ಸಂವಿಧಾನಕ್ಕಿಂತ ಸಿದ್ಧಾಂತವೇ ಮಿಗಿಲು ಎಂಬಂತೆ ವರ್ತಿಸಿದರೂ ನ್ಯಾಯಮೂರ್ತಿಗಳಿಗೆ ಪದೋನ್ನತಿ ಸಿಗುತ್ತದೆ. ನಿವೃತ್ತಿ ನಂತರ ಯಾವುದೋ ಒಂದು ಹುದ್ದೆ ಕಟ್ಟಿಟ್ಟ ಬುತ್ತಿ ಎಂಬುದೂ ಖಚಿತವಾಗುತ್ತಲಿದೆ. ತಟಸ್ಥವಾಗಿರಬೇಕಾದ ನ್ಯಾಯಾಲಯಗಳು ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಯೋಗಶಾಲೆಗಳಾಗುತ್ತಿವೆ ಎಂಬುದು ವಾಸ್ತವ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿರಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ನ್ಯಾಯಮೂರ್ತಿಗಳು ಈ ನಿಯಮವನ್ನು ಮೀರುತ್ತಿದ್ದಾರೆ. ನ್ಯಾಯಮೂರ್ತಿಗಳ ಸಂವಿಧಾನ ವಿರೋಧಿ, ಅಲ್ಪಸಂಖ್ಯಾತ ವಿರುದ್ಧ ಹೇಳಿಕೆಗಳು ಸಾಕಷ್ಟು ಬಾರಿ ಸಾರ್ವಜನಿಕ ಚರ್ಚೆಗೆ ಮತ್ತು ವಿಮರ್ಶೆಗೆ ಒಳಗಾಗಿವೆ. ಈ ರೀತಿ ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದವರಲ್ಲಿ ಒಬ್ಬರಾದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಇದೀಗ ನಿವೃತ್ತರಾಗಿದ್ದಾರೆ. ಅದೂ ತನ್ನ ಈ ದ್ವೇಷ ಭಾಷಣಕ್ಕೆ ಕ್ಷಮೆ ಕೇಳದೆ, ಯಾವ ಶಿಕ್ಷೆಗೂ ಗುರಿಯಾಗದೆಯೇ, ಸುಸೂತ್ರವಾಗಿ ನಿವೃತ್ತಿಗೊಂಡಿದ್ದಾರೆ.
ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದ ಶೇಖರ್ ಕುಮಾರ್ ಯಾದವ್ ಅವರು ಹಲವಾರು ಬಾರಿ ತಮ್ಮ ಹೇಳಿಕೆಗಳಿಂದಾಗಿ ಸುದ್ದಿಯಾದವರು. 2024ರ ಡಿಸೆಂಬರ್ 8ರಂದು ವಿಶ್ವ ಹಿಂದೂ ಪರಿಷತ್ (VHP) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನ್ಯಾಯಮೂರ್ತಿ ಶೇಖರ್ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಮೂರ್ತಿ ಶೇಖರ್, ಮುಸ್ಲಿಂ ಸಮುದಾಯದ ವಿರುದ್ಧ ‘ಕಠ್ಮುಲ್ಲಾ’ (ಇಸ್ಲಾಮಿಕ್ ವಿದ್ವಾಂಸರನ್ನು ಅಜ್ಞಾನಿ ಎಂದು ಕರೆಯಲು ಬಳಸುವ ನಿಂದನಾತ್ಮಕ ಪದ) ಅಂತಹ ಅವಹೇಳನಕಾರಿ ಪದಗಳನ್ನು ಬಳಸಿದ್ದರು. “ಭಾರತವು ಬಹುಸಂಖ್ಯಾತರ ಇಚ್ಛೆಯಂತೆ ನಡೆಯಬೇಕು” ಎಂದೂ ಹೇಳುವ ಮೂಲಕ ತಮ್ಮ ಮನಸ್ಸಿನೊಳಗಿನ ಮುಸ್ಲಿಂ ದ್ವೇಷವನ್ನು ಉಗುಳಿದ್ದರು.
ಇದನ್ನು ಓದಿದ್ದೀರಾ? ವಿವಾದಿತ ನ್ಯಾಯಮೂರ್ತಿ ಶೇಖರ್ ಯಾದವ್ಗೆ ಸಂಕಷ್ಟ; ಮಹಾಭಿಯೋಗದ ಬಾಗಿಲಲ್ಲಿ ಜಡ್ಜ್ ಭವಿಷ್ಯ
ಈ ಭಾಷಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಂಸತ್ತಿನ ಸುಮಾರು 55 ಸದಸ್ಯರು (ರಾಜ್ಯಸಭಾ ಸಂಸದರು) ಅವರನ್ನು ಪದಚ್ಯುತಗೊಳಿಸಲು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯಸಭೆಯ ಸಭಾಪತಿಗಳಿಗೆ ನೋಟಿಸ್ ನೀಡಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಭಾಷಣದ ಬಗ್ಗೆ ವಿವರಗಳನ್ನು ಕೇಳಿತ್ತು. ನ್ಯಾಯಮೂರ್ತಿ ಯಾದವ್ ಅವರನ್ನು ಸಮನ್ಸ್ ಕೊಟ್ಟು ವಿಚಾರಣೆ ನಡೆಸಿತ್ತು. ಆದರೆ ನ್ಯಾಯಮೂರ್ತಿ ಯಾದವ್ ಕ್ಷಮೆಯಾಚಿಸಲು ನಿರಾಕರಿಸಿದ್ದರು. ತಾವು ಹೇಳಿದ ಮಾತುಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದರು. ಈ ಮೂಲಕ ಸುಪ್ರೀಂ ಕೋರ್ಟ್ ಸೂಚನೆಯನ್ನು ಧಿಕ್ಕರಿಸಿದ್ದರು. ಈ ಪ್ರಕರಣ ಅಲ್ಲೇ ಮುಚ್ಚಿಹೋಯಿತು. ನ್ಯಾಯಮೂರ್ತಿಯಾಗಿ ದ್ವೇಷ ಭಾಷಣ ಮಾಡಿದ ಈ ಶೇಖರ್ ಯಾದವ್ ಅವರು ಇದೀಗ ಒಂದು ಕೂದಲು ಕೊಂಕದೆಯೇ ನಿವೃತ್ತಿ ಹೊಂದುತ್ತಿದ್ದಾರೆ. ಅಷ್ಟಕ್ಕೂ ಹಿಂದುತ್ವ ಪ್ರತಿಪಾದಿಸಿದರೆ ರಕ್ಷಣೆ ಖಾತ್ರಿ ಎಂದರ್ಥವೇ?
ನಮ್ಮದು ಗೀತೆ, ನಿಮ್ಮದು ಕುರಾನ್ ಎಂಬ ವ್ಯಂಗ್ಯ!
ಅಷ್ಟಕ್ಕೂ ನ್ಯಾಯಮೂರ್ತಿ ಶೇಖರ್ ಯಾದವ್ ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು, ತಾವೊಬ್ಬ ಸಂಘಪರಿವಾರದ ನಾಯಕರಂತೆ ವರ್ತಿಸಿರುವುದು ಇದೇ ಮೊದಲೇನಲ್ಲ. 2024ರ ವಿಎಚ್ಪಿ ಕಾರ್ಯಕ್ರಮದಲ್ಲಿ, “ಹಿಂದೂ ಮಕ್ಕಳಿಗೆ ಬಾಲ್ಯದಿಂದಲೇ ಶಾಂತಿ ಮತ್ತು ಸಹಿಷ್ಣುತೆಯನ್ನು ಕಲಿಸಲಾಗುತ್ತದೆ. ಆದರೆ ಒಂದು ನಿರ್ದಿಷ್ಟ ಧರ್ಮದ ಮಕ್ಕಳು ಪ್ರಾಣಿಗಳ ಹತ್ಯೆಯನ್ನು ನೋಡುತ್ತಾ ಬೆಳೆಯುವುದರಿಂದ ಅವರಲ್ಲಿ ಸಹಿಷ್ಣುತೆ ಇರುವುದಿಲ್ಲ” ಎಂದು ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷವಾಗಿ ವಿಷಕಾರಿದ್ದರು. ಅಷ್ಟು ಮಾತ್ರವಲ್ಲದೆ, “ನಮ್ಮದು ಗೀತೆ, ನಿಮ್ಮದು ಕುರಾನ್” ಎಂದು ವಿಭಜಕ ಧಾಟಿಯಲ್ಲಿ ಮಾತನಾಡಿದ್ದರು.
ಹಸು ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಎಂದಿದ್ದ ನ್ಯಾಯಮೂರ್ತಿ!
ದ್ವೇಷ ಭಾಷಣ ಮಾಡುವುದು ಮಾತ್ರವಲ್ಲ ತನ್ನ ತೀರ್ಪಿನ ವೇಳೆ ಅವೈಜ್ಞಾನಿಕ ವಿಚಾರಗಳನ್ನು ಪ್ರಸ್ತಾಪಿಸಿದವರು ನ್ಯಾಯಮೂರ್ತಿ ಶೇಖರ್. ಗೋಹತ್ಯೆ ತಡೆ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಮೂರ್ತಿ ಶೇಖರ್ ನೀಡಿದ ಲಿಖಿತ ಅಭಿಪ್ರಾಯಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. “ಹಸುವನ್ನು ರಾಷ್ಟ್ರ ಪ್ರಾಣಿ ಎಂದು ಘೋಷಿಸಬೇಕು. ಅದನ್ನು ಹಿಂದೂಗಳ ಮೂಲಭೂತ ಹಕ್ಕಿನ ವ್ಯಾಪ್ತಿಗೆ ತರಬೇಕು” ಎಂದು ಕಾನೂನು ಬದಿಗೊತ್ತಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಿದ್ದರು. ಅಷ್ಟು ಮಾತ್ರವಲ್ಲದೆ, “ಹಸುವು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ” ಎಂದು ಅವೈಜ್ಞಾನಿಕ ಮಾಹಿತಿಯನ್ನೂ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು. “ಹಸುಗಳ ಕಲ್ಯಾಣವಾದರೆ ಮಾತ್ರ ದೇಶದ ಕಲ್ಯಾಣವಾಗುತ್ತದೆ” ಎಂದು ಹೇಳಿಕೊಂಡಿದ್ದರು.
ಇನ್ನು ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವಾಗ, “ಬಹುಸಂಖ್ಯಾತರು ಅಲ್ಪಸಂಖ್ಯಾತರಾದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ” ಎಂದಿದ್ದರು. ಅಲ್ಲದೆ, ಭಾರತದ ಸಂಸ್ಕೃತಿಯನ್ನು ಕಾಪಾಡಲು ಇತಿಹಾಸದ ಪುನರ್ರಚನೆ ಅವಶ್ಯಕತೆಯಿದೆ ಎಂಬ ಆರ್ಎಸ್ಎಸ್ ವಿಚಾರಧಾರೆಗೆ ಪೂರಕವಾದ ಅಭಿಪ್ರಾಯಗಳನ್ನು ಹಲವು ಬಾರಿ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆ ಬಳಿಕ 2024ರ ಡಿಸೆಂಬರ್ 8ರ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ವಾಗ್ದಂಡನೆ ಪ್ರಕ್ರಿಯೆಗೆ ಗುರಿಯಾದರು. ಆದರೆ ಈ ಪ್ರಕ್ರಿಯೆ ವಿನಾಕಾರಣ ವಿಳಂಬಗೊಳಿಸಲಾಗಿದೆ.
ಆರಂಭದಲ್ಲಿ ನೋಟಿಸ್ ನೀಡಿದ್ದ ಸಂಸದರ ಸಹಿಗಳಲ್ಲಿ ಹೊಂದಾಣಿಕೆಯಿಲ್ಲ ಎಂದು ರಾಜ್ಯಸಭಾ ಸಚಿವಾಲಯವು ಅವುಗಳ ಪರಿಶೀಲನೆಗೆ ಮುಂದಾಯಿತು. ಇದರಿಂದಾಗಿ ಪ್ರಕ್ರಿಯೆ ದೀರ್ಘಕಾಲ ವಿಳಂಬಗೊಂಡಿತು. 2025ರ ಮಧ್ಯಭಾಗದ ವೇಳೆಗೆ ಕೇವಲ 44 ಸಂಸದರು ಮಾತ್ರ ತಮ್ಮ ಸಹಿಗಳನ್ನು ದೃಢೀಕರಿಸಿದ್ದರು. ಪದಚ್ಯುತಿ ಪ್ರಕ್ರಿಯೆ ಮುಂದುವರಿಸಲು ಕನಿಷ್ಠ 50 ಸಂಸದರ ಬೆಂಬಲ ಅಗತ್ಯವಿತ್ತು. ಆದರೆ ಭಾರತದ ನ್ಯಾಯಾಂಗ ಪದಚ್ಯುತಿ ಪ್ರಕ್ರಿಯೆಯಲ್ಲಿ ಯಾವುದೇ ನಿರ್ದಿಷ್ಟ ಕಾಲಮಿತಿ ಇಲ್ಲದಿರುವುದು ಪ್ರಕ್ರಿಯೆ ಕುಂಠಿತಗೊಳ್ಳುತ್ತಲೇ ಹೋಯಿತು. ಎಷ್ಟು ವಿಳಂಬವಾಯಿತೆಂದರೆ ಈಗ ನ್ಯಾಯಮೂರ್ತಿ ಯಾದವ್ ನಿವೃತ್ತಿ ಹೊಂದಿದ್ದಾರೆ. ನಿವೃತ್ತರಾಗಿರುವುದರಿಂದ ಈ ಪದಚ್ಯುತಿ ಪ್ರಕ್ರಿಯೆಯು ಯಾವುದೇ ಅಂತಿಮ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ. ತಮ್ಮ ನಿವೃತ್ತಿ ವೇಳೆಯೂ ನ್ಯಾಯಮೂರ್ತಿ ಶೇಖರ್ ಈ ಹಿಂದಿನ ಕೋಮುದ್ವೇಷದ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. “ನನ್ನ ತಪ್ಪೇನೂ ಇರಲಿಲ್ಲ. ಅದನ್ನು ತಿರುಚಿ ಮಂಡಿಸಿದವರದು ತಪ್ಪು” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ನ್ಯಾಯಾಧೀಶರ ನೇಮಕಾತಿ ನಿಯಂತ್ರಣಕ್ಕೆ ಪಡೆಯುವುದೇ ಸರ್ಕಾರದ ಉದ್ದೇಶ: ಕಪಿಲ್ ಸಿಬಲ್ ಆರೋಪ
ಇನ್ನು ಜಿಲ್ಲಾ ನ್ಯಾಯಾಧೀಶರಾಗಿದ್ದ ಶೇಖರ್ ಯಾದವ್ ಅವರನ್ನು ಹೈಕೋರ್ಟ್ಗೆ ಬಡ್ತಿ ನೀಡುವ ಪ್ರಸ್ತಾವನೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ತಡೆಹಿಡಿದಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಯಾದವ್ ಅವರಿಗೆ ಅಲಹಾಬಾದ್ ಹೈಕೋರ್ಟ್ಗೆ ಬಡ್ತಿ ನೀಡಿತು. ಇದು ನ್ಯಾಯಾಂಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸಿದ್ಧಾಂತಗಳ ಪ್ರಭಾವದ ಬಗ್ಗೆ ಚರ್ಚೆಗೆ ನಾಂದಿ ಹಾಡಿತ್ತು.
‘ಹಿಂದುತ್ವ ಪ್ರತಿಪಾದನೆಯೇ ರಕ್ಷಾ ಕವಚ’
ಇನ್ನೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ನ್ಯಾಯಮೂರ್ತಿ ಯಾದವ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದು ಮತ್ತು ಇವರ ವಿರುದ್ಧದ ಪದಚ್ಯುತಿ ಪ್ರಸ್ತಾವನೆಯು ಸಂಸತ್ತಿನಲ್ಲಿ ವಿಳಂಬ ಧೋರಣೆಯಿಂದಾಗಿ ತಣ್ಣಗಾಗಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ನಿರ್ದಿಷ್ಟ ಸಿದ್ಧಾಂತವನ್ನು ಎತ್ತಿಹಿಡಿದರೆ ವ್ಯವಸ್ಥೆಯು ಅವರನ್ನು ಹೇಗೆ ರಕ್ಷಿಸುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. ಕೆಳಹಂತದ ನ್ಯಾಯಾಧೀಶರಿಗೂ ‘ಹಿಂದುತ್ವ ಪ್ರತಿಪಾದನೆಯೇ ರಕ್ಷಾ ಕವಚ’ ಎಂಬ ತಪ್ಪು ಸಂದೇಶವನ್ನು ನೀಡಿದಂತಾಗಿದೆ.
ಶೇಖರ್ ಯಾದವ್ ಮಾತ್ರವಲ್ಲ ಹಿಂದುತ್ವ ಮತ್ತು ಬಹುಸಂಖ್ಯಾತ ವಾದವನ್ನು ಎತ್ತಿ ಹಿಡಿಯುವ ನ್ಯಾಯಾಧಿಕಾರಿಗಳನ್ನು ಬಿಜೆಪಿ ಹಲವು ಬಾರಿ ಬೆಂಬಲಿಸಿದೆ. ಅಂತಹ ಮನಸ್ಥಿತಿಯ ನ್ಯಾಯಾಧೀಶರಿಗೆ ಅಭಯ ನೀಡಿವೆ. ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ತಮಿಳುನಾಡಿನ ಮಧುರೈ ಸಮೀಪವಿರುವ ತಿರುಪ್ಪರಾನ್ ಕುಂದ್ರುಂ ದರ್ಗಾ ಮತ್ತು ದೇವಸ್ಥಾನದ ವಿವಾದದಲ್ಲಿ ನೀಡಿದ ತೀರ್ಪು ಸಂಚಲನ ಮೂಡಿಸಿತ್ತು. ಈ ಸ್ಥಳವನ್ನು “ದಕ್ಷಿಣದ ಅಯೋಧ್ಯೆ” ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ದರ್ಗಾ ಇರುವ ಜಾಗವು ಮೂಲತಃ ಹಿಂದೂ ಧಾರ್ಮಿಕ ಸ್ಥಳವಾಗಿತ್ತು ಎಂಬ ಧಾಟಿಯಲ್ಲಿ ಆದೇಶಗಳನ್ನು ನೀಡುವ ಮೂಲಕ ಸ್ಥಳೀಯ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ.
ನ್ಯಾಯಮೂರ್ತಿ ಸ್ವಾಮಿನಾಥನ್ “ನಾನು ಆರ್ಎಸ್ಎಸ್ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದೇನೆ. ಭಾರತದ ಭವಿಷ್ಯವು ಈ ಸಿದ್ಧಾಂತದಲ್ಲಿದೆ” ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೊಂಡವರು. ತಮಿಳುನಾಡಿನ ಅಸ್ಮಿತೆಯಾಗಿರುವ ದ್ರಾವಿಡ ಚಳವಳಿಗಳನ್ನು ಮತ್ತು ಪೆರಿಯಾರ್ ವಿಚಾರಧಾರೆಗಳನ್ನು ಹಲವು ಬಾರಿ ಟೀಕಿಸಿದ್ದಾರೆ. ನ್ಯಾಯಮೂರ್ತಿಯೊಬ್ಬರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಒಂದು ರಾಜ್ಯದ ಪ್ರಬಲ ರಾಜಕೀಯ ಮತ್ತು ಸಾಮಾಜಿಕ ಚಳವಳಿಯ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂಬ ಚರ್ಚೆಗಳು ಹುಟ್ಟಿದ್ದವು. ಆದರೆ ಅವರ ವಿರುದ್ಧದ ಕ್ರಮವೇನು? ಏನಿಲ್ಲ!
ಹೀಗೆ ಹಿಂದುತ್ವದ ಪರವಾಗಿ ಅಥವಾ ಅಲ್ಪಸಂಖ್ಯಾತರ ವಿರುದ್ಧವಾಗಿ ತೀರ್ಪು ಅಥವಾ ಹೇಳಿಕೆ ನೀಡುವ ನ್ಯಾಯಾಧೀಶರಿಗೆ ಬಿಜೆಪಿ ಸಾಮಾಜಿಕ, ರಾಜಕೀಯ ರಕ್ಷಣೆ ನೀಡುತ್ತಲೇ ಬಂದಿದೆ. ಸಂವಿಧಾನಕ್ಕಿಂತ ಸಿದ್ಧಾಂತವೇ ಮಿಗಿಲು ಎಂಬಂತೆ ವರ್ತಿಸಿದರೂ ನ್ಯಾಯಮೂರ್ತಿಗಳಿಗೆ ಪದೋನ್ನತಿ ಸಿಗುತ್ತದೆ. ನಿವೃತ್ತಿ ನಂತರ ಯಾವುದೋ ಒಂದು ಹುದ್ದೆ ಕಟ್ಟಿಟ್ಟ ಬುತ್ತಿ ಎಂಬುದೂ ಖಚಿತವಾಗುತ್ತಲಿದೆ. ತಟಸ್ಥವಾಗಿರಬೇಕಾದ ನ್ಯಾಯಾಲಯಗಳು ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಯೋಗಶಾಲೆಗಳಾಗುತ್ತಿವೆ ಎಂಬುದು ವಾಸ್ತವ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



