ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ ಹೇಳಿಕೆಗಳಲ್ಲೇ 'ಪಪ್ಪು' ವರ್ತನೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮೋದಿ ಅವರು ನವಭಾರತದ 'ಪಪ್ಪು' ಆಗಿದ್ದಾರೆ!
ಈ ಹಿಂದೆ ಬಿಜೆಪಿಗರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣಗಳು ಮತ್ತು ನಡೆಗಳನ್ನು ಟೀಕಿಸಿಲು ‘ಪಪ್ಪು’ ಎಂಬ ವ್ಯಂಗ್ಯಪದವನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸುತ್ತಿದ್ದರು. ಆದರೆ ನವಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಪಪ್ಪು ಎಂಬ ಟ್ರೋಲ್ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ. ಅಷ್ಟಕ್ಕೂ ಪ್ರಧಾನಿ ಮೋದಿ ಅವರ ಸಾರ್ವಜನಿಕ ಭಾಷಣಗಳು, ಸಂದರ್ಶನಗಳು ಮತ್ತು ವಿವಿಧ ವಿಷಯಗಳ ಸುಳ್ಳು-ಅತಿಶಯೋಕ್ತಿ ಹೇಳಿಕೆಗಳನ್ನು ನಾವು ಗಮನಿಸಿದಾಗ, ಈ ‘ಪಪ್ಪು’ ಎಂಬ ಹಣೆಪಟ್ಟಿ ಮೋದಿ ಅವರಿಗೇ ಹೆಚ್ಚು ಸರಿಹೊಂದುತ್ತದೆ!
ಬಾಲಾಕೋಟ್ ಕಾರ್ಯಾಚರಣೆಯ ಸಮಯದಲ್ಲಿ ಮೋಡಗಳು ರಾಡಾರ್‌ನಿಂದ ತಪ್ಪಿಸಿಕೊಳ್ಳಲು ನೆರವಾಗುತ್ತವೆ ಎಂಬ ಅವೈಜ್ಞಾನಿಕ ಹೇಳಿಕೆಯಿಂದ ಹಿಡಿದು, 1987-88ರಲ್ಲೇ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಬಳಸಿದ್ದಾಗಿ ಹೇಳಿಕೊಂಡ ಪ್ರಸಂಗಗಳವರೆಗೆ…. ಹೀಗೆ ಪ್ರಧಾನಿ ಮೋದಿ ಅವರು ಆತ್ಮವಿಶ್ವಾಸದಿಂದ ನೀಡಿದ ತಪ್ಪಾದ ಮಾಹಿತಿಗಳೇ ‘ಪಪ್ಪು’ ಎಂಬ ಬಿರುದು ರಾಹುಲ್ ಅವರ ಕೈ ಜಾರಿ ಮೋದಿ ಅವರ ಮುಡಿಗೇರಲು ಕಾರಣ.
ತಕ್ಷಶಿಲೆಯು ಬಿಹಾರದಲ್ಲಿದೆ ಎಂದು ಹೇಳಿದ್ದು ಅಥವಾ ಅಲೆಕ್ಸಾಂಡರ್‌ನ ಸೈನ್ಯವನ್ನು ಬಿಹಾರಿಗಳು ಸೋಲಿಸಿದರು ಎಂಬಂತಹ ಪ್ರಧಾನಿ ಮೋದಿ ಅವರ ತಪ್ಪು ಮಾಹಿತಿಯ ಹೇಳಿಕೆಗಳು ಕೇವಲ ಮಾತಿನ ಎಡವಟ್ಟುಗಳಾಗಿ ಉಳಿಯದೆ, ಪ್ರಧಾನಮಂತ್ರಿ ಸ್ಥಾನದ ಸಾಂವಿಧಾನಿಕ ಘನತೆ ಮತ್ತು ಗಂಭೀರತೆಗೆ ಧಕ್ಕೆ ತರುತ್ತವೆ. ನಿಜವಾದ ‘ಪಪ್ಪು’ ವರ್ತನೆಗಳು ಮೋದಿ ಅವರ ಹೇಳಿಕೆಗಳಲ್ಲೇ ಎದ್ದು ಕಾಣುತ್ತವೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
ರಾಡಾರ್, ಮೋಡಗಳ ಅವೈಜ್ಞಾನಿಕ ಹೇಳಿಕೆ
2019ರ ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲಿ, ಮೋಡ ಕವಿದ ವಾತಾವರಣವಿದ್ದ ಕಾರಣ ಪಾಕಿಸ್ತಾನದ ರಾಡಾರ್‌ಗಳಿಂದ ಯುದ್ಧ ವಿಮಾನಗಳು ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ತಾವು ಸಲಹೆ ನೀಡಿದ್ದಾಗಿ ಪ್ರಧಾನಿ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ರೇಡಿಯೋ ತರಂಗಗಳ ಆಧಾರದಲ್ಲಿ ಕಾರ್ಯನಿರ್ವಹಿಸುವ ರಾಡಾರ್ ವ್ಯವಸ್ಥೆಗೆ ಮೋಡಗಳು ತಡೆಯಾಗುವುದಿಲ್ಲ ಎಂಬುದು ವಾಸ್ತವ. ಇದನ್ನು ರಕ್ಷಣಾ ಮತ್ತು ವಿಜ್ಞಾನ ವಲಯಗಳು ಎತ್ತಿ ತೋರಿಸಿದವು. ಸೂಕ್ಷ್ಮ ರಕ್ಷಣಾ ಕಾರ್ಯಾಚರಣೆಯ ಬಗ್ಗೆಯೇ ಪ್ರಧಾನಿ ಇಂತಹ ತಾಂತ್ರಿಕ ತಪ್ಪು ಮಾಹಿತಿಯನ್ನು ನೀಡುವಾಗ ದೇಶದ ಸ್ಥಿತಿ ಎತ್ತ?
1987-88ರ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಕಥೆ
1987-88ರ ಸಮಯದಲ್ಲೇ ತಾವು ಡಿಜಿಟಲ್ ಕ್ಯಾಮೆರಾ ಬಳಸಿ ಫೋಟೋ ತೆಗೆದು, ಇಮೇಲ್ ಮೂಲಕ ದೆಹಲಿಗೆ ಕಳುಹಿಸಿದ್ದಾಗಿ ಮೋದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಯಿತು. ವಾಸ್ತವದಲ್ಲಿ ದೇಶದಲ್ಲಿ ಸಾರ್ವಜನಿಕ ಇಂಟರ್ನೆಟ್ ಸೇವೆ 1995ರಲ್ಲಿ ಆರಂಭವಾಗಿದ್ದು, ವಾಣಿಜ್ಯ ಡಿಜಿಟಲ್ ಕ್ಯಾಮೆರಾಗಳು 1990ರ ದಶಕದ ಆರಂಭದಲ್ಲಿ ಮಾರುಕಟ್ಟೆಗೆ ಬಂದಿದ್ದವು.
ಚರಂಡಿ ಅನಿಲದ (ಗಟರ್ ಗ್ಯಾಸ್) ಸರಳೀಕೃತ ವಿವರಣೆ!
ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ಚರಂಡಿಯಿಂದ ಬರುವ ಅನಿಲವನ್ನು ಪೈಪ್ ಮೂಲಕ ಸಂಗ್ರಹಿಸಿ ಚಹಾ ಅಂಗಡಿಯವನೊಬ್ಬ ಚಹಾ ತಯಾರಿಸುತ್ತಿದ್ದ ಎಂಬ ಉದಾಹರಣೆಯನ್ನು ಪ್ರಧಾನಿ ನೀಡಿದ್ದರು. ಜೈವಿಕ ಇಂಧನದ ಸಂಕೀರ್ಣ ತಂತ್ರಜ್ಞಾನವನ್ನು ಅತ್ಯಂತ ಸರಳೀಕರಿಸಿ, ವ್ಯಂಗ್ಯಕ್ಕೆ ಆಸ್ಪದ ನೀಡುವ ರೀತಿಯಲ್ಲಿ ಮಂಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಕಾರಣವಾಯಿತು.
ಪ್ರಧಾನಿ ಮೋದಿಯವರ ಐತಿಹಾಸಿಕ ಪ್ರಮಾದಗಳು
ತಕ್ಷಶಿಲೆಯು ಬಿಹಾರದಲ್ಲಿದೆ ಎಂದು ಹೇಳಿದ್ದು, ಅಲೆಕ್ಸಾಂಡರ್‌ನ ಸೈನ್ಯವನ್ನು ಬಿಹಾರಿಗಳು ಸೋಲಿಸಿದರು ಎಂದು ಉಲ್ಲೇಖಿಸಿದ್ದು, ಕಬೀರ್, ಗುರುನಾನಕ್ ಮತ್ತು ಗೋರಖ್‌ನಾಥ್ ಅವರು ಒಂದೇ ಕಾಲದಲ್ಲಿ ಒಟ್ಟಿಗೆ ಕುಳಿತು ಚರ್ಚಿಸುತ್ತಿದ್ದರು ಎಂದಿದ್ದು ಪ್ರಧಾನಿ ಮೋದಿಯವರ ಐತಿಹಾಸಿಕ ಪ್ರಮಾದಗಳು. ತಕ್ಷಶಿಲೆಯು ಪ್ರಾಚೀನ ಗಾಂಧಾರ ಪ್ರದೇಶದಲ್ಲಿದ್ದು ಇಂದಿನ ಪಾಕಿಸ್ತಾನದಲ್ಲಿದೆ, ಹಾಗೆಯೇ ಅಲೆಕ್ಸಾಂಡರ್‌ನ ಸೈನ್ಯವು ಬಿಹಾರದವರೆಗೆ ಅಥವಾ ಗಂಗಾನದಿಯ ತೀರದವರೆಗೆ ಮುನ್ನಡೆದಿರಲಿಲ್ಲ ಎಂಬುದು ಐತಿಹಾಸಿಕ ಸತ್ಯ. ಇನ್ನು ಕಬೀರ್, ಗುರುನಾನಕ್ ಮತ್ತು ಗೋರಖ್‌ನಾಥ್ ಮೂವರೂ ಬೇರೆ ಬೇರೆ ಕಾಲ ಘಟ್ಟದವರು. ಗೋರಖ್‌ನಾಥ್ 11ನೇ – 12ನೇ ಶತಮಾನ, ಸಂತ ಕಬೀರ್ 15ನೇ ಶತಮಾನ (ಕ್ರಿ.ಶ. 1440–1518), ಗುರುನಾನಕ್ ದೇವ್ 15ನೇ – 16ನೇ ಶತಮಾನದಲ್ಲಿ ( ಕ್ರಿ.ಶ. 1469–1539) ಜೀವಿಸಿದ್ದವರು. ಇಂತಹ ತಪ್ಪುಗಳು ಸಾರ್ವಜನಿಕ ಭಾಷಣಗಳಲ್ಲಿ ಎಚ್ಚರಿಕೆಯ ಕೊರತೆಯನ್ನು ತೋರಿಸುತ್ತವೆ. ತಾವು ಏನು ಹೇಳಿದರೂ ಜನರು ನಂಬುತ್ತಾರೆ ಎಂಬ ಪೂರ್ವಗ್ರಹವೂ ಇರಬಹುದು!
ನೋಟು ಅಮಾನ್ಯೀಕರಣ, ಆರ್ಥಿಕ ಪರಿಣಾಮಗಳು
2016ರಲ್ಲಿ ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆಯನ್ನು ತಡೆಗಟ್ಟುತ್ತೇವೆ ಎಂದು ಹೇಳಿಕೊಂಡು ಪ್ರಧಾನಿ ಮೋದಿ ಅವರು ಜಾರಿಗೆ ತಂದ ನೋಟು ಅಮಾನ್ಯೀಕರಣದ ನಿರ್ಧಾರವು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಪ್ರಧಾನಿ ಮಾಡಿದ ಈ ಘೋಷಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು ಸಾಮಾನ್ಯ ಜನರು. ದೇಶದಲ್ಲಿ ಈವರೆಗೆ ಪ್ರಧಾನಿಗಳು ಕೈಗೊಂಡ ಅತಿ ದೊಡ್ಡ ಆರ್ಥಿಕ ತಪ್ಪು ನಿರ್ಧಾರಗಳಲ್ಲಿ ಇದೂ ಒಂದು. ಅದಕ್ಕೂ ಮುಖ್ಯವಾಗಿ ನೋಟು ಅಮಾನ್ಯೀಕರಣದ ನಂತರ, ಶೇ. 99.3ರಷ್ಟು ನಿಷೇಧಿತ ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿವೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಅಂದರೆ ದೊಡ್ಡ ಮಟ್ಟದ ಘೋಷಣೆಗಳಿಗೂ, ವಾಸ್ತವದಲ್ಲಿ ದೊರೆತ ಫಲಿತಾಂಶಕ್ಕೂ ಅಗಾಧ ವ್ಯತ್ಯಾಸವಿದೆ.
ಮೊಬೈಲ್ ಪರದೆಯ ಮೇಲೆ ಮಣ್ಣಿನ ಪರೀಕ್ಷೆ!
2015ರ ಫೆಬ್ರವರಿ 19ರಂದು ರಾಜಸ್ಥಾನದ ಸೂರತ್‌ಗಢದಲ್ಲಿ ‘ಮಣ್ಣಿನ ಆರೋಗ್ಯ ಕಾರ್ಡ್’ ಯೋಜನೆಯನ್ನು ಉದ್ಘಾಟಿಸಿ ಮಾತನಾಡುವಾಗ “ಮೊಬೈಲ್ ಪರದೆಯ ಮೇಲೆ ಮಣ್ಣನ್ನು ಇಡುವ ಮೂಲಕ ಮಣ್ಣಿನ ಪರೀಕ್ಷೆ (Soil testing) ಮಾಡಬಹುದು” ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. “ಮುಂದಿನ ದಿನಗಳಲ್ಲಿ ರೈತರು ತಮ್ಮ ಜಮೀನಿನ ಮಣ್ಣನ್ನು ಪ್ರಯೋಗಾಲಯಗಳಿಗೆ ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ; ಬದಲಾಗಿ ತಮ್ಮ ಮೊಬೈಲ್ ಫೋನ್ ಪರದೆಯ ಮೇಲೆ ಸ್ವಲ್ಪ ಮಣ್ಣನ್ನು ಇಟ್ಟರೆ ಸಾಕು, ಆ ಮಣ್ಣಿನ ಗುಣಮಟ್ಟ ಮತ್ತು ಅದಕ್ಕೆ ಯಾವ ಗೊಬ್ಬರ ಬೇಕು ಎಂಬ ಮಾಹಿತಿಯು ಮೊಬೈಲ್‌ನಲ್ಲಿಯೇ ಲಭ್ಯವಾಗುವಂತಹ ತಂತ್ರಜ್ಞಾನ ಬರಲಿದೆ ಎಂದಿದ್ದರು. ಆದರೆ ವಾಸ್ತವದಲ್ಲಿ ಪ್ರಸ್ತುತ ಇರುವ ಯಾವುದೇ ಸ್ಮಾರ್ಟ್‌ಫೋನ್ ಪರದೆಯು ಕೇವಲ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿರುತ್ತದೆ. ಕೇವಲ ಮೊಬೈಲ್ ಪರದೆಯ ಮೇಲೆ ಮಣ್ಣನ್ನು ಇಡುವುದರಿಂದ ಮಣ್ಣಿನ ಪರೀಕ್ಷೆ ಸಾಧ್ಯವಿಲ್ಲ ಎಂಬುದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಅತ್ಯುತ್ಯಮ ವಾಗ್ಮಿ ಎಂದು ತಮ್ಮನ್ನು ತಾವು ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಇಲ್ಲದಿದ್ದರೆ ತುಟಿ ಬಿಚ್ಚಲೂ ತಡವರಿಸುವವರು ಎಂಬುದನ್ನು ಹಲವು ವಿಡಿಯೋಗಳು ಸಾಬೀತುಪಡಿಸಿದೆ. ಟಿಪಿ ಇಲ್ಲದೆ, ಯಾವುದೇ ಪೂರ್ವಸಿದ್ಧತೆಯಿಲ್ಲದೆ ಪ್ರಧಾನಿ ಮೋದಿ ನೀಡುವ ಹೇಳಿಕೆಗಳು ನಮ್ಮ ಹೊಟ್ಟೆ ಹುಣ್ಣಾಗುವಷ್ಟು ನಗಿಸುವಂತದ್ದು.
ಏನೇ ಆಗಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಭಾಷಣಗಳು ಮತ್ತು ಹೇಳಿಕೆಗಳಲ್ಲಿ ಕಂಡುಬರುವ ತಪ್ಪು ಮಾಹಿತಿಗಳು ಹಾಗೂ ಅತಿಶಯೋಕ್ತಿಯ ಮಾತುಗಳು, ಅವರ ಸ್ಥಾನದ ಗಂಭೀರತೆ ಮತ್ತು ವಿಶ್ವಾಸಾರ್ಹತೆಗೆ ಕುತ್ತು ನೀಡುವುದು ಮಾತ್ರವಲ್ಲದೆ, ದೇಶದ ಘನತೆಗೂ ಚ್ಯುತಿ ತರುವಂತದ್ದು ಎಂಬುದು ಸತ್ಯ. ಜಾಗತಿಕ ವೇದಿಕೆಗಳಲ್ಲಿ ಮತ್ತು ರಾಷ್ಟ್ರೀಯ ಸಾರ್ವಜನಿಕ ಸಭೆಗಳಲ್ಲಿ ದೇಶದ ಪ್ರಧಾನಮಂತ್ರಿಯೊಬ್ಬರು ಮಾತನಾಡುವಾಗ, ವಿಜ್ಞಾನ, ಇತಿಹಾಸ ಮತ್ತು ವಾಸ್ತವ ಸಂಗತಿಗಳ ಬಗ್ಗೆ ನಿಖರತೆ ಇರಬೇಕು ಎಂಬ ನಿರೀಕ್ಷೆ ಸಹಜವಾಗಿಯೇ ಇರುತ್ತದೆ; ಆ ನಿರೀಕ್ಷೆ ಹುಸಿಯಾದಾಗ ಅದು ರಾಷ್ಟ್ರದ ಬೌದ್ಧಿಕ ಮತ್ತು ಸಾಂಸ್ಕೃತಿಕ ಘನತೆಯ ಮೇಲೂ ನೆರಳು ಬೀರುತ್ತದೆ. ಅಷ್ಟಕ್ಕೂ ನಾಯಕತ್ವದ ಘನತೆ ಮತ್ತು ದೇಶದ ಪ್ರತಿಷ್ಠೆಯು ಕೇವಲ ಅಬ್ಬರದ ಭಾಷಣಗಳು ಅಥವಾ ಅತಿಶಯೋಕ್ತಿಯ ಹೇಳಿಕೆಗಳಿಂದಲ್ಲ, ಬದಲಾಗಿ ಸತ್ಯಾಸತ್ಯತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಮಾತುಗಳಿಂದ ಮಾತ್ರ ಸುಭದ್ರವಾಗಬಲ್ಲದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.


