ಸಿಜೆಪಿ ಪ್ರತಿಭಟನೆಗೂ ಮುನ್ನ ಶನಿವಾರ ಮುಂಜಾನೆ ಖ್ಯಾತ ಯೂಟ್ಯೂಬರ್ ಧೃವ್ ರಾಠಿ ಅವರನ್ನು ಅವರ ನಿವಾಸದಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಬಳಿಕ, ಮಾತನಾಡಿರುವ ಧೃವ್ ರಾಠಿ, “ನನ್ನನ್ನು ಪೊಲೀಸರು ಬಂಧಿಸಿರಲಿಲ್ಲ ಅಥವಾ ವಶಕ್ಕೆ ಪಡೆದಿರಲಿಲ್ಲ. ಬದಲಾಗಿ, ಅಪಹರಣ (ಕಿಡ್ನಾಪ್) ಮಾಡಿದ್ದರು” ಎಂದು ಆರೋಪಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪೊಲೀಸರು ನಮ್ಮ ನಿವಾಸಕ್ಕೆ ಬಂದು, ಬಲವಂತವಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಯಾವುದೇ ಕಾನೂನುಬದ್ಧ ಬಂಧನ ವಾರೆಂಟ್ ಅಥವಾ ಸ್ಪಷ್ಟ ಕಾರಣಗಳನ್ನು ನೀಡದೆ ನನ್ನನ್ನು ಬಲವಂತವಾಗಿ ಎಳೆದೊಯ್ದದ್ದು ಕಾನೂನುಬಾಹಿರ. ಇದು ಅಪಹರಣಕ್ಕೆ ಸಮಾನವಾದ ಕೃತ್ಯ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೆಹಲಿಯಲ್ಲಿ ನಿಗದಿಯಾಗಿದ್ದ ಪ್ರತಿಭಟನೆಯನ್ನು ಮತ್ತು ಸರ್ಕಾರದ ವಿರುದ್ಧದ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಪೊಲೀಸರು ನನ್ನನ್ನು ಅಪಹರಿಸುವ ಕೃತ್ಯ ನಡೆಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಅಕ್ಟೋಬರ್ 10ರ ಶನಿವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿಜೆಪಿ ಕರೆಕೊಟ್ಟಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಧೃವ್ ರಾಠಿ ದೆಹಲಿಗೆ ಆಗಮಿಸಿದ್ದರು. ಗುರುಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ತಂಗಿದ್ದರು. ಅವರು ಪ್ರತಿಭಟನೆಗೆ ತೆರಳಲು ಸಜ್ಜಾಗುವ ಮುನ್ನವೇ, ಅವರ ಮನೆಗೆ ಧಾವಿಸಿದ್ದ ಗುರುಗ್ರಾಮದ ಸೆಕ್ಟರ್ 56ರ ಪೊಲೀಸರು ಧೃವ್ ರಾಠಿ ಅವರನ್ನು ವಶಕ್ಕೆ ಪಡೆದು, ಕರೆದೊಯ್ದಿದ್ದರು.



