‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು

Date:

ಕೃತಿ: ‘The Problem of the Rupee: Its Origin and Its Solution’ (ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ)
ಮೊದಲ ಪ್ರಕಟಣೆ: 1923, P. S. King & Son, Ltd., London
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1989, ಅಕ್ಟೋಬರ್ 10
ಇಂಗ್ಲಿಷ್ ಸಂಪುಟ- 6
ಕನ್ನಡ ಸಂಪುಟ- 5
Gyan Books Editon: 2020


ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ‘The Problem of the Rupee: Its Origin and Its Solution’ (ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ) ಪುಸ್ತಕವು ಭಾರತೀಯ ಅರ್ಥವ್ಯವಸ್ಥೆಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ ಕೃತಿ. ಇದು ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತಮ್ಮ ಡಿ.ಎಸ್ಸಿ ಪದವಿಗಾಗಿ ಸಲ್ಲಿಸಿದ ಪ್ರಬಂಧವಾಗಿತ್ತು. ಈ ಪುಸ್ತಕವು 1923ರಲ್ಲಿ ಮೊದಲು ಪ್ರಕಟವಾಯಿತು. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ಕರೆನ್ಸಿ (ಹಣಕಾಸು) ಎದುರಿಸುತ್ತಿದ್ದ ಬಿಕ್ಕಟ್ಟನ್ನು ಆಳವಾಗಿ ವಿಶ್ಲೇಷಿಸಿದ್ದ ಅಂಬೇಡ್ಕರ್ ಅವರು, ಹಣದ ಮೌಲ್ಯವು ಕೇವಲ ವಿದೇಶಿ ವಿನಿಮಯಕ್ಕೆ ಸೀಮಿತವಾಗದೆ, ದೇಶದ ಒಳಗೆ ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಕಾಪಾಡುವಂತಿರಬೇಕು ಎಂದು ಪ್ರತಿಪಾದಿಸಿದರು. ನಗದು ನಾಣ್ಯ ಅಥವಾ ನೋಟುಗಳ ಮೌಲ್ಯವನ್ನು ನಿರ್ಧಾರ ಮಾಡುವ ಅಧಿಕಾರ ಚುನಾಯಿತ ಸರಕಾರಕ್ಕೆ ಇರದೆ, ಸ್ವಾಯತ್ತ ಸಂಸ್ಥೆಯೊಂದಕ್ಕೆ ಇರಬೇಕು, ಮೌಲ್ಯ ನಿರ್ಧಾರ ವೈಜ್ಞಾನಿಕ ನೀತಿ ನಿಯಮಗಳ ಮೇಲೆ ಆಧಾರಿತವಾಗಿ ಇರಬೇಕು, ರಾಜಕೀಯ ಕಾರಣಗಳಿಂದ ಪ್ರೇರಿತ ಆಗಿರಬಾರದು ಎನ್ನುವ ವಾದವನ್ನು ಮಂಡಿಸಿದರು. ಇದೇ ಸಿದ್ಧಾಂತದ ಆಧಾರದ ಮೇಲೆ ಮುಂದೆ ‘ಭಾರತೀಯ ರಿಸರ್ವ್ ಬ್ಯಾಂಕ್’ (ಆರ್‌ಬಿಐ) ಸ್ಥಾಪನೆ ಆಯಿತು. ಹೀಗಾಗಿ ಭಾರತದ ಆರ್ಥಿಕತೆಗೆ ಭದ್ರಬುನಾದಿ ಹಾಕಿಕೊಟ್ಟವರಲ್ಲಿ ಅಂಬೇಡ್ಕರ್ ಪ್ರಮುಖರಾಗಿ ನಿಲ್ಲುತ್ತಾರೆ.

- Advertisement -

ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ `ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ (The Problem of the Rupee: Its Origin and Its Solution ) ಕೃತಿಯು ಭಾರತೀಯ ಆರ್ಥಿಕ ಇತಿಹಾಸ ಮತ್ತು ಹಣಕಾಸು ನೀತಿ ಕ್ಷೇತ್ರದ ಒಂದು ಪ್ರಮುಖ ಪುಸ್ತಕ. ಆದರೆ ಇದು ಕೇವಲ ಅರ್ಥಶಾಸ್ತ್ರದ ಕುರಿತಾದ ಪಠ್ಯವಲ್ಲ, ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತ ಎದುರಿಸಿದ ಸವಾಲುಗಳ ಆಳವಾದ ಅಧ್ಯಯನವೂ ಹೌದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಡಾ. ಅಂಬೇಡ್ಕರ್ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಈ ಪುಸ್ತಕ ಅವರ ಆಳವಾದ ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಭಾರತದ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೃತಿಯಲ್ಲಿ, ಡಾ. ಅಂಬೇಡ್ಕರ್ ಭಾರತೀಯ ರೂಪಾಯಿಯ ಐತಿಹಾಸಿಕ ವಿಕಾಸ, ಅದರ ಏರಿಳಿತದ ಮೌಲ್ಯ ಮತ್ತು ವಸಾಹತುಶಾಹಿ ಯುಗದಲ್ಲಿ ಅದರ ಪಥವನ್ನು ರೂಪಿಸಿದ ವಿವಿಧ ಆರ್ಥಿಕ ನೀತಿಗಳನ್ನು ಪರಿಶೀಲಿಸುತ್ತಾರೆ.

ಬ್ರಿಟಿಷರು ಆಗಿನ ಭಾರತದ ಹಣಕಾಸು ವ್ಯವಸ್ಥೆಯ ದುರುಪಯೋಗ ಹೇಗೆ ಮಾಡಿಕೊಂಡರು ಎನ್ನುವುದನ್ನು ಮತ್ತು ತಮ್ಮ ಅನುಕೂಲಕ್ಕಾಗಿ ಚಿನ್ನದ ವಿನಿಮಯ ಮಾನದಂಡವನ್ನು ಕೃತಕವಾಗಿ ರೂಪಿಸಿಕೊಂಡಿದ್ದನ್ನು ಟೀಕಿಸುತ್ತಾರೆ.

Probles of india Rupee
‘ರೂಪಾಯಿ ಸಮಸ್ಯೆ’ ಕೃತಿ

ಬ್ರಿಟಿಷರ ಈ ನೀತಿಗಳು ಭಾರತೀಯ ಜನರ ಕಲ್ಯಾಣಕ್ಕಿಂತ ಹೆಚ್ಚಾಗಿ ತಮ್ಮ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳನ್ನು ಪೊರೆಯಲು ವಿನ್ಯಾಸಗೊಳಿಸಲಾಗಿವೆ ಎಂದು ವಾದಿಸುತ್ತಾರೆ. ತಮ್ಮ ತಲಸ್ಪರ್ಶಿ ಸಂಶೋಧನೆ ಮತ್ತು ಕಠಿಣ ವಿಶ್ಲೇಷಣೆಯ ಮೂಲಕ ಡಾ. ಅಂಬೇಡ್ಕರ್ ಅವರು ಈ ಬ್ರಿಟಿಷ್ ನೀತಿಗಳು ಅವಿಭಜಿತ ಭಾರತದ ಬಡತನವನ್ನು ಹೇಗೆ ಹೆಚ್ಚು ಮಾಡಿದವು, ಆರ್ಥಿಕತೆಯನ್ನು ಹೇಗೆ ಅಸ್ಥಿರಗೊಳಿಸಿದವು ಮತ್ತು ವ್ಯವಸ್ಥಿತ ಅಸಮಾನತೆಗಳನ್ನು ಹೇಗೆ ಸೃಷ್ಟಿಸಿದವು ಮತ್ತು ಮುಂದುವರೆಸಿದವು ಎಂಬುದನ್ನು ಎತ್ತಿ ತೋರಿಸುತ್ತಾರೆ.

ಈ ಪುಸ್ತಕದ ವಿಶೇಷ ಆಕರ್ಷಣೆ ಅದರ ಅಂತರಶಿಸ್ತೀಯ ವಿಧಾನ. ಇದರಲ್ಲಿ ಡಾ. ಅಂಬೇಡ್ಕರ್ ಕೇವಲ ಆರ್ಥಿಕ ಸಿದ್ಧಾಂತದ ಮೇಲೆ ಕೇಂದ್ರೀಕರಿಸುವುದಿಲ್ಲ; ಅವರು ಅಂದಿನ ಭಾರತದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳ ಸಂದರ್ಭದಲ್ಲಿ ರೂಪಾಯಿಯ ಸಮಸ್ಯೆಯನ್ನು ನೋಡುತ್ತಾರೆ. ಆರ್ಥಿಕತೆ, ಕರೆನ್ಸಿ, ವ್ಯಾಪಾರ ಮತ್ತು ವಸಾಹತುಶಾಹಿ ಶೋಷಣೆಯ ನಡುವಿನ ಸಂಬಂಧದ ಕುರಿತು ಅಮೂಲ್ಯ ಒಳನೋಟ ನೀಡುತ್ತಾರೆ. ಅವು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಸಮಕಾಲೀನ ಆರ್ಥಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಾರ್ವಕಾಲಿಕ ಪಾಠಗಳನ್ನು ನೀಡುತ್ತವೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಅರ್ಥಶಾಸ್ತ್ರದ ಯುವ ವಿದ್ಯಾರ್ಥಿಗಳಾದ ನಮಗೆ ಈ ಪಠ್ಯ ವಿತ್ತೀಯ ನೀತಿಯ ಬಗ್ಗೆ ನಮ್ಮ ತಿಳಿವಳಿಕೆಯನ್ನು ಆಳಗೊಳಿಸುವುದಲ್ಲದೆ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಮಾಜಿಕ ನ್ಯಾಯಗಳ ಕೂಡುವಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅರ್ಥಶಾಸ್ತ್ರ, ಕೇವಲ ಸಂಖ್ಯೆಗಳು ಮತ್ತು ಸಿದ್ಧಾಂತಗಳ ಬಗ್ಗೆ ಮಾತ್ರ ಅಲ್ಲ, ಅದು ನಮ್ಮ ಜನ, ಅವರ ಹೋರಾಟಗಳು ಮತ್ತು ಅವರ ಜೀವನವನ್ನು ರೂಪಿಸುವ ವ್ಯವಸ್ಥೆ ಎಂದು ಈ ಕೃತಿ ನಮಗೆ ನೆನಪಿಸುತ್ತದೆ. ನಿಸ್ಸಂದೇಹವಾಗಿ ಭಾರತದ ಭೂತಕಾಲ ಮತ್ತು ಅದರ ಪ್ರಸ್ತುತ ಆರ್ಥಿಕ ವಾಸ್ತವಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ಇದು ವಿಶಾಲಗೊಳಿಸುತ್ತದೆ, ನಮ್ಮ ಪೂರ್ವಗ್ರಹಗಳನ್ನು ತೊಡೆದು ಹಾಕಿ ಹೊಸ ದಿಕ್ಕಿನತ್ತ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

ನಮ್ಮ ಪೂರ್ವಗ್ರಹಗಳು ಕೇವಲ ಪುಸ್ತಕಗಳ ಬಗ್ಗೆ, ವಿವಿಧ ಜ್ಞಾನ ಕ್ಷೇತ್ರಗಳ ಬಗ್ಗೆ, ಸರಕಾರ, ಪಕ್ಷ, ಆಡಳಿತ ವಿಧಾನಗಳ ಬಗ್ಗೆ ಅಷ್ಟೇ ಅಲ್ಲ, ವ್ಯಕ್ತಿಗಳ ಬಗ್ಗೆ ಕೂಡ ಇರಬಹುದು. ಇದರ ಬಗ್ಗೆ ಯೋಚಿಸುವಾಗ, ನನಗೆ ಒಂದು ಘಟನೆ ನೆನಪಾಗುತ್ತದೆ.

ಕೆಲವು ವರ್ಷಗಳ ಹಿಂದೆ ನನ್ನ ಅಣ್ಣನ ಮಗನೊಬ್ಬ ದೆಹಲಿ ಅರ್ಥಶಾಸ್ತ್ರ ಶಾಲೆ ಹಾಗೂ ಮದರಾಸು ಅರ್ಥಶಾಸ್ತ್ರ ಶಾಲೆಗಳಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದ. ಮುಂಬಯಿಯ ಉಪನಗರದಲ್ಲಿ ಹುಟ್ಟಿ ಬೆಳೆದ ಅವನಿಗೆ ಪರ ಊರಿನ ಪರಿಚಯ ಅಷ್ಟೊಂದು ಇರಲಿಲ್ಲ. ಇದರಿಂದಾಗಿ ದೆಹಲಿಗೆ ಹೋದ ಹೊಸತರಲ್ಲಿ ಸಾಕಷ್ಟು ಸಾಂಸ್ಕೃತಿಕ ಆಘಾತಗಳನ್ನು ಅನುಭವಿಸಿದ. ಅವನ್ನೆಲ್ಲ ಆತ ರಂಜನೀಯ ಕತೆಗಳನ್ನಾಗಿಸಿ ನಮಗೆಲ್ಲ ಹೇಳುತ್ತಿದ್ದ.

ಅದರಲ್ಲಿ ಒಂದು ಹೀಗೆ ಇದೆ – ಅವನ ತರಗತಿ ಇಡೀ ದೇಶದ ಅತಿ ಉತ್ತಮ ಕಾಲೇಜುಗಳ ಬುದ್ಧಿವಂತ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ತುಂಬಿತ್ತು. ಅವರಲ್ಲಿ ಪ್ರತಿಯೊಬ್ಬರಿಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಗೊತ್ತಿತ್ತು. ಅವರು ಸಂವಿಧಾನ ಶಿಲ್ಪಿ ಎನ್ನುವುದು ಗೊತ್ತಿತ್ತು. ಆದರೆ ಅವರಿಗೆ ಇದ್ದ ಇತರ ಕ್ಷೇತ್ರಗಳಲ್ಲಿನ ಅಗಾಧ ಜ್ಞಾನದ ಬಗ್ಗೆ ಗೊತ್ತಿರಲಿಲ್ಲ.

ಇಂತಹ ವಿದ್ಯಾರ್ಥಿಗಳನ್ನು ಹೊಂದಿದ ಕ್ಲಾಸಿನ ಮೊದಲನೇ ದಿವಸ ಒಂದು ರೋಚಕ ಸಂಗತಿ ಘಟಿಸಿತು. ಅವರು ತಮ್ಮ ಪಠ್ಯ ಪುಸ್ತಕ ತೆಗೆದು ನೋಡಿದ ತಕ್ಷಣ, ಅವರಿಗೆ ಕಂಡಿದ್ದು ಮೊದಲನೇ ಪಾಠವೇ – ‘ದಿ ಪ್ರಾಬ್ಲಂ ಆಫ್ ದಿ ರುಪೀ : ಇಟ್ಸ್ ಒರಜಿನ್ಸ್ ಅಂಡ್ ಸೊಲ್ಯೂಷನ್’ – (ರೂಪಾಯಿಯ ಸಮಸ್ಯೆ: ಅದರ ಮೂಲಗಳು ಹಾಗೂ ಪರಿಹಾರಗಳು). ಇದರ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್. ಇದನ್ನು ನೋಡಿದ ಆ ಹುಡುಗ- ಹುಡುಗಿಯರಿಗೆಲ್ಲ ದಂಗು ಬಡಿಯಿತು.

Ambedkar in london school of economics
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್‌ನ ಪ್ರಾಧ್ಯಾಪಕರು ಮತ್ತು ಸ್ನೇಹಿತರೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ (1916-17)

“ನಾವೆಲ್ಲ ಇಲ್ಲಿಯವರೆಗೆ ಇವರನ್ನು ಕೇವಲ ಒಬ್ಬ ಸಮಾಜ ಶಾಸ್ತ್ರಜ್ಞರು, ಸಂವಿಧಾನ ಕರಡು ರಚನಾ ಸಮಿತಿ ಮುಖ್ಯಸ್ಥರು, ದಲಿತರು ಹಾಗೂ ಹಿಂದುಳಿದವರಿಗೆ ಅನುಕೂಲ ಮಾಡಿಕೊಡುವ ನೀತಿ- ನಿಯಮಗಳನ್ನು ರೂಪಿಸಿದವರು, ಮೀಸಲಾತಿಯಂತಹ ಬಹು ವಿವಾದಿತ ನೀತಿ ರೂಪಿಸಿದವರು, ಇತ್ಯಾದಿ ಕೆಲಸ ಮಾಡಿಕೊಂಡು ಇದ್ದವರು ಅಂತ ತಿಳಿದುಕೊಂಡಿದ್ದೆವು. ಈಗ ನೋಡಿದರೆ ಇವರು ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರೀಯ ಪ್ರಬಂಧ ಬರೆದವರು ಅಂತ ನಮ್ಮ ಪ್ರೊಫೆಸರ್‌ಗಳು ಹೇಳುತ್ತಿದ್ದಾರೆ, ಏನಿದು? ಅಂತ ಎಲ್ಲ ಅನ್ನಿಸತೊಡಗಿ, ಅವರು ಹೌಹಾರಿ ಹೋದರು.” ಈ ಕತೆಯನ್ನು ಅವನು ನಮಗೆ ರಸವತ್ತಾಗಿ ಹೇಳಿದ.

ಆದರೆ ಇದು ಕೇವಲ ದೆಹಲಿಯ ಮೇಲ್ಮಟ್ಟದ ಉನ್ನತ ಶಿಕ್ಷಣ ಕಾಲೇಜಿನ ಪರಿಸ್ಥಿತಿ ಮಾತ್ರ ಅಲ್ಲ. ಇದು ಇಡೀ ದೇಶದ ವಾಸ್ತವ ಸ್ಥಿತಿ ಅಂತ ನನಗೆ ಅನ್ನಿಸುತ್ತದೆ. ನಾವು ಅನೇಕ ಸಲ ದೊಡ್ಡ ಮನುಷ್ಯರನ್ನ ನಮ್ಮೊಂದಿಗೆ ಸಮೀಕರಿಸಿಕೊಂಡು ನೋಡುತ್ತೇವೆ. ಅವರ ಬುದ್ಧಿಮತ್ತೆ, ಸ್ವಭಾವ, ಕಾರ್ಯಕ್ಷಮತೆ ಎಲ್ಲವೂ ನಮ್ಮಷ್ಟೇ ಇರುತ್ತದೆ, ಅದಕ್ಕಿಂತ ಹೆಚ್ಚು ಇರಲಿಕ್ಕೆ ಸಾಧ್ಯ ಇಲ್ಲ ಎನ್ನುವ ಪೂರ್ವಗ್ರಹ ಬೆಳೆಸಿಕೊಂಡು ಬಿಟ್ಟಿರುತ್ತೇವೆ.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಎಲ್ಲರ ಬಗ್ಗೆ ಇರುವ ನಮ್ಮ ಪೂರ್ವಗ್ರಹ ನಮ್ಮನ್ನು ಹೊಸದನ್ನು ಕಲಿಯದಂತೆ, ನಮ್ಮ ತಪ್ಪು ನಂಬಿಕೆಗಳನ್ನು ಪರಿಶೀಲಿಸದಂತೆ, ವಿಮರ್ಶೆ, ಅವಲೋಕನ ಮಾಡದಂತೆ, ಬದಲಾಯಿಸದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ನಾವು ನಮ್ಮ ಅಳವಿಗೆ ತಕ್ಕಂತೆ, ನಮ್ಮ ಅರಿವಿಗೆ ಮೀರದಂತೆ, ವಿಚಾರ ಮಾಡಿ, ಅದೇ ವಿಚಾರ ಹಂದರದಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿರುತ್ತೇವೆ. ಕೆಲವರನ್ನು ಮಹಾನ್ ನಾಯಕ ಅಂತಲೋ, ಸೂಪರ್ ಹೀರೋ ಅಂತಲೋ, ಇನ್ನು ಕೆಲವರನ್ನು ದಡ್ಡ- ದುಷ್ಟ, ವಿಲನ್‌ಗಳು ಅಂತಲೋ ತಿಳಿದುಕೊಂಡು ಒದ್ದಾಡುತ್ತೇವೆ. ಕೆಲವರು ಬುದ್ಧಿವಂತರಾಗಲಿಕ್ಕೆ ಸಾಧ್ಯ ಇಲ್ಲ ಅಂತ ಹಾಗೂ ಇನ್ನು ಕೆಲವರು ದಡ್ಡರಾಗಲಿಕ್ಕೆ ಸಾಧ್ಯ ಇಲ್ಲ ಅಂತ ತಿಳಿದಿರುತ್ತೇವೆ. ಈ ರೋಗಕ್ಕೆ ಹೊರಗಿನಿಂದ ಉಪಾಯ ಇಲ್ಲ. ಆತ್ಮ ನಿರೀಕ್ಷಣೆಯೇ ಔಷಧ.

ಕೌನ್ ಬನೇಗಾ ಕರೋಡ್ ಪತಿ ಎನ್ನುವ ರಿಯಾಲಿಟಿ ಶೋನಲ್ಲಿ 15 ಪ್ರಶ್ನೆಗಳಿಗೆ ಸರಿ ಉತ್ತರ ಹೇಳಿದ ಝಾನ್ಸಿ ಮೂಲದ ಹಿಮಾನಿ ಬುಂದೇಲಾ ಒಂದು ಕೋಟಿ ರೂಪಾಯಿ ಬಹುಮಾನ ಗೆದ್ದರು. ಆದರೆ ‘1923ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಡಾಕ್ಟರೇಟ್‌ಗಾಗಿ ಸಲ್ಲಿಸಿದ ಪ್ರಬಂಧದ ಶೀರ್ಷಿಕೆ ಏನು?’ ಎನ್ನುವ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ, ಬಹುಮಾನದ ಮೊತ್ತವಾದ 7 ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ಅವರು ಕಳೆದುಕೊಂಡರು.

ನನ್ನ ಮಟ್ಟಿಗೆ, ಡಾ. ಅಂಬೇಡ್ಕರ್ ಅವರ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುವವರಿಗೆ ಕಡ್ಡಾಯ ಓದು ಎಂದರೆ ‘ರೂಪಾಯಿಯ ಸಮಸ್ಯೆ’ ಎನ್ನುವ ಈ ಪುಸ್ತಕ. ಇದು ಬಹು ಪ್ರಮುಖವಾದದ್ದು, ಆದರೆ ಅಷ್ಟೊಂದು ಜನಪ್ರಿಯವಾಗಿಲ್ಲ. ಭಾರತ ಮತ್ತು ಇತರ ದೇಶಗಳ ನಗದು ನೀತಿಯನ್ನು ವಿಶ್ಲೇಷಿಸುವ ಪ್ರಬಂಧ 1923ರಲ್ಲಿ ಅವರ ಸಂಶೋಧನಾ ಗ್ರಂಥವಾಗಿ ಮುದ್ರಿತವಾಯಿತು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗಳಲ್ಲಿ ಅವರು ಸಂಶೋಧನೆ ನಡೆಸಿ ಪ್ರೌಢ ಪ್ರಬಂಧ ಪಡೆದದ್ದು ಅರ್ಥಶಾಸ್ತ್ರದಲ್ಲಿ. ಭಾರತದಂತಹ ಹೊಸದಾಗಿ ಸ್ವಾತಂತ್ರ‍್ಯ ಪಡೆದ ದೇಶದಲ್ಲಿ ಕಾಗದದ ನೋಟು ಚಲಾವಣೆಯಲ್ಲಿ ಇರಬೇಕೋ, ಅಥವಾ ಚಿನ್ನದ ನಾಣ್ಯ ಇರಬೇಕೋ ಅನ್ನುವ ಸಮಸ್ಯೆಯನ್ನು ಈ ಪುಸ್ತಕ ಚರ್ಚಿಸುತ್ತದೆ. ನಗದು ನಾಣ್ಯ ಅಥವಾ ನೋಟುಗಳ ಮೌಲ್ಯವನ್ನು ನಿರ್ಧಾರ ಮಾಡುವ ಅಧಿಕಾರ ಚುನಾಯಿತ ಸರಕಾರಕ್ಕೆ ಇರದೇ, ಸ್ವಾಯತ್ತ ಸಂಸ್ಥೆಯೊಂದಕ್ಕೆ ಇರಬೇಕು, ಮೌಲ್ಯ ನಿರ್ಧಾರ ವೈಜ್ಞಾನಿಕ ನೀತಿ ನಿಯಮಗಳ ಮೇಲೆ ಆಧಾರಿತವಾಗಿ ಇರಬೇಕು, ರಾಜಕೀಯ ಕಾರಣಗಳಿಂದ ಪ್ರೇರಿತ ಆಗಿರಬಾರದು ಎನ್ನುವ ವಾದವನ್ನು ಮಂಡಿಸುತ್ತದೆ. ಇದೇ ಸಿದ್ಧಾಂತದ ಆಧಾರದ ಮೇಲೆ ಮುಂದೆ ‘ಭಾರತೀಯ ರಿಸರ್ವ್ ಬ್ಯಾಂಕ್’ (ಆರ್‌ಬಿಐ) ಸ್ಥಾಪನೆ ಆಯಿತು.

reserve bank of india
‘ಭಾರತೀಯ ರಿಸರ್ವ್ ಬ್ಯಾಂಕ್‌’ನ ಹಳೆಯ ಕಟ್ಟಡ (1949)

ಅರ್ಥಶಾಸ್ತ್ರದ ಪಿತಾಮಹ ಅನ್ನಿಸಿಕೊಳ್ಳುವ ಜನ ಮೆನಯಾರ್ಡ್ ಕೆಯನ್ಸ್ ಅವರು ಬ್ರಿಟಿಷ್ ಭಾರತಕ್ಕೆ ಕಾಗದದ ನೋಟೇ ಸರಿ ಅಂತ ಪ್ರತಿಪಾದಿಸಿದ್ದರು. ಅದನ್ನು ತೀವ್ರವಾಗಿ ಖಂಡಿಸಿದ ಡಾ. ಅಂಬೇಡ್ಕರ್ ಅವರು ಕಾಗದದ ನೋಟಿನ ಬೆಲೆಯನ್ನು ಸರಕಾರ ಕಟ್ಟುತ್ತದೆ. ಆದರೆ ಚಿನ್ನದ ನಾಣ್ಯದ ಬೆಲೆಯನ್ನು ಜನ ಕಟ್ಟುತ್ತಾರೆ. ಆಡಳಿತ ಮಾಡುವವರು ಕಾಗದದ ನೋಟಿನ ಬೆಲೆಯನ್ನು ತಮ್ಮ ಮನಸ್ಸಿಗೆ ಬಂದಂತೆ, ಅವೈಜ್ಞಾನಿಕವಾಗಿ ಹೆಚ್ಚು- ಕಮ್ಮಿ ಮಾಡಬಹುದು. ರಾತ್ರೋರಾತ್ರಿ ಅದರ ಮೌಲ್ಯ ಹೆಚ್ಚು ಮಾಡಬಹುದು, ಅದನ್ನು ಅಪಮಾನ್ಯ ಮಾಡಬಹುದು. ಅದು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಇರಬಹುದು, ಆದ್ದರಿಂದ ಅದು ಕೂಡದು ಅಂತ ವಾದ ಮಂಡಿಸಿದರು. ಅದಕ್ಕೆ ಸಾಕಷ್ಟು ಮನ್ನಣೆ ದೊರೆಯಿತು.

ಅವರ ಈ ಪುಸ್ತಕದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅರ್ಥಶಾಸ್ತ್ರ ತಜ್ಞ ಜನಾರ್ದನ ದಾಸ್ ಅವರು, `ಭಾರತೀಯ ಅರ್ಥಶಾಸ್ತ್ರ ಮೀಮಾಂಸೆಯಲ್ಲಿ ಒಂದು ಮುಖ್ಯವಾದ ತಿರುವು ಮೂಡಿಸಿದ ಪ್ರಬಂಧವಿದು’ ಎಂದು ಬಣ್ಣಿಸುತ್ತಾರೆ. ಇದು ಕೇವಲ ಭಾರತದ ನಗದು ಸಮಸ್ಯೆಯ ಬಗ್ಗೆ ಅಲ್ಲ, ಇಲ್ಲಿನ ಬ್ಯಾಂಕಿಂಗ್ ಮತ್ತು ವ್ಯಾಪಾರಗಳ ಬಗ್ಗೆ ಸಹಿತ ವಿಮರ್ಶಾತ್ಮಕ ಅವಲೋಕನ ನಡೆಸುತ್ತದೆ. ಇದನ್ನು ಪ್ರತಿ ಭಾರತೀಯ ಅರ್ಥಶಾಸ್ತ್ರದ ವಿದ್ಯಾರ್ಥಿ ಓದಬೇಕು ಎಂದು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಅಲ್ಲದೆ, ಇದರಲ್ಲಿ, ಭಾರತದ ರಾಷ್ಟ್ರೀಯ ಕರೆನ್ಸಿ – ರೂಪಾಯಿಗೆ ಸಂಬಂಧಿಸಿದ ತೊಂದರೆಗಳನ್ನು ವಿವರಿಸಲು ಅಂಬೇಡ್ಕರ್ ಪ್ರಯತ್ನಿಸಿದರು. ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಸರಕಾರ ತಮ್ಮ ಕಾರ್ಖಾನೆ ಉತ್ಪನ್ನಗಳ ರಫ್ತನ್ನು ಭಾರತಕ್ಕೆ ಹೆಚ್ಚಿಸಲು, ಈ ವ್ಯಾಪಾರದಿಂದ ಹೆಚ್ಚು ಲಾಭ ಗಳಿಸಲು ಭಾರತೀಯ ರೂಪಾಯಿಯ ಮೌಲ್ಯವನ್ನು ಹೆಚ್ಚು ಮಾಡಿ, ಪೌಂಡಿನ ವಿನಿಮಯ ದರವನ್ನು ಕಮ್ಮಿ ಮಾಡಿದರು. ಅದರ ಹಿಂದೆ ದೊಡ್ಡ ಕುತಂತ್ರ ಇದೆ ಎಂದು ಅವರು ವಾದಿಸಿದರು.

ಅವರು ನಮ್ಮ ದೇಶದ ವ್ಯಾಪಾರ ಮತ್ತು ವ್ಯವಹಾರದ ಗುಣಲಕ್ಷಣಗಳನ್ನು ಪರಿಚಯಿಸುತ್ತಾರೆ. ನಮ್ಮ ದೇಶದಲ್ಲಿ, ಯಾವುದೇ ಉತ್ಪನ್ನದ ವ್ಯಾಪಾರವನ್ನು ಹಣದ ವಿನಿಮಯ ಮತ್ತು ಆ ನಿರ್ದಿಷ್ಟ ಉತ್ಪನ್ನಗಳ ಮೂಲಕ ನಡೆಸಲಾಗುತ್ತಿತ್ತು. ಈ ಹಣದ ವಿನಿಮಯದ ಹಿನ್ನೆಲೆಯಲ್ಲಿ ಒಂದು ವ್ಯಾಪಾರಿ ವರ್ಗ ಸೃಷ್ಟಿಯಾಗಿ, ನಮ್ಮ ಹಣಕಾಸಿನ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದೆ ಎಂದು ಅಭಿಪ್ರಾಯಪಡುತ್ತಾರೆ.

ಆರ್ಥಿಕ ತಜ್ಞ ಡಬ್ಲ್ಯೂ.ಸಿ. ಮಿಚೆಲ್ ಅವರ ಸೂತ್ರ ಉಲ್ಲೇಖಿಸಿ, ಡಾ. ಅಂಬೇಡ್ಕರ್ ಅವರು ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೆ ಹಣ ಹೇಗೆ ಮುಖ್ಯ ಎನ್ನುವುದನ್ನು ತಿಳಿಸುತ್ತಾರೆ. ಹಣದ ಬಳಕೆಯಿಲ್ಲದೆ, ಯಾವ ವಸ್ತು ಅಥವಾ ಸೇವೆಯ ವಿತರಣೆ ಅಸಾಧ್ಯ ಎನ್ನುವುದರಿಂದ ಮೊದಲ ಅಧ್ಯಾಯ ಆರಂಭಿಸುತ್ತಾರೆ. ಅವರು ಮೊಘಲ್ ಸಾಮ್ರಾಜ್ಯದಲ್ಲಿ ಕರೆನ್ಸಿ ಹೇಗೆ ಇತ್ತು ಎಂಬುದನ್ನು ವಿವರಿಸುತ್ತಾರೆ. ಕಂಪನಿ ಸರಕಾರದಲ್ಲಿ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗೇನೂ ಇಲ್ಲ ಎಂದು ಹೇಳುತ್ತಾರೆ. ಅದಕ್ಕೆ ಹೋಲಿಸಿದರೆ ಮೊಘಲರ ಕಾಲದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿತ್ತು. ಆಗ ಭಾರತೀಯ ನಾಣ್ಯಗಳಿಗೆ ಇಡೀ ಜಗತ್ತಿನ ತುಂಬ ಮಾನ್ಯತೆ ಇತ್ತು ಎನ್ನುವುದನ್ನು ತೋರಿಸಿಕೊಡುತ್ತಾರೆ. ಬ್ರಿಟಿಷರ ಆಡಳಿತ ಮತ್ತು ಆರ್ಥಿಕ ಆಕ್ರಮಣದ ಮೊದಲು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ನಿಖರ ಬೆಲೆಯ ಕರೆನ್ಸಿ ಆಗಿದ್ದವು. ಅವಕ್ಕೆ ಸರಕಾರದಿಂದ ನಿಕ್ಕಿ ಮಾಡಲಾದ ಯಾವುದೇ ಸ್ಥಿರ ಅನುಪಾತ ಇರಲಿಲ್ಲ. ಅವು ಸರ್ವಮಾನ್ಯ ವಿನಿಮಯ ಮಾಧ್ಯಮ ಆಗಿದ್ದವು.

ಹಿಂದೂ ಚಕ್ರವರ್ತಿಗಳು ಮತ್ತು ಮುಸ್ಲಿಂ ಸುಲ್ತಾನರ ವ್ಯಾಪಾರ ವೈಶಿಷ್ಟ್ಯ ಗಳಲ್ಲಿ ಕೆಲವು ಹೋಲಿಕೆಗಳು ಇದ್ದವು. ಅವರಿಬ್ಬರೂ ತಮ್ಮ ಸಾಮ್ರಾಜ್ಯದಲ್ಲಿ ಲೋಹದ ನಾಣ್ಯ ಬಳಕೆ ಮಾಡುತ್ತಿದ್ದರು. ಆದರೆ ಮೊಘಲ್ ಸಾಮ್ರಾಜ್ಯದಲ್ಲಿ ಬೆಳ್ಳಿ ನಾಣ್ಯಗಳು ಮುಖ್ಯ ಕರೆನ್ಸಿ ಆಗಿದ್ದರೆ, ಕೆಲವು ದಶಕಗಳ ನಂತರ, ಹಿಂದಿ ಭಾಷಿಕ ಪ್ರದೇಶಗಳಲ್ಲಿ, ಚಿನ್ನದ ನಾಣ್ಯಗಳು ಪ್ರಮುಖವಾಗಿದ್ದವು. ಬೆಳ್ಳಿ ಮೊಹರ್ ಮತ್ತು ಚಿನ್ನದ ರೂಪಾಯಿಗಳ ಗಾತ್ರ, ತೂಕ ಮತ್ತು ಸಂಯೋಜನೆ ಸುಮಾರು ಒಂದೇ ಆಗಿತ್ತು. ಆದರೆ ಮೊಘಲ್ ಆಡಳಿತದ ವೈಫಲ್ಯದಿಂದಾಗಿ ಬೆಳ್ಳಿ ಕರೆನ್ಸಿಯು ಭಾರತೀಯ ಉಪಖಂಡದ ದಕ್ಷಿಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಲಿಲ್ಲ. ಅಂತಹ ಕಡೆಗಳಲ್ಲಿ, ಅವರು ಚಿನ್ನದ ನಾಣ್ಯಗಳನ್ನು ಮುಂದುವರೆಸಿದರು. ತಮ್ಮ ಟಂಕಸಾಲೆಗಳ ದೋಷಯುಕ್ತ ತಂತ್ರಜ್ಞಾನದ ಸಮಸ್ಯೆಗಳನ್ನು ರಿಪೇರಿ ಮಾಡಲು ಮೊಘಲರು ಆರಂಭಿಸಿದರು. ತಮ್ಮ ನಾಣ್ಯಗಳನ್ನು ಒಂದೇ ಘಟಕ ಅಥವಾ ವಿಭಾಗದಿಂದ ಟಂಕಿಸುವ ಮತ್ತು ಅವುಗಳ ಮೇಲೆ ನಿಗಾ ಇಡುವ ಸಾಮಾನ್ಯ ವ್ಯವಸ್ಥೆಯನ್ನು ಪ್ರಾರಂಭಿಸಿದ್ದರು ಎಂದು ಡಾ. ಅಂಬೇಡ್ಕರ್ ತಿಳಿಸುತ್ತಾರೆ. ಆದರೆ ಈ ವ್ಯವಸ್ಥೆಯಿಂದ ಬಡವರು ಮತ್ತು ಅಶಿಕ್ಷಿತರಿಗೆ ತೊಂದರೆ ಇತ್ತು ಎನ್ನುವುದನ್ನೂ ತಿಳಿ ಹೇಳುತ್ತಾರೆ.

image 177
ಮೊಘಲರ ಕಾಲದ ನಾಣ್ಯಗಳು (ಸಾಂದರ್ಭಿಕ ಚಿತ್ರ)

ಬ್ರಿಟಿಷ್ ಆಳ್ವಿಕೆಯಲ್ಲಿ ನಮ್ಮ ದೇಶವನ್ನು ಮೂರು ಪ್ರೆಸಿಡೆನ್ಸಿಗಳಾಗಿ ವಿಂಗಡಿಸಲಾಗಿತ್ತು. ಆದ್ದರಿಂದ ಬ್ರಿಟಿಷ್ ಸರ್ಕಾರವು ಪಗೋಡ, ರೂಪಾಯಿ ಮತ್ತು ಮೊಹರ್ ನಡುವಿನ ಅಧಿಕೃತ ವಿನಿಮಯ ಅನುಪಾತವನ್ನು ಸ್ಥಾಪಿಸಿತು. ಆ ಮೂಲಕ ಮೊಘಲ್ ಕಾಲದಲ್ಲಿ ಜನಪ್ರಿಯವಾಗಿದ್ದ ಒಂದು ಸಮಾನಾಂತರ ಮಾನದಂಡವನ್ನು ಎರಡು ಮಾನದಂಡವಾಗಿ ಬದಲಾಯಿಸುವ ಗುರಿ ಹೊಂದಿತು. ಆದರೆ ಎಲ್ಲೋ ಅವರ ಪ್ರಯತ್ನ ಭಾಗಶಃ ವ್ಯರ್ಥವಾಯಿತು. ಬಂಗಾಳವು ಈ ಪ್ರಯತ್ನವನ್ನು ಆರಂಭಿಸಿತು. ಆದರೆ ಭಾರತದ ಅನೇಕ ಪ್ರಾಂತೀಯ ಸರ್ಕಾರಗಳು ಇವನ್ನು ಸಂಪೂರ್ಣವಾಗಿ ಕೈಗೊಳ್ಳಲು ಆಗಲಿಲ್ಲ.

ಈ ಭಾಗದಲ್ಲಿ ಚಿನ್ನದ ಕರೆನ್ಸಿಯ ಕಣ್ಮರೆಯ ನಂತರ ಬೆಳ್ಳಿ ಮಾನದಂಡಗಳನ್ನು ಹೇಗೆ ಸ್ಥಾಪಿಸಲಾಯಿತು ಮತ್ತು ಆನಂತರ ಅದನ್ನು ಕಾಗದದ ಕರೆನ್ಸಿಗೆ ಹೇಗೆ ಬದಲಾವಣೆ ಮಾಡಲಾಯಿತು, ಎಂದು ಅವರು ವಿವರಿಸುತ್ತಾರೆ.

ಬ್ರಿಟಿಷ್ ಸರಕಾರ 1870ರಲ್ಲಿ ಕಾಯಿದೆ ನಂ. XXIII ಜಾರಿ ಮಾಡಿತು. ಇದರಿಂದ ಬಹಳ ವ್ಯತ್ಯಾಸ ಏನೂ ಆಗಲಿಲ್ಲ. ಆದರೆ ಅದು ಈ ನೆಲದ ವಿತ್ತೀಯ ಕಾನೂನುಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಲು ಸಹಾಯ ಮಾಡಿತು. ನಾಣ್ಯ ಉತ್ಪಾದನೆಯ ಆವಿಷ್ಕಾರದ ದಿನಗಳಿಂದಲೂ ಸಾಮಾನ್ಯ ಜನರು ಆ ನಾಣ್ಯದ ಮುಖ ಬೆಲೆಯೇ ಅದರ ಬೆಲೆ ಎಂದು ನಂಬಿದ್ದರು. ಆದರೆ ಕೆಲವು ವ್ಯಾಪಾರಸ್ಥರು ಬಂಗಾರ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಳಸಿ ಜನರನ್ನು ಮೋಸ ಮಾಡುತ್ತಿದ್ದರು. ಟಂಕಸಾಲೆಯಿಂದ ಹೊರಬಂದ ನಾಣ್ಯಗಳು ಬೆಲೆಬಾಳುವ ಲೋಹದವಾದ್ದರಿಂದ, ಚಿನ್ನ ಹಾಗೂ ಬೆಳ್ಳಿಯ ಮಾರುಕಟ್ಟೆ ಬೆಲೆ ಹೆಚ್ಚು- ಕಮ್ಮಿ ಆದಂತೆಲ್ಲ, ಆ ನಾಣ್ಯದ ಬೆಲೆ ಹೆಚ್ಚು- ಕಮ್ಮಿ ಆಗುತ್ತಿತ್ತು. ಕೆಲವು ವರ್ತಕರು ಈ ನಾಣ್ಯಗಳನ್ನು ಶೇಖರಿಸಿ ಇಟ್ಟುಕೊಂಡು, ಅಭಾವ ಸೃಷ್ಟಿಸಿ, ಬೆಲೆ ಹೆಚ್ಚಾಗುವಂತೆ ಮಾಡುವುದು, ಹೆಚ್ಚಾದಾಗ, ಮಾರುಕಟ್ಟೆಗೆ ಬಿಡುವುದು, ಇತ್ಯಾದಿ ಕೆಲಸ ಮಾಡುತ್ತಿದ್ದರು. ಈ ಹೊಸ ಕಾನೂನಿನಿಂದ ಇಂತಹ ನಾಣ್ಯಗಳ ಗರಿಷ್ಠ ಹಾಗೂ ಕನಿಷ್ಠ ಬೆಲೆ ನಿರ್ಧಾರವಾಯಿತು.

ಜನರ ವಹಿವಾಟುಗಳಿಗೆ ಅನಿವಾರ್ಯವಾದ ಕರೆನ್ಸಿಯ ಪ್ರಮಾಣ ಇಲ್ಲಿ ಪ್ರಮುಖ ಪ್ರಶ್ನೆ. ಸರಕಾರದ ಅಧಿಕಾರ ಮತ್ತು ಶಕ್ತಿ ಅತಿ ಹೆಚ್ಚು. ಅದು ಟಂಕಸಾಲೆಯನ್ನು ಮುಚ್ಚುವುದರಿಂದ ಹಿಡಿದು ನಾಣ್ಯಗಳ ಮುಖಬೆಲೆ ನಿರ್ಧರಿಸುವುದರವರೆಗೆ ಕ್ರಮಗಳನ್ನು ಕೈಕೊಳ್ಳಬಹುದು. ಆದರೆ ಅರ್ಥವ್ಯವಸ್ಥೆಯಲ್ಲಿನ ಹಣದ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದು ಎನ್ನುವ ಅಭಿಪ್ರಾಯವನ್ನು ಅವರು ಮಂಡಿಸುತ್ತಾರೆ.

ವಿಶ್ವದ ಅನೇಕ ದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚು ಕಮ್ಮಿ ಆದಂತೆ, ಅಲ್ಲಿನ ನಾಣ್ಯಗಳ ಬೆಲೆ ಹೆಚ್ಚು ಕಮ್ಮಿ ಆಗುತ್ತಿತ್ತು. ಕೆಲವೊಮ್ಮೆ, ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳ ಬೆಲೆ ಸರಿ ಸುಮಾರು ಒಂದೇ ಆಗಿರುತ್ತಿತ್ತು. ಇದಕ್ಕೆ ನೈಸರ್ಗಿಕ ಅಥವಾ ಆರ್ಥಿಕ ಕಾರಣಗಳು ಇದ್ದವು. ಆದರೆ ಬ್ರಿಟಿಷರು ಆಳುತ್ತಿದ್ದ ಭಾರತದ ನಾಣ್ಯಗಳ ಬೆಲೆ ಆಳುವವರ ಮನಸ್ಸಿಗೆ ಬಂದಂತೆ ಬದಲಾಗುತ್ತಿತ್ತು. ಪೌಂಡ್ ಸ್ಟೆರ್ಲಿಂಗ್‌ನ ಎದುರು ರೂಪಾಯಿಯ ಬೆಲೆ ಹೆಚ್ಚಿದ್ದರೆ, ಬ್ರಿಟಿಷ್ ಬಟ್ಟೆ ಹಾಗೂ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದವರಿಗೆ ಲಾಭ ಆಗುತ್ತಿತ್ತು. ಭಾರತದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವವರಿಗೆ ರೂಪಾಯಿಯ ಬೆಲೆ ಕಮ್ಮಿ ಇದ್ದರೆ ನಷ್ಟ ಆಗುತ್ತಿರಲಿಲ್ಲ. ಹೀಗಾಗಿ, ಬ್ರಿಟಿಷ್ ಸರಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಾಯಿಯ ಬೆಲೆಯನ್ನು ಹೆಚ್ಚು- ಕಮ್ಮಿ ಮಾಡಿಕೊಳ್ಳುತ್ತಿತ್ತು. ಈ ರೀತಿಯ ಬದಲಾವಣೆ ಅಸ್ವಾಭಾವಿಕ ಮತ್ತು ಲಾಭಕೋರತನದ್ದು ಎಂದು ಡಾ. ಅಂಬೇಡ್ಕರ್ ಟೀಕಿಸುತ್ತಾರೆ.

ಇದನ್ನೂ ಓದಿರಿ: ‘ಶೂದ್ರರು ಯಾರಾಗಿದ್ದರು?: ‘…ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ’

“ರೂಪಾಯಿ-ಸ್ಟರ್ಲಿಂಗ್ ವಿನಿಮಯವನ್ನು ನಿಯಂತ್ರಿಸುವ ಚಿನ್ನ ಮತ್ತು ಬೆಳ್ಳಿಯ ಸಾಪೇಕ್ಷ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುವ ಕುರುಡು ಶಕ್ತಿಗಳ ಕರುಣೆಯಲ್ಲಿತ್ತು” ಎಂದು ಅವರು ಹೇಳುತ್ತಾರೆ.

ಅವಿಭಜಿತ ಭಾರತಕ್ಕೆ ಸಂಬಂಧಪಟ್ಟ ಹತ್ತು ವರ್ಷಗಳ (1872-1882) ವಾರ್ಷಿಕ ಬಜೆಟ್‌ಗಳನ್ನು ಡಾ. ಅಂಬೇಡ್ಕರ್ ವಿಶ್ಲೇಷಣೆ ಮಾಡುತ್ತಾರೆ. ಬ್ರಿಟಿಷರು ತಮ್ಮ ಲಾಭಕ್ಕಾಗಿ ಭಾರತೀಯರ ಮೇಲೆ ತೆರಿಗೆ ಹೆಚ್ಚಿಸುತ್ತಾ ಹೋಗುವುದನ್ನು ಅವರು ಗಮನಿಸಿದರು. ಇವೆಲ್ಲ ಅವೈಜ್ಞಾನಿಕವಾದದ್ದು ಎಂದು ಹೇಳಿದರು.

ಮಾಳವಾ ಪ್ರದೇಶದಲ್ಲಿ ಓಪಿಯಂ ಬೆಳೆ ಬೆಳೆಸಿ, ಅದನ್ನು ರಫ್ತು ಮಾಡುತ್ತಿದ್ದ ಕೆಲ ಕಂಪನಿಗಳು ಇದ್ದವು. ಅವು ಕಮ್ಮಿ ಕೂಲಿಗೆ ಸಿಕ್ಕುವ ಭಾರತೀಯ ಕೂಲಿ ಆಳುಗಳನ್ನು ಬಳಸಿ, ಲಾಭ ಮಾಡಿಕೊಳ್ಳುತ್ತಿದ್ದವು. ಅವುಗಳಿಗೆ ಅನುಕೂಲ ಆಗುವಂತೆ ಕಂಪನಿ ಸರಕಾರ ತೆರಿಗೆ ಹೆಚ್ಚು- ಕಮ್ಮಿ ಮಾಡುತ್ತಿತ್ತು. ಇದರಿಂದ ಭಾರತೀಯ ಆರ್ಥಿಕತೆಗೆ ಬೀಳುತ್ತಿದ್ದ ಹೊರೆಗಳನ್ನು ಅವರು ಎತ್ತಿ ತೋರಿಸಿದರು. ಈ ಹೊರೆಗಳು ಎಂದಿಗೂ ನಿಲ್ಲಲಿಲ್ಲ, ಬದಲಿಗೆ ಅದು ದಿನದಿಂದ ದಿನಕ್ಕೆ ಹೆಚ್ಚಿತು ಎಂದು ದತ್ತಾಂಶಗಳಿಂದ ಎತ್ತಿ ತೋರಿಸಿದರು. ಇಲ್ಲಿ ಒಂದು ಸುಸ್ಥಿರ ಆರ್ಥಿಕ ವ್ಯವಸ್ಥೆಯನ್ನು ತಯಾರು ಮಾಡಬೇಕು ಎಂದರೆ ಇಲ್ಲಿನ ಕರೆನ್ಸಿಗೆ ಒಂದು ಸ್ಥಿರವಾದ ಮೌಲ್ಯವನ್ನು ಮೊದಲು ನಿಗದಿಪಡಿಸಬೇಕು. ಅದು ಹೊಯ್ದಾಟ ಮಾಡದಂತೆ ನೋಡಿಕೊಳ್ಳಬೇಕು.

ರಾಜಕೀಯ ಕಾರಣಗಳಿಗಾಗಿ, ಸರಕಾರಗಳು ಕಾಲಕಾಲಕ್ಕೆ, ತಮಗೆ ತಿಳಿದಂತೆ, ನಗದಿನ ಬೆಲೆ ಹಾಗೂ ಮೊತ್ತಗಳನ್ನು ನಿರ್ಧಾರ ಮಾಡಬಾರದು. ಈ ರೀತಿಯ ಬದಲಾವಣೆಗಳೆಲ್ಲ ಕೇವಲ ಅರ್ಥ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರಣಗಳಿಗೆ ಮಾತ್ರ ಆಗಬೇಕು ಎಂದು ಅವರು ಗಟ್ಟಿಯಾಗಿ ಪ್ರತಿಪಾದಿಸಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತದ ರೂಪಾಯಿಯ ಮೌಲ್ಯ ಅನೇಕ ಬಾರಿ ಹೆಚ್ಚು ಕಮ್ಮಿ ಆಗಿದೆ. ಇದರಲ್ಲಿ ಅನೇಕ ಬಾರಿ ಅಂತಾರಾಷ್ಟ್ರೀಯ ಏರಿಳಿತಗಳಿಂದಾಗಿ ಆಗಿದೆ. ಆದರೆ ಕೆಲವು ಸಲ, ಆಳುವವರ ಆಣ್ತೆಗೆ ತಕ್ಕಂತೆ ಆಗಿದೆ. ಇವುಗಳ ಹಿಂದೆ ರಾಜಕೀಯ ಕಾರಣಗಳು ಇದ್ದಿದ್ದು ಸ್ಪಷ್ಟ. ಆಳುವವರಿಗೆ ಪ್ರಿಯವಾದ ಕೆಲವೇ ಕೆಲವು ಧನವಂತರಿಗೆ, ಕೆಲ ಕ್ಷೇತ್ರದ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಕುತಂತ್ರದಿಂದಾಗಿ ಅಥವಾ ರಫ್ತು- ಆಮದುಕೋರರಿಗೆ ಲಾಭ ಮಾಡುವ, ನಷ್ಟ ತಪ್ಪಿಸುವ ಕಾರಣಗಳಿಂದಾಗಿ ಆಗಿವೆ. ಈ ನಿರ್ಧಾರಗಳು ಕಾಂಗ್ರೆಸ್- ಜನತಾ ಹಾಗೂ ಬಿಜೆಪಿ ಸರಕಾರಗಳ ಕಾಲದಲ್ಲಿ ತೆಗೆದುಕೊಂಡವು. ಪ್ರತಿ ಬಾರಿ ರೂಪಾಯಿ ಅಪಮೌಲ್ಯ ಆದಾಗ ಕೋಟಿಗಟ್ಟಲೆ ಬಡವರು ಕಂಗಾಲು ಆಗಿ, ಕಣ್ಣೀರು ಹಾಕಿದ್ದು ಇದೆ. ಇವನ್ನು ಎಲ್ಲ ನೋಡಿದಾಗ, ಡಾ. ಅಂಬೇಡ್ಕರ್ ಅವರ ಮುನ್ನೆಚ್ಚರಿಕೆ ನಮಗೆ ನೆನಪಾಗುತ್ತದೆ.

ತಮ್ಮ ಕಾಲದ ಅರ್ಥಶಾಸ್ತ್ರಜ್ಞರು ಹಾಗೂ ಬ್ರಿಟಿಷ್ ಅಧಿಕಾರಿಗಳ ವರದಿಗಳನ್ನು ಓದಿಕೊಂಡು ಡಾ. ಅಂಬೇಡ್ಕರ್ ಅವರು ಹಣಕಾಸು ಸಚಿವ ಸರ್ ಆರ್. ಟೆಂಪುಲ್, ಟಂಕಸಾಲೆ ಅಧಿಕಾರಿ ಜೆ.ಟಿ. ಸ್ಮಿತ್, ಫೌಲರ್ ಕಮಿಟಿ, ಚೇಂಬರ್ಲೇನ್ ಆಯೋಗ ಇತ್ಯಾದಿಗಳ ಶಿಫಾರಸುಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಮೊದಲಿಗೆ ಚಿನ್ನದಲ್ಲಿ, ನಂತರ ಬೆಳ್ಳಿಯಲ್ಲಿ ಮುದ್ರಿತವಾಗುತ್ತಿದ್ದ ಭಾರತೀಯ ರೂಪಾಯಿ ಕೊನೆಗೆ ಕಾಗದದ ಕರೆನ್ಸಿಗೆ ಇಳಿದು ಬಂದಿದ್ದನ್ನು ದಾಖಲಿಸುತ್ತಾರೆ. ಎ.ಎಂ. ಲಿಂಡಸೆ ಅವರ ವರದಿಯ ಪ್ರಕಾರ ಕಾಗದದ ನೋಟುಗಳ ಚಲಾವಣೆ ಆರಂಭ ಆಯಿತು.

ಲಿಂಡ್ಸೆ ಅವರ ಯೋಜನೆಯ ಪ್ರಕಾರ, ಇಡೀ ಭಾರತೀಯ ಕರೆನ್ಸಿಯನ್ನು ರೂಪಾಯಿ ಕರೆನ್ಸಿಯಾಗಿ ಪರಿವರ್ತಿಸುವುದು ಹೇಗೆ ಎಂಬುದರ ಬಗ್ಗೆ ಅವರು ಒತ್ತಿ ಹೇಳಿದರು. ಸರ್ಕಾರ ಎಲ್ಲ ಸಂದರ್ಭಗಳಲ್ಲಿ ಚಿನ್ನಕ್ಕೆ ಪ್ರತಿಯಾಗಿ ರೂಪಾಯಿಗಳನ್ನು ನೀಡಬೇಕಾಗಿತ್ತು, ಆದರೆ ವಿದೇಶಿ ಹಣ ರವಾನೆಯಲ್ಲಿ ಮಾತ್ರ ರೂಪಾಯಿಗಳಿಗೆ ಚಿನ್ನವನ್ನು ವಿನಿಮಯ ಮಾಡಬೇಕಾಗಿತ್ತು. ಸರಕಾರದ ಡ್ರಾಫ್ಟ್ ಮತ್ತು ಬಾಂಡ್‌ಗಳನ್ನು ಸಾಹಿತ ನಾಗರಿಕರು ಖರೀದಿ ಮಾಡಬಹುದಿತ್ತು. ಸುಮಾರು 1898ರ ನಂತರ ಕ್ರಮೇಣ ಕಾಗದದ ಕರೆನ್ಸಿ ಭಾರತೀಯ ಆರ್ಥಿಕ ಕ್ಷೇತ್ರಕ್ಕೆ ಬಂದಿತು.

ಭಾರತೀಯ ರೂಪಾಯಿಯನ್ನು ಬ್ರಿಟಿಷ್ ಕಂಪನಿಗಳಿಗೆ ಅನುಕೂಲವಾಗುವಂತೆ ಅಪಮೌಲ್ಯ ಮಾಡುತ್ತ ಹೋಗಿದ್ದರಿಂದ 1873ರಿಂದ 1893ರವರೆಗೆ ದೇಶದಲ್ಲಿ ನಗದಿನ ಕೃತಕ ಅಭಾವ- ಹೆಚ್ಚಳ ಉಂಟಾಯಿತು. ಒಂದು ಬಾರಿಯಂತೂ ರೂಪಾಯಿಯ ಅಪಮೌಲ್ಯ ಎಷ್ಟು ಹೆಚ್ಚಾಯಿತು ಎಂದರೆ ಬ್ರಿಟಿಷ್ ಸರಕಾರ ಟಂಕಸಾಲೆಗಳನ್ನು ಮುಚ್ಚಬೇಕಾಯಿತು. ಚಲಾವಣೆಯಲ್ಲಿ ಉಳಿದ ನಾಣ್ಯಗಳ ಬೇಡಿಕೆ ಹಾಗೂ ಪೂರೈಕೆ ಸರಿಹೋದ ಬಳಿಕ ಅವನ್ನು ಮತ್ತೆ ಪ್ರಾರಂಭಿಸಲಾಯಿತು.

ಪುಸ್ತಕದ ಏಳನೇ ಮತ್ತು ಕೊನೆಯ ಅಧ್ಯಾಯಗಳಲ್ಲಿ, ಅಂಬೇಡ್ಕರ್ ಅವರು ಭಾರತದ ಆರ್ಥಿಕತೆಯ ವ್ಯವಸ್ಥೆಯನ್ನು, ಅದರ ಇತಿಹಾಸವನ್ನು ಹಾಗೂ ಭವಿಷ್ಯವನ್ನು ತಿಳಿಹೇಳಲು ಪ್ರಯತ್ನ ಮಾಡುತ್ತಾರೆ. ಇವನ್ನು ನಾವು ಅನುಸರಿಸಿದರೆ, ನಮ್ಮ ಮಾರುಕಟ್ಟೆ, ಉತ್ಪನ್ನಗಳ ಮೌಲ್ಯಗಳನ್ನು ಅರ್ಥೈಸುವುದು ಸುಲಭವಾಗುತ್ತದೆ. ನಿಸ್ಸಂದೇಹವಾಗಿ, ಅಂಬೇಡ್ಕರ್ ಅವರ ಕೃತಿಗಳ ತಿಳಿವಳಿಕೆ ಕೇವಲ ನಮ್ಮ ರಾಷ್ಟ್ರದ ಅರ್ಥ ವ್ಯವಸ್ಥೆ ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ವಹಿವಾಟುಗಳ ಅಭಿವೃದ್ಧಿ ಹಾಗೂ ಪ್ರಗತಿಯನ್ನು ತಿಳಿದುಕೊಳ್ಳಲು ಸಹಾಯ ಮಾಡುವವು. ಅವುಗಳನ್ನು ಸಶಕ್ತವಾಗಿ ಮುನ್ನಡೆಸಲು ಅನುಕೂಲ ಮಾಡಿಕೊಡುತ್ತವೆ.

ಭಾರತದ ಆರ್ಥಿಕತೆಯನ್ನು ರೂಪಿಸುವಲ್ಲಿ ಬಾಬಾಸಾಹೇಬ್ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಕರೆನ್ಸಿಯಲ್ಲಿ ಅವರ ಚಿತ್ರವನ್ನು ಸೇರಿಸಬೇಕೆಂದು ಅಂಬೇಡ್ಕರ್‌ವಾದಿಗಳು ನಿರಂತರವಾಗಿ ಪ್ರತಿಪಾದಿಸುತ್ತಾ ಇದ್ದಾರೆ. ಅದು ಯಾಕೆಂದರೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಪಾಯವನ್ನು ಹಾಕಿದ್ದು ಈ ಪ್ರಬಂಧ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಗೊಂಡಿದ್ದು ಡಾ. ಅಂಬೇಡ್ಕರ್ ಅವರ ಶಿಫಾರಸಿನ ಮೇರೆಗೆ, ಎನ್ನುವುದಕ್ಕಾಗಿ.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

ರೂಪಾಯಿಯ ಸಮಸ್ಯೆ ಎನ್ನುವ ಈ ಪ್ರಬಂಧವನ್ನು ಬ್ರಿಟಿಷ್ ಸರಕಾರದ ಭಾರತದ ಕರೆನ್ಸಿ ಹಾಗೂ ಹಣಕಾಸು ಆಯೋಗದ ಸದಸ್ಯರ ಎದುರು ಡಾ. ಅಂಬೇಡ್ಕರ್ 1926ರಲ್ಲಿ ಮಂಡಿಸುತ್ತಾರೆ. ತನ್ನ ಅಭಿಪ್ರಾಯ ಮತ್ತು ತಮ್ಮ ತೀರ್ಮಾನ, ಫೈಸಲಾತಿಗಳ ಹಿನ್ನೆಲೆ ಏನು ಎನ್ನುವ ಪ್ರಶ್ನೆಯನ್ನು ಅವರು ಎತ್ತಿದಾಗ, ತಾವು ಅಭ್ಯಾಸ ಮಾಡಿದ ವಿವಿಧ ಕೃತಿ ಹಾಗೂ ವರದಿಗಳನ್ನು, ಬಜೆಟ್ ದಾಖಲೆಗಳನ್ನು ಅವರು ಆಯೋಗದ ಸದಸ್ಯರಿಗೆ ಸಲ್ಲಿಸಿದರು. ಅವರ ವಾದ ಮಂಡನೆ ಮುಗಿದಾಗ, ಬ್ರಿಟಿಷ್ ಆಯೋಗದ ಸದಸ್ಯರೆಲ್ಲ ಇವರ ಪ್ರಬಂಧವನ್ನು ತುಂಬ ಮೆಚ್ಚಿಕೊಂಡರು. ಪ್ರತಿ ಸದಸ್ಯರು ಅದರ ಪ್ರತಿಗಳನ್ನು ಪಡೆದುಕೊಂಡರು ಎಂದು ಹೇಳಲಾಗುತ್ತದೆ.

Ambedkar Young Age
ಡಾ.ಬಿ.ಆರ್. ಅಂಬೇಡ್ಕರ್ ಅವರು ಯುವಕರಾಗಿದ್ದಾಗ ಹೀಗಿದ್ದರು..

ಈ ಆಯೋಗದ ಮುಖ್ಯಸ್ಥರಾಗಿದ್ದ ಹಿಲ್ಟನ್ ಯಂಗ್ ಅವರು ಡಾ. ಅಂಬೇಡ್ಕರ್ ಅವರ ವಾದದ ಆಧಾರದ ಮೇಲೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಪಾಯವನ್ನು ಹಾಕಿದರು. ತನ್ನ ವರದಿಯಲ್ಲಿ ಡಾ. ಅಂಬೇಡ್ಕರ್ ಅವರು ಎತ್ತಿದ ವಿವಿಧ ಆರ್ಥಿಕ ಆಯಾಮಗಳ, ವಿವಿಧ ಸಂಸ್ಥೆಗಳ ಅಗತ್ಯತೆ ಹಾಗೂ ಕಾರ್ಯ ಶೈಲಿಗಳನ್ನು ಪ್ರಸ್ತಾಪಿಸಿತು. ಅವರು ಮಂಡಿಸಿದ ಮಾರ್ಗಸೂಚಿಗಳನ್ನು ತೂಗಿ ನೋಡಿ, ವಿವಿಧ ಶಿಫಾರಸುಗಳನ್ನು ಮಾಡಿತು. ಬ್ರಿಟಿಷ್ ಶಾಸಕಾಂಗ ಸಭೆ 1934ರ RBI ಕಾಯ್ದೆಯ ಹೆಸರಿನಲ್ಲಿ ಶಿಫಾರಸುಗಳನ್ನು ಅಂಗೀಕರಿಸಿತು. ಪರಿಣಾಮವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಏಪ್ರಿಲ್ 1, 1935ರಂದು ಸ್ಥಾಪಿಸಲಾಯಿತು.

ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಭಾರತೀಯ ರೂಪಾಯಿಯ ನಿರಂತರ ಅಪಮೌಲ್ಯೀಕರಣ ಪ್ರಮುಖ ಸಮಸ್ಯೆ ಆಗಿತ್ತು. ಬ್ರಿಟಿಷ್ ರಫ್ತುದಾರರಿಗೆ ಅನುಕೂಲವಾಗುವಂತೆ ಮತ್ತು ವಸಾಹತುಶಾಹಿ ಆಡಳಿತದ ವೆಚ್ಚಗಳಿಗೆ ಹಣಕಾಸು ಒದಗಿಸಲು ರೂಪಾಯಿಯ ಮೌಲ್ಯವನ್ನು ಕೃತಕವಾಗಿ ಕಡಿಮೆ ಮಾಡಲಾಯಿತು. ಈ ಅಪಮೌಲ್ಯೀಕರಣವು ಭಾರತೀಯ ಜನರ ಮೇಲೆ ತೀವ್ರ ಆರ್ಥಿಕ ಪರಿಣಾಮಗಳನ್ನು ಬೀರಿತು, ಹಣದುಬ್ಬರ ಮತ್ತು ಜೀವನ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಯಿತು.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾ ಸಾಹೇಬರ ಒಳನೋಟ

ಬ್ರಿಟಿಷರ ಕಾಲದಲ್ಲಿ ಚಿನ್ನದ ವಿನಿಮಯ ಮಾನದಂಡವು ಸ್ಥಿರತೆಯನ್ನು ಹೊಂದಿರಲಿಲ್ಲ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಹಣದುಬ್ಬರದ ಒತ್ತಡಗಳಿಗೆ ಗುರಿಯಾಗುವುದರಿಂದ ಚಿನ್ನದ ವಿನಿಮಯ ಮಾನದಂಡಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. ಸರಕಾರ ಯಾವುದೇ ಆರ್ಥಿಕ ಬದಲಾವಣೆಗಳನ್ನು ಮಾಡುವಾಗ ಸಾರ್ವಜನಿಕರ ಹಿತರಕ್ಷಣೆಯೇ ಮುಖ್ಯ ಮಾನದಂಡವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಹಿಂದಿನ ಶತಮಾನದ ಸರಕಾರಗಳು ಸರಿಯಾಗಿ ನಗದು ನಿರ್ವಹಣೆ ಮಾಡಲು ಸಾಧ್ಯವಾಗದೇ ಹೋಗಿ, ಕಾಗದದ ನೋಟುಗಳನ್ನು ಬಿಟ್ಟು ಚಿನ್ನ ಹಾಗೂ ಬೆಳ್ಳಿಯ ಮಾನದಂಡಗಳ ಕಡೆ ವಾಲುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಯಾವುದೇ ಒಂದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ “ರೂಪಾಯಿಯ ಸಮಸ್ಯೆ-ಅದರ ಮೂಲ ಮತ್ತು ಅದರ ಪರಿಹಾರಗಳು” ಪ್ರಬಂಧ ಬೀರಿದಷ್ಟು ಪ್ರಬಲ ಪರಿಣಾಮವನ್ನು ಬೇರೆ ಯಾವ ಪ್ರಬಂಧವೂ ಬೀರಲಿಲ್ಲ ಎನ್ನುವುದು ತಿಳಿದವರ ಅಭಿಪ್ರಾಯ. ಒಬ್ಬ ಯುವ ವಿದ್ಯಾರ್ಥಿಯ ಪಿಎಚ್‌ಡಿ ಪ್ರಬಂಧ ಒಂದು ದೇಶದ ಆರ್ಥಿಕ ವ್ಯವಸ್ಥೆಯನ್ನು ಕಟ್ಟಿ ಕೊಡುವಂತಹ ಮಹತ್ತರ ಕೆಲಸವನ್ನು ಮಾಡಿರುವ ಉದಾಹರಣೆಗಳೂ ವಿರಳ.

ಈ ಸಂಶೋಧನಾ ಪ್ರಬಂಧದಲ್ಲಿ ಮಾಡಲಾದ ಮಾರ್ಗಸೂಚಿಗಳ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ಅನ್ನು ರಚಿಸಲಾಗಿದೆ ಎಂಬ ಅಂಶ ಡಾ. ಅಂಬೇಡ್ಕರ್ ಅವರ ಅರ್ಥಶಾಸ್ತ್ರಜ್ಞತೆಯ ಕುಶಾಗ್ರಮತಿಯನ್ನು ಸಾಬೀತುಪಡಿಸುತ್ತದೆ.

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...