ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

Date:

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ.

ಬಸವರಾಜ ಹೊರಟ್ಟಿ ಅವರು ಒಂದು ರೀತಿಯಲ್ಲಿ ನನ್ನ ಫೇವರೇಟ್ ರಾಜಕಾರಣಿ. ಅದಕ್ಕೆ ಕಾರಣಗಳು ಹಲವು ಇರಬಹುದು.  ಎಂಬತ್ತನೆ ವಯಸ್ಸಿಗೂ ಕೂಡ ಅವರು ಗಟ್ಟಿ ಮುಟ್ಟಿಯಾಗಿ ಇರುವುದು, ತಮ್ಮ ಹೊಲದಲ್ಲಿ ತಾವೇ  ಟ್ಟ್ರ್ಯಾಕ್ಟರ್ ಓಡಿಸುವುದು, ತನಗೆ ಅನ್ನಿಸಿದ್ದನ್ನು ಥಟ್ ಅಂತ ಹೇಳಿಬಿಡುವುದು, ಸುಮಾರು 46 ವರ್ಷ ಸತತ ಮೇಲ್ಮನೆ ಸದಸ್ಯ ರಾದ ಮೇಲೆ ಸದನ ಕಾನೂನುಗಳನ್ನು ಹೆಚ್ಚಿನ ಮಟ್ಟಿಗೆ ಬಾಯಿ ಪಾಠ ಮಾಡಿದಂತೆ ತಿಳಿದುಕೊಂಡು, ಇತರ ಸದಸ್ಯರು ತಪ್ಪು ಮಾಡಿದಾಗ: `ಎ ತಮ್ಮಾ, ನೀನು ಹುಟ್ಟೋ ಕಿಂತಾ ಮದಲ್ ನಾನು ಇಲ್ಲೇ ಮೆಂಬರ್ ಆಗೇನು. ಸುಮ್ಮ ಕುಂದರ್’ ಅಂತೆಲ್ಲ  ಅಧಿಕಾರಯುತವಾಗಿ ಹೇಳುವುದು, ಇತ್ಯಾದಿ, ಇತ್ಯಾದಿ. 

- Advertisement -

ಆದರೆ, ನನ್ನ ಗೆಳೆಯರು ಇವನ್ನೆಲ್ಲ ಒಪ್ಪುವುದಿಲ್ಲ. “ಇದೆಲ್ಲ ಸುಳ್ಳು, 1980 ರಾಗ ಬೆಂಗಳೂರಿಗೆ ಹೋದ ಹೊರಟ್ಟಿ ಅವರು ಇನ್ನೂ ತನಕ ಧಾರವಾಡ ಭಾಷಾ ಮಾತಾಡ್ ತಾರ. ಬೆಂಗಳೂರು ಆಕ್ಸೆಂಟ್‌ಗೆ ಅವರು ಒಗ್ಗಿಸಿ ಕೊಂಡಿಲ್ಲ. ಅದಕ್ಕ ನಿನಗ ಸೇರತಾರ ಅವರು!’’ ಅಂತ ಅವರು ನನ್ನನ್ನು ಚುಡಾಯಿಸುತ್ತಾರೆ. ಅದೂ ಇರಬಹುದು. ಇಲ್ಲ ಎನ್ನಲು ನಾ ಯಾರು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

‘ಶ್ರೀ 420’ ಚಿತ್ರದಲ್ಲಿ ರಾಜಕಪೂರ ಅವರ ಪಾತ್ರ ರಾಜ್, ಮುಂಬೈಯ ಒಂದು ರದ್ದಿ ಅಂಗಡಿಗೆ ಬರುತ್ತದೆ. ಅಲ್ಲಿ ತನಗೆ ಬಂದ ಪ್ರಾಮಾಣಿಕತೆಯ ಚಿನ್ನದ ಪದಕ ಗಿರವಿ ಇಟ್ಟು 40 ರೂಪಾಯಿ ಪಡೆಯುತ್ತದೆ. “ನೋಡುತ್ತಿರು, ಕಾಕಾ ಇಷ್ಟೇ ದುಡ್ಡಿನಿಂದ ಶುರು ಮಾಡಿ, ಇಡೀ ಮುಂಬೈ ಖರೀದಿ ಮಾಡುತ್ತೇನೆ,’’ ಎಂದು ರಾಜ್ ಹೇಳುತ್ತಾನೆ. ಆಗ ರದ್ದಿ ಅಂಗಡಿ ಯ ಕಾಕಾನ ಪಾತ್ರ ಮಾಡಿದ ರಾಷೀದ್ ಖಾನ್,  “ಎಲ್ಲರೂ ಇದೇ ಉದ್ದೇಶದಿಂದ ಇಲ್ಲಿಗೆ ಬರುತ್ತಾರೆ. ಆದರೆ ಮುಂಬೈಯನ್ನು ಯಾರೂ ಖರೀದಿಸಲಾರರು. ಮುಂಬೈ ಎಲ್ಲರನ್ನೂ ಖರೀದಿಸಿ ಬಿಡುತ್ತದೆ. ತನ್ನ ಕೆಲಸ ಆದ ಮೇಲೆ ಯಾವುದೋ ರದ್ದಿ ಅಂಗಡಿ ಯಲ್ಲಿ ಬಿಸಾಕುತ್ತದೆ,’’ ಎಂದು ಹೇಳುತ್ತಾನೆ. ಆಧುನಿಕ ಕಾಲದ ಮುಂಬೈ ಆಗಿರುವ ಬೆಂಗಳೂರು ಸಹಿತ ಹೀಗೆಯೇ. ಎಲ್ಲರನ್ನೂ ಖರೀದಿಸಿ ಬಿಡುತ್ತದೆ. ಅವರ ನಾಲಗೆಯನ್ನೂ ಕೂಡ.

ಇಂತಿರ್ಪ ಹೊರಟ್ಟಿ ಅವರು ಮೊನ್ನೆ ಸದನದಲ್ಲಿ ಒಂದು ಮಾತು ಹೇಳಿದರು. ಅದು ವೈರಲ್ ಆಯಿತು. ಆಚ್ಛಾ, ಈ ವೈರಲ್ ಅನ್ನುವ ಪದ ಯಾಕೆ ಬಳಸುತ್ತಾರೆ ಅಂತ ಗೊತ್ತಾ? ರೋಗದ ಸೋಂಕು ಹರಡಿದಂತೆ ಇಂತಹ ಮಾತುಗಳೂ ಹರಡುತ್ತವೆ ಎನ್ನುವುದಕ್ಕಾಗಿ ಅದನ್ನು ಬಳಸಲಾಗುತ್ತದೆ.

ಇರಲಿ, ಹೊರಟ್ಟಿ ಸಾಹೇಬರು ಹೇಳಿದ ಮಾತು ಇದು – “ಗ್ಯಾರಂಟಿ ಯೋಜನೆಗಳಿಂದ ಕೂಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ನನ್ನ ಜಮೀನಿನ 36 ಎಕರೆ ಕಬ್ಬು ಕಟಾವು ಮಾಡ್ಲಿಕ್ಕೆ,  ಇನ್ನುಳಿದ ಚೂರು ಪಾರು ಹೊಲದಲ್ಲಿ ಹತ್ತಿ ಬಿಡಿಸಲಿಕ್ಕೆ ಜನ ಇಲ್ಲ. ಎಂಥಾ ಕಾಲ ಬಂತು. ಇವೆಲ್ಲ ಬಂದು ಮಾಡ್ರಿ,’’ ಅಂತ ಹೇಳಿದರು. ಗ್ಯಾಲರಿಯ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಬೇಕು ಅಂತಲೋ ಏನೋ, ಇನ್ನೊಂದು ಡೈಲಾಗು ಹೊಡೆದರು: “ಕೊಡಲೇ ಬೇಕು ಅಂದರೆ ಕಡು ಬಡವರಿಗೆ ಗ್ಯಾರಂಟಿ ಕೊಡಿ. ಶ್ರೀಮಂತರಿಗೆ ಯಾಕೆ? ನನ್ನಂತಹ ವರಿಗೆ ಯಾಕೆ?’’ ಸದನದಲ್ಲಿ ಎಷ್ಟು ಗಡ ಚಿಕ್ಕುವ ಚಪ್ಪಾಳೆ ಸಿಕ್ಕಿತೋ, ಅದಕ್ಕಿಂತ ಜೋರಾಗಿ ಗಡ ಗಡ ಚಿಕ್ಕುವಂತೆ ಆ ದಿನ ಟಿವಿಗಳಲ್ಲಿ, ಮರುದಿನ ಪೇಪರ್‌ಗಳಲ್ಲಿ ಚಪ್ಪಾಳೆ ಕೇಳಿಸಿತು.

ಇಂತಹ ಮಾತುಗಳ ಅರ್ಥ ಏನು? “ಬಡವರು, ಹೊಟ್ಟೆ ಹಸಿದವರು ಮಾತ್ರ ಕೆಲಸ ಮಾಡಬೇಕು, ಹೊಟ್ಟೆ ತುಂಬಿದವರು ಯಾವುದೇ ಕೆಲಸ ಮಾಡಬಾರದು. ಹಸಿವು ಎನ್ನುವುದೇ ಬಡವರ- ಶ್ರಮಿಕರ ಪೆಟ್ರೋಲು, ಜೀವದ್ರವ್ಯ’’, ಅಂತಲೇ? ಕೇವಲ ವಾದ ಮಾಡುವ ಸಲುವಾಗಿ ಇದು ಇರಬಹುದು ಅಂದು ಕೊಳ್ಳೋಣ.

ವಿಶ್ವದ ಐದು ಅತಿ ಶ್ರೀಮಂತರ ಮತ್ತು ಭಾರತದ ಇಬ್ಬರು ಶ್ರೀಮಂತರ ಉದಾಹರಣೆಗಳನ್ನು ತೆಗೆದುಕೊಂಡು ನೋಡೋಣ.

ಅಮೆರಿಕದಲ್ಲಿ ನೆಲೆಸಿರುವ ದಕ್ಷಿಣ ಆಫ್ರಿಕಾ ಸಂಜಾತ ಈಲಾನ್ ಮಸ್ಕ ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರಲ್ಲಿ ಸುಮಾರು 85 ಲಕ್ಷ ಕೋಟಿ ರೂಪಾಯಿ ಸಂಪತ್ತು ಇದೆ. ರಾಜ ಮನೆತನಗಳನ್ನು ಬಿಟ್ಟರೆ, ಅವರು ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ಸಾಹುಕಾರರು. ವಿದ್ಯುತ್ ಕಾರುಗಳು ಮತ್ತು ಸಾಂಪ್ರದಾಯಿಕ ಇಂಧನ ರಾಕೆಟ್ ತಂತ್ರಜ್ಞಾನ, ಎಕ್ಸ್ ಇತ್ಯಾದಿ ಕಂಪನಿಗಳ ಮಾಲೀಕರು.

ಗೂಗಲ್ ಕಂಪನಿಯ ಸಹ ಸ್ಥಾಪಕರಲ್ಲಿ ಒಬ್ಬರಾದ ಲ್ಯಾರಿ ಪೇಜ್ ಅವರು ಎರಡನೇ ಸ್ಥಾನದಲ್ಲಿ ಇದ್ದರೂ, ಅವರಿಗೂ ಮಸ್ಕ ಅವರಿಗೂ ತುಂಬ ವ್ಯತ್ಯಾಸ ಇದೆ. ಆಲ್ಫಬೆಟ್ ಕಂಪನಿ ಮಾಲೀಕರಾದ ಇವರ ಬಳಿ 28 ಲಕ್ಷ ಕೋಟಿ ರೂಪಾಯಿ ಇದೆ. ಇವರಿಗೂ ಮೂರನೇಯ ಸಾಹುಕಾರ ಜೇಫ್ ಬೇಜಾಸ ಅವರಿಗೂ ಅಷ್ಟು ವ್ಯತ್ಯಾಸ ಇಲ್ಲ. ಬೇಜಾಸ ಅವರ ಬಳಿ 26 ಲಕ್ಷ ಕೋಟಿ ಸಂಪತ್ತು ಇದೆ. ಅವರು ನಾವು ಕೂತಲ್ಲಿಯೇ ಖರೀದಿ ಮಾಡಿಸುವ ಕಂಪನಿ ಅಮೆಜಾನ್‌ನ ಮಾಲೀಕರು.

ಭಾರತದ ಅಂಬಾನಿ ಅವರ ಬಳಿ ಎಂಟು ಲಕ್ಷ ಕೋಟಿ ಹಾಗೂ ಅದಾನಿ ಅವರ ಬಳಿ 4 ಲಕ್ಷ ಕೋಟಿ ಇದೆ. ಇದು ಒಮ್ಮೊಮ್ಮೆ ಬದಲಾಗುತ್ತಾ ಇರುತ್ತದೆ. ಮಸ್ಕ್ – ಪೇಜ್ ಅವರನ್ನು ಹೋಲಿಸಿದರೆ ಅದಾನಿ ಅಂಬಾನಿ ಅವರ ಸಂಪತ್ತು ಸಣ್ಣದು ಅನ್ನಿಸಬಹುದು. ಆದರೆ, ದರಿದ್ರ ನಾರಾಯಣರು ತುಂಬಿದ ಈ ದೇಶದ ಪರಿಸ್ಥಿತಿ ನೋಡಿದಾಗ ಅವರು ದೊಡ್ಡವರೇ.

ಭಾರತ ಸರ್ಕಾರದ ಅಂಕಿಅಂಶದಂತೆ ಇಲ್ಲಿನ ಜನರ ತಲಾ ಸರಾಸರಿ ಆದಾಯ ಒಂದು ತಿಂಗಳಿಗೆ 17,340 ರೂಪಾಯಿ. ಇದು ದೇಶದ ಸುಮಾರು 80 ಶೇಕಡಾ ಜನರ ವರಮಾನ. ಇನ್ನು 22 ಶೇಕಡಾ ಜನ, ಬಡತನ ರೇಖೆಯ ಕೆಳಗೆ ಇರುವವರು ಒಂದು ತಿಂಗಳಿಗೆ ಸುಮಾರು 816 ರೂಪಾಯಿ ಗಳಿಸುತ್ತಾರೆ. ಅಥವಾ ಒಂದು ದಿನಕ್ಕೆ ಊಟದಲ್ಲಿ 2100 – 2400 ಕ್ಯಾಲೋರಿ ತಿನ್ನುತ್ತಾರೆ.

ದಿನಕ್ಕೆ 27 ರೂಪಾಯಿ 20 ಪೈಸೆ ಗಳಿಸುವ ಬಡ ಬೋರೇಗೌಡನಿಗೂ ದಿನಕ್ಕೆ 24 ಸಾವಿರದ 285 ಕೋಟಿ, 27 ಲಕ್ಷ ಗಳಿಸುವ ಮಸ್ಕ್ ಸಾಹೇಬರಿಗೂ ಏನು ವ್ಯತ್ಯಾಸ? ಯಾರು ಹೆಚ್ಚು ಕಷ್ಟಪಟ್ಟು ದುಡಿಯುತ್ತಾರೆ?

ಮಸ್ಕ್ ಸಾಹೇಬರು ದಕ್ಷಿಣ ಆಫ್ರಿಕಾದಿಂದ ಕೆನಡಾಕ್ಕೆ 1989ರಲ್ಲಿ ವಲಸೆ ಹೋದ ಮೇಲೆ ಏನೇನು ಮಾಡಿದರು? ಮೊದಲು ಎಕ್ಸ್ ಅನ್ನುವ ಆನ್‌ಲೈನ್ ಪೇಮೆಂಟ್ ಕಂಪನಿ ಮಾಡಿದರು, ನಂತರ ವಿವಿಧ ರೀತಿಯ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡಿದರು. ಈಗ ಅವರು ಅಮೆರಿಕ ಸರ್ಕಾರದ ನೀತಿ ನಿರೂಪಣೆ ಮಾಡುವಷ್ಟು ಪ್ರಭಾವಿಗಳು. ನಿಮಗೆ ಗೊತ್ತಿರಲಿ, ಅಮೆರಿಕದ ಬಡತನ ರೇಖೆ ಒಂದು ದಿನಕ್ಕೆ 4200 ರೂಪಾಯಿ. ಮಸ್ಕ್ ಸಾಹೇಬರು ಯಾವುದೋ ಒಂದು ದಿನ ತಮ್ಮ ಬಳಿ ದಿನಕ್ಕೆ 4200 ರೂಪಾಯಿ ಗಳಿಸುವ ಶಕ್ತಿ ಬಂದ ಮೇಲೆ ದುಡಿಯುವುದನ್ನು ನಿಲ್ಲಿಸಿದರೇ?

ಹಾಗೆಯೇ, ಐದು ನೂರು ರೂಪಾಯಿ ಬಂಡವಾಳ ಹಾಕಿ ಕಂಪನಿ ಶುರು ಮಾಡಿದ ಗೌತಮ್ ಅದಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಾಹುಕಾರರಾದ ಮೇಲೆ ದುಡಿಯುವುದನ್ನು ನಿಲ್ಲಿಸಿದರೇ? ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಕಂಪನಿ ಸಾಮ್ರಾಜ್ಯವನ್ನು ಮುಕೇಶ್ ಅಂಬಾನಿ ಅವರು ಇನ್ನೂ ದೊಡ್ಡದಾಗಿ ಬೆಳೆಸಿದರೇ ಅಥವಾ ಒಂದು ಹಂತಕ್ಕೆ ಬಂದ ಮೇಲೆ ನಿಲ್ಲಿಸಿಬಿಟ್ಟರೇ? ಇಲ್ಲವಲ್ಲ! ತಮ್ಮ ತಂದೆ ಇವತ್ತು ಬದುಕಿದ್ದರೆ ಅಚ್ಚರಿಪಡುವಂತೆ ಸಂಸ್ಥೆಗಳನ್ನು ಬೆಳೆಸಿದ್ದಾರೆ, ಸಂಪತ್ತು ಸೃಷ್ಟಿ ಮಾಡಿದ್ದಾರೆ. ಅದಾನಿ ಅವರಂತೂ ಇಡೀ ವಿಶ್ವವೇ ಅಚ್ಚರಿಪಡುವಂತೆ ಸಂಪತ್ತು ಸೃಷ್ಟಿ ಮಾಡಿದ್ದಾರೆ.

ಫಾರ್ಚೂನ್ 500 ಅಥವಾ 1000 ಪಟ್ಟಿಯಲ್ಲಿ ಇರುವವರು, ಅಥವಾ ಇಡೀ ಜಗತ್ತಿನ 3428 ಜನ ಲಕ್ಷ ಕೋಟ್ಯಾಧಿಪತಿಗಳು ಹೇಗೆ ಜೀವನ ಮಾಡುತ್ತಾರೆ? ಸೋಮಾರಿಗಳಂತೆ ಬಿದ್ದುಕೊಂಡಿರುತ್ತಾರೋ ಅಥವಾ ಎ.ಸಿ. ಕೊಠಡಿಯಲ್ಲಿ ಬೆವರು ಸುರಿಸದೇ ದುಡಿಯುತ್ತಿರುತ್ತಾರೋ? ಅವರಿಗೆ ಹೋಲಿಸಿದರೆ ಭಾರತದ ಬಿಕನಾಸಿ ಜಿರಲೆಗಳು ಹೇಗೆ ಹೊಟ್ಟೆ ಹೊರೆಯುತ್ತಾರೆ? ಈ ವಾದದ ಉಪಸಂಹಾರ ನಾನು ಮಾಡುವುದಿಲ್ಲ. ಪ್ರಾಜ್ಞರಾದ ನಿಮಗೆ ಬಿಟ್ಟಿದ್ದು.

ಇನ್ನು ಹಿರಿಯರಾದ ಹೊರಟ್ಟಿಯವರು ಹೇಗೆ ಮಾತಾಡಬಹುದಿತ್ತು? ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಗ್ರಾಮೀಣ ಅಭಿವೃದ್ಧಿ ತಜ್ಞರೂ, ನನ್ನ ಗುರುಗಳೂ ಆದ ಅಬ್ದುಲ್ ಅಜೀಜ್ ಅವರು ಒಂದು ಮಾತು ಹೇಳುತ್ತಿದ್ದರು: “ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನುವುದು ಅಪೂರ್ಣ ವಾಕ್ಯ. ನಾವು ಕೊಡುವ ಕೂಲಿಗೆ ಜನ ಸಿಗೋದಿಲ್ಲ ಅನ್ನುವುದು ಪೂರ್ಣ ವಾಕ್ಯ”.

ತಮ್ಮ ಜೀವನದಲ್ಲಿ ಒಂದು ಬಾರಿ ಶಿಕ್ಷಣ ಮಂತ್ರಿಯಾಗಿ, ಒಂದು ಬಾರಿ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೊರಟ್ಟಿ ಅವರು ಪ್ರೊ. ಅಜೀಜ್ ಅವರನ್ನು ಭೇಟಿ ಮಾಡಿರಲಿಕ್ಕಿಲ್ಲ. ಅವರು ಬರೆದ ಪುಸ್ತಕ ಓದಿರುವ ಸಾಧ್ಯತೆಯೂ ಕಮ್ಮಿ. ಆದರೆ ಅವರ ಮಾತಿನ ಹಿಂದೆ ಇರುವುದು ಸಾಮಾನ್ಯ ಜ್ಞಾನ. ಅರ್ಥಶಾಸ್ತ್ರದ ಪಿತಾಮಹ ಆಡಮ್ ಸ್ಮಿತ್ ಅಥವಾ ಈ ಬಾರಿ ನೊಬೆಲ್ ಪಡೆದ ಮೊಕಿರ, ಅಘಿಯಾನ್ – ಹೊವಿಟ್ ಅವರ ಅರ್ಥಶಾಸ್ತ್ರದ ಸಿದ್ಧಾಂತವೂ ಅಲ್ಲ.

ಇನ್ನೂ ಸ್ವಲ್ಪ ಮುಂದೆ ಹೋದರೆ, ಹೊರಟ್ಟಿ ಮತ್ತು ಅವರಂತೆ ಸಾರ್ವಜನಿಕ ಜೀವನದಲ್ಲಿ ದಶಕಗಟ್ಟಲೆ ಅನುಭವ ಇರುವ ಹಿರಿಯರು ಮಾತಿನ ಮನೆಯಲ್ಲಿ ಏನು ಮಾತಾಡಬಹುದು? ಕೇವಲ ಸಮಸ್ಯೆಗಳನ್ನು ಹೇಳಬೇಕೇ ಅಥವಾ ಅವುಗಳ ಪರಿಹಾರಗಳನ್ನು ಸರ್ಕಾರ ಹಾಗೂ ಜನರ ಮುಂದೆ ಇಡಬೇಕೇ?

“ತನ್ನ ಹೊಲದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಒಳ್ಳೆಯ ಕೂಲಿ ಕೊಡುವ ಸ್ಥಿತಿ ಬರುವಂತೆ ರೈತರನ್ನು ಸದೃಢರನ್ನಾಗಿ ಮಾಡಿ. ಕಾಫಿ ತೋಟದ ಮಾಲೀಕರು ತನ್ನ ಕೆಲಸಗಾರರನ್ನು ನೋಡಿಕೊಳ್ಳುವಂತೆ ತೊಗರಿ ಬೆಳೆಯುವ ರೈತರೂ ಆಗಲಿ” ಎನ್ನುವ ಒಂದು ಮಾತನ್ನು ನಮ್ಮಿಂದಲೇ ಆರಿಸಿ ಹೋದ 299 ಶಾಸಕರು ಹಾಗೂ ಘನ ಸರ್ಕಾರದ 35 ಮಾನ್ಯ ಸಚಿವರಲ್ಲಿ ಯಾರಾದರೂ ಒಬ್ಬರು ಹೇಳಿದರೇ? ಅವತ್ತಂತೂ ಹೇಳಲಿಲ್ಲ. ಹಿಂದೆ ಯಾವಾಗಲಾದರೂ ಹೇಳಿದ್ದಾರೋ ನನಗೆ ಗೊತ್ತಿಲ್ಲ.

ಕೃಷಿ ಎನ್ನುವುದು ನಷ್ಟದ ಬಾಬತ್ತು. ರೈತರು ಬದುಕುವುದೇ ಕಷ್ಟ ಎನ್ನುವ ಸಿನಿಕತನದ ಅಭಿಪ್ರಾಯಗಳು ಬೇಡ. ಸರಿಯಾಗಿ ನೀರಿಲ್ಲದ -ಮಣ್ಣು ಇರದ ಇಸ್ರೇಲ್ ಮತ್ತು ಸಮುದ್ರ ಮಟ್ಟದಿಂದ ಕೆಳಗೆ ಇರುವ ನೆದರ್‌ಲ್ಯಾಂಡ್‌ಗಳು ಕೃಷಿ ಉತ್ಪನ್ನ ಮತ್ತು ರಫ್ತು ಕ್ಷೇತ್ರಗಳಲ್ಲಿ ಸಾಕಷ್ಟು ಮುಂದೆ ಹೋಗಿರುವಾಗ `ಸುಜಲಾಂ ಸೂಫಲಾಮ್ ಶಾಮಲಾಂ’ ಎಂದೆನಿಸಿ ಕೊಳ್ಳುವ ಭಾರತ ಭೂಮಿಯಲ್ಲಿ ಇದು ಸಾಧ್ಯ ಇಲ್ಲವೇ?

ದಕ್ಷಿಣದಲ್ಲಿ ಏನಾದರೂ ಮಾಡಿಬಿಡಬಹುದು. ಉತ್ತರ ಕರ್ಣಾಟಕದಲ್ಲಿ ಏನು ಮಾಡಬೇಕು? ನೀರಿಲ್ಲದ, ನೆಮ್ಮದಿ ಇಲ್ಲದ ಬರಡು ಭೂಮಿ ಎಂದು ಮೂಗು ಮುರಿಯಬೇಡಿ. ಮೈಸೂರು ಹೋಗಿ ಕರ್ನಾಟಕದ ಏಕೀಕರಣ ಆಗಬೇಕಾದಾಗ ಸಮಗ್ರ ಕರ್ನಾಟಕದ ಆಹಾರ ಸುರಕ್ಷೆಗೆ ಉತ್ತರ ಕರ್ನಾಟಕ ಬೇಕು ಎಂದು ಈ ರಾಜ್ಯದ ಪ್ರಜಾಪ್ರತಿನಿಧಿಗಳು ನಿರ್ಧಾರ ಮಾಡಿದ್ದರು. ಇದನ್ನು ನಾವು ಮರೆಯಬಾರದು.

ಆದರೆ, ಉತ್ತರದ ಕಪ್ಪು ಮಣ್ಣಿಗೆ ತನ್ನ ಬೆವರಿನ ಬೆಲೆ ದೊರೆಯಲಿಲ್ಲ. ಇಂದಿಗೂ ಕಲಬುರ್ಗಿ ವಿಭಾಗದಲ್ಲಿ ಬೆಳೆಯುವ ತೊಗರಿ ಮತ್ತು ಇತರ ಕಾಳುಗಳ ಸ್ಥಳೀಯ ಸಂಸ್ಕರಣೆ ಸಂಸ್ಕರಣೆ ಶೇಕಡಾ 10ಕ್ಕಿಂತ ಕಮ್ಮಿ. ರಾಜ್ಯದ 75 ಸಕ್ಕರೆ ಮಿಲ್ಲು ಗಳಲ್ಲಿ ಶೇಕಡಾ 80 ಉತ್ತರದಲ್ಲಿ ಇವೆ. ರಾಜ್ಯದ ಜೋಳ- ಗೋಧಿ ಹಾಗೂ ಎಣ್ಣೆ ಕಾಲುಗಳ ಅತಿ ಹೆಚ್ಚು ಬೆಳೆ ಉತ್ತರದ 14 ಜಿಲ್ಲೆಗಳಲ್ಲಿ ಇವೆ. ರಾಜ್ಯದ ಅತಿ ಹೆಚ್ಚು ಒಣ ದ್ರಾಕ್ಷಿ ವಿಜಯಪುರ- ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಯಾರು ಆಗುತ್ತದೆ. ಗೋವಾ ಹಾಗೂ ಪೂರ್ವ ಕರಾವಳಿ ಬಿಟ್ಟರೆ ಕರ್ನಾಟಕದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುತ್ತದೆ.

ಆದರೆ, ಇವಕ್ಕೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ರೈತನ ಕೈಯಿಂದ ಚಿಮ್ಮಿ ಹೋದ ಮೇಲೆ ಆ ಕಾಳುಗಳಿಗೆ ದಿಮಾಕು ಬಂದು ಬಿಡುತ್ತದೆ. ನೆಲದಿಂದ ಕಿತ್ತಿದಾಗ 85 ರೂಪಾಯಿ ಇದ್ದ ತೊಗರಿ ರಿಲಯನ್ಸ್ ಮಾರ್ಟ್‌ನಲ್ಲಿ 150 ರೂಪಾಯಿ ಆಗುತ್ತದೆ. ನೆಲದ ಕೆಳಗೆ ಕಣ್ಣು ಬಿಟ್ಟ ಶೇಂಗಾ ಕಾಳು ಕೇವಲ 65 ರೂಪಾಯಿಗೆ ತವರು ಮನೆ ಸಂಬಂಧ ಕಡೆದುಕೊಂಡು ಸೂಪರ್ ಮಾರ್ಕೆಟ್‌ನಲ್ಲಿ 200 ರೂಪಾಯಿಗೆ ಪ್ಲಾಸ್ಟಿಕ್ ಪ್ಯಾಕ್‌ನಲ್ಲಿ ಉಸಿರು ಕಟ್ಟಿಸಿಕೊಳ್ಳುತ್ತದೆ. ಇವು ಕೆಲವು ಉದಾಹರಣೆಗಳಷ್ಟೇ.

ಇಂದಿಗೂ ರೈತರಿಗೆ ಸಮ್ಮಾನದ ಬೆಲೆ ಸಿಗುತ್ತಿರುವುದು ಕೆಲವೇ ಬೆಳೆಗಳಿಗೆ ಮಾತ್ರ. ಅವು ಯಾವುವು ಅಂದರೆ ಯಾವುದರ ಮೇಲೆ ಅವಲಂಬಿತವಾಗಿ ಆಹಾರ ಸಂಸ್ಕರಣಾ ಉದ್ದಿಮೆಗಳು ನಡೆಯುತ್ತಿವೆಯೋ ಅವುಗಳಿಗೆ ಮಾತ್ರ. ಉದಾಹರಣೆಗೆ – ಕೋಳಿ ಮತ್ತು ಮೊಟ್ಟೆ, ಹಾಲು ಮತ್ತು ಇತರ ಉತ್ಪನ್ನ – ಕಬ್ಬು- ಸೋಯಾ- ಮೆಕ್ಕೆ ಜೋಳ- ಕೋಕೋ- ಕಾಫಿ- ಚಹಾ ಹಾಗೂ ಕೆಲವು ಎಣ್ಣೆ ಕಾಳುಗಳು, ಇತ್ಯಾದಿ.

ಇನ್ನೊಂದು ರೀತಿಯಲ್ಲಿ ರೈತರಿಗೆ ಒಳ್ಳೆ ಬೆಲೆ ಸಿಗುತ್ತಿರುವುದು ಯಾವಾಗ ಎಂದರೆ ಅವರು ಸಹಕಾರಿ ತತ್ವದ ಆಧಾರದ ಮೇಲೆ ಸಂಘಟಿತರಾದಾಗ. ವಿಶ್ವದ ಅತಿ ದೊಡ್ಡ ಉತ್ಪನ್ನ ಸಹಕಾರಿಗಳಾದ ಯರೋಪಿನ ಗಿಣ್ಣ, ಬಾಂಗ್ಲಾ ದೇಶದ ಗ್ರಾಮೀಣ, ಭಾರತದ ಅಮೂಲ್ ಹಾಗೂ ನಂದಿನಿ, ಶಿರಸಿಯ ಟಿಎಸ್‌ಎಸ್ , ಟಿಎಂಎಸ್ ಹಾಗೂ ಕದಂಬ ದಂತ ಸಂಸ್ಥೆ ಗಳು, ಕ್ಯಾಂಪ್ ಕೋ ಹಾಗೂ ಇತರ ಇಂತಹ ಸಂಸ್ಥೆ ಗಳ ಸದಸ್ಯರು ಈ ವ್ಯವಸ್ಥೆಯ ಫಲಾನುಭವಿಗಳು. ಯುರೋಪಿನ ಗಿಣ್ಣದ ರೈತರು ತಮ್ಮ ದೇಶದ ಕೇಂದ್ರ ಬ್ಯಾಂಕಿಗೆ ಸಾಲ ಕೊಟ್ಟು ಮೀಸೆ ತಿರುವಿದವರು.

ಉತ್ತರ ಕರ್ನಾಟಕದಿಂದ ಆರಿಸಿ ಹೋದ ಒಂದು ನೂರು ವಿಧಾನಸಭಾ ಸದಸ್ಯರು ಹಾಗೂ 15 ವಿಧಾನ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ವಿಚಾರ ಮಾಡಬಾರದೇ? ಚುನಾವಣೆ ಖರ್ಚಿಗೆ ಆಗುತ್ತದೆ, ಆ ಕಾಲದಲ್ಲಿ ಹಾರ್ಡ್ ಕ್ಯಾಷ್ ಬೇಕಾಗುತ್ತದೆ ಅಂತ ಹೇಳಿ ಊರಿಗೆ ಒಂದು ಸಹಕಾರಿ ಸಂಸ್ಥೆ ತೆಗೆದುಕೊಂಡು ಇಟ್ಟುಕೊಂಡಿರುವ ಉತ್ತರದ ಕುಮಾರರು ಪತ್ತಿನ ಸಹಕಾರಿಗಳನ್ನು ಒಂದು ಕ್ಷಣ ಮರೆತು ಉತ್ಪನ್ನ ಸಹಕಾರಿಗಳನ್ನು ತೆರೆಯುವತ್ತ ಮನಸು ಮಾಡಬಾರದೇ?

ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ವಿಕಾಸ ಸೌಧ- ವಿಧಾನಸೌಧಕ್ಕೆ ಬರುವ ಕಪ್ಪು ಕೋಟಿನ ಬಿಳಿಯ ಸಾಹುಕಾರರಿಗೆ ದೇವನಹಳ್ಳಿ ವಿಮಾನ ನಿಲ್ದಾಣದ ಸುತ್ತ ಮುತ್ತ ಜಮೀನು ಕೊಟ್ಟು ಕಳಿಸಿ ಕೃತಾರ್ಥ ರಾಗುವ ಬದಲಿಗೆ ಉತ್ತರದ – ದಕ್ಷಿಣ ಹಿಂದುಳಿದ ಜಿಲ್ಲೆಗಳಲ್ಲಿ ಆಹಾರ ಸಂಸ್ಕರಣೆ ಉದ್ದಿಮೆಗಳನ್ನು ಸ್ಥಾಪಿಸುವತ್ತ ಸರಕಾರಗಳು ಹಾಗೂ ಸಚಿವ- ಅಧಿಕಾರಿಗಳು ಪ್ರಯತ್ನ ಮಾಡಬಾರದೇ? ತಾಲೂಕಿಗೆ ಒಂದು, ಹೋಗಲಿ ಜಿಲ್ಲೆಗೆ ಒಂದು ಕೃಷಿ ಆಧಾರಿತ ಉದ್ದಿಮೆ ಶುರು ಆದರೆ ಅದರ ಅಂತಿಮ ಲಾಭ ರೈತರಿಗೆ ಆಗಲಾರದೇ ಇದ್ದೀತೆ?

ಇವೆಲ್ಲದರ ಬಗ್ಗೆ ಕೇವಲ ಪ್ರಭುಗಳ ಚಿತ್ತ ಹರಿಯುವುದು ಬೇಡ. ಪ್ರಜೆಗಳ ಚಿತ್ತವೂ ಹರಿಯಲಿ.

ಹಿರಿಯ ಪತ್ರಕರ್ತರಾದ ಪಿ ಸಾಯಿನಾಥ್ ಅವರು ತಮ್ಮ ಒಂದು ಲೇಖನದಲ್ಲಿ ನೀರೋನ ಅತಿಥಿಗಳ ಬಗ್ಗೆ ಬರೆದಿದ್ದರು. ನೀರೋ ಚಕ್ರವರ್ತಿ ತನ್ನ ಅರಮನೆಯ ಅಂಗಳದಲ್ಲಿ ಪಾರ್ಟಿ ಕೊಡುವಾಗ ತನ್ನ ಗುಲಾಮರನ್ನು ಬೆಂಕಿಗೆ ಹಾಕಿ ಖುಷಿ ಪಡುತ್ತಿದ್ದನಂತೆ. ಅವನ ಜೊತೆ ಅವನ ಅತಿಥಿಗಳೂ ಕೈ ಜೋಡಿಸುತ್ತಿದ್ದರಂತೆ. ನೀರೋ ನಷ್ಟೇ ತಪ್ಪು ಅವನ ಅತಿಥಿಗಳದ್ದು. ಇನ್ನೂ ಹೆಚ್ಚು ಅನ್ನಲು ಅಡ್ಡಿ ಇಲ್ಲ ಅಂತ ಅವರು ಆ ಲೇಖನ ಮುಗಿಸಿದ್ದರು.

ಕಸುಬು ದಾರಿಕೆಯ ಬಗ್ಗೆ ಒಂದು ತಾತ್ವಿಕ ಮಾತು ಇದೆ: `ಕಠಿಣ ಪರಿಶ್ರಮಕ್ಕೆ ಹಸಿವು ಪ್ರೇರಕವಾಗಬಾರದು’. ಮಾನವ ತನ್ನ ಜೀವನದ ಸಾಫಲ್ಯ ಕ್ಕಾಗಿ ಕೆಲಸ ಮಾಡಬೇಕೆ ಹೊರತು, ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಅಲ್ಲ. ಇದನ್ನು ಬಾಗಲಕೋಟೆ ಜಿಲ್ಲೆಯ ಅಳಗುಂಡಿ ಗ್ರಾಮದ ಸಾಧಾರಣ ಮನೆತನ ದಲ್ಲಿ ಹುಟ್ಟಿ, ಹುಬ್ಬಳ್ಳಿಯಲ್ಲಿ ದೈಹಿಕ ಶಿಕ್ಷಕ ರಾಗಿದ್ದು,

ದಿನಾ ಸಂಜೆ ವಸತಿ ಬಸ್ಸಿಗೆ ಬೆಂಗಳೂರಿಗೆ ಹೋಗಿ ಶಿಕ್ಷಕರು ಹಾಗೂ ಖಾಸಗಿ ಆಡಳಿತ ಮಂಡಳಿಗಳ ಹಿತ ರಕ್ಷಣೆಗಾಗಿ ಹೋರಾಟ ಮಾಡಿದ ಹೊರಟ್ಟಿ ಅವರು ಇದನ್ನು ಮನಗಾಣದೇ ಇದ್ದಾರೆಯೇ?

ಹೊರಟ್ಟಿ ಅವರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ ಎನ್ನುವುದು ನನಗೆ ಅಷ್ಟೊಂದು ಬೇಸರ ತರಲಿಲ್ಲ. ಅವರ ಮಾತಿಗೆ ಚಪ್ಪಾಳೆ ಬಾರಿಸಿದ ಸದನದ ಒಳಗಿನ ಹಾಗೂ ಹೊರಗಿನ ಅವರ ಭಕ್ತ ಮಂಡಳಿಯ ಬಗ್ಗೆ ನನಗೆ ಹೆಚ್ಚಿನ ಬೇಜಾರು ಆಯಿತು. ಆದರೆ ನಾವೆಲ್ಲ ನೀರೋನ ಹೆಸರು ಕೇಳಿದ್ದೇವೆ. ಅವನ ಅತಿಥಿಗಳ ಹೆಸರು ಯಾರಿಗೆ ನೆನಪು ಇದೆ? ಹೇಳಿ?

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...