್ಮಿತೆಯಾಗಿ ಹರಿದರೆ, ಕೆಲವೆಡೆ ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತದೆ. ಸಾವಿರಾರು ವರ್ಷಗಳ ತನ್ನ ಅನವರತ ಹರಿವಿನ ಮೂಲಕ ಗಿರಿ ಕಂದರಗಳನ್ನು ಕೊರೆದು ಮನೋಹರ ಭೂ ದೃಶ್ಯಗಳನ್ನು ಸೃಷ್ಟಿಸಿದೆ.

ನದಿಗಳು ಸಮುದ್ರಗಳಿಗೆ ಸರಹದ್ದುಗಳ ಹಂಗು ಇರುವುದಿಲ್ಲ. ತಲಕಾವೇರಿಯಲ್ಲಿ ಸಣ್ಣ ಝರಿಯಾಗಿ ಆರಂಭವಾಗುವ ಕಾವೇರಿಗೆ ಹರಿಯಲು ಯಾರ ಅಪ್ಪಣೆಯೂ ಬೇಕಿರುವುದಿಲ್ಲ, ಕಾವೇರಿಗೂ ಗಡಿಭೇದಗಳಿಲ್ಲ. ತನ್ನದೇ ಆದ ಗಡಿಗಳನ್ನು ನಿರ್ಮಿಸಿಕೊಂಡು ಗಮ್ಯದೆಡೆಗೆ ಹರಿದು ಹೋಗುವುದೇ ಅದರ ಗುರಿ. ಹರಿಯುತ್ತಾ ತನ್ನೊಡನೆ ಉಪನದಿಗಳನ್ನು ಕರೆದುಕೊಂಡು ಬಳುಕುತ್ತಾ, ಭೋರ್ಗರೆಯುತ್ತಾ, ಧುಮ್ಮಿಕ್ಕುತ್ತಾ, ವಿಶಾಲವಾಗಿ ಹರಿದು ಕೊನೆಯದಾಗಿ ಸಮುದ್ರದಲ್ಲಿ ಲೀನವಾಗುತ್ತದೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆ ಇದು. ಇದು ನಡೆಯುವುದೇ ಹೀಗೆ. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಇದು ಪ್ರಕೃತಿಯ ನಿಯಮ.

ನಿರಂತರ ಹರಿಯುವ ತನ್ನ ಪ್ರಕ್ರಿಯೆಯಲ್ಲಿಯೇ ಕಾವೇರಿ ನದಿಯು ಇತಿಹಾಸದ ಹಲವಾರು ಸತ್ಯ ಕಥೆಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡಿದೆ. ಸಾಮ್ರಾಜ್ಯ ಉದಯಿಸಿರುವುದನ್ನು, ಉರುಳಿರುವುದನ್ನು ನೋಡಿದೆ, ನೂರಾರು ಯುದ್ಧಗಳು ನಡೆದು ನದಿ ನೀರಿನಲ್ಲಿ ಕಾಲಾವಧಿಗಳ ನೆತ್ತರುಗಳು ಬೆರೆತು ಹರಿದು ಹೋಗಿವೆ. ಅದನ್ನು ತೊಳೆದುಕೊಂಡು ಪ್ರತಿ ದಿನ ಪ್ರತಿ ಕ್ಷಣ ಹೊಸತನವನ್ನು ಹೊತ್ತು ಹರಿಯುವುದಷ್ಟೇ ತನ್ನ ಕೆಲಸ ಎಂದುಕೊಂಡು ಮಳೆಗಾಲದಲ್ಲಿ ಮೈದುಂಬಿ, ಬೇಸಿಗೆಯಲ್ಲಿ ಸೊರಗಿದರೂ ಬಳುಕುತ್ತ ನಿರಂತರವಾಗಿ ಸಕಲ ಜೀವಿಗಳನ್ನು ಪೊರೆಯುತ್ತ ಹರಿಯುತ್ತಲೇ ಇದೆ ಈ ಜೀವನದಿ.

ಕಾಲಗಳು ಉರುಳಿದಂತೆ, ನಾಗರಿಕತೆ ಬೆಳೆಯಿತು, ದೇಶಗಳು, ರಾಜ್ಯಗಳು ಉದಯಿಸಿದವು, ಗಡಿಗಳು ನಿರ್ಮಾಣವಾದವು. ಪ್ರಾಕೃತಿಕ ಸಂಪನ್ಮೂಲಗಳೂ ಹಂಚಿಕೆಯಾದವು. ಗಡಿಗಳಿಲ್ಲದೆ ಭೂಮಿಯೊಂದೇ ಎಂದು ಹರಿಯುತ್ತಿರುವ ನದಿಗ್ಯಾವ ಗಡಿಯ ಹಂಗು? ತಾನೀಗ ಎರಡು ರಾಜ್ಯದಲ್ಲಿ ಹರಿಯುತ್ತಿದ್ದೇನೆ ಎಂಬ ಹಂಗಿಲ್ಲದೆ ನಿರಂತರವಾಗಿ ಹರಿಯುತ್ತಲೇ ಇದೆ ಕಾವೇರಿ. ತಾನು ಪೊರೆಯುವ ಮಕ್ಕಳು ತನ್ನನ್ನು ಹಂಚಿಕೊಂಡಿದ್ದಾರೆನ್ನುವ ಗೊಡವೆ ಅದಕ್ಕೆ ಇದೆಯೋ ಇಲ್ಲವೊ. ಆದರೆ, ಪೊರೆಯುವ ಕಾಯಕವನ್ನು ಮಾತ್ರ ನಿಲ್ಲಿಸಿಲ್ಲ.

ಹಂಚಿಕೆಯೆಂಬ ಕಲ್ಪನೆ ಬಂದಕೂಡಲೇ ವಿವಾದವೆನ್ನುವ ವಾಸ್ತವವೂ ತಲೆಯೆತ್ತುತ್ತದೆ. ಹಾಗೆಯೇ ಜನಸಂಖ್ಯೆ ಹೆಚ್ಚಿದಂತೆ ಕೃಷಿ ಭೂಮಿ ವಿಸ್ತಾರವಾಯಿತು. ಮಹಾತ್ಮ ಗಾಂಧೀಜಿ ಹೇಳಿದಂತೆ “ಪ್ರಕೃತಿಯು ಜನರ ಅಗತ್ಯವನ್ನು ಪೂರೈಸುತ್ತದೆ, ಅವರ ದುರಾಸೆಯನ್ನಲ್ಲ” ಎಂಬ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳದ ಜನರು ಅಭಿವೃದ್ಧಿಯ ನಾಗಾಲೋಟಕ್ಕೆ ಸಿಲುಕಿ ಮಹಾನಗರಗಳನ್ನು ನಿರ್ಮಿಸಿ ಸಂಪನ್ಮೂಲಗಳನ್ನು ಮನಬಂದಂತೆ ಬಳಸಿಕೊಳ್ಳತೊಡಗಿದರು. ಪ್ರಕೃತಿಯು ಅಗತ್ಯಕ್ಕೆ ತಕ್ಕಂತೆ ಉತ್ಪಾದಿಸುತ್ತಿತ್ತೇ ಹೊರತು ದುರಾಸೆಗಾಗಿ ಅಲ್ಲ. ಕೊರತೆಯುಂಟಾಗುತ್ತಿದ್ದಂತೆ ವಿವಾದಗಳು ಭುಗಿಲೇಳುತ್ತವೆ. ಈ ನಿಟ್ಟಿನಲ್ಲಿ ಕಾವೇರಿ ನದಿಯ ವಿವಾದವನ್ನು ನಾವು ನೋಡಬಹುದು. ಕಾವೇರಿ ನದಿಯ ವಿವಾದ ನೆನ್ನೆ ಮೊನ್ನೆಯದಲ್ಲ. 134 ವರ್ಷಗಳಷ್ಟು ಹಳೆಯದು. ಈ ವಿವಾದ ತಿಳಿಯುವ ಮುನ್ನ ಕಾವೇರಿ ಜಲಾನಯದ ಭೌಗೋಳಿಕ ಸ್ವರೂಪವನ್ನು ಒಮ್ಮೆ ನೋಡೋಣ.

ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್‌ವರೆಗೆ 800 ಕಿ.ಮೀ. ಹರಿಯುವ ಕಾವೇರಿ ನದಿಗೆ ಸುಮಾರು 11 ಮುಖ್ಯವಾದ ಉಪನದಿಗಳು ಬಂದು ಸೇರುತ್ತದೆ. ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಸುವರ್ಣಾವತಿ, ಶಿಂಷಾ, ಅರ್ಕಾವತಿ, ಲೋಕಪಾವನಿ, ಭವಾನಿ, ನೋಯ್ಯಲ್‌, ಅಮರಾವತಿ ಪ್ರಮುಖವಾದ ಉಪನದಿಗಳು.

ಇದರಲ್ಲಿ ಒಟ್ಟಾರೆ ಕಾವೇರಿ ಜಲಾನಯನ ಪ್ರದೇಶವನ್ನು ತೆಗೆದುಕೊಂಡರೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಒಳಗೊಂಡಿದೆ. ಈ ರಾಜ್ಯಗಳಲ್ಲಿ ಹರಿಯುವ ಹಲವಾರು ನದಿಗಳು, ಉಪನದಿಗಳ ಉಪನದಿಗಳು ಸೇರುವ ಮೂಲಕ ವಿಶಾಲ ಕಾವೇರಿ ಕೊಳ್ಳ ಎನಿಸಿಕೊಳ್ಳುತ್ತದೆ.

ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಶಿಂಷಾ, ಅರ್ಕಾವತಿ, ಲೋಕಪಾವನಿ ಇವುಗಳು ಕರ್ನಾಟಕದಲ್ಲೇ ಹುಟ್ಟಿ ಕಾವೇರಿ ನದಿಗೆ ಸೇರ್ಪಡೆಯಾಗುವ ಉಪನದಿಗಳು.

ಕಬಿನಿ ನದಿ ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಕಾವೇರಿಯನ್ನು ಸೇರುತ್ತದೆ. ಇದರೊಡನೆ ಕಬಿನಿ ನದಿಗೆ ಉಪನದಿಗಳಾಗಿ ಕಳಪುಳ, ಪನಮಾರಂ, ಮಾನಂದವಾಡಿ ನದಿಗಳು ಸೇರುತ್ತದೆ.

ಸುವರ್ಣಾವತಿ, ಮೊಯಾರ್‌ ನದಿ ತಮಿಳುನಾಡಿನಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಹರಿದು ಕಾವೇರಿಯನ್ನು ಸೇರುತ್ತವೆ

ಭವಾನಿ, ಅಮರಾವತಿ, ಸಿರುವಾಣಿ, ಪಂಬಾರ್‌, ಚಿನ್ನಾರ್‌ ನದಿಗಳು ಕೇರಳದಲ್ಲಿ ಹುಟ್ಟಿ ತಮಿಳುನಾಡು ರಾಜ್ಯದಲ್ಲಿ ಕಾವೇರಿಯನ್ನು ಸೇರುತ್ತವೆ.

ನೊಯಾಲ್‌, ನಂಗಾಂಜಿ, ಕುಡವನಾರ್‌ ಉಪನದಿಗಳು ತಮಿಳುನಾಡಿನಲ್ಲಿ ಹುಟ್ಟಿ ಮಿಕ್ಕ ನದಿಗಳೊಡನೆ ಕಾವೇರಿಯನ್ನು ಸೇರುತ್ತವೆ.

No.RiverRelationshipOrigin / Upper catchmentState(s)Joins
1HarangiDirect tributaryWestern Ghats/KodaguKarnatakaCauvery
2HemavathiDirect tributaryWestern GhatsKarnatakaCauvery
3Lakshmana TirthaDirect tributaryKodagu/Western GhatsKarnatakaCauvery
4Kabini (Kabbani)Direct tributaryWestern Ghats/Wayanad systemKerala → KarnatakaCauvery
5ShimshaDirect tributaryKarnatakaKarnatakaCauvery
6ArkavathiDirect tributaryNandi Hills regionKarnatakaCauvery
7SuvarnavatiDirect tributaryTamil Nadu–Karnataka regionTamil Nadu → KarnatakaCauvery
8BhavaniDirect tributaryWestern Ghats/Nilgiri regionKerala + Tamil NaduCauvery
9NoyyalDirect tributaryWestern GhatsTamil NaduCauvery
10AmaravatiDirect tributaryAnamalai/Western GhatsTamil Nadu; upper system linked to KeralaCauvery
11LokapavaniCauvery tributaryMandya regionKarnatakaCauvery
12KarapuzhaSub-tributaryWayanad Western GhatsKeralaPanamaram → Kabini
13PanamaramSub-tributaryWayanadKeralaKabini system
14MananthavadiSub-tributaryWayanadKeralaKabini system
15SiruvaniSub-tributaryWestern Ghats/AttappadyKerala → Tamil Nadu systemBhavani
16MoyarSub-tributaryNilgirisTamil Nadu/Karnataka border regionBhavani
17PambarTributary in Amaravati systemIdukki/Western GhatsKerala → Tamil NaduAmaravati system
18NanganjiSub-tributaryPalani regionTamil NaduAmaravati
19KodavanarSub-tributaryDindigul regionTamil NaduAmaravati
20ChinnarPambar/Amaravati systemWestern GhatsKerala/Tamil NaduAmaravati system

ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಕಾವೇರಿ ನದಿಯು ಒಟ್ಟು 8 ಉಪನದಿಗಳೊಂದಿಗೆ ಹರಿದರೆ, ತಮಿಳುನಾಡಿನಲ್ಲಿ 12 ಉಪನದಿಗಳು ಜೊತೆಗೂಡಿ ವಿಶಾಲವಾಗಿ ಹರಿಯುತ್ತದೆ. ಕರ್ನಾಟಕದಲ್ಲಿ ಕಾವೇರಿ ನದಿಯು 312 ಕಿ.ಮೀ. ಹರಿದರೆ ತಮಿಳುನಾಡಿನಲ್ಲಿ 416 ಕಿ.ಮೀ. ಹರಿಯುತ್ತದೆ ಮಿಕ್ಕ 62 ಕಿ.ಮೀ. ಕರ್ನಾಟಕ, ತಮಿಳುನಾಡು ಗಡಿಭಾಗದಲ್ಲಿ ಹರಿಯುತ್ತದೆ. ಅಂದರೆ ಕಾವೇರಿ ನದಿಯು ಅತಿ ಹೆಚ್ಚು ಹರಿಯುವುದು ತಮಿಳುನಾಡು ಪ್ರದೇಶದಲ್ಲಿ.

ಕರ್ನಾಟಕ ತಮಿಳುನಾಡು ಕಾವೇರಿ ಜಲವಿವಾದ ಆರಂಭವಾಗಿ ಶತಮಾನವೇ ಕಳೆದುಹೋಗಿದೆ. ಪ್ರತಿಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕೂಗು ಕೇಳಿಬರುತ್ತಲೇ ಇದೆ. ಇದರ ಹಿನ್ನೆಲೆ ಏನು? ಐತಿಹಾಸಿಕ, ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಕರ್ನಾಟಕಕ್ಕೆ ಕಾವೇರಿ ವಿಷಯದಲ್ಲಿ ಹಿನ್ನಡೆಗೆ ಹೇಗೆ ಕಾರಣವಾದವು ಎಂಬುದನ್ನು ಗಮನಿಸಬೇಕು.

ಟಿಪ್ಪು ಕಾಲವಾದ ನಂತರ ಇಡೀ ಮೈಸೂರು ರಾಜ್ಯವು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಅಂದಿನ ಸಮಯದಲ್ಲಿ, ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸಿನ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಮೈಸೂರಿನ ಹಿತಾಸಕ್ತಿಗಳನ್ನು ಬ್ರಿಟಿಷರು ಲೆಕ್ಕಿಸಲಿಲ್ಲ. ಕಾವೇರಿ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ತನ್ನ ಅನುಮತಿಯಿಲ್ಲದೆ, ಮೈಸೂರು ಸಂಸ್ಥಾನವು ಯಾವುದೇ ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು, ಕೃಷಿ ಭೂಮಿಯನ್ನು ವಿಸ್ತರಿಸಬಾರದು ಎಂಬ ಮೊದಲ ಆದೇಶವನ್ನು ಅಂದಿನ ಮದ್ರಾಸ್‌ ಪ್ರೆಸಿಡೆನ್ಸಿಯು 1892ರಲ್ಲಿ ಹೊರಡಿಸಿತು. ಈ ಆದೇಶದ ಪ್ರಕಾರ ಮೈಸೂರು ರಾಜ್ಯವು ತನ್ನ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಹಾಗೂ ವಿಸ್ತರಣೆ ಮಾಡಬೇಕಾದರೆ ಮದ್ರಾಸ್‌ ಪ್ರೆಸಿಡೆನ್ಸಿ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿತ್ತು. ಈ ಕುರಿತು ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಲಿಖಿತ ಒಪ್ಪಂದವೂ ಏರ್ಪಟ್ಟಿತ್ತು. ಇದು ವಾಸ್ತವವಾಗಿ ಅಸಮಾನರ ನಡುವೆ ನಡೆದ ಒಪ್ಪಂದ. ಮೈಸೂರಿನ ಮೇಲೆ ಹೇರಲಾದ ಒಪ್ಪಂದ.

ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಪ್ರೆಸಿಡೆನ್ಸಿಯ ಭೇದ ಭಾವದ ಕಾರಣ ಮೈಸೂರು ರಾಜ್ಯಕ್ಕೆ ಹಿನ್ನಡೆಯಾಗುತ್ತಲೇ ಇತ್ತು. ಕೃಷ್ಣರಾಜ ಒಡೆಯರ್‌ ಅವರ ಆಡಳಿತದ ಸಮಯದಲ್ಲಿ ಮೈಸೂರು ರಾಜ್ಯದಲ್ಲಿ ಉದ್ಭವಿಸುತ್ತಿದ್ದ ಬರದ ಹಿನ್ನೆಲೆ ಕೃಷಿ ಮತ್ತು ಜಲ ವಿದ್ಯುತ್‌ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗಾಗಿ ನೀರನ್ನು ಶೇಖರಿಸುವ ಸಲುವಾಗಿ ಅಣೆಕಟ್ಟು ಕಟ್ಟುವ ಯೋಜನೆಯನ್ನು 1910ರಲ್ಲಿ ರೂಪಿಸಲಾಯಿತು. ಆದರೆ, 1892ರಲ್ಲಿ ಆಗಿದ್ದ ಒಪ್ಪಂದದ ಪ್ರಕಾರ ಕಾವೇರಿ ಮೇಲ್ದಂಡೆಯಲ್ಲಿ ಯಾವುದೇ ಯೋಜನೆ ರೂಪಿಸಬೇಕಾದರೂ ಮದ್ರಾಸ್‌ ಪ್ರೆಸಿಡೆನ್ಸಿ ಅನುಮತಿ ಪಡೆಯಬೇಕಾಗಿತ್ತು. ಎಂದಿನಂತೆ ಮದ್ರಾಸ್‌ ಸರ್ಕಾರವು ಅಣೆಕಟ್ಟು ಕಟ್ಟುವುದರಿಂದ ಕಾವೇರಿ ಕೆಳ ಹಂತ ಜಲಾನಯನ ಪ್ರದೇಶದ ಕೃಷಿಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಮೈಸೂರಿನ ಯೋಜನೆಯನ್ನು ವಿರೋಧಿಸಿತು.

ಈ ವಿವಾದದ ಮಧ್ಯಸ್ಥಿಕೆಗಾಗಿ ಬ್ರಿಟಿಷ್‌ ನ್ಯಾಯವಾದಿ ಹಾಗೂ ಅಲಹಾಬಾದ್‌ನ ಮಾಜಿ ಜಡ್ಜ್‌ ಆಗಿದ್ದ ಸರ್‌ ಎಚ್. ಡಿ. ಗ್ರಿಫಿನ್‌ ಮತ್ತು ಭಾರತದ ನೀರಾವರಿ ಮಹಾನಿರೀಕ್ಷಕರಾಗಿದ್ದ (Inspector General of Irrigation in India) ಎಂ. ನೆದರ್‌ಸೋಲ್ ಅವರನ್ನು ಮೌಲ್ಯಮಾಪಕರನ್ನಾಗಿ (Assessors) ನೇಮಿಸಲಾಯಿತು. ವಾದವನ್ನು ಆಲಿಸಿದ ನಂತರ ಮೈಸೂರು ಪ್ರಾಂತ್ಯದ ಅವಶ್ಯಕತೆಯನ್ನು ಅರಿತ ಇವರು 1914ರಲ್ಲಿ 11 ಟಿಎಂಸಿ (Thousand million Cubic feet- ಸಾವಿರ ದಶಲಕ್ಷ ಘನ ಅಡಿಗಳು) ಸಾಮರ್ಥ್ಯದ ಅಣೆಕಟ್ಟು ಕಟ್ಟಲು ಅನುಮತಿ ನೀಡಿದರು.‌ ಇದರಿಂದಾಗಿ ಕೋಲಾರಕ್ಕೆ ವಿದ್ಯುತ್‌ ಪೂರೈಸುವ ಯೋಜನೆಗೆ ಅನುಕೂಲವಾಯಿತು. ಕೆಳಹರಿವಿನ ಪ್ರದೇಶದ ಹಿತಾಸಕ್ತಿ ಕಾಪಾಡಲು ಮದ್ರಾಸ್ ಸರ್ಕಾರವು ಈ ತೀರ್ಪನ್ನು ಪ್ರಶ್ನಿಸಿ ಭಾರತ ವ್ಯವಹಾರಗಳ ಬ್ರಿಟಿಷ್ ಕಾರ್ಯದರ್ಶಿ (Secretary of State for India) ಅವರ ಮುಂದೆ ಮೇಲ್ಮನವಿ ಸಲ್ಲಿಸಿತು. ಇದರಿಂದ ವಿವಾದ ಮತ್ತೆ ಮುಂದುವರಿಯಿತು.

ಕೊನೆಯದಾಗಿ 1924ರಲ್ಲಿ ಮದ್ರಾಸ್‌ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನದ ನಡುವೆ ಒಪ್ಪಂದವಾಯಿತು. ಒಪ್ಪಂದದ ಪ್ರಕಾರದಂತೆ ಮೈಸೂರು ಸಂಸ್ಥಾನಕ್ಕೆ ಕನ್ನಂಬಾಡಿಯಲ್ಲಿ ಕೆ.ಆರ್‌.ಎಸ್‌ ಜಲಾಶಯವನ್ನು ನಿರ್ಮಿಸುವುದಕ್ಕೆ ಹಾಗೂ ತಮಿಳುನಾಡಿನಲ್ಲಿ ಮೆಟ್ಟೂರು ಜಲಾಶಯವನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಯಿತು.

1924 ಕಾವೇರಿ ಒಪ್ಪಂದ

1924ರ ಕಾವೇರಿ ಒಪ್ಪಂದವು ಸ್ವಾತಂತ್ರ್ಯಾನಂತರದ ಇಂದಿನ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನೇರವಾಗಿ ನಡೆದ ಒಪ್ಪಂದವಲ್ಲ. ಅದು ಅಂದಿನ ಬ್ರಿಟಿಷ್ ಆಡಳಿತದ ಮೈಸೂರು ಸಂಸ್ಥಾನ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿ ನಡುವೆ ನಡೆದ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು 1924ರ ಫೆಬ್ರವರಿ18 ರಂದು ಮಾಡಿಕೊಳ್ಳಲಾಯಿತು. ಇದಕ್ಕೆ 1892ರ ಮೈಸೂರು-ಮದ್ರಾಸ್‌ ಒಪ್ಪಂದ ಹಿನ್ನೆಲೆಯಾಗಿತ್ತು.

ಕಾವೇರಿ ಜಲವಿವಾದ ನ್ಯಾಯಮಂಡಳಿಯ ದಾಖಲೆಗಳ ಪ್ರಕಾರ, ಮೈಸೂರು ಸಂಸ್ಥಾನಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಯಿತು. ಅದರ ನೀರು ಸಂಗ್ರಹ ಸಾಮರ್ಥ್ಯ 44.827 ಟಿಎಂಸಿ ಆಗಿತ್ತು. ಈ ಅಣೆಕಟ್ಟಿನ ಮೂಲಕ 1,25,000 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲು ಅವಕಾಶವಿತ್ತು. ಇದರ ಜೊತೆ ಒಪ್ಪಂದದಲ್ಲಿ ಕಾವೇರಿಯ ಉಪನದಿಗಳ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಇನ್ನೂ1,10,000 ಎಕರೆ ಪ್ರದೇಶಕ್ಕೆ ನೀರಾವರಿಯನ್ನು ವಿಸ್ತರಿಸಲು ಮೈಸೂರು ಸಂಸ್ಥಾನಕ್ಕೆ ಅವಕಾಶ ನೀಡಲಾಗಿತ್ತು.

ಇನ್ನೊಂದೆಡೆ, ಮದ್ರಾಸ್‌ ಸರ್ಕಾರವು ಕಾವೇರಿ-ಮೆಟ್ಟೂರು ಯೋಜನೆಯಡಿ ಹೊಸದಾಗಿ 3,01,000 ಎಕರೆ ಪ್ರದೇಶಕ್ಕೆ ನೀರಾವರಿ ವಿಸ್ತರಣೆಯನ್ನು ಮಿತಿಗೊಳಿಸಲು ಒಪ್ಪಿಕೊಂಡಿತ್ತು. ಮೆಟ್ಟೂರು ಜಲಾಶಯದ ಪರಿಣಾಮಕಾರಿ ಸಂಗ್ರಹ ಸಾಮರ್ಥ್ಯವನ್ನು 93.5 ಟಿಎಂಸಿ ಎಂದು ನಿಗದಿಪಡಿಸಲಾಯಿತು.

1924ರ ಒಪ್ಪಂದವು ಮೈಸೂರು ಸಂಸ್ಥಾನಕ್ಕೆ ಕೆಆರ್‌ಎಸ್‌ ನಿರ್ಮಿಸಲು ಅನುಮತಿ ನೀಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಒಪ್ಪಂದದ Clause 10 (ii) ಪ್ರಕಾರ, ಕೆಆರ್‌ಎಸ್‌ ಜಲಾಶಯದ ಮೂಲಕ ಮತ್ತು ಜಲಾಶಯದಿಂದ ಹೊರಬಿಡುವ ನೀರನ್ನು ಒಪ್ಪಂದದ ಅನುಸಾರ ನಿಯಂತ್ರಿಸಬೇಕಿತ್ತು. ಒಂದನೆಯ ಅನುಬಂಧದಲ್ಲಿ (Annexure1) ನೀಡಲಾಗಿದ್ದ ನಿಯಂತ್ರಣ ನಿಯಮಗಳಿಗೆ (Rules of Regulation) ಒಳಪಟ್ಟಿದ್ದ ನಿಯಂತ್ರಣವಿದು.

ಏಕೆಂದರೆ, ಒಂದೆಡೆ ಕಾವೇರಿ ಜಲಾನಯನ ಪ್ರದೇಶದ ಮೇಲ್ಭಾಗವಾದ ಮೈಸೂರು ಪ್ರದೇಶದಲ್ಲಿ ಜಲಾಶಯ ಮತ್ತು ನೀರಾವರಿ ಅಭಿವೃದ್ಧಿಗೆ ಅವಕಾಶ ನೀಡುವುದು, ಮತ್ತೊಂದೆಡೆ ಕೆಳಹರಿವಿನ ಮದ್ರಾಸ್‌ ಪ್ರದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ನೀರಾವರಿ ಹಿತಾಸಕ್ತಿಗಳನ್ನು ರಕ್ಷಿಸುವುದು – ಈ ಎರಡರ ನಡುವೆ ಸಮತೋಲನ ಸಾಧಿಸುವ ಪ್ರಯತ್ನವನ್ನು ಒಪ್ಪಂದದಲ್ಲಿ ಮಾಡಲಾಗಿತ್ತು.

1924ರ ಒಪ್ಪಂದದ ಮತ್ತೊಂದು ಪ್ರಮುಖ ಅಂಶ ಹೊಸ ಜಲಾಶಯಗಳ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿತ್ತು. ಮದ್ರಾಸ್‌ ಸರ್ಕಾರಕ್ಕೆ ತನ್ನ ವ್ಯಾಪ್ತಿಯ ಕಾವೇರಿ ಉಪನದಿಗಳಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಅವಕಾಶವಿತ್ತು.

ಮದ್ರಾಸ್‌ ಸರ್ಕಾರವು ಭವಾನಿ, ಅಮರಾವತಿ ಅಥವಾ ನೊಯಲ್‌ ನದಿಗಳಲ್ಲಿ ಹೊಸ ಜಲಾಶಯಗಳನ್ನು ನಿರ್ಮಿಸಿದರೆ, ಕೆಲವು ಷರತ್ತುಗಳಿಗೆ ಒಳಪಟ್ಟು ಮೈಸೂರು ಸಂಸ್ಥಾನಕ್ಕೂ ತನ್ನ ವ್ಯಾಪ್ತಿಯ ಕಾವೇರಿ ಉಪನದಿಗಳಿಗೆ ಅಡ್ಡವಾಗಿ ಸರಿದೂಗಿಸುವ ಜಲಾಶಯ ನಿರ್ಮಿಸಲು ಅವಕಾಶವಿತ್ತು. ಆದರೆ, ಮೈಸೂರು ನಿರ್ಮಿಸುವ ಇಂತಹ ಜಲಾಶಯದ ಸಾಮರ್ಥ್ಯವು ಮದ್ರಾಸ್‌ ನಿರ್ಮಿಸುವ ಸಂಬಂಧಿತ ಹೊಸ ಜಲಾಶಯದ ಸಾಮರ್ಥ್ಯದ 60% ಮೀರಬಾರದು ಎಂಬ ಷರತ್ತು ಇತ್ತು. ಅತ್ಯಂತ ಅನ್ಯಾಯ ಮತ್ತು ಅಸಮಾನತೆಯ ಷರತ್ತು ಇದು.

ಅದೇ ರೀತಿ, 1892 ಒಪ್ಪಂದದ ಶೆಡ್ಯೂಲ್‌ Aನಲ್ಲಿ ಸೇರಿಸದ ಕಾವೇರಿಯ ಉಪನದಿಗಳಲ್ಲಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೈಸೂರಿನ ಅವಕಾಶವನ್ನೂ 1924ರ ಒಪ್ಪಂದ ಉಳಿಸಿಕೊಂಡಿತ್ತು.

ಒಪ್ಪಂದದ Clause10(xi) ಪ್ರಕಾರ, ಒಪ್ಪಂದ ಜಾರಿಯಾದ 50 ವರ್ಷಗಳ ನಂತರ, ನಿರ್ದಿಷ್ಟವಾಗಿ Clauses IV ರಿಂದ VIII ರವರೆಗಿನ ಮಿತಿಗಳು ಮತ್ತು ವ್ಯವಸ್ಥೆಗಳನ್ನು ಮರುಪರಿಶೀಲನೆಗೆ ಒಳಪಡಿಸಬಹುದಾಗಿತ್ತು. ಆ 50 ವರ್ಷಗಳ ಅವಧಿಯ ಅನುಭವ ಹಾಗೂ ಮುಂದಿನ ನೀರಾವರಿ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಗಣಿಸಿ ಮರುಪರಿಶೀಲಿಸಿ ಅಗತ್ಯವಿರುವ ಬದಲಾವಣೆಗಳನ್ನು ಪರಸ್ಪರ ಒಪ್ಪಿಗೆಯ ಮೂಲಕ ಮಾಡಿಕೊಳ್ಳುವ ಅವಕಾಶ ಕಲ್ಪಿಸಿತ್ತು.

1974 ಕಾವೇರಿ ವಿವಾದ

1924 ರ ಕಾವೇರಿ ಜಲಾನಯನದ ಒಪ್ಪಂದ ಸಾಗಿ ಬಂದಿತ್ತು. 1974ರಲ್ಲಿ ವಿವಾದ ತಲೆದೋರಿತು. ಈ ವಿವಾದ ಒಮ್ಮೆಲೆ ಆಗಿದ್ದಲ್ಲ, ಹಲವಾರು ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ಕಾವೇರಿ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು. ಕಬಿನಿ ಅಣೆಕಟ್ಟು, ಹಾರಂಗಿ ಅಣೆಕಟ್ಟು, ಹೇಮಾವತಿ ನದಿಗೆ ಗೊರೂರು ಅಣೆಕಟ್ಟು ಹೀಗೆ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿಗಾಗಿ ಅಭಿವೃದ್ಧಿ ಕಾರ್ಯ ಆರಂಭಿಸಿತ್ತು. ಇದು ತಮಿಳುನಾಡಿಗೆ ಅಸಮಾಧಾನ ಉಂಟುಮಾಡತೊಡಗಿತು.

ಕರ್ನಾಟಕವು ಕಾವೇರಿ ಮೇಲ್ದಂಡೆ ಜಲಾನಯನ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಮೂಲಕ 1924ರ ಒಪ್ಪಂದವನ್ನು ಉಲ್ಲಂಘಿಸಿದ್ದು, ಇದರಿಂದಾಗಿ ತಮಿಳುನಾಡಿಗೆ ಹರಿಯಬೇಕಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ. ನಮ್ಮಲ್ಲಿ ಇರುವ ಕಾವೇರಿ ಅಚ್ಚಕಟ್ಟು ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ, ಈಗಾಗಲೇ ಅಸ್ತಿತ್ವದಲ್ಲಿ ನೀರಾವರಿ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು ಎಂದು ತಕರಾರು ತೆಗೆಯಿತು.

1924ರ ಒಪ್ಪಂದವು ಇನ್ನೂ ಜೀವಂತವಿದೆಯೇ ವಿನಾ ತೀರಿ ಹೋಗಿಲ್ಲ ಎಂದು ವಾದಿಸಿದ ತಮಿಳುನಾಡು. ಒಪ್ಪಂದದ ಷರತ್ತುಗಳನ್ನು ಮರುಪರಿಶೀಲಿಸಿ ಪರಸ್ಪರ ಮಾತುಕತೆ ನಡೆಸಬೇಕೆ ಹೊರತು ಒಪ್ಪಂದ ತೀರಿ ಹೋಗಿದೆ ಎನ್ನಲಾಗುವುದಿಲ್ಲ ಎಂದು ವಾದಿಸಿತು.

ಇದಕ್ಕೆ ಕರ್ನಾಟಕವು 1924 ರ ಒಪ್ಪಂದವು ಮೈಸೂರು ಸಂಸ್ಥಾನ ಹಾಗೂ ಮದ್ರಾಸ್‌ ಪ್ರೆಸಿಡೆನ್ಸಿ ನಡುವೆ ಆಗಿರುವಂತದ್ದು. ಈ ಒಪ್ಪಂದವು 50 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆ. 1974ರ ನಂತರ ಹಳೆಯ ಒಪ್ಪಂದದ ನಿರ್ಬಂಧಗಳು ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ವಾದಿಸಿತು. ಮುಂದುವರಿದಂತೆ ಐತಿಹಾಸಿಕ ಒಪ್ಪಂದವು ಕರ್ನಾಟಕ ತನ್ನ ಪ್ರದೇಶವನ್ನು ಅಭಿವೃದ್ಧಿಪಡಿಸುವ ಹಾಗೂ ಕಾವೇರಿ ನೀರನ್ನು ಸಂಗ್ರಹ ಮಾಡಿಕೊಳ್ಳುವ ಅವಕಾಶವನ್ನು ನಿರ್ಬಂಧಿಸಿದ್ದವು ಎಂದು ವಾದಿಸಿತು.

ಇದೇ ಸಮಯದಲ್ಲಿ ಕಾವೇರಿ ನೀರಿನ ಬಳಕೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಿರುವುದನ್ನು ನ್ಯಾಯಮಂಡಳಿಯ ಫ್ಯಾಕ್ಟ್‌ ಫೈಂಡಿಂಗ್‌ ಕಮಿಟಿಯ ಅಂಕಿ ಅಂಶಗಳು ತೋರಿಸಿದ್ದವು.

ನ್ಯಾಯಮಂಡಳಿಯ ಅಂಕಿ ಅಂಶಗಳ ಪ್ರಕಾರ ಅಂದಿನ ಸಮಯದಲ್ಲಿ ತಮಿಳುನಾಡಿಗೆ ಸಿಗುತ್ತಿದ್ದದ್ದು 566.0 ಟಿಎಂಸಿ ಕರ್ನಾಟಕಕ್ಕೆ 176.82 ಟಿಎಂಸಿ ಹಾಗೂ ಕೇರಳಕ್ಕೆ 5 ಟಿಎಂಸಿ ನೀರು ದೊರಕುತ್ತಿತ್ತು.

ಕಾವೇರಿ ಜಲಾನಯನ ಪ್ರದೇಶದ ತನ್ನ ಪಾಲಿನಲ್ಲಿ ಹೆಚ್ಚಿನ ನೀರಾವರಿ ಅಭಿವೃದ್ದಿಗೆ ಅವಕಾಶಬೇಕು ಎಂಬ ಕರ್ನಾಟಕದ ವಾದದಲ್ಲಿ ಈ ಐತಿಹಾಸಿಕ ಅಸಮಾನತೆಯೂ ಪ್ರಮುಖ ಅಂಶವಾಯಿತು. ಹೀಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿಯ ವಿಷಯದಲ್ಲಿ ಆಧುನಿಕ ಸಂಘರ್ಷ ಆರಂಭವಾಯಿತು.

1974ರ ನಂತರ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಪರಸ್ಪರ ಒಪ್ಪಬಹುದಾದ ಹೊಸ ಕಾವೇರಿ ನೀರು ಹಂಚಿಕೆ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ನಂತರ ಕೇಂದ್ರ ಸರ್ಕಾರ ಹಾಗೂ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ನಡುವೆ ವಿವಿಧ ಹಂತಗಳಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಆದರೂ ವಿವಾದಕ್ಕೆ ಪರಿಹಾರ ದೊರೆಯಲಿಲ್ಲ. ಕಾಲಕ್ರಮೇಣ ಇದೇ ಭಿನ್ನಾಭಿಪ್ರಾಯವು ಆಧುನಿಕ ಅಂತಾರಾಜ್ಯ ಕಾವೇರಿ ಜಲ ವಿವಾದವಾಗಿ ಬೆಳೆಯಿತು. ಅಂತಿಮವಾಗಿ 1990ರಲ್ಲಿ ಕಾವೇರಿ ಜಲ ವಿವಾದ ನ್ಯಾಯಮಂಡಳಿ ರಚಿಸಲಾಯಿತು.

ಕಾವೇರಿ ಜಲವಿವಾದ ನ್ಯಾಯಮಂಡಳಿ ರಚನೆ ಆದದ್ದು ಹೇಗೆ?

ಕರ್ನಾಟಕ ಜಲಾನಯನ ಪ್ರದೇಶದಲ್ಲಿ ಆಗುತ್ತಿದ್ದ ಅಭಿವೃದ್ಧಿಯಿಂದ ಆರಂಭವಾದ ಘರ್ಷಣೆ ಹಲವಾರು ಸುತ್ತಿನ ಚರ್ಚೆ ನಡೆದರೂ ಇತ್ಯರ್ಥವಾಗಲಿಲ್ಲ. ಚರ್ಚೆ ಮತ್ತು ಸಂಘರ್ಷವು 1986ರವರೆಗೂ ಮುಂದುವರೆಯಿತು. ಇಷ್ಟಾದರೂ ಎರಡು ರಾಜ್ಯಗಳು ಒಂದು ನಿಲುವಿಗೆ ಬರಲಾಗದೆ ಜಲ ವಿವಾದವು ತೀವ್ರಗೊಳ್ಳುತ್ತಲೇ ಹೋಯಿತು.

ಈ ಸಂದರ್ಭದಲ್ಲಿ ಜುಲೈ 6ರಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದು, 1956ರ ಅಂತಾರಾಜ್ಯ ಜಲವಿವಾದ ಕಾಯಿದೆ (Inter-State Water Disputes Act, 1956) ಅಡಿಯಲ್ಲಿ ಕಾವೇರಿ ವಿವಾದವನ್ನು ನ್ಯಾಯಮಂಡಳಿಗೆ ಒಪ್ಪಿಸುವಂತೆ ಕೋರಿತು.

ನ್ಯಾಯ ಮಂಡಳಿ ರಚನೆಯಲ್ಲಿ ವಿಳಂಬವಾದ ಹಿನ್ನೆಲೆ ‘ತಮಿಳುನಾಡು ಕಾವೇರಿ ನೆರ್ಪಾಸನ ವಿಲೈಪೊರುಳ್‌ಗಳ್‌ ವಿವಸಾಯ್ಗಳ್‌ ನಲ ಉರುಮೈ ಪಾದುಗಾಗಪ್ಪು ಸಂಘಂ’ ಎಂಬ ರೈತ ಸಂಘಟನೆ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು.

1990ರಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವು ತನ್ನ ಕಾನೂನಾತ್ಮಕ ಕರ್ತವ್ಯವನ್ನು ನಿರ್ವಹಿಸಿ ಕಾವೇರಿ ವಿವಾದದ ವಿಚಾರಣೆಗೆ ಸೂಕ್ತ ನ್ಯಾಯಮಂಡಳಿಯನ್ನು ರಚಿಸುವ ಅಧಿಸೂಚನೆ ಹೊರಡಿಸಬೇಕು ಎಂದು ನಿರ್ದೇಶಿಸಿತು. ಸುಪ್ರೀಂ ಕೋರ್ಟ್‌ ನಿರ್ದೇಶನದ ನಂತರ ಕೇಂದ್ರ ಸರ್ಕಾರವು 1990ರ ಜೂನ್‌ 2 ರಂದು ಅಧಿಕೃತ ಅಧಿಸೂಚನೆ ಹೊರಡಿಸಿ CAUVERY WATER DISPUTES TRIBUNAL (CWDT) ಅನ್ನು ರಚಿಸಿತು. ಅದೇ ದಿನ ತಮಿಳುನಾಡು ಸರ್ಕಾರವು ಜುಲೈ 6 1986ರಂದು ಸಲ್ಲಿಸಿದ್ದ ಮನವಿಯಿಂದ ಉದ್ಭವಿಸಿದ ಕಾವೇರಿ ಅಂತಾರಾಜ್ಯ ಜಲ ವಿವಾದವನ್ನು ನ್ಯಾಯಂಡಳಿಯ ತೀರ್ಮಾನಕ್ಕೆ ಒಪ್ಪಿಸಿತು. ಮಂಡಳಿ ರಚನೆಯಾಗುತ್ತಿದ್ದಂತೆ ತಮಿಳುನಾಡು ಮಧ್ಯಂತರ ಪರಿಹಾರವಾಗಿ ಕರ್ನಾಟಕವು 31 ಮೇ 1972ರ ವೇಳೆಗೆ ಬಳಸುತ್ತಿದ್ದ ಅಥವಾ ಸಂಗ್ರಹಿಸುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಕಾವೇರಿ ನೀರನ್ನು ಬಳಸಬಾರದು ಅಥವಾ ತಡೆಹಿಡಿದು ಇಟ್ಟುಕೊಳ್ಳಬಾರದು ಎಂಬ ನಿರ್ದೇಶನ ನೀಡುವಂತೆ ಕೋರಿತು. ಇಲ್ಲಿಂದ ವಿವಾದದ ಮತ್ತೊಂದು ಪ್ರಮುಖ ಅಧ್ಯಾಯ ಆರಂಭವಾಯಿತು. ತಮಿಳುನಾಡಿನ ಕೋರಿಕೆಯು 1991ರ ಮಧ್ಯಂತರ ಆದೇಶಕ್ಕೆ ದಾರಿ ಮಾಡಿಕೊಟ್ಟಿತ್ತು.

1991ರ ಮಧ್ಯಂತರ ಆದೇಶ

ತಮಿಳುನಾಡಿನ ಬೇಡಿಕೆಗೆ ನ್ಯಾಯಮಂಡಳಿಯು ಮಧ್ಯಂತರ ಪರಿಹಾರ ನೀಡಲು ತನಗೆ ಅಧಿಕಾರವಿಲ್ಲ ಎಂಬ ನಿಲುವು ತೆಗೆದುಕೊಂಡಿತು. ಇದಕ್ಕೆ ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆಹೋಯಿತು. 1991ರ ಏಪ್ರಿಲ್‌ 26ರಂದು ಸುಪ್ರೀಂ ಕೋರ್ಟ್‌, ಮಧ್ಯಂತರ ಪರಿಹಾರದ ಅರ್ಜಿಗಳನ್ನು ವಿಚಾರಿಸಿ ತೀರ್ಮಾನಿಸುವಂತೆ ನ್ಯಾಯಮಂಡಳಿಗೆ ನಿರ್ದೇಶಿಸಿತು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನ್ಯಾಯಮಂಡಳಿಯು 1991ರ ಜೂನ್‌ 25ರ ಮಧ್ಯಂತರ ಆದೇಶ ನೀಡಿತು. ಆದೇಶದ ಅನ್ವಯ ಕರ್ನಾಟಕವು ತನ್ನ ಜಲಾಶಯಗಳಿಂದ ನೀರನ್ನು ನಿಯಂತ್ರಿಸಿ, ಜೂನ್‌ನಿಂದ ಮುಂದಿನ ವರ್ಷದ ಮೇ ತಿಂಗಳವರೆಗೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಒಟ್ಟು 205 ಟಿಎಂಸಿ ಕಾವೇರಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ವ್ಯವಸ್ಥೆ 1991ರ ಜುಲೈ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು.

205 ಟಿಎಂಸಿ ನೀರನ್ನು ಒಂದೇ ಬಾರಿ ಬಿಡುವಂತೆ ಆದೇಶಿಸಿರಲಿಲ್ಲ. ಕೃಷಿ ಅವಶ್ಯಕತೆ ಮತ್ತು ನದಿಯ ಹರಿವನ್ನು ಗಮನದಲ್ಲಿಟ್ಟುಕೊಂಡು ತಿಂಗಳುವಾರು ವೇಳಾಪಟ್ಟಿ ನಿಗದಿಪಡಿಸಲಾಗಿತ್ತು. ಕೆಳಗೆ ಇರುವ ವೇಳಾಪಟ್ಟಿಯಲ್ಲಿ ಗಮನಿಸಬಹುದು.

ತಿಂಗಳುನಿಗದಿಪಡಿಸಿದ ಪ್ರಮಾಣ
ಜೂನ್10.16 TMC
ಜುಲೈ42.79 TMC
ಆಗಸ್ಟ್54.72 TMC
ಸೆಪ್ಟೆಂಬರ್29.93 TMC
ಅಕ್ಟೋಬರ್30.17 TMC
ನವೆಂಬರ್16.05 TMC
ಡಿಸೆಂಬರ್10.37 TMC
ಜನವರಿ2.51 TMC
ಫೆಬ್ರವರಿ2.17 TMC
ಮಾರ್ಚ್2.40 TMC
ಏಪ್ರಿಲ್2.32 TMC
ಮೇ2.01 TMC
ಒಟ್ಟು205 TMC



ಈ ಆದೇಶದಲ್ಲಿ ಕರ್ನಾಟಕವು ಕಾವೇರಿ ನೀರನ್ನು ಬಳಸಿಕೊಂಡು ನೀರಾವರಿ ಮಾಡುವ ಪ್ರದೇಶವನ್ನು ಆಗಿನ 11.2 ಲಕ್ಷ ಎಕರೆಗಿಂತ ಹೆಚ್ಚಿಸಬಾರದು ಎಂದು ನ್ಯಾಯಮಂಡಳಿ ಆದೇಶಿಸಿತು. ಅಂತಿಮ ತೀರ್ಪಿನಲ್ಲಿ ನೀರಿನ ಹಂಚಿಕೆ ನಿರ್ಧರಿಸುವ ಮೊದಲು ಇನ್ನಷ್ಟು ನೀರಾವರಿ ವಿಸ್ತರಣೆ ಆಗುವುದರಿಂದ ಸಮಸ್ಯೆ ಉಂಟಾಗಬಾರದು ಎಂಬುದು ನ್ಯಾಯಮಂಡಳಿಯ ತರ್ಕವಾಗಿತ್ತು

ಇದರ ಜೊತೆ ನ್ಯಾಯಮಂಡಳಿಯು 205 ಟಿಎಂಸಿ ನೀರಿನಲ್ಲಿ 6 ಟಿಎಂಸಿ ನೀರನ್ನು ಪುದುಚೇರಿಯ ಕಾರೈಕಲ್‌ ಪ್ರದೇಶಕ್ಕೆ ನಿಯಂತ್ರಿತವಾಗಿ ಒದಗಿಸಬೇಕೆಂದು ನಿರ್ದೇಶಿಸಿತು.

ಈ ಮಧ್ಯಂತರ ಆದೇಶವು ನಿಜಕ್ಕೂ ಕರ್ನಾಟಕಕ್ಕೆ ಅನ್ಯಾಯ ಎಸಗಿತ್ತು ಅಥವಾ ಕರ್ನಾಟಕಕ್ಕೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಮುಂದುವರೆಸಿತು. ಈ ಮಧ್ಯಂತರ ಆದೇಶಕ್ಕೆ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಮುಖ್ಯವಾಗಿ 205 ಟಿಎಂಸಿ ನೀರನ್ನು ಮೆಟ್ಟೂರಿಗೆ ಮುಟ್ಟಿಸುವ ಹೊಣೆ ಮತ್ತು ಕರ್ನಾಟಕದ ನೀರಾವರಿ ಪ್ರದೇಶವನ್ನು 11.2 ಲಕ್ಷ ಎಕರೆಗೆ ಮಿತಿಗೊಳಿಸುವುದು ತನ್ನ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ವಾದಿಸಿತು.

ಆದೇಶವನ್ನು ಮರುಪರಿಶೀಲಸಲು ನ್ಯಾಯಮಂಡಳಿಯ ಮುಂದೆ ಅರ್ಜಿಯನ್ನೂ ಸಲ್ಲಿಸಿತು. ಆದರೆ ನ್ಯಾಯಮಂಡಳಿ ಈ ಅರ್ಜಿಯನ್ನು ತಿರಸ್ಕರಿಸಿತು.

ಈ ಸಂದರ್ಭದಲ್ಲಿ ಕರ್ನಾಟಕದ ಕಾವೇರಿ ವಿವಾದದ ಇತಿಹಾಸದಲ್ಲೇ ಅತ್ಯಂತ ಹಿಂಸಾತ್ಮಕ ಘಟನೆಗಳು ನಡೆದು ಕರ್ನಾಟಕದ ಪಾಲಿಗೆ ಕಪ್ಪು ಚುಕ್ಕೆಯಾಗಿ ಉಳಿಯಿತು. ಕಾವೇರಿ ಜಲ ವಿವಾದ ನ್ಯಾಯಮಂಡಳಿ ಮಧ್ಯಂತರ ಆದೇಶ ನೀಡಿದ ಬಳಿಕ ಆಗಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು, ಆದೇಶವನ್ನು ವಿರೋಧಿಸಿ ಕರ್ನಾಟಕ ಕಾವೇರಿ ಜಲಾನಯನ ಪ್ರದೇಶ ನೀರಾವರಿ ಸಂರಕ್ಷಣಾ ಸುಗ್ರೀವಾಜ್ಞೆ, 1991 ಹೊರಡಿಸಿದರು. ಆದರೆ ಸುಪ್ರೀಂ ಕೋರ್ಟ್‌, ಈ ಕಾನೂನು ಮಾಡುವ ಅಧಿಕಾರ ಕರ್ನಾಟಕಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟು, ನ್ಯಾಯಮಂಡಳಿಯ ಮಧ್ಯಂತರ ಆದೇಶವನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಬೇಕೆಂದಿತು. ಇದರ ವಿರುದ್ಧ ಕರ್ನಾಟಕದಲ್ಲಿ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರ ಆರಂಭವಾಯಿತು. ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಯಿತು.

1991 ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿತು. ತಮಿಳು ಭಾಷಿಕರ ಮನೆಗಳು, ಅಂಗಡಿಗಳು, ವಾಹನಗಳು ಹಾಗೂ ಕೆಲವು ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚುವ ಘಟನೆಗಳು ನಡೆದವು. ಪರಿಸ್ಥಿತಿ ನಿಯಂತ್ರಿಸಲು ನಿಷೇಧಾಜ್ಞೆ ಹಾಗೂ ಕರ್ಫ್ಯೂ ವಿಧಿಸಲಾಯಿತು. ಹಿಂಸಾಚಾರವು ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಇತರ ಭಾಗಗಳಿಗೂ ಹರಡಿತು. ಘಟನೆಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ. ನಂತರ ಅಸಂಖ್ಯ ಸಂಖ್ಯೆಯ ತಮಿಳು ಭಾಷಿಕರು ಕರ್ನಾಟಕವನ್ನು ತೊರೆಯುವ ಸನ್ನಿವೇಶ ನಿರ್ಮಾಣವಾಯಿತು.

2007ರ ಕಾವೇರಿ ನ್ಯಾಯಾಧಿಕರಣದ ಅಂತಿಮ ಆದೇಶ

ಸುಮಾರು 17 ವರ್ಷಗಳ ವಿಚಾರಣೆಯ ನಂತರ ಕಾವೇರಿ ಜಲ ವಿವಾದ ನ್ಯಾಯಾಧಿಕರಣವು 2007ರ ಫೆಬ್ರವರಿ 5ರಂದು ಅಂತಿಮ ಆದೇಶ ನೀಡಿತು. ಕಾವೇರಿ ಜಲಾನಯನ ಪ್ರದೇಶದಲ್ಲಿ 50% dependability ಆಧಾರದಲ್ಲಿ ಒಟ್ಟು 740 ಟಿಎಂಸಿ ನೀರು ಲಭ್ಯ ಎಂದು ಪರಿಗಣಿಸಿ ಹಂಚಿಕೆ ಮಾಡಿತು.

ಅಂತಿಮ ಹಂಚಿಕೆಯನ್ನು ಈ ಕೆಳಕಂಡಂತೆ ಮಾಡಲಾಯಿತು

ರಾಜ್ಯ / ಉದ್ದೇಶ2007ರ ಹಂಚಿಕೆ
ತಮಿಳುನಾಡು419 TMC
ಕರ್ನಾಟಕ270 TMC
ಕೇರಳ30 TMC
ಪುದುಚೇರಿ7 TMC
ಪರಿಸರ ಸಂರಕ್ಷಣೆ10 TMC
ಅನಿವಾರ್ಯವಾಗಿ ಸಮುದ್ರ ಸೇರುವ ನೀರು4 TMC
ಒಟ್ಟು740 TMC

ಪಟ್ಟಿಯಲ್ಲಿ ಇರುವಂತೆ 419 ಟಿಎಂಸಿ ನೀರನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾಗಿರಲಿಲ್ಲ, ಅಥವಾ 1991ರ ಮಧ್ಯಂತರ ಆದೇಶದಂತೆ ಮೆಟ್ಟೂರು ಜಲಾಶಯಕ್ಕೆ 205 ಟಿಎಂಸಿ ನೀರನ್ನು ಮುಟ್ಟಿಸಬೇಕಿರಲಿಲ್ಲ. ಒಟ್ಟಾರೆ 4 ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ 740 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ 419 ಟಿಎಂಸಿ ನಿಗದಿಪಡಿಸಿತು. ಬದಲಾಗಿ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ಕರ್ನಾಟಕವು ವರ್ಷಕ್ಕೆ 192 ಟಿಎಂಸಿ ನೀರು ಲಭ್ಯವಾಗುವಂತೆ ಮಾಡಬೇಕೆಂದು ತೀರ್ಪು ನಿಗದಿಪಡಿಸಿತು. ತಮಿಳುನಾಡಿನ ಉಳಿದ ಪಾಲಿಗೆ ಅದರೊಳಗಿನ ಕಾವೇರಿ ಉಪನದಿಗಳ ಹರಿವು ಮುಂತಾದವು ಸೇರುತ್ತವೆ.

192 ಟಿಎಂಸಿ ನೀರನ್ನು ಕರ್ನಾಟಕವು ವರ್ಷದ ಕೊನೆಯಲ್ಲಿ ಒಂದೇ ಬಾರಿ ಬಿಡುವಂತಿರಲಿಲ್ಲ. ಕೃಷಿ ಅವಶ್ಯಕತೆ ಮತ್ತು ಋತುಮಾನದ ಹರಿವನ್ನು ಗಮನಿಸಿ ತಿಂಗಳವಾರು ನೀರು ಲಭ್ಯವಾಗುವ ವ್ಯವಸ್ಥೆ ನಿಗದಿಪಡಿಸಲಾಯಿತು. ಮುಖ್ಯವಾಗಿ ತಮಿಳುನಾಡಿನ ಕೃಷಿಗೆ ಅಗತ್ಯವಿರುವ ಮುಂಗಾರು ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯಬೇಕಾಗಿತ್ತು.

ಕಾವೇರಿ ಜಲ ವಿವಾದ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದ್ದರೂ, ಅದನ್ನು ಕೇಂದ್ರ ಸರ್ಕಾರ ತಕ್ಷಣಕ್ಕೆ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಲಿಲ್ಲ. ಗೆಜೆಟ್ ನಲ್ಲಿ ಪ್ರಕಟ ಆಗುವ ತನಕ ಆದೇಶ ಜಾರಿಯಾಗುತ್ತಿರಲಿಲ್ಲ. ಸುಮಾರು ಆರು ವರ್ಷಗಳ ನಂತರ, ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ 2013 ಫೆಬ್ರವರಿ 19ರಂದು, ಕೇಂದ್ರ ಸರ್ಕಾರವು ಅಂತಿಮ ತೀರ್ಪನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿತು.

ಇಷ್ಟಾದರೂ ವಿವಾದ ಅಲ್ಲಿಗೆ ಮುಗಿಯಲಿಲ್ಲ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸಲ್ಲಿಸಿದ್ದ ಮೇಲ್ಮನವಿಗಳ ಕಾರಣದಿಂದ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿಯಿತು. ಅಂತಿಮವಾಗಿ 2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್‌ CWDT ಹಂಚಿಕೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿತು.

2018ರ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು

2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್‌ ಕರ್ನಾಟಕ-ತಮಿಳುನಾಡು ಕಾವೇರಿ ಜಲ ವಿವಾದದಲ್ಲಿ ಮಹತ್ವದ ಅಂತಿಮ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿ ಅಮಿತಾವ್ ರಾಯ್‌ ಹಾಗೂ ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್‌ ಅವರಿದ್ದ ತ್ರಿಸದಸ್ಯ ಪೀಠವು 2007ರ ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಹಂಚಿಕೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿತು.

ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಅಂದರೆ ನ್ಯಾಯಾಧಿಕರಣ ನೀಡಿದ್ದ 270 ಟಿಎಂಸಿ ಜೊತೆಗೆ 14.75 ಟಿಎಂಸಿ ಸೇರಿ ಒಟ್ಟು 284.75 ಟಿಎಂಸಿ ಆಯಿತು. ಜೊತೆಯಲ್ಲಿ ತಮಿಳುನಾಡಿನ ಪಾಲಿನಲ್ಲಿ 14.75 ಟಿಎಂಸಿಗಳಷ್ಟು ತಗ್ಗಿಸಿ 404.25ಕ್ಕೆ ನಿಗದಿಪಡಿಸಿತು. ಇನ್ನು ಕೇರಳ ಹಾಗೂ ಪಾಂಡಿಚೇರಿಯ ಪಾಲಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ.

ಇದರಿಂದಾಗಿ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ಹಿಂದಿನ ಆದೇಶದ 192 ಟಿಎಂಸಿ ಬದಲಾಗಿ 172 ಟಿಎಂಸಿ ನೀರನ್ನು ತಮಿಳುನಾಡಿಗೆ ನೀರು ಲಭ್ಯವಾಗುವಂತೆ ಮಾಡಬೇಕೆಂದು ನಿಗದಿಯಾಯಿತು.

ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪಿನ ಪ್ರಕಾರ ಹಂಚಿಕೆಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

ರಾಜ್ಯ2007 CWDT2018ಸುಪ್ರೀಂ ಕೋರ್ಟ್
ಕರ್ನಾಟಕ270 TMC284.75 TMC
ತಮಿಳುನಾಡು419 TMC404.25 TMC
ಕೇರಳ30 TMC30 TMC
ಪುದುಚೇರಿ7 TMC7 TMC

ಕರ್ನಾಟಕಕ್ಕೆ ಹೆಚ್ಚುವರಿ 14.75 ಟಿಎಂಸಿ ಯಾಕೆ?

ಸುಪ್ರೀಂ ಕೋರ್ಟ್‌ ಎರಡು ಅಂಶಗಳ ಆಧಾರದ ಮೇಲೆ ಈ ತೀರ್ಪನ್ನು ಕೊಟ್ಟಿತು.

ತಮಿಳುನಾಡಿನ ಅಂತರ್ಜಲ

ಬೆಂಗಳೂರು ಕುಡಿಯುವ ನೀರು

ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಅಂತರ್ಜಲದ ಕುರಿತು ನ್ಯಾಯಾಧಿಕರಣ ತೆಗೆದುಕೊಂಡಿದ್ದ ನಿಲುವನ್ನು ಸುಪ್ರೀಂ ಕೋರ್ಟ್‌ ಬದಲಿಸಿತು. ಸುಮಾರು 20 ಟಿಎಂಸಿ ಅಂತರ್ಜಲ ಲಭ್ಯವಿರುವ ಮಾಹಿತಿಯನ್ನು ಪರಿಗಣಿಸಿ, ಅದರಲ್ಲಿ 10 ಟಿಎಂಸಿ ನೀರಿನ ಹಂಚಿಕೆ ಲೆಕ್ಕಾಚಾರದಲ್ಲಿ ಪರಿಗಣಿಸಬಹುದು ಎಂದು ಕೋರ್ಟ್‌ ಹೇಳಿತು.

2007ರ ನ್ಯಾಯಾಧಿಕರಣವು ಬೆಂಗಳೂರಿನ ಕೇವಲ ಒಂದು ಭಾಗ ಮಾತ್ರ ಕಾವೇರಿ ಜಲಾನಯನ ಪ್ರದೇಶದಲ್ಲಿದೆ ಎಂಬ ಅಂಶವನ್ನು ಆಧರಿಸಿ ನಗರದ ನೀರಿನ ಬೇಡಿಕೆ ಸೀಮಿತವಾಗಿ ಪರಿಗಣಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ ಈ ವಿಧಾನವನ್ನು ಸಂಪೂರ್ಣವಾಗಿ ಒಪ್ಪಲಿಲ್ಲ. ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವ ನಗರವಾಗಿದ್ದು, ಅದರ ಜನಸಂಖ್ಯೆಯ ಕುಡಿಯುವ ಮತ್ತು ಗೃಹಬಳಕೆಯ ನೀರಿನ ಅಗತ್ಯವನ್ನು ಕೇವಲ ನಗರವು ಜಲಾನಯನ ಪ್ರದೇಶದ ಒಳಗಿದೆಯೇ ಅಥವಾ ಹೊರಗಿದೆಯೇ ಎಂಬ ಭೌಗೋಳಿಕ ಕಾರಣದಿಂದ ನಿರ್ಲಕ್ಷಿಸಲಾಗದು ಎಂದು ಅಭಿಪ್ರಾಯ ವ್ಯಕ್ತಡಿಸಿದ ಕೋರ್ಟ್‌ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ ಕರ್ನಾಟಕಕ್ಕೆ ಇನ್ನೂ 4.75 ಟಿಎಂಸಿ ನೀಡಿತು.

ಅಂತಾರಾಜ್ಯ ನದಿಯ ನೀರಿನ ಮೇಲೆ ಯಾವುದೇ ಒಂದು ರಾಜ್ಯವು ಸಂಪೂರ್ಣ ಒಡೆತನವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂಬ ಕಾನೂನು ತತ್ವವನ್ನು ಎತ್ತಿ ತೋರಿದ ಕೋರ್ಟ್‌, ಕಾವೇರಿ ಒಂದು ಅಂತಾರಾಜ್ಯ ನದಿಯಾಗಿರುವುದರಿಂದ ಅದರ ನೀರನ್ನು ಸಂಬಂಧಪಟ್ಟ ರಾಜ್ಯಗಳ ನಡುವೆ ಸಮಾನ ಮತ್ತು ನ್ಯಾಯಸಮ್ಮತ ಹಂಚಿಕೆ ತತ್ವದ ಆಧಾರದಲ್ಲಿ ಹಂಚಬೇಕು ಎಂಬ ನಿಲುವನ್ನು ಕೋರ್ಟ್‌ ಪುಷ್ಟೀಕರಿಸಿತು.

ನಂತರ ತೀರ್ಪನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಆರು ವಾರಗಳೊಳಗೆ ಯೋಜನೆ ರೂಪಿಸಬೇಕು ಎಂದು ನಿರ್ದೇಶಿಸಿತು. 2018ರಲ್ಲಿ Cauvery Water Management Scheme ರೂಪುಗೊಂಡಿತು. ಅದರಡಿ Cauvery Water Management Authority (CWMA) ಮತ್ತು Cauvery Water Regulation Committee (CWRC) ರಚಿಸಲಾಯಿತು. ಈ ಸಂಸ್ಥೆಗಳಿಗೆ ನ್ಯಾಯಾಧಿಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಾಡಿದ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುವ ಜವಾಬ್ದಾರಿ ನೀಡಲಾಯಿತು.

ಇಷ್ಟೆಲ್ಲಾ ಆದರೂ ಕಾವೇರಿ ವಿವಾದ ಬಗೆಹರಿಯಿತಾ? ಪ್ರತಿ ವರ್ಷವೂ ವಿವಾದಗಳು ಏಳುತ್ತಲೇ ಇರುತ್ತವೆ. ರಾಜಕಾರಣಿಗಳು ಮಾತ್ರ ಈ ವಿವಾದಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಲಿದ್ದಾರೆ.

ದಶಕಗಳಿಂದಲೂ ತಮಿಳುನಾಡು ರಾಜ್ಯವೇ ಕಾವೇರಿ ವಿವಾದದಲ್ಲಿ ಮೆಲುಗೈ ಸಾಧಿಸುತ್ತಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ತಮಿಳುನಾಡು ರಾಜ್ಯ ಮೇಲುಗೈ ಸಾಧಿಸುತ್ತಿರುವುದಾದರೂ ಯಾಕೆ? 1892 ಮತ್ತು 1924ರ ಒಪ್ಪಂದದ ಸಮಯದಲ್ಲಿ ಕಾವೇರಿ ನೀರನ್ನು ಯಾವ ರಾಜ್ಯ ಹೆಚ್ಚು ಬಳಕೆ ಮಾಡುತ್ತಿದೆ ಎಂಬ ಅಂಶವನ್ನು ಗಮನದಲ್ಲಿಟ್ಟು ಒಪ್ಪಂದ ಏರ್ಪಟ್ಟಿತು ಎನ್ನಲಾಗಿದೆ. ಅಂದರೆ ಹೆಚ್ಚು ಕೃಷಿ ನೀರಾವರಿ ಪ್ರದೇಶವಿದ್ದ ಸ್ಥಳವು ಹೆಚ್ಚು ನೀರನ್ನು ಬಳಸುತ್ತಿತ್ತು. 1924ರ ಮುಂಚೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಇದ್ದು ಕಾವೇರಿ ಅಚ್ಚುಕಟ್ಟು ಪ್ರದೇಶ ಎಷ್ಟಿತ್ತು ಎಂಬುದನ್ನು ತಿಳಿದುಕೊಳ್ಳೋಣ.

1924ರ ಕಾವೇರಿ ನ್ಯಾಯಾಧಿಕರಣದ ಪ್ರಕಾರ ತಮಿಳುನಾಡು ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು 13.26 ಲಕ್ಷ ಎಕರೆಯಷ್ಟು ಕೃಷಿ ಭೂಮಿ ಹೊಂದಿತ್ತು. ಅದೇ ಸಮಯದಲ್ಲಿ ಕರ್ನಾಟಕವು 3.44 ಲಕ್ಷ ಎಕರೆ ಪ್ರದೇಶವನ್ನು ಹೊಂದಿತ್ತು. ಅಂದರೆ ತಮಿಳುನಾಡಿನಲ್ಲಿ ಅದಾಗಲೇ ಕೃಷಿ ಭೂಮಿ ಅಭಿವೃದ್ದಿಗೊಂಡಿತ್ತು. ತಮಿಳುನಾಡು ಇಷ್ಟೊಂದು ಮುಂದುವರಿಯಲು ಕಾರಣವೇನಿರಬಹುದು?

ಇದನ್ನು ತಿಳಿಯಲು ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕೆಲವು ಅಂಶಗಳು ನಮಗೆ ಕಾಣಸಿಗುತ್ತದೆ.

ಅದು ಕ್ರಿಶ 985-1014ರ ರಾಜ ರಾಜ ಚೋಳನ ಆಳ್ವಿಕೆಯ ಸಮಯ. ಕಾವೇರಿ ಕೊಳ್ಳದ ತಂಜಾವೂರು ಪ್ರಾಂತ್ಯವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ ಕಾಲ. ಈತನ ಆಡಳಿತದ ಸಮಯವು ಕಾವೇರಿ ಜಲಾನಯನ ಪ್ರದೇಶದ ಕೃಷಿ, ನೀರಾವರಿ ಮತ್ತು ಆಡಳಿತಾತ್ಮಕ ಅಭಿವೃದ್ದಿಯಲ್ಲಿ ಪ್ರಮುಖ ಘಟ್ಟವಾಗಿತ್ತು. ಈತನಿಗೂ ಮೊದಲೇ ಕರಿಕಾಲ ಚೋಳನ ಆಳ್ವಿಕೆ ಸಮಯದಲ್ಲೇ ಕಾವೇರಿ ಡೆಲ್ಟಾದ ನೀರಾವರಿ ವ್ಯವಸ್ಥೆಯು ಆರಂಭವಾಗಿತ್ತು. ಈತನ ಆಡಳಿತದಲ್ಲೆ ಕಲ್ಲಣೈ ಎನ್ನುವ ಕಿರಿದಾದ ಅಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು ಎನ್ನಲಾಗಿದೆ.

ಕಲ್ಲಣೈ ಅಣೆಕಟ್ಟು ಕಾವೇರಿ ನದಿಯ ಮೇಲೆ ತಿರುಚಿರಾಪಳ್ಳಿ-ತಂಜಾವೂರು ಡೆಲ್ಟಾ ಪ್ರದೇಶದ ಪ್ರವೇಶ ಭಾಗದಲ್ಲಿ ಇದೆ. ಇದರ ಉದ್ದ 329 ಮೀಟರ್‌ ಅಗಲ ಸುಮಾರು 20 ಮೀಟರ್‌ನಷ್ಟಿದೆ. ಇದು ಮುಖ್ಯವಾಗಿ ಕಲ್ಲುಗಳಿಂದ ನಿರ್ಮಿಸಲಾದ ತಡೆಕಟ್ಟೆಯಾಗಿದೆ.

ಕಲ್ಲಣೈನ ಮೂಲ ಉದ್ದೇಶ ಕಾವೇರಿ ನೀರನ್ನು ನಿಯಂತ್ರಿಸಿ, ಕಾಲುವೆಗಳ ಮೂಲಕ ತಂಜಾವೂರು-ಕಾವೇರಿ ಡೆಲ್ಟಾದ-ಕೃಷಿಭೂಮಿಗೆ ಹರಿಸುವುದು. ಚೋಳ ಸಾಮ್ರಾಜ್ಯದ ನಂತರದ ಅವಧಿಯಲ್ಲಿ ಈ ಮೂಲ ವ್ಯವಸ್ಥೆಯನ್ನು ಆಧರಿಸಿ ಕಾಲುವೆ, ಕೆರೆ ಮತ್ತು ಉಪಕಾಲುವೆಗಳ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಪಡಿಸಲಾಯಿತು. ಭಾರತ ಸರ್ಕಾರದ ನೀರಾವರಿ ಇತಿಹಾಸದ ದಾಖಲೆಗಳು ಕ್ರಿ.ಶ. 985-1205ರ ಚೋಳರ ಕಾಲದಲ್ಲಿ ಅಣೆಕಟ್ಟುಗಳು, ಕೆರೆಗಳು ಮತ್ತು ಅವುಗಳನ್ನು ಸಂಪರ್ಕಿಸುವ ಕಾಲುವೆಗಳನ್ನೊಳಗೊಂಡ ಹೆಚ್ಚು ಸುಧಾರಿತ ನೀರಾವರಿ ವ್ಯವಸ್ಥೆ ಬೆಳೆದಿತ್ತೆಂದು ಹೇಳುತ್ತದೆ.

ಇದರಿಂದಾಗಿ ತಂಜಾವೂರು ಪ್ರದೇಶವು ನಂತರ ತಮಿಳುನಾಡಿನ ಪ್ರಮುಖ ಭತ್ತದ ಕಣಜವಾಗಿ ಬೆಳೆಯುವುದಕ್ಕೆ ಕಾವೇರಿ ಡೆಲ್ಟಾದ ನೀರಾವರಿ ವ್ಯವಸ್ಥೆ ಮೂಲಭೂತ ಆಧಾರವಾಯಿತು.

ರಾಜರಾಜ ಚೋಳನ ಕಾಲದ ಪ್ರಮುಖ ನೀರಾವರಿ ಕಾಮಗಾರಿಗಳಲ್ಲಿ ಉಯ್ಯಕೊಂಡಾನ್‌ ಕಾಲುವೆ ಗಮನಾರ್ಹವಾಗಿದೆ.

ಕೇಂದ್ರ ಜಲ ಆಯೋಗದ ನೀರಾವರಿ ಇತಿಹಾಸದ ಪ್ರಕಟಣೆ ಈ ಕಾಲುವೆಯನ್ನು ರಾಜರಾಜ ಚೋಳ (985-1013)ನ ಕಾಲಕ್ಕೆ ಸೇರಿದ್ದೆಂದು ಹೇಳುತ್ತದೆ. ಅದು ಭೂಪ್ರದೇಶದ ಎತ್ತರ-ತಗ್ಗುಗಳನ್ನು ಅನುಸರಿಸಿ ನಿರ್ಮಿಸಿದ ಸಮಪಾತಳಿ ನೀರಾವರಿ ಕಾಲುವೆಯಾಗಿದ್ದು ಸುಮಾರು 30,000 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತಿತ್ತು ಎಂದು ಆ ಮೂಲ ತಿಳಿಸುತ್ತದೆ. ಇದು ಕೇವಲ ನದಿಯಲ್ಲಿ ಅಣೆಕಟ್ಟು ಕಟ್ಟುವ ತಂತ್ರವಲ್ಲ, ಕಾವೇರಿಯ ನೀರನ್ನು ಅಗತ್ಯವಿರುವ ಕೃಷಿ ಭೂಮಿಗಳತ್ತ ನಿಯಂತ್ರಿತವಾಗಿ ಕೊಂಡೊಯ್ಯುವ ವ್ಯವಸ್ಥೆಯ ಅಭಿವೃದ್ದಿಯಾಗಿತ್ತು.

ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಕಾವೇರಿ ನೀರಾವರಿ ಪ್ರದೇಶದಲ್ಲಿ ಅಭಿವೃದ್ಧಿ ಆರಂಭವಾದದ್ದು ಬಹಳ ತಡವಾಗಿಯೇ ಎಂದು ಹೇಳಬಹುದು. ಗಂಗರ ಕಾಲದಲ್ಲಿ ಕೆರೆ, ಕಟ್ಟೆ ನಿರ್ಮಾಣವಾದದ್ದು ಬಿಟ್ಟರೆ ಅಂತಹ ಗಮನಾರ್ಹವಾದ ಕೆಲಸಗಳು ಆಗಿರಲಿಲ್ಲ.

ಚಿಕ್ಕದೇವರಾಜ ಒಡೆಯರ್‌ (1673-1704) ಕಾಲವು ಕಾವೇರಿ ನೀರಾವರಿ ಇತಿಹಾಸದಲ್ಲಿ ಗಮನಾರ್ಹವಾಗಿದೆ. 17ನೇ ಶತಮಾನದ ಕೊನೆಯಲ್ಲಿ ಕಾವೇರಿಯಿಂದ ನೀರನ್ನು ಕೃಷಿಭೂಮಿಗಳಿಗೆ ಕೊಂಡೊಯ್ಯಲು ಚಿಕ್ಕದೇವರಾಜ ಸಾಗರ ಕಾಲುವೆ ವ್ಯವಸ್ಥೆ ಅಭಿವೃದ್ಧಿಯಾಗಿತ್ತು ಎಂಬ ಐತಿಹಾಸಿಕ ದಾಖಲೆಗಳಿವೆ.

ನಂತರ 18 ಶತಮಾನದಲ್ಲಿ ಟಿಪ್ಪು ಸುಲ್ತಾನ್‌ ಕಾಲದಲ್ಲಿ ರಾಮಸ್ವಾಮಿ ಕಾಲುವೆ ಮುಂತಾದ ಕಾಲುವೆ ವ್ಯವಸ್ಥೆಗಳು ಬಳಕೆಯಲ್ಲಿದ್ದವು ಎಂದು ಐತಿಹಾಸಿಕ ಅಧ್ಯಯನಗಳು ದಾಖಲಿಸುತ್ತವೆ. ಇಂದಿನ ಕೆಆರ್‌ಎಸ್‌ ಅಣೆಕಟ್ಟು ಇರುವ ಸ್ಥಳದಲ್ಲಿ ಟಿಪ್ಪು ಕಾವೇರಿ ಬೃಹತ್‌ ಅಣೆಕಟ್ಟನ್ನು ಕಟ್ಟಲು ಶಿಲಾನ್ಯಾಸ ಮಾಡಿದ್ದರು ಎಂಬ ಐತಿಹಾಸಿಕ ದಾಖಲೆಗಳು ಇವೆ. ನಂತರ ಟಿಪ್ಪು ತನ್ನ ಆಡಳಿತದ ಬಹುಭಾಗವನ್ನು ಬ್ರಿಟಿಷರ ವಿರುದ್ಧದ ಯುದ್ಧದಲ್ಲೇ ಕಳೆದದ್ದುದರಿಂದ ಅಣೆಕಟ್ಟು ನಿರ್ಮಾಣ ಸಾಧ್ಯವಾಗಲಿಲ್ಲ. 19 ಶತಮಾನದ ಕೊನೆಯ ಭಾಗವಾಗಿ ಕರ್ನಾಟಕದಲ್ಲಿ ಬೃಹತ್‌ ಪ್ರಮಾಣದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಸಾಧ್ಯವಾಯಿತು.

ಈ ಐತಿಹಾಸಿಕ ಹಿನ್ನೆಲೆಯನ್ನು ನೋಡಿದರೆ ಕಾವೇರಿ ನದಿಯ ಮೇಲೆ ತಮಿಳುನಾಡು ಬಹುಕಾಲದಿಂದ ಹಿಡಿತವನ್ನು ಹೊಂದಿತ್ತು, ಬ್ರಿಟಿಷರ ಕಾಲದಲ್ಲಿ ಈ ಹಿಡಿತ ಮತ್ತಷ್ಟು ನಿರ್ಣಾಯಕವಾಗಿ ಬಲಗೊಂಡಿತು ಎಂದು ತಿಳಿದು ಬರುತ್ತದೆ.

ಇನ್ನು ವಿವಾದಕ್ಕೆ ಮತ್ತೊಂದು ಕಾರಣ ಹವಾಮಾನ ಮತ್ತು ಕಾವೇರಿ ಕೊಳ್ಳ ಇರುವ ಪ್ರದೇಶ.

ಕಾವೇರಿ ಜಲಾನಯನ ಪ್ರದೇಶದ ಪಶ್ಚಿಮ ಭಾಗವು ಪಶ್ಚಿಮ ಘಟ್ಟಗಳಿಂದ ಆವೃತವಾಗಿದೆ. ಕೊಡಗು, ಹಾಸನ, ಹಾಗೂ ಕೇರಳದ ಕೆಲವು ಪರ್ವತ ಪ್ರದೇಶಗಳು ಹೆಚ್ಚಿನ ಮಳೆಯನ್ನು ಪಡೆಯುತ್ತದೆ.

ಇನ್ನು ಕಾವೇರಿ ನದಿಯ ನೀರು ಇಳುವರಿಯು ಮುಂಗಾರು ಮಳೆಯನ್ನು ಅವಲಂಬಿಸಿದೆ. ಮುಂಗಾರಿನಲ್ಲಿ ಹೆಚ್ಚು ಮಳೆಯಾದರೆ ಭೋರ್ಗರೆದು ಹರಿಯುವ ನದಿ ಬೇಸಿಗೆಯಲ್ಲಿ ಕೆಲವು ಕಡೆ ಝರಿಗಳಾಗಿ ಹರಿಯುತ್ತದೆ. ಆದುದರಿಂದ ಇದನ್ನು ಜಲಕೊರತೆಯ ನದಿ ಜಲಾನಯನ ಪ್ರದೇಶ ಎಂದು ಗುರುತಿಸಲಾಗಿದೆ (Deficit river basin). ಉತ್ತರ ಕರ್ನಾಟಕದಲ್ಲಿ ಹರಿಯುವ ಕೃಷ್ಣೆ, ಭೀಮಾ ನದಿಗಳು ಹೆಚ್ಚುವರಿ ನೀರಿರುವ ನದಿ ಜಲಾನಯನ ಪ್ರದೇಶ ಎಂದು ಪರಿಗಣಿಸಲಾಗಿದೆ ( Surplus river basin).

ಜೂನ್‌ ನಿಂದ ನವೆಂಬರ್‌ವರೆಗೆ ಸುರಿಯುವ ಮುಂಗಾರು ಮಳೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತದೆ. ಆ ಸಮಯದಲ್ಲಿ ಕಾವೇರಿ ವಿವಾದವು ಕಾಣಿಸುವುದಿಲ್ಲ. ಮುಂಗಾರು ಕೈಕೊಟ್ಟು ಕಾವೇರಿ ಕೊಳ್ಳದಲ್ಲಿ ನೀರಿನ ಕೊರತೆಯಾದರೆ ವಿವಾದಗಳು ಭುಗಿಲೇಳುತ್ತದೆ. ಕಾವೇರಿ ವಿವಾದಕ್ಕೆ ಪರಿಹಾರವೆಂದರೆ ಪ್ರಕೃತಿಯೇ ಆಗಿದೆ. ಅದನ್ನು ಕಾಪಾಡಿಕೊಂಡರೆ ವಿವಾದಗಳಿಲ್ಲದೆ ರೈತರು, ಅವಲಂಬಿತ ಜೀವಿಗಳು ನೆಮ್ಮದಿಯಾಗಿ ಬದುಕಬಹುದು.

Harish
ಹರೀಶ್‌ ಕುಮಾರ್‌ ಸಿ. ಕೆ.
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....